ಮಂಡ್ಯ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ಮಾತನಾಡಿ, “ಭಾರತದ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿಯವರು ದೇಶಕ್ಕೆ ಅಪಾರವಾದ ಕೊಡುಗೆಗಳನ್ನು ಕೊಟ್ಟವರು” ಎಂದು ಬಣ್ಣಿಸಿದರು.
“18 ವರ್ಷದವರಿಗೆ ಮತದಾರರ ಹಕ್ಕು ಕೊಡುವ ಮೂಲಕ ಯುವಕರಿಗೆ ಅಪಾರವಾದ ಶಕ್ತಿ ತುಂಬಿದವರು. ರಾಜೀವ್ ಗಾಂಧಿಯವರು ನೀಡಿದ ರಾಜಕಾರಣ ಹಾಗೂ ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಅಪಾರವಾಗಿ ಮುಂದುವರೆಯಬೇಕಾದರೆ ರಾಜೀವ್ ಗಾಂಧಿಯವರ ಕೊಡುಗೆ ಅಪಾರ” ಎಂದು ಹೇಳಿದರು.
“ರಾಜೀವ್ ಗಾಂಧಿಯವರು ದೇಶಕ್ಕೋಸ್ಕರ ತಮ್ಮ ಪ್ರಾಣವನ್ನು ಅರ್ಪಿಸಿದವರು. ಅಂತಹ ಮಹಾನ್ ಚೇತನರ ಹಲವಾರು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದರು.
“ಡಿ ದೇವರಾಜ ಅರಸು ಅವರು ಪ್ರಪ್ರಥಮವಾಗಿ ʼಉಳುವವನಿಗೆ ಭೂಮಿಯ ಒಡೆಯʼ ಕಾನೂನು ತಂದು ಎಲ್ಲ ನಿರ್ಗತರಿಗೂ, ಭೂ ರಹಿತರಿಗೂ ಭೂಮಿ ಉಳುವ ಅವಕಾಶ ಮಾಡಿಕೊಟ್ಟವರು” ಎಂದು ಹೇಳಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ ಎಸ್ ಚಿದಂಬರ್ ಮಾತನಾಡಿ, “ರಾಜೀವ್ ಗಾಂಧಿ ಹಾಗೂ ಡಿ ದೇವರಾಜ ಅರಸು ಅವರು ದೇಶ ಕಂಡ ಮಹಾನ್ ವ್ಯಕ್ತಿ” ಎಂದರು, ಅರಸು ಅವರ ಜನ್ಮ ದಿನಾಚರಣೆಯನ್ನೂ ಕೂಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ ಮಾಡುವ ಮೂಲಕ ಅವರ ಕೊಡುಗೆಗಳನ್ನು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಭಿನ್ನಾಭಿಪ್ರಾಯಗಳಿಂದಾಗಿ ಬಳ್ಳಾರಿ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನೆ: ಕಸಾಪ ಅಧ್ಯಕ್ಷ ಡಾ ಮಹೇಶ್ ಜೋಶಿ
“ಯುವಶಕ್ತಿ ದೊಡ್ಡಮಟ್ಟದಲ್ಲಿ ಬೆಳೆಯಬೇಕಾದರೆ ರಾಜೀವ್ ಗಾಂಧಿಯವರ ಅಡಿಪಾಯ ಬಹಳ ಮುಖ್ಯವಾದದ್ದು. ಡಿ ದೇವರಾಜ ಅರಸು ಅವರು ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದವರು, ವೃದ್ಧಾಪ್ಯ ವೇತನ, ಭಾಗ್ಯಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದ, ಸಾಮಾಜಿಕ ನ್ಯಾಯದ ಹರಿಕಾರರಾದ ಅವರು ಶೋಷಿತ ಸಮುದಾಯಗಳನ್ನೂ ಮೇಲೆತ್ತುವ ಕೆಲಸ ಮಾಡಿದವರು” ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಸಿ ಎಂ ದ್ಯಾವಪ್ಪ, ಕಾಂಗ್ರೆಸ್ ಮುಖಂಡರಾದ ಹೊಂಬಯ್ಯ, ಮಳವಳ್ಳಿ ಶಿವಣ್ಣ, ಚಂದಗಾಲು ವಿಜಯಕುಮಾರ್, ಕನ್ನಲಿ ಚನ್ನಪ್ಪ, ನಾಗರಾಜು, ಪ್ರಕಾಶ್, ಉದಯ್ ಸೇರಿದಂತೆ ಇತರರು ಇದ್ದರು.