ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ ವರ್ಷಿತಾ ಎಂಬ ಹಾಸ್ಟೆಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದನ್ನು ಖಂಡಿಸಿ, ತಪ್ಪಿತಸ್ಥ ಆರೋಪಗಳಿಗೆ ಗಲ್ಲುಶಿಕ್ಷೆ ವಿಧಿಸಲು ಆಗ್ರಹಿಸಿ ಹಾಗೂ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸೂಕ್ತ ರಕ್ಷಣೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಚಿತ್ರದುರ್ಗ ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಕೋರ್ಟ್ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ 19 ವರ್ಷದ ವರ್ಷಿತಾ ಎಂಬ ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಅಪಹರಿಸಿ, ಕೊಲೆ ಮಾಡಿ
ರಾಷ್ಟ್ರೀಯ ಹೆದ್ದಾರಿ ಬಳಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕಾರ್ಯಕರ್ತರು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ವಿದ್ಯಾಭ್ಯಾಸ ಮುಗಿಸಿ ಸುರಕ್ಷಿತವಾಗಿ ಮನೆಗೆ ತಲುಪಬೇಕಾದ ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಕೊಲ್ಲಲಾಗಿದೆಯಲ್ಲದೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದ್ದು, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿರುವುದು ಘನಘೋರ ದುರಂತವಾಗಿದೆ. ಹಾಸ್ಟೆಲ್ ವಿದ್ಯಾರ್ಥಿನಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.
“ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯು ಕಾಣೆಯಾಗಿದ್ದು ಅರೆಬರೆ ಬೆಂದ ಸುಟ್ಟ ಸ್ಥಿತಿಯಲ್ಲಿ ಆತ್ಯಾಚಾರವೆಸಗಿ ಕೊಲೆ ಮಾಡಿರುವ ಅನುಮಾನದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕೂಡಲೇ ಈ ಘಟನೆ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ” ಎಂದು ಆಗ್ರಹಿಸಿದರು.

“ವಿದ್ಯಾರ್ಥಿನಿಯರು ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆಗಳನ್ನು ತಡೆಯುವಲ್ಲಿ ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸ್ವಾತಂತ್ರ್ಯ ಸಿಕ್ಕು 79ನೇ ಸಂಭ್ರಮಾಚರಣೆಯಲ್ಲಿದರೂ, ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಸ್ವಾತಂತ್ರ್ಯವಾಗಿ, ಭಯಭೀತಿಯಿಂದ ಮುಕ್ತವಾಗಿ, ಒಬ್ಬಂಟಿಯಾಗಿ ಓಡಾಡುವ ಸುರಕ್ಷಿತ ಸ್ಥಳ ಇಲ್ಲದಿರುವುದು ನಮ್ಮ ದೇಶದ ದುರಂತವಾಗಿದೆ. ಕೂಡಲೇ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡರಾದ ಡಿ. ಎಮ್. ಮಳಿಯಪ್ಪ ಮಾತನಾಡಿ, “ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ಹೆಸರು ‘ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ’ ಎಂದು ಹೇಳುತ್ತಾರೆ. ಆದರೆ ಓದಿಸುವುದು ಅಷ್ಟೇ ಅಲ್ಲ ಕಾಪಾಡುವುದು ನಿಮ್ಮ ಕರ್ತವ್ಯವಾಗಬೇಕು. ನಿಮ್ಮ ಮನೆಯ ಹೆಣ್ಣಿನ ಸ್ಥಾನದಲ್ಲೇ ಎಲ್ಲರನ್ನು ನೋಡಬೇಕು. ಇಂತಹ ಅನ್ಯಾಯವು ತಂದೆ ತಾಯಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಲು ಸೂಕ್ತ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ಮುದ್ದುಶ್ರೀ ಡಿ ಮಾತನಾಡಿ, “ಚಾಕೊಲೇಟ್ ನೀಡಿ ಎಳೆ ಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರಗಳ ಕೊಲೆ ಮಾಡುತ್ತಿರುವ ಸುದ್ದಿ ಕೇಳಿ ವಿದ್ಯಾರ್ಥಿನಿಯರು ಹಾಗೂ ಪಾಲಕರು ಭಯಭೀತರಾಗಿದ್ದಾರೆ. ಸರ್ಕಾರಗಳು ಈ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳಬೇಕು. ಹಾಸ್ಟೆಲ್ ವಿದ್ಯಾರ್ಥಿನಿ ಕೊಲೆ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ರಕ್ಷಿತಾ ಎಸ್ ಎ ಮಾತನಾಡಿ, “ಹಾಸ್ಟೆಲ್ ವಿದ್ಯಾರ್ಥಿನಿ ಮೇಲಿನ ಆರೋಪಿಯನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿನಿಯರು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಗಳನ್ನು ಸರ್ಕಾರಗಳು ತಡೆಗಟ್ಟಲು ಮುಂದಾಗಬೇಕು. ಒಂದು ವೇಳೆ ಸರ್ಕಾರ ಸರಿಯಾದ ಸೂಕ್ತ ರಕ್ಷಣೆ, ನ್ಯಾಯ ನೀಡಲು ಮುಂದಾಗದಿದರೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜ್ ಬಂದ್ ಮಾಡಿ ಭಾರಿ ಪ್ರಮಾಣದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು ವಿದ್ಯಾರ್ಥಿನಿಯರ ಸುರಕ್ಷತೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಬೇಡಿಕೆಗಳಾದ ನಗರಗಳ ಹೊರ ವಲಯದಲ್ಲಿರುವ ಶಾಲಾ ಕಾಲೇಜು, ವಿವಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಬೀಟ್ ಪೊಲೀಸರನ್ನು ನೇಮಿಸಬೇಕು. ನಗರದ ಹೊರವಲಯ ಹಾಗೂ ನಗರದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ತಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಬದಲಾಯಿಸಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಶಾಲಾ-ಕಾಲೇಜು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಪ್ರದೇಶಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚನೆ ಮಾಡಬೇಕು. ಪ್ರೊ. ವರ್ಮಾ ಸಮಿತಿಯ ಶಿಪಾರಸುಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ ಮಹಾನಾಯಕ ದಲಿತ ಸೇನೆ
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಪದಾಧಿಕಾರಿ ಅನಂತರಾಜ್ ಬಿ ಎಮ್, ರಾಜ್ಯ ಸಮಿತಿ ಸದಸ್ಯರಾದ ಶಿವರೆಡ್ಡಿ, ಐಶ್ವರ್ಯ ಕೊಲಮ್, ಸಾಯಿ ವರ್ಷಿಣಿ, ರಕ್ಷಿತಾ ದುರ್ಗದ ಪಾಲಯ್ಯ, ಸಿಂಧು ಇ, ಪವಿತ್ರ ಎಸ್, ಸಂಜಯ್ ಕುಮಾರ್, ಪ್ರಸನ್ನ, ತಿಪ್ಪೇಶ್, ಮನೋಜ್, ದೀಕ್ಷಿತ್ ಎ, ಶಾಲಿನಿ, ಅಮೂಲ್ಯ ಎಂ, ಶಂಕರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.