- ಒಂದೇ ರಸ್ತೆಗೆ ಮೂರು ಇಲಾಖೆಗಳಿಂದ ಹಣ ಎತ್ತುವಳಿ ಮಾಡಿರುವ ಆರೋಪ
- ಅಕ್ರಮ ಕಾಮಗಾರಿ ನಡೆಸಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹ
ದೇವದುರ್ಗ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ರಸ್ತೆ ಕಾಮಗಾರಿಯ ಕುರಿತು ತನಿಖೆ ನಡೆಯುತ್ತಿರುವಾಗಲೇ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿನೋದ್ ರೆಡ್ಡಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇವದುರ್ಗ ತಾಲೂಕಿನಲ್ಲಿ ಒಂದೇ ರಸ್ತೆಗೆ ಮೂರು ಇಲಾಖೆಗಳಿಂದ ಹಣ ಎತ್ತುವಳಿ ಮಾಡಲಾಗಿದೆ. ಈ ಕುರಿತು ದಾಖಲೆಗಳೊಂದಿಗೆ ಲೋಕೊಪಯೋಗಿ ಸಚಿವರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಗಿತ್ತು. ಸಚಿವರು ಮೂರು ಇಲಾಖೆ ಅಧಿಕಾರಿಗಳ ತನಿಖಾ ತಂಡ ರಚಿಸಿ ಪರಿಶೀಲನೆ ಪ್ರಾರಂಭಿಸಿದ್ದಾರೆ. ಆದರೆ ಜಿಲ್ಲೆಗೆ ಆಗಮಿಸಿದ್ದ ತನಿಖಾ ತಂಡ ದೂರದಾರರಿಗೆ ಮಾಹಿತಿ ನೀಡದೇ ತನಿಖೆ ನಡೆಸಿದೆ” ಎಂದು ತಿಳಿಸಿದರು.
“ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಚನ್ನಬಸವಪ್ಪ ಮಕಾಲೆ ಹಾಗೂ ಕೆಬಿಎಜೆಎನ್‌ಎಲ್‌ನ ಸಣ್ಣ ಪರುಶರಾಮ ಸೇರಿದಂತೆ ಪಿಎಂಜಿಎಸ್‌ವೈ ಅಧಿಕಾರಿಗಳ ವಿರುದ್ದ ಅಕ್ರಮ ಆರೋಪ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಸೇವೆಯಲ್ಲಿ ಇರುವುದರಿಂದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕು. ಇದಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಆರೋಪಿತ ಅಧಿಕಾರಿಗಳ ರಕ್ಷಣೆ ನಿಂತಿದ್ದಾರೆ” ಎಂದು ಆರೋಪಿಸಿದರು.
“ದೇವದುರ್ಗ ತಾಲೂಕಿನ ಬಿ.ಗಣೇಕಲ್ ಗ್ರಾಮದಿಂದ ಪಂದ್ಯಾನ ಗ್ರಾಮದವರೆಗೆ ರಸ್ತೆ ರಿಪೇರಿ ಕೆಲಸ ನಡೆಯುತ್ತಿದೆ. ಆದರೆ ಯಾವ ಇಲಾಖೆಯವರು ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದರೂ ಮೇಲನ್ಮವಿ ಸಲ್ಲಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರಿಗೆ ದೂರು ನೀಡಲಾಗಿದೆ. ರಸ್ತೆ ನಿರ್ಮಾಣ ಹೆಸರಿನಲ್ಲಿ ಮೂರು ಇಲಾಖೆಗಳಲ್ಲಿ ಹಣ ಬಳಸಿ ಮತ್ತೊಮ್ಮೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ಜನರಿಗೆ ತೊಂದರೆಯಾಗುತ್ತಿರುವ ಕಾರಣ ರಸ್ತೆ ದುರಸ್ತಿ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೂರು ವರ್ಷಗಳಿಂದ ಜನರಿಗೆ ತೊಂದರೆಯಾದರೂ ಕೇಳಲಿಲ್ಲ.ಈಗ ತೊಂದರೆ ಆಗುತ್ತಿರುವುದಾಗಿ ಹೇಳುತ್ತಿದ್ದಾರೆ” ಎಂದು ದೂರಿದರು.
ಕೂಡಲೇ ಆರೋಪಿ ಅಧಿಕಾರಿಗಳ ವಿರುದ್ದ ಇಲಾಖೆ ತನಿಖೆ ನಡೆದಿದೆ. ಅಲ್ಲಿಯವರಗೆ ಅಧಿಕಾರಿಗಳನ್ನು ಅಮಾನತು ಮಾಡಲು ಉಸ್ತುವಾರಿ ಸಚಿವರಿಗೆ ಭೇಟಿ ಮಾಡಿ ಮನವಿ ಮಾಡಲಾಗುತ್ತದೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್.ವೆಂಕಟೇಶ ದೇವದುರ್ಗ, ಡಿ.ಬಸನಗೌಡ ಮಾನವಿ, ಜಿಲಾನಿ ಪಾಷಾ ಲಿಂಗಸೂಗೂರು, ಎಚ್.ಗಂಗಣ್ಣ ಸಿಂಧನೂರು, ಗುರುರಾಜ ಮಸ್ಕಿ, ರಾಮಕೃಷ್ಣ, ಕೆ.ಕೊಂಡಪ್ಪ ಉಪಸ್ಥಿತರಿದ್ದರು.