ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?

Date:

Advertisements
ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಭಾರತಕ್ಕೆ ಸಿಗುತ್ತಿದ್ದರೂ, ಅದರ ಲಾಭ ದೇಶಕ್ಕೂ ಇಲ್ಲ, ದೇಶವಾಸಿಗಳಿಗೂ ಇಲ್ಲ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ ಎನ್ನುವ ಬಿಜೆಪಿಗರ ಮಾತಿಗೂ ಕಡಿವಾಣ ಇಲ್ಲ.

‘ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿದಿಲ್ಲ. ಉತ್ತಮ ಒಪ್ಪಂದ ಎಲ್ಲೆಲ್ಲಿ ಸಾಧ್ಯವಾಗುತ್ತವೋ ಅಲ್ಲೆಲ್ಲಾ ತೈಲ ಖರೀದಿಸುವುದನ್ನು ಭಾರತದ ಕಂಪನಿಗಳು ಮುಂದುವರಿಸಲಿವೆ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ’ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯಕುಮಾರ್ ತಿಳಿಸಿದ್ದಾರೆ.

ಭಾರತ, ರಷ್ಯಾ ಮತ್ತು ಚೀನಾದೊಂದಿಗೆ ಗುರುತಿಸಿಕೊಂಡಿದೆ ಎಂಬ ಏಕೈಕ ಕಾರಣಕ್ಕೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಮದು ಸುಂಕವನ್ನು ಶೇ. 50ಕ್ಕೆ ಏರಿಸಿ, ಶಾಕ್ ನೀಡಿದ್ದರು. ಆ ಮೂಲಕ ವಾಣಿಜ್ಯ-ವ್ಯವಹಾರಕ್ಕೆ ತೊಂದರೆಯಾಗಿತ್ತು. ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು. ಅದೆಲ್ಲವನ್ನು ಗಮನಿಸಿಯೇ, ರಾಯಭಾರಿ ವಿನಯಕುಮಾರ್, ‘ಈ ರೀತಿ ಸುಂಕ ಹೇರಿಕೆ ಮಾಡುವುದು ಅನ್ಯಾಯ, ಅಸಮಂಜಸ ಮತ್ತು ತಾರತಮ್ಯ ನೀತಿ’ ಎಂದು ನೇರವಾಗಿಯೇ ಟೀಕಿಸಿದ್ದಾರೆ.

ಆದರೆ, ದೇಶದ ಪ್ರಧಾನಿ ಮೋದಿಯವರು ಇಲ್ಲಿಯವರೆಗೆ ಟ್ರಂಪ್ ಅವರ ಸುಂಕ ಬೆದರಿಕೆಗೆ ನೇರವಾಗಿ ಉತ್ತರಿಸಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತದೋ ಅಲ್ಲಿ ಖರೀದಿಸುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಖಡಕ್ಕಾಗಿ ಹೇಳಿಲ್ಲ. ಪರೋಕ್ಷವಾಗಿ ‘ನಾವು ಯಾರ ಬೆದರಿಕೆಗೂ ಮಣಿಯುವುದಿಲ್ಲ’ ಎಂದಷ್ಟೇ ಹೇಳಿ ಅದನ್ನು ಅರ್ಥೈಸಲು ಗೋಧಿ ಮೀಡಿಯಾಗಳಿಗೆ ಬಿಟ್ಟಿದ್ದಾರೆ.  

Advertisements

ಇದನ್ನು ಓದಿದ್ದೀರಾ?: ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಮೋದಿಯವರು ಏಕೆ ಖಡಕ್ಕಾಗಿ ಟ್ರಂಪ್‌ಗೆ ಹೇಳಲಿಲ್ಲ. ಹೇಳಿದ್ದರೆ ಪರಿಣಾಮವೇನಾಗುತ್ತಿತ್ತು. ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದ್ದರೆ ಯಾರಿಗೆ ನಷ್ಟವಾಗುತ್ತಿತ್ತು ಎಂಬ ಪ್ರಶ್ನೆಗಳೇಳುವುದು ಸಹಜ. ಆ ಕಾರಣಕ್ಕಾಗಿಯೇ ಮೋದಿಯವರು ಉತ್ತರಿಸುವುದಿಲ್ಲ. ಅದೆಲ್ಲ ಪ್ರಧಾನಿ ಮೋದಿಯಂತಹ ಘನಗಂಭೀರ ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ತಕ್ಕುದಲ್ಲ. ಬದಲಿಗೆ ಗೋಧಿ ಮೀಡಿಯಾ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿಟ್ಟು ಮೋದಿಯವರನ್ನು ಸಮರ್ಥಿಸಿಕೊಳ್ಳುತ್ತದೆ.

ಅಸಲಿ ಕತೆ ಏನೆಂದರೆ, ರಷ್ಯಾದಿಂದ ಅತೀ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿಂದೆ, ರಾಷ್ಟ್ರೀಯ ಹಿತಾಸಕ್ತಿಯೂ ಇಲ್ಲ, ಜನರಿಗೆ ಕಡಿಮೆ ಬೆಲೆಯಲ್ಲಿ ಇಂಧನ ಪೂರೈಸುವ ಇರಾದೆಯೂ ಇಲ್ಲ. ಬದಲಿಗೆ ಮೋದಿ ಮತ್ತು ಅಂಬಾನಿ ವ್ಯಾವಹಾರಿಕ ದೋಸ್ತಿ ಇದೆ. ಆ ದೋಸ್ತಿಯ ಫಲವಾಗಿ ಬಿಜೆಪಿಗೆ ಕೋಟಿಗಟ್ಟಲೆ ದೇಣಿಗೆ ಹರಿದುಬರುತ್ತಿದೆ ಎಂಬುದನ್ನು ಚುನಾವಣಾ ಬಾಂಡ್‌ಗಳೇ ಹೇಳುತ್ತಿವೆ.

ಬಿಜೆಪಿಯ ಮೋದಿ ಮತ್ತು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ನಡುವಿನ ಈ ಅನೈತಿಕ ಸಂಬಂಧವನ್ನು ಅಮೆರಿಕದ ಟ್ರಷರಿ ಸೆಕ್ರೆಟರಿ ಸ್ಕಾಟ್ ಬೆಸೆಂಟ್ ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದಾರೆ. ‘ಭಾರತದ ಕೆಲವು ಶ್ರೀಮಂತ ಕುಟುಂಬಗಳು ರಷ್ಯಾದ ಕಚ್ಚಾತೈಲ ಆಮದುಗಳಿಂದ ಅತಿ ದೊಡ್ಡ ಲಾಭ ಪಡೆಯುತ್ತಿವೆ’ ಎಂದು ನೇರವಾಗಿಯೇ ದೂರಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿ, ಮೋದಿ ಮತ್ತು ಅಂಬಾನಿಯ ಸಂಬಂಧವನ್ನು ಹೊರಹಾಕುತ್ತಿದೆ.

ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವಾಗ, ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL), ಹಿಂದುಸ್ಥಾನ್ ಪೆಟ್ರೋಲಿಯಂ (HPCL) ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ ಎಂಬ ಖಾಸಗಿ ಕಂಪನಿಗಳು ಭಾಗಿಯಾಗಿವೆ. ಆದರೆ, ಈ ಖರೀದಿಯ ನಿಖರವಾದ ವಿಭಜನೆಯನ್ನು- ಸರ್ಕಾರಿ ಸ್ವಾಮ್ಯಕ್ಕೆ ಎಷ್ಟು ಮತ್ತು ರಿಲಯನ್ಸ್‌ಗೆ ಎಷ್ಟು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಏಕೆಂದರೆ ಈ ಮಾಹಿತಿ ಸಾಮಾನ್ಯವಾಗಿ ವಾಣಿಜ್ಯ ರಹಸ್ಯವಾಗಿದ್ದು, ಸಾರ್ವಜನಿಕರಿಗೆ ಲಭ್ಯವಿಲ್ಲದಾಗಿದೆ.

ರಷ್ಯಾದ ರಿಯಾಯಿತಿ ದರದ ಕಚ್ಚಾ ತೈಲ ಖರೀದಿಯಿಂದ ಒಟ್ಟಾರೆ ಲಾಭದ ಸುಮಾರು ಶೇ. 65ರಷ್ಟು ರಿಲಯನ್ಸ್ ಮತ್ತು ನಯಾರಾ ಎನರ್ಜಿಯಂತಹ ಖಾಸಗಿ ಕಂಪನಿಗಳ ಪಾಲಾದರೆ; ಶೇ. 35ರಷ್ಟು ಸರ್ಕಾರಿ ಕಂಪನಿಗಳಾದ IOC, BPCL, HPCLಗೆ ಹೋಗುತ್ತದೆ. ತೆರಿಗೆ ರೂಪದಲ್ಲಿ ಸಿಗುವ ಶುಲ್ಕವೇ ಸರ್ಕಾರದ ಲಾಭವಾಗಿದೆ ಎಂಬ ಮಾಹಿತಿಯೂ ಇದೆ.

ಆ ಮೂಲಕ, ರಷ್ಯಾದ ಕಚ್ಚಾ ತೈಲದ ಅತಿ ದೊಡ್ಡ ಆಮದುಗಾರ ರಿಲಯನ್ಸ್ ಇಂಡಸ್ಟ್ರೀಸ್(ಆರ್‍ಐಎಲ್) ಆಗಿದ್ದು, ಅದರ ಮಾಲೀಕ, ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ ಆಗಿದೆ.

ambani

2021ರಲ್ಲಿ ಆರ್‍ಐಎಲ್‌ನ ಜಾಮನಗರ್ ರಿಫೈನರಿಯ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಕಚ್ಚಾ ತೈಲವಿದ್ದದ್ದು ಕೇವಲ ಶೇ. 3ರಷ್ಟು ಮಾತ್ರ. ಈಗ, 2025ರಲ್ಲಿ, ರಷ್ಯಾದ ಕಚ್ಚಾ ತೈಲದ ಆಮದು ಶೇ. 50ಕ್ಕೆ ಏರಿದೆ. ಇದು ಕೇವಲ 4 ವರ್ಷಗಳಲ್ಲಿ ಆದ ಭಾರೀ ಆಮದು ವಹಿವಾಟು. ರಿಲಯನ್ಸ್ ದಿನಕ್ಕೆ ಸುಮಾರು 5 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರೋಸ್‌ನೆಫ್ಟ್‌ನಿಂದ ಖರೀದಿಸುತ್ತದೆ, ಇದು ವಾರ್ಷಿಕವಾಗಿ 13 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಅದರಲ್ಲೂ 2025ರ ಮೊದಲ ಏಳು ತಿಂಗಳುಗಳಲ್ಲಿ ಜಾಮನಗರ್ ರಿಫೈನರಿಯು ರಷ್ಯಾದಿಂದ 18.3 ಮಿಲಿಯನ್ ಟನ್‌ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಫಿನ್‌ಲೆಂಡ್ ಮೂಲದ ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಎಯರ್ (ಸಿಆರ್‌ಇಎ) ದತ್ತಾಂಶದ ಪ್ರಕಾರ, 2021ರಿಂದ ಜುಲೈ 2025ರ ಅಂತ್ಯದವರೆಗೆ ಆರ್‍ಐಎಲ್ 85.9 ಶತಕೋಟಿ ಡಾಲರ್ ಮೌಲ್ಯದ ಸಂಸ್ಕರಿತ ಉತ್ಪನ್ನಗಳನ್ನು ಜಾಗತಿಕವಾಗಿ ರಫ್ತು ಮಾಡಿದೆ. ಈ ರಫ್ತಿನಲ್ಲಿ ಸುಮಾರು ಶೇ. 42ರಷ್ಟು ರಷ್ಯಾದ ಮೇಲೆ ನಿರ್ಬಂಧ ವಿಧಿಸಿರುವ ದೇಶಗಳಿಗೇ ಹೋಗಿದೆ ಎಂದು ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಕನಿಷ್ಠ ಬೆಲೆಗೆ ಕಚ್ಚಾ ತೈಲದ ಆಮದು, ಸಂಸ್ಕರಿತ ತೈಲದ ರಫ್ತು ವ್ಯಾಪಾರಕ್ಕೆ ದೇಶದ ವಿದೇಶಾಂಗ ನೀತಿಯನ್ನು ಅಡಗಿಸಿ, ಅನುಕೂಲ ಕಲ್ಪಿಸಿಕೊಟ್ಟಿರುವ ಪ್ರಧಾನಿ ಮೋದಿಯವರು ಮಾತನಾಡುವುದು ಮಾತ್ರ ರಾಷ್ಟ್ರೀಯ ಹಿತಾಸಕ್ತಿ!

ಇದನ್ನು ಓದಿದ್ದೀರಾ?: ಪ್ರಧಾನಿ ಮೋದಿಗೆ ಅದಾನಿ-ಅಂಬಾನಿ ದೋಸ್ತಿ ತಂದ ದುರ್ಗತಿ

ಕುತೂಹಲಕರ ಸಂಗತಿ ಎಂದರೆ, ಅಮೆರಿಕ ಭಾರತದ ಮೇಲೆ ಶೇ. 50ರಷ್ಟು ಆಮದು ಸುಂಕ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಬಹಿರಂಗ ಬೆದರಿಕೆ ಕೂಡ ಹಾಕಿದೆ. ಆದರೂ ಭಾರತ ಕೇವಲ ಒಂದು ಕಂಪನಿಯ, ಒಬ್ಬ ಉದ್ಯಮಿಯ ಲಾಭಕ್ಕಾಗಿ ಹೆಚ್ಚುವರಿ ಆಮದು ಸುಂಕದ ವೆಚ್ಚವನ್ನು ಭರಿಸಲು ಮುಂದಾಗಿದೆ. ಟ್ರಂಪ್ ಮಾಡುವ ಸಾರ್ವಜನಿಕ ಅವಮಾನಗಳನ್ನು ಸಹಿಸಿಕೊಳ್ಳುತ್ತಿದೆ. ಹಾಗೆಯೇ ರಿಲಯನ್ಸ್‌ಗೆ ಹೆಚ್ಚಿನ ಲಾಭ ಹೋದರೂ, ಭಾರತ ಸರ್ಕಾರವು ರಷ್ಯಾದೊಂದಿಗೆ ಈ ವ್ಯಾಪಾರವನ್ನು ಮುಂದುವರೆಸಲು ಅನುಕೂಲವಿದೆ. ಅದು ಭಾರತದ ಚಾಲ್ತಿ ಖಾತೆ ಕೊರತೆಗೆ ಸಹಾಯ ಮಾಡಿದೆ ಎಂದು ಸಮಜಾಯಿಷಿ ನೀಡುತ್ತಿದೆ.

ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಭಾರತಕ್ಕೆ ಸಿಗುತ್ತಿದ್ದರೂ, ಅದರ ಲಾಭ ದೇಶಕ್ಕೂ ಇಲ್ಲ, ದೇಶವಾಸಿಗಳಿಗೂ ಇಲ್ಲವಾಗಿದೆ. 2022ರಿಂದ ಕನಿಷ್ಠ ಬೆಲೆಯಲ್ಲಿ ಕಚ್ಚಾತೈಲ ದೊರೆತರೂ, ದೇಶದ ಜನ ಪೆಟ್ರೋಲ್-ಡೀಸೆಲ್‌ಗೆ ದುಬಾರಿ ಬೆಲೆ ತೆರುವುದು ನಿಂತಿಲ್ಲ. ಆಶ್ಚರ್ಯವೆಂದರೆ, ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯಕುಮಾರ್, ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ ಎಂದಿದ್ದಾರೆ. ಇದನ್ನೇ ಮಡಿಲ ಮಾಧ್ಯಮಗಳ ಪತ್ರಕರ್ತರು ದೇಶದಾದ್ಯಂತ ಹಂಚುತ್ತಿದ್ದಾರೆ.

ಇದು ಮೋದಿ ಮತ್ತು ಅಂಬಾನಿಗಳ ಹಗಲು ದರೋಡೆಯಲ್ಲವೇ? ಇದನ್ನು ಪ್ರಶ್ನಿಸುವುದು ದೇಶದ್ರೋಹವಾಗುತ್ತದೆಯೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ ಸಿಎಂ ಅಭ್ಯರ್ಥಿ | ಮಹಾಘಟಬಂಧನ ನಿರ್ಧರಿಸಲಿದೆ; ಆರ್‌ಜೆಡಿಗೂ ಹಕ್ಕಿದೆ: ಎಸ್‌ಪಿ ನಾಯಕ

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ವಿರೋಧ ಪಕ್ಷಗಳ...

ಸುಪ್ರೀಂನಿಂದ ಪ್ರೊಫೆಸರ್ ಅಲಿ ಖಾನ್‌ಗೆ ರಕ್ಷಣೆ: ಆರೋಪ ಪಟ್ಟಿಯನ್ನು ಪರಿಗಣಿಸದಂತೆ ಮ್ಯಾಜಿಸ್ಟ್ರೇಟ್‌ಗೆ ಸೂಚನೆ

'ಆಪರೇಷನ್ ಸಿಂಧೂರ್' ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಹರಿಯಾಣದ ಅಶೋಕ...

ಸರ್ಕಾರಿ ಕಚೇರಿಗಳಲ್ಲಿ ಯುಎಸ್‌ಬಿ, ಪೆನ್‌ಡ್ರೈವ್‌ಗಳ ಬಳಕೆ ನಿಷೇಧಿಸಿದ ಜಮ್ಮು ಕಾಶ್ಮೀರ ಸರ್ಕಾರ

ಸೂಕ್ಷ್ಮವಾಗಿರುವ ಸರ್ಕಾರಿ ಮಾಹಿತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ...

Download Eedina App Android / iOS

X