ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಹುನಿರೀಕ್ಷಿತ ಎಲ್‌ಇಡಿ ಬೀದಿದೀಪಗಳ ಯೋಜನೆಗೆ ಕೊನೆಗೂ ಅಧಿಕೃತ ಚಾಲನೆ ದೊರೆತಿದ್ದು, ನಗರಾಭಿವೃದ್ಧಿಯ ಕಡೆಗೆ ಒಂದು ಹೆಜ್ಚೆಯನ್ನಿಟ್ಟಿರುವ ಈ ಯೋಜನೆಯು ಆಗಸ್ಟ್ 18ರಂದು ಅನುಮೋದನೆಗೊಂಡಿದೆ.
ಬಹುನಿರೀಕ್ಷಿತ ಈ ಯೋಜನೆಯಡಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಈಗಾಗಲೇ ಅಸ್ಥಿತ್ವದಲ್ಲಿದ್ದ ಸಾಂಪ್ರದಾಯಿಕ ಬೀದಿದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ಬೀದಿದೀಪಗಳ ನಿರ್ವಹಣೆ ಮತ್ತು ದಕ್ಷತೆಗೆ ಕೇಂದ್ರೀಕೃತ ನಿರ್ವಹಣೆ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯೊಂದಿಗೆ ಏಳು ವರ್ಷಗಳ ರಿಯಾಯಿತಿ ಅವಧಿಯಲ್ಲಿ ಮಾದರಿ ರೂಪಿಸಲು ಯೋಜನೆ ತಯಾರಿಸಲಾಗಿದೆ. ಈ ಯೋಜನೆಗೆ ಒಟ್ಟು 93.6 ಕೋಟಿ ರೂಪಾಯಿ ಮಂಜೂರಾಗಿದೆ.
ಎಚ್‌ಡಿಎಂಸಿ ಆಯುಕ್ತರ ನೇತೃತ್ವದಲ್ಲಿ ನಡೆದ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆಯ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪುರಸಭೆ ಆಡಳಿತ ನಿರ್ದೇಶನಾಲಯದ ವತಿಯಿಂದ ಯೋಜನೆಗೆ ವ್ಯಾಪಕ ಬೆಂಬಲ ದೊರೆತಿದೆ. ಹಣಕಾಸಿನ ಸಂಪೂರ್ಣ ಮೌಲ್ಯಮಾಪನದ ಬಳಿಕ ತುಮಕೂರಿನ ಶ್ರೀ ಮಂಜು ಎಲೆಕ್ಟ್ರಿಕಲ್ಸ್‌ಗೆ ಗುತ್ತಿಗೆ ನೀಡಲಾಯಿತು. ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಒಳಗೊಂಡಂತೆ 1.1 ಕೋಟಿ ರೂಪಾಯಿ ಮಾಸಿಕ ಕಂತನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಈ ಯೋಜನೆಯ ಮೂಲಕ ಬೀದಿದೀಪಗಳ ಇಂಧನಾ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ನಗರದ ಮೂಲ ಸೌಕರ್ಯಗಳಲ್ಲಿ ಮಹತ್ತರ ಬದಲಾವಣೆ ತರುವ ನಿರೀಕ್ಷೆಯಿದೆ. ಆಧುನಿಕ ತಂತ್ರಜ್ಞಾನದ ಎಲ್‌ಇಡಿ ಬೀದಿದೀಪಗಳು ಉತ್ತಮ ಗುಣಮಟ್ಟದೊಂದಿಗೆ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುರಕ್ಷಿತವಾಗಿರುತ್ತವೆ.
ಎಲ್‌ಇಡಿ ಅಳವಡಿಕೆ ಯೋಜನೆಯು ವಾಸ್ತವವಾಗಿ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅಡಿಯಲ್ಲಿ ಬರುವ ಯೋಜನೆಯಾಗಿದ್ದು, 58 ಸಾವಿರ ಬೀದಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸಿತ್ತು. 2018ರಿಂದ 2022ರವರೆಗೆ ಎಚ್‌ಡಿಎಸ್‌ಸಿಎಲ್ 7 ಬಾರಿ ಗುತ್ತಿಗೆ ಕರೆದಿತ್ತು. ಆದರೆ ಪಾಲುದಾರರು ಇಲ್ಲದಿರುವ ಕಾರಣಕ್ಕಾಗಿ ಈ ಯೋಜನೆಯನ್ನು ಎಚ್‌ಡಿಎಂಸಿಗೆ ವಹಿಸಲಾಗಿದೆ. ಮಹಾನಗರ ಪಾಲಿಕೆಯು 75 ಸಾವಿರ ಬೀದಿ ದೀಪಗಳನ್ನು ಪರಿವರ್ತಿಸುವ ಯೋಜನೆ ಹಾಕಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸುವುದೇ?
“ಈ ಯೋಜನೆಯನ್ನು ಇನ್ನೆರಡು ವಾರಗಳಲ್ಲೇ ಜಾರಿಗೊಳಿಸಲಿದ್ದು, ಗುತ್ತಿಗೆದಾರರೊಂದಿಗೆ ಎಲ್ಲ ಔಪಚಾರಿಕಗಳು ಶ್ರೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಈಗಾಗಲೇ ಎಚ್‌ಡಿಎಂಸಿಯು ತಿಂಗಳಿಗೆ 2 ಕೋಟಿ ರೂಪಾಯಿ ಇದ್ದ ಮಾಸಿಕ ಕಂತನ್ನು 1 ಕೋಟಿ ರೂಪಾಯಿಗಳಿಗೆ ಇಳಿಸಿದೆ. ಇದರ ಜತೆಗೆ ಬೀದಿ ದೀಪಗಳ ತಿಂಗಳ ನಿರ್ವಹಣಾ ವೆಚ್ಚವೂ ಕೂಡಾ ಉಳಿತಾಯವಾಗಲಿದೆ. ಈ ಯೋಜನೆಯು ಇಂಧನ ದಕ್ಷತೆ ಮತ್ತು ಸುಸ್ಥಿರತೆಯ ಬಹುದೊಡ್ಡ ಗುರಿಯನ್ನು ಹೊಂದಿದೆ” ಎಂದು ಎಚ್‌ಡಿಎಂಸಿ ಎಲೆಕ್ಟ್ರಿಕಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಎಂ ಗಣಾಚಾರಿ ತಿಳಿಸಿದ್ದಾರೆ.