ಜಾತಿ ನಿಂದನೆ ಮಾಡಿರುವ ಆರೋಪ ಎದುರಿಸುತ್ತಿರುವ ನಟ, ನಿರ್ದೇಶಕ ಉಪೇಂದ್ರ ಅವರ ವಿರುದ್ಧ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ನಟನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಉಪೇಂದ್ರನನ್ನು ಈ ಕೂಡಲೇ ಬಂಧಿಸಬೇಕು, ಕನ್ನಡ ಚಿತ್ರರಂಗದಿಂದ ನಿಷೇಧ ಹೇರಬೇಕು ಹಾಗೂ ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ನಟನನ್ನು ಬಂಧಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.
“ನಟ ಉಪೇಂದ್ರ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮಾತನಾಡುವಾಗ ತಮ್ಮ ನಾಲಿಗೆಯ ಮೇಲೆ ಹಿಡಿತ ಹೊಂದಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಾ ‘ಊರು ಎಂದ ಮೇಲೆ ಹೊಲೆಗೇರಿ ಇರುತ್ತದೆ’ ಎಂದು ಪದಬಳಕೆ ಮಾಡಿರುವುದು ಅವರ ಕೀಳು ಜಾತಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ” ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
“ಉಪೇಂದ್ರ ಅವರನ್ನು ಅನುಸರಿಸುವ ಅಭಿಮಾನಿಗಳಿಗೂ ಈ ಮಾತಿನಿಂದ ನೋವಾಗಿರುತ್ತದೆ. ಆದ ಕಾರಣ ಇಂತಹ ಮನಸ್ಥಿತಿಗಳನ್ನು ಕೂಡಲೇ ಸರಿಪಡಿಸದೇ ಇದ್ದಲ್ಲಿ ಸಮಾಜದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹಾಗಾಗಿ, ಗೃಹಮಂತ್ರಿಗಳು ಕೂಡಲೇ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸದ್ದಿಲ್ಲದೇ ಹೆಚ್ಚಳವಾಗುತ್ತಿರುವ ಈರುಳ್ಳಿ ದರ
ವಾಣಿಜ್ಯ ಮಂಡಳಿಗೆ ದೂರು
ಉಪೇಂದ್ರ ಅವರ ಸಿನಿಮಾವನ್ನು ನಿಷೇಧಿಸುವಂತೆ ವಾಣಿಜ್ಯ ಮಂಡಳಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.