- ಸಿಜೆಐ ಡಿವೈ ಚಂದ್ರಚೂಡ್ ಫೋಟೋ ಬಳಸಿ ‘ಇದು ಸರ್ವಾಧಿಕಾರಿ ಸರ್ಕಾರ’ ಹೇಳಿಕೆ ಪೋಸ್ಟರ್ ವೈರಲ್
- ‘ಆ ರೀತಿಯ ಹೇಳಿಕೆ ಮುಖ್ಯ ನ್ಯಾಯಮೂರ್ತಿ ನೀಡಿಲ್ಲ, ಅದು ಸುಳ್ಳು’ ಎಂದ ಸುಪ್ರೀಂ ಕೋರ್ಟ್
ಇದುವರೆಗೆ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳನ್ನು ಕಾಡುತ್ತಿದ್ದ ‘ಸುಳ್ಳು ಸುದ್ದಿ’ ಈಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಫೋಟೋ ಬಳಸಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪೋಸ್ಟರ್ ಒಂದನ್ನು ವೈರಲ್ ಮಾಡಲಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರವನ್ನು ‘ಇದು ಸರ್ವಾಧಿಕಾರಿ ಸರ್ಕಾರ. ಜನರು ಈ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕು’ ಎಂದು ಉಲ್ಲೇಖಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿ ಸ್ಪಷ್ಟೀಕರಣ ನೀಡಿರುವ ಸುಪ್ರೀಂ ಕೋರ್ಟ್, ‘ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆನ್ನಲಾದ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಆದರೆ ಮುಖ್ಯ ನ್ಯಾಯಮೂರ್ತಿಯವರು ಅಂತಹ ಹೇಳಿಕೆ ನೀಡಿಲ್ಲ. ಅದು ಸುಳ್ಳು ಸುದ್ದಿ. ಸುಳ್ಳು ಹರಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ’ ಎಂದು ಎಚ್ಚರಿಕೆ ನೀಡಿದೆ.
ವೈರಲ್ ಮಾಡಲಾಗಿದ್ದ ಪೋಸ್ಟರ್‌ನಲ್ಲಿ, ‘ನಾವು ಭಾರತದ ಸಂವಿಧಾನವನ್ನು, ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ನಿಮ್ಮ ಸಹಕಾರ ಕೂಡ ಇದಕ್ಕೆ ಬಹಳ ಮುಖ್ಯ. ಎಲ್ಲ ಜನರು ಒಗ್ಗೂಡಿ ಬೀದಿಗಿಳಿದು ತಮ್ಮ ಹಕ್ಕುಗಳ ಬಗ್ಗೆ ಸರ್ಕಾರದ ಬಳಿ ಕೇಳಬೇಕು. ಇದು ಸರ್ವಾಧಿಕಾರಿ ಸರ್ಕಾರ. ಜನರನ್ನು ಹೆದರಿಸುತ್ತಾರೆ, ಬೆದರಿಕೆ ಹಾಕುತ್ತಾರೆ. ಆದರೆ ನೀವು ಭಯಪಡಬೇಕಾಗಿಲ್ಲ, ಧೈರ್ಯವಾಗಿರಿ ಮತ್ತು ಸರ್ಕಾರವನ್ನು ಪ್ರಶ್ನಿಸಿ. ನಾನು ನಿಮ್ಮೊಂದಿಗಿದ್ದೇನೆ’ ಎಂದು ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾಗಿ ಬರೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಕಾರ್ಯಾಲಯವು ‘ಇದು ಸುಳ್ಳು’ ಎಂದು ಹೇಳಿದೆ. ಜೊತೆಗೆ, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.