- ಬಿಜೆಪಿಯವರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ
- ಮುಂದಿನ ದಿನಗಳಲ್ಲಿ ಪ್ರತಿ ಬ್ಲಾಕ್ ನಲ್ಲಿ ಪಕ್ಷದ ಕಚೇರಿ ಸ್ಥಾಪನೆ
ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಮುಜುಗರ ಮಾಡುವ ಹಾಗೆಯೇ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಇದನ್ನು ಸಹಿಸಲಾಗದೆ ಬೇರೆಯವರಿಗೆ ಹೆದರಿಸಿದಂತೆ ನನಗೆ ಹೆದರಿಸಲು ಸಾಧ್ಯವಿಲ್ಲ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡುತ್ತೇನೆ” ಎಂದರು.
“ಚುನಾವಣೆ ಫಲಿತಾಂಶವನ್ನು ಅರಗಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಆದರೂ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಲೇ ಇದ್ದಾರೆ. ಮೊದಲು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಿದರು. ನಾವು ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆ ಜಾರಿ ಮಾಡಿ ಕೆಲಸದ ಮೂಲಕ ಅವರ ಟೀಕೆಗೆ ಉತ್ತರ ನೀಡಿದ್ದೇವೆ” ಎಂದು ಹೇಳಿದರು.
ಕೆಲಸ ಮಾಡದೇ 117 ಕೋಟಿ ರೂ. ಬಿಲ್ ಪಾವತಿ
ಚಲುವರಾಯಸ್ವಾಮಿ ಮತ್ತು ನನ್ನ ವಿರುದ್ಧ ಕಮಿಷನ್ ವಿಚಾರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದು ಕ್ಷೇತ್ರದಲ್ಲಿ, ಕೆಲಸ ಮಾಡದೇ 117 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಕಾನೂನು ಮೂಲಕ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು. ಅದರಂತೆ ನಾವು ತನಿಖಾ ಸಮಿತಿ ಮಾಡಿ ತನಿಖೆಗೆ ಆದೇಶ ನೀಡಿದ್ದೇವೆ” ಎಂದು ತಿಳಿಸಿದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಮಗೆ ನೈಜತೆ ನೋಡಿ ಬಿಲ್ ಪಾವತಿ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ತನಿಖೆ ಆರಂಭಿಸಿದ್ದೇವೆ. ಈ ತನಿಖೆ ಆರಂಭಿಸಿದ ತಕ್ಷಣ ನಮ್ಮ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಹಳಬರು ಎರಡೂವರೆ ವರ್ಷಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು: ಕೆ ಎಚ್ ಮುನಿಯಪ್ಪ ಸಲಹೆ
ಸಾವಿರಾರು ಕೋಟಿ ಲೂಟಿ
ಬಿಜೆಪಿ ಅಕ್ರಮದ ಬಗ್ಗೆ ಮಾಧ್ಯಮಗೋಷ್ಠಿ ನಡೆಸುವಂತೆ ಮುಖ್ಯಮಂತ್ರಿಗಳು ಹೇಳಿದರು. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತೇನೆ. ಬಿಜೆಪಿ ನಾಯಕರು ಮಾಡಿರುವ ಕಳ್ಳತನ, ರಾಜ್ಯದ ಹಣ ಲೂಟಿಯನ್ನು ಬಯಲು ಮಾಡುವುದು ನಮ್ಮ ಮೊದಲ ಕರ್ತವ್ಯ. ಅವರು ಹೆಣದ ಮೇಲೆ ಹಣ ಮಾಡಿದರು, ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದರು. ಎಲ್ಲವನ್ನು ಪತ್ತೆ ಹಚ್ಚುತ್ತೇನೆ” ಎಂದರು.
ಕೇವಲ ಸಿ.ಟಿ ರವಿ, ಗೋಪಾಲಯ್ಯ, ಅಶ್ವತ್ಥನಾರಾಯಣ, ಅಶೋಕ್ ಸೇರಿದಂತೆ ಒಂದು ಗುಂಪು ಮಾತ್ರ ಟೀಕೆ ಮಾಡುತ್ತಿದೆ. ಬಿಜೆಪಿ ನಾಯಕರು ನಮಗೆ ಅಧಿಕಾರ ಸಿಕ್ಕರೂ ಗ್ಯಾರಂಟಿ ಯೋಜನೆಗಳಂತಹ ಯೋಜನೆ ನೀಡಲಿಲ್ಲವಲ್ಲ ಎಂದು ಅಸೂಯೆಯಿಂದ ಕೈ ಹೊಸಕಿಕೊಳ್ಳುತ್ತಿದ್ದಾರೆ. ಜನ ನಮ್ಮ ಯೋಜನೆಯಿಂದ ಸಂತೋಷ ಪಡುತ್ತಿದ್ದಾರೆ” ಎಂದು ಹೇಳಿದರು.
ಎಲ್ಲರಿಗೂ ಅಧಿಕಾರ ನೀಡಲು ಪಕ್ಷ ಬದ್ಧ
“ಪಕ್ಷ ಅಧಿಕಾರಕ್ಕೆ ಬಂದಿದೆ ನಮಗೆ ಏನು ಸಿಕ್ಕಿದೆ ಎಂಬ ಅನೇಕ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕೂತಿದೆ ಎಂಬುದು ನಮಗೆ ಗೊತ್ತಿದೆ. ಚುನಾವಣೆ ಸಮಯದಲ್ಲಿ ಸಾವಿರಾರು ಮಂದಿ ಅರ್ಜಿ ಹಾಕಿದ್ದಿರಿ. ಎಲ್ಲರಿಗೂ ನಾವು ಅವಕಾಶ ನೀಡಲು ಆಗಿಲ್ಲ. ನಮ್ಮ ಆಯ್ಕೆಗೆ ಫಲಿತಾಂಶವೇ ಸಾಕ್ಷಿ. ನಮ್ಮ ಎಲ್ಲ ಆಯ್ಕೆ ಸರಿ ಎಂದು ಹೇಳುವುದಿಲ್ಲ. ಸುಮಾರು 15 ಕ್ಷೇತ್ರಗಳಲ್ಲಿ ಬಂಡಾಯದಿಂದ ಪಕ್ಷ ಸೋತಿದೆ” ಎಂದರು.
“ಪ್ರತಿ ಪಂಚಾಯ್ತಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಪಟ್ಟಿ ಮಾಡಿ ಎಲ್ಲ ವರ್ಗಕ್ಕೆ ಸಾಮಾಜಿಕವಾಗಿ ಪ್ರತಿ ಕ್ಷೇತ್ರದಲ್ಲಿ 50-100 ಸದಸ್ಯರ ನೇಮಕಾತಿ ಮಾಡಬೇಕು. ರಾಜ್ಯ ಮಟ್ಟದ ಪದಾಧಿಕಾರಿಗಳ ಹೆಸರು ಸೂಚಿಸುವಂತೆ ಕೇಳಿದ್ದೇವೆ. ಸಹಕಾರ ಸಚಿವಾಲಯದಲ್ಲಿ, ಇಂಧನ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸಚಿವರ ಜತೆ ಸೂಚನೆ ನೀಡಿದ್ದೇವೆ. ನಿಮ್ಮೆಲ್ಲರಿಗೂ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ” ಎಂದು ತಿಳಿಸಿದರು.
ಬ್ಲಾಕ್ ಮಟ್ಟದಲ್ಲಿ ಪಕ್ಷದ ಕಚೇರಿ
“ಮುಂದಿನ ದಿನಗಳಲ್ಲಿ ಪ್ರತಿ ಬ್ಲಾಕ್ ನಲ್ಲಿ ಪಕ್ಷದ ಕಚೇರಿ ಇರಲೇಬೇಕು. ಈ ವಿಚಾರದಲ್ಲಿ ರಾಜಿ ಇಲ್ಲ. ನೀವು ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ. ನೀವು ಜಮೀನು ಖರೀದಿ ಮಾಡುತ್ತೀರೋ ಏನು ಮಾಡುತ್ತೀರೋ ಗೊತ್ತಿಲ್ಲ. ಕಾಂಗ್ರೆಸ್ ದೇವಾಲಯವಾದ ಪಕ್ಷದ ಕಚೇರಿ ನಿರ್ಮಾಣ ಮಾಡಲೇಬೇಕು. ಮುಖ್ಯಮಂತ್ರಿಗಳು, ಸಚಿವರುಗಳು ಯಾವುದೇ ಜಿಲ್ಲೆ ಪ್ರವಾಸ ಮಾಡಿದರೂ ಅಲ್ಲಿ ಜಿಲ್ಲಾಧ್ಯಕ್ಷರು ಕೂಡ ಇರಬೇಕು. ನೀವು ಬಲಿಷ್ಠವಾಗಿದ್ದರೆ ಮಾತ್ರ ನಾವು ಬಲಿಷ್ಠವಾಗಿರುತ್ತೇವೆ” ಎಂದರು.