- ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಸಂಬಂಧಿಕರಿಂದಲೇ ಅತ್ಯಾಚಾರ : ದೂರು ದಾಖಲು
- ಪ್ರಕರಣದ್ದೆಂದು ಹೇಳಲಾದ ಕೆಲವೊಂದು ವಿಡಿಯೋಗಳು ವೈರಲ್
ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಮಹಿಳೆಯ ಮೇಲೆ ಸಂಬಂಧಿಕರೇ ಅತ್ಯಾಚಾರ ಎಸಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಸಂಬಂಧ 16 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಅಲ್ಲದೇ, ಈ ನಡುವೆ ಪ್ರಕರಣ ಸಂಬಂಧ ಇದೇ ಘಟನೆಯದ್ದೆಂದು ಹೇಳಲಾದ ಕೆಲವು ವಿಡಿಯೋಗಳು ಆಗಸ್ಟ್ 14ರಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಆದರೆ ವಿಡಿಯೋಗಳ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ.
ಪ್ರಕರಣದ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ್ ಸತ್ಯನಾರಾಯಣ್, ರಾಧಾ ಶ್ರೀನಿವಾಸ್, ಪ್ರದೀಪ್ ಶ್ರೀನಿವಾಸ್, ಸುದೀಪ್ ಶ್ರೀನಿವಾಸ್ ಹಾಗೂ ಗೋಪಾಲ್ ರಾವ್ ಪುಲ್ಲಯ್ಯ ಕೊಠಾರಿ, ರಾಮರಾವ್ ವೆಂಕಟ ನಾರಾಯಣ್ ಸೇರಿದಂತೆ 16 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಜಮೀನು ವಿಚಾರವಾಗಿ ಕುಟುಂಬದ ಮಧ್ಯೆ ಏಳು ವರ್ಷಗಳಿಂದ ವಿವಾದವಿತ್ತು ಎನ್ನಲಾಗಿದ್ದು, ‘ಕಳೆದ ಜುಲೈ 27ರಂದು ಜಮೀನಿಗೆ ಹೋದಾಗ ತನ್ನನ್ನು ಅತ್ಯಾಚಾರ ಮಾಡಿದ್ದಾರೆಂದು’ ಆರೋಪಿಸಿ ಸಂತ್ರಸ್ತ ಮಹಿಳೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
‘ನಮ್ಮ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಭಾವ ಹಾಗೂ ಸಂಬಂಧಿಕರೇ ಅತ್ಯಾಚಾರ ಮಾಡಿದ್ದು, ಪತಿಯ ಮೇಲೂ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು, ಕಲಂ 143, 147, 376 (D), 148, 354, 504, 506 ಅಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವಿಡಿಯೋ ಸತ್ಯಾಸತ್ಯತೆ ಪರಿಶೀಲನೆ : ಎಸ್‌ಪಿ ಯಶೋಧಾ ವಂಟಗೋಡಿ
ವೈರಲ್ ಆದ ವಿಡಿಯೋಗಳು ಹಳೆಯದ್ದು ಎಂಬ ಅನುಮಾನವಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿಕೆ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ವೈರಲಾಗುತ್ತಿರುವ ವಿಡಿಯೋ ಬಗ್ಗೆ ಕೂಡ ಸತ್ಯಾಸತ್ಯತೆ ಪರಿಶೀಲನೆ ನಡೆಸುತ್ತಿದ್ದೇವೆ. 15-20 ವರ್ಷಗಳಿಂದ ಮಧ್ಯೆ ಕೌಟುಂಬಿಕ ಕಲಹವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ದೃಢಪಡುವವರೆಗೂ ಯಾರನ್ನೂ ಬಂಧಿಸುವುದಿಲ್ಲ ಎಂದು ಎಸ್‌ಪಿ ತಿಳಿಸಿಸಿದ್ದಾರೆ.