ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಯೋಜನೆ-2 | ತಮಿಳುನಾಡಿನಲ್ಲಿದೆ ಮಾದರಿ ಆರೋಗ್ಯ ವ್ಯವಸ್ಥೆ

Date:

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಗತಿಪರ ಮಾದರಿಗಳನ್ನು ಆಳವಡಿಸಿಕೊಂಡಿದೆ. ಅಲ್ಲಿ ವೈದ್ಯರು ರೋಗಿಗಳಿಗೆ ಹೊರಗೆ ಔಷಧಿ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ಹಾಗೆ ಬರೆದುಕೊಟ್ಟ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತದೆ...

ಈದಿನ.ಕಾಮ್‌ನ ವಿಶೇಷ ಆರೋಗ್ಯ ಸರಣಿಯ ಎರಡನೇ ಭಾಗ.

ಭಾರತದಲ್ಲಿ ಜನ ಆರೋಗ್ಯ ರಕ್ಷಣೆಗಾಗಿ ಅಪಾರ ಹಣ ಖರ್ಚು ಮಾಡುತ್ತಿದ್ದಾರೆ. ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಶೇ.70% ರಷ್ಟು ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಹಾಗೆ ಹೋಗುವವರು ತಮ್ಮ ಶೇ 70ರಷ್ಟು ಹಣ ಔಷಧಿ ಮತ್ತು ರೋಗನಿರ್ಣಯಕ್ಕೆ ಖರ್ಚು ಮಾಡುತ್ತಿದ್ದಾರೆ.

ಭಾರತವು ಔಷಧಿಗಳ ಬೆಲೆ ನಿಯಂತ್ರಣಕ್ಕಾಗಿ ಹೆಸರಿಗೆ ಒಂದು ಕಾರ್ಯವಿಧಾನವನ್ನು ಹೊಂದಿದೆ. ಆದರೆ, ಅದು ಸಮರ್ಪವಾಗಿಲ್ಲದೇ ಇರುವುದರಿಂದ ಬೆರಳೆಣಿಕೆಯ ಸಾಮಾನ್ಯ ಔಷಧಿಗಳಿಗೆ ಮಾತ್ರ ಅದು ಅನ್ವಯವಾಗುತ್ತಿದೆ. ಉಳಿದಂತೆ ರೋಗಿಗಳು, ಬೇರೆಲ್ಲೂ ಕಾಣದಂಥ ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಬರೆದುಕೊಡುವ ‘ರೋಗ’ಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ವೈದ್ಯರು ಔಷಧಿಗಳನ್ನು ಹೊರಗೆ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಕೆಲವು ಔಷಧಿಗಳು ಆಸ್ಪತ್ರೆಗಳಲ್ಲೇ ಇರುವ ಜನೌಷಧಿ ಕೇಂದ್ರಗಳಲ್ಲಿ ಸಿಗುತ್ತವೆ. ಆದರೆ, ವೈದ್ಯರು ಬರೆದುಕೊಡುವ ಬಹುತೇಕ ಬ್ರಾಂಡೆಡ್ ಔಷಧಿಗಳು ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರ ಲಭ್ಯ, ಅದರಲ್ಲೂ ವಿಶೇಷವಾಗಿ ಆ ಆಸ್ಪತ್ರೆಯ ಸುತ್ತಮುತ್ತ ಇರುವ ಕೆಲವೇ ನಿಗದಿತ ಅಂಗಡಿಗಳಲ್ಲಿ ಮಾತ್ರ ಅವು ಸಿಗುತ್ತವೆ. ಅಷ್ಟರ ಮಟ್ಟಿಗೆ ಖಾಸಗಿ ಮೆಡಿಕಲ್ ಶಾಪ್‌ಗಳು ಮತ್ತು ವೈದ್ಯರ ನಡುವಿನ ‘ಹೊಂದಾಣಿಕೆ’ ಚಾಲ್ತಿಯಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜನೌಷಧಿ ಕೇಂದ್ರ

ಕೇಂದ್ರ ಸರ್ಕಾರ ಜೆನರಿಕ್ ಔಷಧಿಗಳನ್ನು ಮಾರಾಟ ಮಾಡುವ ‘ಜನೌಷಧಿ’ ಅಂಗಡಿಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಕೆಲವಾದರೂ ಔಷಧಿಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡುವ ಯೋಜನೆ ಜಾರಿ ಮಾಡಿತು. ಆದರೆ, ಮೋದಿ ಅವರಿಗೆ ಆ ಯೋಜನೆಯಿಂದ ಜನಪ್ರಿಯತೆ ಸಿಕ್ಕಷ್ಟು ಆ ಯೋಜನೆಯಿಂದ ಜನರಿಗೆ ಪ್ರಯೋಜನ ಸಿಗಲಿಲ್ಲ. ಕೇಂದ್ರ ಸರ್ಕಾರದ ಅರೆಮನಸ್ಸು, ಪ್ರಮುಖ ಔಷಧಿಗಳ ಅಲಭ್ಯತೆ, ವೈದ್ಯರ ಲಾಬಿಯಿಂದಾಗಿ ಜನೌಷಧಿ ಯೋಜನೆ ಅಷ್ಟಾಗಿ ಯಶಸ್ಸು ಕಂಡಿಲ್ಲ. ವೈದ್ಯರು ಎಷ್ಟರ ಮಟ್ಟಿಗೆ ಇದರ ವಿರುದ್ಧವಾಗಿದ್ದಾರೆ ಎಂದರೆ, ಜೆನರಿಕ್ ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನೇ ಅವರು ಬರೆಯುವುದಿಲ್ಲ. ಬ್ರ್ಯಾಂಡ್‌ಗಳ ಹೆಸರಿನಲ್ಲಿ ಔಷಧಿಗಳನ್ನು ಬರೆಯುತ್ತಾರೆ. ಇದರಿಂದಾಗಿ ರೋಗಿಗಳು ಔಷಧಿಗಳಿಗೆ ದುಬಾರಿ ಬೆಲೆ ತೆತ್ತು ಖಾಸಗಿ ಶಾಪ್‌ಗಳಿಂದ ಅವನ್ನು ಕೊಳ್ಳಬೇಕಾಗಿದೆ, ಕೆಲವು ಔಷಧಿಗಳಿಗೆ ಅದರ ಉತ್ಪಾದನಾ ಬೆಲೆಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಅದರ ಶೇ. 1,737% ರಷ್ಟು ಹೆಚ್ಚಿನ ಬೆಲೆ ಇದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ಇಂಥ ಸನ್ನಿವೇಶದಲ್ಲಿ, ಜೀವ ರಕ್ಷಕ ಔಷಧಿಗಳನ್ನು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವ ಪರಿಣಾಮಕಾರಿ ಮಾರ್ಗವೆಂದರೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸುವುದು. ಮೊದಲೇ ಹೇಳಿದಂತೆ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳು ಈಗಾಗಲೇ ಇದನ್ನು ಮಾಡಿವೆ. ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಉಚಿತ ಔಷಧಿಗಳ ಯೋಜನೆಗೆ ಕೊಂಚ ಸಮಸ್ಯೆಯುಂಟಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜಸ್ಥಾನದಲ್ಲಿ ಆರೋಗ್ಯ ರಕ್ಷಣಾ ಹಕ್ಕು ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ. ಆದಾಗ್ಯೂ, ದೆಹಲಿ, ಕೇರಳ, ಮಧ್ಯಪ್ರದೇಶ ಮತ್ತು ಒಡಿಶಾದಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಉಳಿದ ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಮುಂದಾಗಲಿಲ್ಲ.

ತಮಿಳುನಾಡು

ಸಾರ್ವಜನಿಕ ಆರೋಗ್ಯ ಸೇವೆಗಳ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಗತಿಪರ ಮಾದರಿಗಳನ್ನು ಆಳವಡಿಸಿಕೊಂಡಿದೆ. ಅಲ್ಲಿ 1995 ರಲ್ಲಿ ಉಚಿತ ಔಷಧಿಗಳ ಯೋಜನೆಯನ್ನು ಜಾರಿಗೊಳಿಸಲಾಯಿತು. ಅದು ಔಷಧ ಸಂಗ್ರಹಣೆ, ಗುಣಮಟ್ಟದ ತಪಾಸಣೆ ಮತ್ತು ಪೂರೈಕೆ ಮತ್ತು ವಿತರಣೆಯ ಅತ್ಯಂತ ಪರಿಣಾಮಕಾರಿ ವ್ಯವಸ್ಥೆಗಳನ್ನು ಒಳಗೊಂಡಿದೆ. ತಮಿಳುನಾಡಿನ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತದೆ. ಅಲ್ಲಿ ವೈದ್ಯರು ರೋಗಿಗಳಿಗೆ ಹೊರಗೆ ಔಷಧಿ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಮೀರಿ ಹಾಗೆ ಬರೆದುಕೊಟ್ಟರೆ, ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತದೆ.

ಅಲ್ಲಿ ಔಷಧಿಗಳನ್ನು ಕೊಳ್ಳಲು, ವಿತರಿಸಲು ತಮಿಳುನಾಡು ಮೆಡಿಕಲ್ ಸರ್ವೀಸಸ್ ಕಾರ್ಪೊರೇಷನ್ (ಟಿಎಂಎಸ್‌ಕೆ) ಸ್ಥಾಪಿಸಲಾಗಿದೆ. ಒಬ್ಬ ಐಎಎಸ್ ಅಧಿಕಾರಿಯ ಉಸ್ತುವಾರಿಯಲ್ಲಿ ಅದು ಕಾರ್ಯ ನಿರ್ವಹಿಸುತ್ತದೆ. ಮೆಡಿಕಲ್ ಕಾಲೇಜ್, ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರ ಇವೆಲ್ಲವುಗಳಿಗೆ ವರ್ಷಕ್ಕೆ ಎಷ್ಟು ಔಷಧಿ ಬೇಕು ಎನ್ನುವುದನ್ನು ಲೆಕ್ಕ ಹಾಕಿ, ಸಗಟಿನಲ್ಲಿ ಔಷಧಿಗಳನ್ನು ಕೊಂಡುಕೊಳ್ಳಲಾಗುತ್ತದೆ.

ತಮಿಳುನಾಡು ಆರೋಗ್ಯ ಇಲಾಖೆಯ ದೊಡ್ಡ ಸಾಧನೆ ಎಂದರೆ, ಅಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಂಪ್ಯೂಟರೀಕರಿಣಗೊಳಿಸಲಾಗಿದೆ. ಯಾವುದೋ ಜಿಲ್ಲೆಯ, ತಾಲ್ಲೂಕಿನ ಅಥವಾ ಹೋಬಳಿಯ ವೈದ್ಯರು ಒಂದು ಸ್ಟ್ರಿಪ್ ಪ್ಯಾರಾಸಿಟಾಮಾಲ್ ಮಾತ್ರೆ ಬರೆದುಕೊಟ್ಟರೆ, ಫಾರ್ಮಾಸಿಸ್ಟ್ ಅದನ್ನು ರೋಗಿಗೆ ಕೊಟ್ಟರೆ, ಅಲ್ಲಿ ಎಷ್ಟು ಸ್ಟಾಕ್ ಉಳಿದಿದೆ, ಅಲ್ಲಿನ ಮುಂದಿನ ಅಗತ್ಯ ಎಷ್ಟಿದೆ ಎನ್ನುವುದು ಚೆನ್ನೈನಲ್ಲಿ ಕೂತವರಿಗೂ ಗೊತ್ತಾಗುತ್ತದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮೂರು ತಿಂಗಳಿಗಾಗುವಷ್ಟು ದಾಸ್ತಾನು ಇರುತ್ತದೆ. ಆದರೆ, ಯಾವ ಔಷಧಿ ಮೊದಲು ಬಂತೋ, ಅದನ್ನು ಮೊದಲು ರೋಗಿಗೆ ಕೊಡಲಾಗುತ್ತದೆ. ಪ್ರತಿ ಬ್ಯಾಚ್ ಅನ್ನೂ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ಮೂರು ಹಂತದ ಕ್ವಾಲಿಟಿ ಚೆಕ್ ಮಾಡಿದ ನಂತರವೇ ವಿತರಣೆ ಮಾಡುವುದು. ಬೆಲೆ ನಿಷ್ಕರ್ಷೆ ಎಲ್ಲ ಆದಮೇಲೆ ಔಷಧಿಗಳನ್ನು ರಾಜಧಾನಿಗೆ ತರಿಸಿಕೊಳ್ಳುವುದಿಲ್ಲ. ಎಲ್ಲಿ ಅಗತ್ಯವಿದೆಯೋ ಅಲ್ಲಿಗೇ ನೇರವಾಗಿ ಕಳಿಸಲಾಗುತ್ತದೆ. ಒಂದು ವರ್ಷಕ್ಕೆ ಆರ್ಡರ್ ಕೊಟ್ಟರೂ ಎಲ್ಲವೂ ಒಂದೇ ಸಲ ತರಿಸಿಕೊಳ್ಳುವುದಿಲ್ಲ. ಮೂರ್ನಾಲ್ಕು ತಿಂಗಳಿಗೊಮ್ಮೆ ಔಷಧಿ ಪೂರೈಕೆ ಮಾಡಲು ತಿಳಿಸಲಾಗುತ್ತದೆ. ಬ್ಯಾಂಕ್ ಪಾಸ್ ಬುಕ್‌ನಂತೆ ಪ್ರತಿಯೊಂದು ಸಾರ್ವಜನಿಕ ಆರೋಗ್ಯ ಕೇಂದ್ರವೂ ಒಂದು ಪಾಸ್ ಬುಕ್ ಮೇಂಟೇನ್ ಮಾಡುತ್ತದೆ. ಯಾವ ಔಷಧಿಯ ಎಷ್ಟು ದಾಸ್ತಾನು ಇದೆ, ಎಷ್ಟು ಬೇಡಿಕೆ ಇದೆ ಎನ್ನುವುದನ್ನು ಅದರಲ್ಲಿ ದಾಖಲು ಮಾಡಲಾಗುತ್ತದೆ.

ಇವೆಲ್ಲ ಅಲ್ಲಿ ಕೇವಲ ಕಾಗದದ ಮೇಲೆ ಮಾತ್ರ ಇಲ್ಲ. ಆಚರಣೆಯಲ್ಲೂ ಯಥಾವತ್ತಾಗಿವೆ. ಎಷ್ಟರ ಮಟ್ಟಿಗೆ ಎಂದರೆ, ಅಲ್ಲಿ ಸರ್ಕಾರಿ ಆಸ್ಪತ್ರೆಗಳ ಫಾಸಲೆಯಲ್ಲೆಲ್ಲೂ ಖಾಸಗಿ ಮೆಡಿಕಲ್ ಶಾಪ್‌ಗಳೇ ಇರುವುದಿಲ್ಲ. ಜೊತೆಗೆ ಅಲ್ಲಿ ನಮ್ಮಂತೆ ಜನೌಷಧಿ ಕೇಂದ್ರಗಳೂ ಇಲ್ಲ. ಹೀಗಾಗಿ ತಮಿಳುನಾಡಿನಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಶೇ.40 ಕ್ಕೂ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಜೊತೆಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಔಷಧಿಗಳನ್ನು ಸಗಟಾಗಿ ಕೊಳ್ಳುವುದರಿಂದ ಔಷಧಿಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ.      

ರಾಜಸ್ಥಾನದಲ್ಲಿಯೂ ‘ಮುಖ್ಯಮಂತ್ರಿ ನಿಶುಲ್ಕ್ ದವಾ ಯೋಜನೆ’ (ಎಂಎಂಎನ್‌ಡಿವೈ) ಎಂಬ ಉಚಿತ ಔಷಧಿಗಳಿಗಾಗಿ ಇದೇ ರೀತಿಯ ವಿಸ್ತೃತ ಯೋಜನೆಯನ್ನು ಪ್ರಾರಂಭಿಸಲಾಯಿತು. ರಾಜಸ್ಥಾನವನ್ನು ಅಭಿವೃದ್ಧಿ ಮಾದರಿಯ ವಿಚಾರದಲ್ಲಿ ಅನುಕರಣೀಯ ರಾಜ್ಯವೆಂದು ನೋಡಲಾಗುವುದಿಲ್ಲ. ಆದರೆ, ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಮಾತ್ರ ಈ ಯೋಜನೆಯನ್ನು ಡಬ್ಲ್ಯುಎಚ್ಒ ಸೇರಿದಂತೆ ಹಲವೆಡೆಯಿಂದ ವ್ಯಾಪಕವಾಗಿ ಶ್ಲಾಘಿಸಲಾಯಿತು.

ಎಂಎನ್‌ಡಿವೈ ಅಡಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗೆ 606 ಅಗತ್ಯ ಮತ್ತು ಜೀವ ಉಳಿಸುವ ಔಷಧಿಗಳು, 137 ಶಸ್ತ್ರಚಿಕಿತ್ಸಾ ವಸ್ತುಗಳು ಮತ್ತು ಇತರ ಸೌಲಭ್ಯಗಳು ಸಿಗುತ್ತವೆ. ಸರ್ಕಾರಿ ಸ್ವಾಮ್ಯದ ರಾಜಸ್ಥಾನ ವೈದ್ಯಕೀಯ ಸೇವೆಗಳ ನಿಗಮ (ಆರ್‌ಎಂಎಸ್‌ಸಿ) ಔಷಧಿ ಖರೀದಿ ಮತ್ತು ಪೂರೈಕೆ ವ್ಯವಸ್ಥೆಯನ್ನ ನಿರ್ವಹಿಸುತ್ತದೆ.

ಕರ್ನಾಟಕದಲ್ಲಿಯೂ ಹೆಸರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ವಿತರಿಸಬೇಕೆನ್ನುವ ನಿಯಮ ಇದೆ. ಆದರೆ, ಪಾಲನೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾದ ಔಷಧಿಗಳನ್ನು ಕೊಳ್ಳಲು ಮತ್ತು ವಿತರಿಸಲು ಆರೋಗ್ಯ ಇಲಾಖೆ ಅಧೀನದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್‌) ಇದೆ. ಔಷಧಿಗಳನ್ನು ಕೊಂಡು ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಹಂಚುವ ಜವಾಬ್ದಾರಿ ಇದರದ್ದು. ಆದರೆ, ಇದು ಸ್ವಾಯತ್ತ ಸಂಸ್ಥೆಯಲ್ಲ. ಕೆಎಎಸ್ ಅಧಿಕಾರಿ ಇದರ ಮುಖ್ಯಸ್ಥ. ಹಾಗಾಗಿ ರಾಜಕಾರಣಿಗಳ ವಿಪರೀತ ಹಸ್ತಕ್ಷೇಪ, ಕಮಿಷನ್ ವ್ಯವಹಾರಗಳು ಇದರಲ್ಲಿವೆ. ಸಾಮಾನ್ಯವಾಗಿ ಕೆಎಸ್‌ಎಂಎಸ್‌ಸಿಎಲ್‌ ಅಡಿಯಲ್ಲಿ ವರ್ಷಕ್ಕೊಮ್ಮೆ ಔಷಧಿಗಳನ್ನು ಕೊಂಡು ಪ್ರತಿಯೊಂದು ಆಸ್ಪತ್ರೆಗೂ ಇಂತಿಷ್ಟು ಎಂದು ಕಳಿಸಿಬಿಡುತ್ತಾರೆ. ಆದರೆ, ಅದು ಉಪಯೋಗ ಆಯಿತಾ, ಇಲ್ಲವಾ ಎನ್ನುವುದನ್ನು ತಿಳಿಯವ ವ್ಯವಸ್ಥೆ ಇಲ್ಲ. ಇದರ ಫಲವಾಗಿಯೇ ನಾವು ಎಲ್ಲೋ ತಿಪ್ಪೆಯಲ್ಲಿ, ರಸ್ತೆ ಪಕ್ಕದಲ್ಲಿ ಅವಧಿ ಮೀರಿದ ಔಷಧಿಗಳ ರಾಶಿ ಬಿದ್ದಿದ್ದ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿ ನೋಡುತ್ತೇವೆ. ಇದರಿಂದ ಏನಾಗಿದೆ ಎಂದರೆ, ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದವರಿಗೆ ನೀಡಲು ಔಷಧಿಗಳೇ ಇರುವುದಿಲ್ಲ.

ಕರ್ನಾಟಕ

ಕರ್ನಾಟಕದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ತಮ್ಮ ವಿವೇಚನೆ ಬಳಸಿ ಸ್ಥಳೀಯ ಮಟ್ಟದಲ್ಲಿ ಅಗತ್ಯ ಔಷಧಿಗಳನ್ನು ಕೊಳ್ಳುವ ಅಧಿಕಾರ ಇದೆ. ಕಳೆದ ಕೆಲವು ವರ್ಷಗಳ ಬೆಳವಣಿಗೆಗಳನ್ನೇ ನೋಡುವುದಾದರೆ, ಪ್ರತಿನಿತ್ಯದ ಅಗತ್ಯ ಔಷಧಗಳನ್ನು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಮತ್ತು ಆರೋಗ್ಯ ರಕ್ಷಾ ಸಮಿತಿ (ಎಆರ್‌ಎಸ್‌) ಮೂಲಕ ಸ್ಥಳೀಯವಾಗಿ ಖರೀದಿ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಹೀಗೆ ಸ್ಥಳೀಯ ಅನುದಾನ ಬಳಸಿ ಜಿಲ್ಲಾಸ್ಪತ್ರೆಗಳು 25 ಲಕ್ಷ ರೂ. ಮೌಲ್ಯದ ಔಷಧ ಖರೀದಿ ಮಾಡಬಹುದಾಗಿದೆ. ತಾಲೂಕು ಆಸ್ಪತ್ರೆಗೆ 10 ಲಕ್ಷ ರೂಪಾಯಿ, ಸಮುದಾಯ ಆರೋಗ್ಯ ಕೇಂದ್ರಗಳಿಗೆ 3 ಲಕ್ಷ ರೂಪಾಯಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 50 ಸಾವಿರ ರೂಪಾಯಿವರೆಗೆ ಔಷಧ ಖರೀದಿ ಮಾಡಬಹುದಾಗಿದೆ. ರಾಜ್ಯದಲ್ಲಿ ಸದ್ಯ ಇದೇ ಮಾದರಿಯಲ್ಲಿ ಖಾಸಗಿ ಔಷಧ ಮಾರಾಟಗಾರರಿಂದ ಔಷಧ ಖರೀದಿ ಮಾಡಲಾಗುತ್ತಿದೆ. ಆದರೆ, ಹೀಗಾದರೂ ಆಸ್ಪತ್ರೆಗಳಿಗೆ ಸಿಗುವುದು ಕೆಲವು ಔಷಧಗಳು ಮಾತ್ರ. ಜೀವರಕ್ಷಕ ಎನಿಸಿದ ಪ್ರಮುಖವಾದ ಔಷಧಗಳು ಲಭ್ಯವಿರುವುದಿಲ್ಲ. ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಕೆಲವು ವಿಶೇಷ ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲು ಸಾಧ್ಯವಿಲ್ಲ. ಅಂತಹ ಔಷಧಗಳನ್ನು ಇಲಾಖೆಯೇ ಪೂರೈಕೆ ಮಾಡಬೇಕಾಗುತ್ತದೆ. ಹೀಗಾಗಿ ಔಷಧಿಗಳ ಪೂರೈಕೆಯಲ್ಲಿ ಯಾವಾಗಲೂ ಸಮಸ್ಯೆಗಳು ಇದ್ದೇ ಇರುತ್ತವೆ. ನಮ್ಮಲ್ಲಿ ಔಷಧಿಗಳ ಅಂದಾಜು ಪಟ್ಟಿ ತಯಾರಿಸುವುದರಿಂದ ಹಿಡಿದು ಪೂರೈಕೆವರೆಗೆ ಎಲ್ಲದರಲ್ಲಿಯೂ ಅವ್ಯವಸ್ಥೆ, ರಾಜಕೀಯ ಹಸ್ತಕ್ಷೇಪ, ಕಮಿಷನ್ ವ್ಯವಹಾರಗಳು ನಡೆಯುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಔಷಧಿ ಖರೀದಿ ಟೆಂಡರ್ ಕರೆದೇ ಇಲ್ಲ.

ಈ ಸುದ್ದಿ ಓದಿದ್ದೀರಾ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ -1 | ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿವೆ ಆಸ್ಪತ್ರೆಗಳು  

ಇದರ ಬದಲು ತಮಿಳುನಾಡಿನಂತೆ ಕೆಎಸ್ಎಂಎಸ್‌ನಲ್ಲಿ ಸಗಟಾಗಿ ಔಷಧಿ ಖರೀದಿ ಮಾಡಿದರೆ, ಅವು ತುಂಬಾ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ದುಬಾರಿ ಹಣ ಕೊಟ್ಟು ಖಾಸಗಿ ಫಾರ್ಮಾ ಅಂಗಡಿಗಳಿಂದ ಕೊಂಡುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಸರ್ಕಾರದ ಹಣ ದುರ್ವಿನಿಯೋಗ ಆಗುವುದು ತಪ್ಪುತ್ತದೆ. ಕಡಿಮೆ ಹಣದಲ್ಲಿ ಹೆಚ್ಚಿನ ಔಷಧಿಗಳನ್ನು ಕೊಳ್ಳಲು ಆಗ ಸಾಧ್ಯವಾಗುತ್ತದೆ.

ಕರ್ನಾಟಕದ ಮಟ್ಟಿಗೆ ಕೊಂಚ ಸಮಾಧಾನದ ವಿಚಾರವೆಂದರೆ, ಔಷಧಿ ದಾಸ್ತಾನು ಉಗ್ರಾಣಗಳನ್ನು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ನಿರ್ಮಿಸಲಾಗಿದೆ. ಹಿಂದೆ ರಾಜ್ಯದ ನಾಲ್ಕೈದು ಕಡೆ ಮಾತ್ರ ಉಗ್ರಾಣಗಳು ಇದ್ದವು. ಈಗ ಹೊಸ ಜಿಲ್ಲೆಗಳನ್ನು ಬಿಟ್ಟು ಉಳಿದೆಲ್ಲ ಕಡೆ ಇವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರದೇ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿ ಬರುವುದು ಕೂಡ ಸಗಟು ಔಷಧ ಖರೀದಿಗೆ ಒಂದು ಸಮಸ್ಯೆ ಎನ್ನಲಾಗುತ್ತಿದೆ. ಆದರೆ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿದರೆ ಅದೇನೂ ಅಂಥ ತೊಡಕಾಗಲಾರದು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ಸೆ.15ಕ್ಕೆ ರಾಜ್ಯಾದ್ಯಂತ ಪ್ರಜಾಪ್ರಭುತ್ವ ದಿನಾಚರಣೆ : ಸಚಿವ ಈಶ್ವರ ಖಂಡ್ರೆ

ನಮ್ಮ ಸರಕಾರದ ತೀರ್ಮಾನದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆ.15ರಂದು ಕರ್ನಾಟಕ ರಾಜ್ಯದಾದ್ಯಂತ...

ಮಹಾರಾಷ್ಟ್ರ ರಾಜಕೀಯ | ಎರಡು ಬಣಗಳು, ಹಲವು ಪಕ್ಷಗಳು; ಮತದಾರರ ಚಿತ್ತ ಯಾರತ್ತ?

ಮಹಾರಾಷ್ಟ್ರ ಭಾರತದ ರಾಜಕೀಯ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಲೋಕಸಭೆಯಲ್ಲಿ ಎರಡನೇ...

ಮಂಡ್ಯ | ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರ ಕಡೆಗಣಿಸಿದ ಜಿಲ್ಲಾಡಳಿತ: ಕಾರಸವಾಡಿ ಮಹದೇವ

ಈವೆಂಟ್ ಮ್ಯಾನೆಜ್‌ಮೆಂಟ್‌ ಹೆಸರಲ್ಲಿ ಕಮಿಷನ್ ಆಸೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರನ್ನು...

ದಾವಣಗೆರೆ | ಸರ್ಕಾರ ಗುರುತಿಸಿರುವ ಜಾಗದಲ್ಲಿ ಶೀಘ್ರವೇ ನಿವೇಶನಗಳನ್ನು ಹಂಚಿಕೆ ಮಾಡಲು ಒತ್ತಾಯ

ದಲಿತ ಹಾಗೂ ಹಿಂದುಳಿದ ವರ್ಗದ ವಸತಿ ರಹಿತ ಕುಟುಂಬಗಳಿಗೆ ಕಡ್ಲೆಗೊಂದಿ ಗ್ರಾಮದಲ್ಲಿ...