- ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಪ್ರಾಧಿಕಾರ ಸ್ಥಾಪನೆಗೆ ಒತ್ತಾಯ
- ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ
ಕಲ್ಯಾಣ ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರ ಕೊರತೆಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸುವಂತೆ ಸಮಾನ ಶಾಲಾ ಶಿಕ್ಷಣ ಹೋರಾಟ ಸಮಿತಿ ಆಗ್ರಹಿಸಿದೆ.
ರಾಯಚೂರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು, “ಶಿಕ್ಷಕರ ಕೊರತೆ ಹೆಚ್ಚಿದ್ದು ಕಾರಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಪ್ರಾಥಮಿಕ ಹಂತದಲ್ಲಿ ಮೂರು ಸಾವಿರ ಹಾಗೂ ಪ್ರೌಢಶಾಲೆ ಹಂತದಲ್ಲಿ ಐನೂರಕ್ಕಿಂತ ಹೆಚ್ಚು ಶಿಕ್ಷಕರ ಕೊರತೆಯಿತ್ತು. ಸದ್ಯ ವರ್ಗಾವಣೆಯ ನಂತರ ಈ ಸಂಖ್ಯೆಯ ಪ್ರಮಾಣ ಇನ್ನಷ್ಟು ಅಧಿಕವಾಗಿದೆ. ಇನ್ನು ಕೆಲವು ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿದ್ದಾರೆ” ಎಂದು ಮಾಹಿತಿ ನೀಡಿದರು.
“ಪ್ರೌಢ ಶಾಲೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗುವ ಸ್ಥಿತಿಯಲ್ಲಿದ್ದು, ತಕ್ಷಣ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ನೇಮಿಸಿ ಪೂರಕ ವ್ಯವಸ್ಥೆ ಮಾಡಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವಂತೆ” ಆಗ್ರಹಿಸಿದರು.
ಬೇಡಿಕೆಗಳು:
1. ಕಲ್ಯಾಣ ಕರ್ನಾಟಕದ ಶಿಕ್ಷಕರ ನೇಮಕಾತಿ ಪ್ರಾಧಿಕಾರ ಸ್ಥಾಪನೆ ಮಾಡುವುದು.
2. ಕಲ್ಯಾಣ ಕರ್ನಾಟಕದ ನೇಮಕಾತಿಗೆ ಸಂಬಂಧಿಸಿದ ಪರೀಕ್ಷಾ ಮಂಡಳಿ ಕರ್ನಾಟಕ ಮಂಡಳಿಯಿಂದ ಬೇರ್ಪಡಿಸಿ ನೇಮಕಾತಿ ಪರೀಕ್ಷಾ ಕೇಂದ್ರಗಳು ಸೇರಿದಂತೆ ಇತರೆ ನೇಮಕಾತಿಗೆ ಸಂಬಂಧಿಸಿದ ಪ್ರಾಧಿಕಾರ ಪ್ರತ್ಯೇಕವಾಗಿ ಸ್ಥಾಪನೆ ಮಾಡುವುದು.
3. ಈಗಾಗಲೇ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ಶೀಘ್ರ ನೇಮಕ ಮಾಡಬೇಕು.
4) ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
5) ಈಗಾಗಲೇ ನೇಮಕಾತಿ ಹಂತದಲ್ಲಿರುವ ಶಿಕ್ಷಕರ ನೇಮಕಾತಿಯಲ್ಲಿ ನೇಮಕಗೊಂಡಿರುವ 13633 ಶಿಕ್ಷಕರನ್ನು ಶಾಲೆಗೆ ನಿಯುಕ್ತಗೊಳಿಸುವುದು ಹಾಗೂ ನೇಮಕಾತಿಗೆ ಸಂಬಂಧಿಸಿದ ನ್ಯಾಯಾಲಯಗಳ ಪ್ರಕ್ರಿಯೆ ಬಗೆಹರಿಸಿ ಆದೇಶ ಪ್ರತಿಯನ್ನು ನೀಡುವುದು.
ಈ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ಹೋರಾಟ ಸಮಿತಿಯ ಸಂಚಾಲಕರಾದ ಸಯ್ಯದ್ ಹಪೀಜುಲ್ಲಾ, ಅನಿಲ್ ಕುಮಾರ್ ತಾಯಪ್ಪ, ಮೋಕ್ಷಮ್ಮ, ಅಮರಮ್ಮ, ಶೋಭಾ, ಮಲ್ಲೇಶ್, ರಾಮಣ್ಣ ಇದ್ದರು.