- ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಗಳಿಸಿದ ಸ್ವಾತಂತ್ರ‍್ಯ ಇಡೀ ವಿಶ್ವಕ್ಕೇ ಮಾದರಿಯಾಗಿದೆ.
- ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಅಕ್ಕಮಹಾದೇವಿ ಹೆಸರಿನಲ್ಲಿ ಅಕ್ಕ ಪಡೆ ಎಂಬ ವಿಶೇಷ ಪಡೆ ರಚನೆ
ಭಾರತ ಅತ್ಯಂತ ಶ್ರೀಮಂತ ರಾಷ್ಟ್ರ. ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ದಾಸ್ಯಕ್ಕೆ ಸಿಲುಕಿದ್ದ ಭಾರತವನ್ನು 1857ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಎಂದೇ ಖ್ಯಾತವಾದ ಸಿಪಾಯಿ ದಂಗೆಯಿಂದ ಹಿಡಿದು 1947ರ ಆಗಸ್ಟ್ 14ರ ಮಧ್ಯ ರಾತ್ರಿಯವರೆಗೆ ನಡೆದ ಸ್ವಾತಂತ್ರ‍್ಯ ಹೋರಾಟದಿಂದ ಮುಕ್ತಗೊಳಿಸಲಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದಲ್ಲಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳಿವೆ. ಆ ಎಲ್ಲಾ ಮಹಾತ್ಮರ ಕೊಡುಗೆಗಳನ್ನು ಸ್ಮರಿಸುತ್ತಾ ನಾವಿಂದು ಸ್ವಾತಂತ್ರ‍್ಯ ದಿನವನ್ನು ಆಚರಿಸುತ್ತಿದ್ದೇವೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದೆ. ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಗಳಿಸಿದ ಸ್ವಾತಂತ್ರ‍್ಯ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಹಲವರ ತ್ಯಾಗ ಬಲಿದಾನದ ಫಲವಾಗಿ ನಾವಿಂದು ಸ್ವತಂತ್ರ ಭಾರತದಲ್ಲಿ ಇದ್ದೇವೆ. ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆಯೂ ಅಪಾರವಾಗಿದೆ. ಬೀದರ್ ಜಿಲ್ಲೆಯಲ್ಲಿ ಕೂಡ ಹಲವಾರು ಸ್ವಾತಂತ್ರ‍್ಯ ಹೋರಾಟಗಾರರು ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದ್ದಾರೆ. ಭಾರತ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟç, ಹಲವು ಭಾಷೆ, ಜಾತಿ, ಧರ್ಮಗಳಿದ್ದರೂ ಒಂದು ತಾಯಿಯ ಮಕ್ಕಳಂತೆ ನಾವೆಲ್ಲ ಇಂದು ಬದುಕುತ್ತಿದ್ದರೆ ಅದಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗುವಂತಹ ಲಿಖಿತ ಸಂವಿಧಾನ ನೀಡಿರುವುದೇ ಕಾರಣ. ಈ ಸಂದರ್ಭದಲ್ಲಿ ನಾನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುತ್ತೇನೆ” ಎಂದರು.
“ಉತ್ತಮ ಸಮಾಜ, ಬಲಿಷ್ಠ ದೇಶದ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು. ಈ ನಿಟ್ಟಿನಲ್ಲಿ ಬೀದರ್ ಜಿಲ್ಲೆಯ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಸಂಕಲ್ಪ ಕೈಗೊಳ್ಳಲಾಗಿದೆ. ಬೀದರ್ ಜಿಲ್ಲಾ ಕೇಂದ್ರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕ್ಯಾಥಲ್ಯಾಬ್ ಆರಂಭಿಸಲಾಗುವುದು. ಜಿಲ್ಲೆಯ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗೆ 371 ಜೆ ವಿಶೇಷ ಸ್ಥಾನಮಾನದ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ಶಿಕ್ಷಣ ಒದಗಿಸಲು, ಜಿಲ್ಲೆಯ 200 ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುವುದು. ಬೀದರ್‌ನಲ್ಲಿ ಆರಂಭವಾಗಿರುವ ಎಂಜಿನಿಯರಿಂಗ್ ಕಾಲೇಜ ಮತ್ತು ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಒದಗಿಸಲಾಗುವುದು” ಎಂದು ಹೇಳಿದರು.
“ಬೀದರ್ ವಿಶ್ವವಿದ್ಯಾಲಯ ಆರಂಭವಾಗಿದ್ದರೂ ಅಲ್ಲಿ ಬೋಧಕರಿಲ್ಲ, ಮೂಲಸೌಕರ್ಯ ಇಲ್ಲ, ಈ ನಿಟ್ಟಿನಲ್ಲಿ ಬೀದರ್ ವಿವಿಯ ಸೌಲಭ್ಯ ವರ್ಧನೆಗೆ ಒತ್ತು ನೀಡಲಾಗುವುದು. ಯುವ ಜನರನ್ನು ಕೌಶಲ್ಯವಂತರನ್ನಾಗಿ ಮಾಡಲು 3000 ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಜಿಲ್ಲೆಯ ಕೈಗಾರಿಕೆಯಲ್ಲಿ ಹಿಂದುಳಿದಿದ್ದು, ಇಲ್ಲಿ ಕೈಗಾರಿಕಾ ವಲಯ ರೂಪಿಸಲು ಚಿಂತನೆ ಮಾಡಲಾಗಿದೆ. ಇದಕ್ಕಾಗಿ 500 ಎಕರೆಯ 2 ಕೈಗಾರಿಕಾ ವಲಯ ಗುರುತಿಸಲಾಗಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿ, ಹೊಸ ಕೈಗಾರಿಕೆ ಆರಂಭಿಸಲು ಉತ್ತೇಜನ ನೀಡಲಾಗುವುದು.ಜಿಲ್ಲೆಯಲ್ಲಿ 50 ಸಣ್ಣ ನೀರಾವರಿ ಯೋಜನೆಗಳನ್ನು ಕಾರ್ಯಕತಗೊಳಿಸಲು 100 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಕೆರೆ ತುಂಬಿಸಲು, ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಗೋದಾವರಿ ನದಿ ನೀರು ಹಂಚಿಕೆ ಅಡಿ ನಮ್ಮ ಪಾಲಿನ ಸುಮಾರು 5 ಟಿಎಂಸಿ ಅಡಿ ನೀರನ್ನು ಸಂಪೂರ್ಣವಾಗಿ ಮತ್ತು ಸಮಪರ್ಕಕವಾಗಿ ಬಳಸಿಕೊಳ್ಳಲು ಮುಂದಿನ 3 ವರ್ಷದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು” ಎಂದು ನುಡಿದರು.
“ಬೀದರ್ ಜಿಲ್ಲೆಯಲ್ಲಿ ಕೂಡ ಕ್ರೀಡೆಗೆ ಪ್ರೋತ್ಸಾಹ ನೀಡಲು ಅಂದಾಜು 25 ಎಕರೆ ಪ್ರದೇಶದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಬೃಂದಾವನ ಗಾರ್ಡನ್ ಮತ್ತು ಆಲಮಟ್ಟಿ ಜಲಾಶಯದ ಬಳಿ ನಿರ್ಮಿಸಲಾಗಿರುವ ಉದ್ಯಾನದ ಮಾದರಿಯಲ್ಲೇ, ನಮ್ಮ ಕಾರಂಜ ಜಲಾಶಯದ ಮುಂಭಾಗದಲ್ಲಿ ಸುಸಜ್ಜಿತ ಕಾರಂಜಿ ಸಹಿತವಾದ ಉದ್ಯಾನ ಮಾಡಲು ನಿರ್ಧರಿಸಲಾಗಿದೆ. ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಿ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವುದು. ಬೀದರನಲ್ಲಿ ನೂರಾರು ವರ್ಷಗಳ ಹಿಂದೆಯೇ ಭೂ ಅಂತರ್ಗತ ಕಾಲುವೆ ಮೂಲಕ ಜಲ ಪೂರೈಕೆ ವ್ಯವಸ್ಥೆ ಕರೇಜ ನಿರ್ಮಿಸಿರುವುದು ಪತ್ತೆಯಾಗಿದ್ದು, ಈ ತಾಣವನ್ನು ಸಹ ಪ್ರವಾಸೋದ್ಯಮ ಮಹತ್ವದ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಅಕ್ಕಮಹಾದೇವಿಯವರ ಹೆಸರಿನಲ್ಲಿ ಅಕ್ಕ ಪಡೆ ಎಂಬ ವಿಶೇಷ ಪಡೆ ರಚಿಸಲಾಗುವುದು” ಎಂದು ಮಾಹಿತಿ ನೀಡಿದರು.
ಸರ್ಕಾರವು ತಾಲ್ಲೂಕಿಗೊಂದು ಟ್ರಿ ಪಾರ್ಕ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಬೀದರ್ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಟ್ರೀ ಪಾರ್ಕ್ ಇಲ್ಲವೋ ಅಂತಹ ತಾಲ್ಲೂಕಿನಲ್ಲಿ ಹೊಸದಾಗಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ ನಿರ್ಮಾಣ ಮಾಡಲು ಈ ವರ್ಷವೇ ಕ್ರಮ ಕೈಗೊಳ್ಳಲಾಗುವುದು. ಬೀದರ್ ಜಿಲ್ಲೆಯ ನೌಬಾದನಲ್ಲಿರುವ ಅರಣ್ಯ ತರಬೇತಿ ಕೇಂದ್ರವನ್ನು ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ 5 ಕೋಟಿ ರೂ.ಗಳ ಅನುದಾನವನ್ನು ನೀಡಲಾಗುವುದು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್ ಶಾಸಕರಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಚೇರಿವಾಲೆ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಮ್., ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಪೊಲೀಸ್ ಉಪಾಧೀಕ್ಷಕ ಮಹೇಶ ಮೇಘಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.