ಕರ್ನಾಟಕ ಕರಾವಳಿಯ ಹಲವೆಡೆ ಶುಕ್ರವಾರ (ಆಗಸ್ಟ್ 18) ಸಂಜೆಯ ಬಳಿಕ ಗುಡುಗು ಸಹಿತ ಮಳೆಯಾಗಿದ್ದು, ಮತ್ತೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯ ಮುನ್ಸೂಚನೆಯನ್ನೂ ನೀಡಿತ್ತು.
ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಶನಿವಾರ ಮತ್ತು ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದಲ್ಲೂ ಅಲೆಗಳು ಏಳುವ ಸಾಧ್ಯತೆ ಇದ್ದು, ಸೆಕೆಂಡಿಗೆ 0.4 ಮೀಟರ್‌ನಿಂದ 1 ಮೀಟರ್ ವರೆಗೆ ಅಲೆಗಳು ಅಬ್ಬರಿಸಲಿವೆ. ಸಾಮಾನ್ಯವಾಗಿ ಸೆಕೆಂಡಿಗೆ 05-43 ಸೆಂ ಮೀ ಎತ್ತರದೊಂದಿಗೆ ಅಲೆಗಳು ಬರುತ್ತವೆ. ಅಲ್ಲದೆ, ಗುಡುಗು, ಮಿಂಚಿನೊಂದಿಗೆ ಸುಮಾರು 30ರಿಂದ 40 ಕಿ ಮೀ ವೇಗದಲ್ಲಿ (ಗಂಟೆಗೆ) ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಸಿಎಜಿ ವರದಿಯ ಬಗ್ಗೆ ತನಿಖೆ ನಡೆಸುವ ತಾಕತ್ತು ಮೋದಿಗೆ ಇದೆಯಾ?: ಸಿದ್ದರಾಮಯ್ಯ ಸವಾಲು
ಈಗಾಗಲೇ ಎರಡು ವಾರಗಳಿಂದ ಮಳೆ ಕಡಿಮೆಯಾಗಿ ಬಿಸಿಲಿನ ತಾಪಕ್ಕೆ ಜನರು ಕಂಗೆಟ್ಟಿದ್ದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರಾ ಉಡುಪಿ ಜಿಲ್ಲೆಯ ಸ್ವರ್ಣಾ ನದಿ ಸೇರಿದಂತೆ ಕರಾವಳಿಯಲ್ಲಿ ನದಿಗಳು ತುಂಬಿ ಹರಿಯುವ ಸನ್ನಿವೇಶ ನಿರ್ಮಾಣ ಆಗಿರಲಿಲ್ಲ. ಬದಲಾಗಿ ಸ್ಥಳೀಯವಾಗಿ ಹೇಳಲಾಗುವ ಆಟಿ (ಆಷಾಢ) ತಿಂಗಳ ಕೊನೆಯ ದಿನಗಳಲ್ಲೂ ಧಾರಾಕಾರ ಮಳೆ ಸುರಿದಿರಲಿಲ್ಲ. ಭವಿಷ್ಯದ ಕುರಿತು ಸ್ಥಳೀಯ ರೈತರು ಆತಂಕಕ್ಕೀಡಾಗಿದ್ದರು. ಈ ಮಧ್ಯೆ ಶುಕ್ರವಾರ ಸಂಜೆಯ ಬಳಿಕ ಕೆಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.