- ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮೊದಲ ಕಂತು ಬಿಡುಗಡೆ
- ಶಾಸಕರ ಅಸಮಾಧಾನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮೊದಲ ಕಂತಿನಲ್ಲಿ 145 ಕೋಟಿ ರೂ. ಬಿಡುಗಡೆ ಮಾಡಿದ್ದು, ಪ್ರತಿ ಕ್ಷೇತ್ರಕ್ಕೂ 50 ಲಕ್ಷ ರೂ. ನಂತೆ 224 ಕ್ಷೇತ್ರದ ಶಾಸಕರು ಮತ್ತು 67 ವಿಧಾನಪರಿಷತ್ ಸದಸ್ಯರಿಗೆ ಅನುದಾನ ನೀಡಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ದುಂಬಾಲು ಬಿದ್ದಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶಾಸಕರನ್ನು ಶಾಂತಗೊಳಿಸಲು ಸಿಎಂ ಸಿದ್ದರಾಮಯ್ಯ 31 ಜಿಲ್ಲೆಗಳ 135 ಶಾಸಕರ ಸಭೆ ಕರೆದಿದ್ದರು.
ಸಭೆಯಲ್ಲಿ ಶಾಸಕರು ಅನುದಾನ ಸಿಗುತ್ತಿಲ್ಲವೆಂದು ಸಿಎಂ ಬಳಿ ಅಳಲು ತೋಡಿಕೊಂಡಿದ್ದರು. ಶಾಸಕರ ಈ ಅಳಲು ಕೇಳಿದ ಸಿಎಂ ಸಿದ್ದರಾಮಯ್ಯ, ಆದ್ಯತೆ ಮತ್ತು ಅನುದಾನದ ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಅಹವಾಲುಗಳನ್ನು ಜಾರಿಗೆ ತರುವಂತೆ ಶಾಸಕರಿಗೆ ಷರತ್ತು ವಿಧಿಸಿದ್ದಾರೆ. ಇದಕ್ಕೆ ಶಾಸಕರು ಸಮ್ಮತಿ ಸೂಚಿಸಿದ ಬಳಿಕ ಅನುದಾನ ಬಿಡುಗಡೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಲ್ಕಿಸ್ ಕಾನೂನು ಸಮರ – ನ್ಯಾಯವ್ಯವಸ್ಥೆಯ ಅಣಕ
ಈ ಮೂಲಕ ಸರ್ಕಾರ ಮತ್ತು ಶಾಸಕರ ನಡುವಿನ ಸಮಸ್ಯೆಗೆ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ. ಇನ್ನು ಮೊದಲ ಕಂತು ಬಿಡುಗಡೆಯಾದ ಬಳಿಕವಾದರೂ ಶಾಸಕರ ಅಸಮಾಧಾನ ನಿವಾರಣೆಯಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬುದನ್ನು ಕಾದುನೋಡಬೇಕು.
ತಾರತಮ್ಯ ಮಾಡದೆ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳಿಗೂ ತಲಾ ರೂ.50 ಲಕ್ಷ ಅನುದಾನ ನೀಡಿದ ಸಿದ್ದರಾಮಯ್ಯ ಅವರು , ಒಬ್ಬ ಪಕ್ಷಾತೀತ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.