ಈ ದಿನ ಸಂಪಾದಕೀಯ | ಬಿಲ್ಕಿಸ್‌ ಕಾನೂನು ಸಮರ – ನ್ಯಾಯವ್ಯವಸ್ಥೆಯ ಅಣಕ

Date:

ರಾಜಕೀಯ ಪ್ರೇರಿತ ಗಲಭೆಯಲ್ಲಿ ತನ್ನ ತಪ್ಪಿಲ್ಲದೇ ಇದ್ದರೂ ವಿಕೃತ ಮನಸ್ಥಿತಿಯ ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರಗೊಂಡು, ತನ್ನ ಕುಟುಂಬದ ಏಳು ಮಂದಿಯ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಗರ್ಭಿಣಿ ಬಿಲ್ಕಿಸ್‌ ಬಾನೊಳ ಮಾನಸಿಕ ಸ್ಥಿತಿಯನ್ನು ಈ ಸಮಾಜ, ಕಾನೂನು ಎಷ್ಟು ನಿರ್ಲಕ್ಷ್ಯದಿಂದ ಕಂಡಿದೆ ಎಂಬುದಕ್ಕೆ ಎರಡು ದಶಕಗಳ ಕಾನೂನು ಸಮರವೇ ಒಂದು ಸಾಕ್ಷಿ

ಗೋಧ್ರಾ ಹತ್ಯಾಕಾಂಡದ ಬಲಿಪಶು ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬಸ್ಥರ ಹತ್ಯೆ ಮಾಡಿದ ಅಧಮರಿಗೆ ಕ್ಷಮಾದಾನ ನೀಡಿಕೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. 

“ಕ್ಷಮಾದಾನವನ್ನು ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಅನ್ವಯಿಸಲಾಗುತ್ತಿದೆ? 14 ವರ್ಷಗಳ ನಂತರ ಜೀವಾವಧಿ ಶಿಕ್ಷೆಗೊಳಗಾದ ಎಲ್ಲರಿಗೂ ಹೀಗೆಯೇ ಕ್ಷಮಾದಾನ ನೀಡಲಾಗುತ್ತದೆಯೇ?” ಎಂದು ಗುಜರಾತ್‌ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಗುಜರಾತ್‌ನ ಗೋಧ್ರಾ ಗಲಭೆ ಸಮಯದಲ್ಲಿ ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲ್ಲೂಕಿನಲ್ಲಿ 2002 ಮಾರ್ಚ್ 3ರಂದು ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ 14 ಮಂದಿಯನ್ನು ಗುಂಪೊಂದು ಹೊಡೆದು ಕೊಂದಿತ್ತು. ಇದಕ್ಕೆ ಸಂಬಂಧಿಸಿದಂತೆ 2011ರಲ್ಲಿ ವಿಶೇಷ ನ್ಯಾಯಾಲಯವು 11 ಮಂದಿಗೆ ಮರಣದಂಡನೆ, 20 ಮಂದಿಗೆ ಜೀವಾವಧಿ ವಿಧಿಸಿತ್ತು. ನಂತರ ಗುಜರಾತ್‌ ಹೈಕೋರ್ಟ್‌ 11 ಮಂದಿಯ ಮರಣದಂಡನೆಯನ್ನು ಜೀವಾವಧಿಗೆ ಇಳಿಸಿತ್ತು. ಅದೇ ಅಪರಾಧಿಗಳನ್ನು 2022ರ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಮಯದಲ್ಲಿ ಸನ್ನಡತೆಯ ಆಧಾರದಲ್ಲಿ ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿತ್ತು.

ಈ ಪಾತಕಿಗಳ ಬಿಡುಗಡೆಯ ಸಂಬಂಧ ಗುಜರಾತ್‌ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಬರೆದ ಪತ್ರಕ್ಕೆ ಮೋದಿ ಸರ್ಕಾರ ಒಂದೇ ವಾರದಲ್ಲಿ ಒಪ್ಪಿಗೆ ನೀಡಿತ್ತು. ಆ ಮೂಲಕ ಬಲಿಷ್ಠ ಜಾತಿಯವರು ಅತ್ಯಾಚಾರ- ಕೊಲೆಯಂತಹ ಗಂಭೀರ ಅಪರಾಧ ಮಾಡಿದರೂ ಕ್ಷಮಾದಾನಕ್ಕೆ ಅರ್ಹರು ಎಂಬ ಸಂದೇಶವನ್ನು ಮೋದಿ ಸರ್ಕಾರ ಪರೋಕ್ಷವಾಗಿ ಕೊಟ್ಟಿದೆಯೇ ಎಂಬ ಸಂದೇಹ ಸಹಜವಾಗಿಯೇ ಉಂಟಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಮೂರು ವರ್ಷ ವಯಸ್ಸಿನ ಮಗಳನ್ನು ರಾಕ್ಷಸರು ನೆಲಕ್ಕೆ ಬಡಿದು ಕೊಂದಿದ್ದರು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳಾದ ಮಿತೇಶ್ ಭಟ್, ಶೈಲೇಶ್ ಭಟ್, ಜಸ್ವಂತ್ ನಾಯ್, ಗೋವಿಂದ್ ನಾಯ್, ರಾಧ್ಯೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯ್ ಸೋನಿ ಮತ್ತು ರಮೇಶ್ ಚಂದನಾ ಅವರನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಅವರಷ್ಟೇ ಅಲ್ಲ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ರೂಪ್ ರೇಖಾ ವರ್ಮಾ ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲು ಮೀನ ಮೇಷ ಎಣಿಸಿದ ಸುಪ್ರೀಂ ಕೊನೆಗೂ ಅಸ್ತು ಎಂದಿತ್ತು. ವಿಶೇಷ ಪೀಠ ರಚನೆ ಮಾಡಿದೆ. ಪೀಠದಲ್ಲಿ ಮಹಿಳೆಯೊಬ್ಬರು ನ್ಯಾಯಮೂರ್ತಿಯಾಗಿರುವುದು ಆಶಾ ಭಾವನೆ ಮೂಡಿಸಿದೆ. ರಾಜಕೀಯ ಪ್ರೇರಿತ ಗಲಭೆಯಲ್ಲಿ ತನ್ನ ತಪ್ಪಿಲ್ಲದೇ ಇದ್ದರೂ ವಿಕೃತ ಮನಸ್ಥಿತಿಯ ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿ, ತನ್ನ ಕುಟುಂಬದ ಏಳು ಮಂದಿಯ ಹತ್ಯೆಯನ್ನು ಕಣ್ಣಾರೆ ನೋಡಿದ್ದ ಗರ್ಭಿಣಿ ಬಿಲ್ಕಿಸ್‌ ಬಾನೊಳ ಮಾನಸಿಕ ಸ್ಥಿತಿಯನ್ನು ಈ ಸಮಾಜ, ಕಾನೂನು ಎಷ್ಟು ನಿರ್ಲಕ್ಷ್ಯದಿಂದ ಕಂಡಿದೆ ಎಂಬುದಕ್ಕೆ ಆಕೆಯ ಸುದೀರ್ಘ ಕಾನೂನು ಸಮರವೇ ಒಂದು ಉದಾಹರಣೆ.

ಮರಣದಂಡನೆಗೆ ಅರ್ಹರಾದವರು ಕೋರ್ಟ್‌ ಮೆಟ್ಟಿಲೇರಿ ತಮ್ಮ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿಕೊಳ್ಳುತ್ತಾರೆ, ಅದಾದ ನಂತರ ಕ್ಷಮಾಪಣೆಗೆ ಅರ್ಜಿ ಸಲ್ಲಿಸಿ ಬಿಡುಗಡೆಯೂ ಆಗುತ್ತಾರೆ. ಅವರನ್ನು ಈ ಸಮಾಜ ಯುದ್ಧ ಗೆದ್ದು ಬಂದವರನ್ನು ಕಾಣುವಂತೆ ಹಾರ ಹಾಕಿ, ತಿಲಕವಿಟ್ಟು ವೀರರಂತೆ ಬರ ಮಾಡಿಕೊಳ್ಳುತ್ತದೆ ಅಂದರೆ ಈ ಸಮಾಜಕ್ಕೂ ಆ ವ್ಯಕ್ತಿಗಳಿಗೂ ಪಶ್ಚಾತ್ತಾಪವೇ ಇಲ್ಲ ಎಂದಾಯಿತು. ಇಂತಹವರಲ್ಲಿ ಯಾವ ಸನ್ನಡತೆ  ಕಾಣಲು ಸಾಧ್ಯ? ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸಿದ ಪ್ರಕರಣವಿದು. ವರ್ಷಾನುಗಟ್ಟಲೆ ವಿಚಾರಣೆ ನಡೆಸಿ ಮರಣದಂಡನೆಗೆ ಗುರಿಯಾದವರಿಗೆ ಮತ್ತೊಂದು ಕೋರ್ಟ್‌ ಜೀವಾವಧಿ ಶಿಕ್ಷೆ ಸಾಕು ಎನ್ನುತ್ತದೆ, ಆನಂತರ ಶಿಕ್ಷೆ ಸಾಕು ಮನೆಗೆ ಹೋಗಲಿ ಎಂದು ಇನ್ನೊಂದು ಕೋರ್ಟ್‌ ತೀರ್ಪು ನೀಡುತ್ತದೆ. ಹೀಗಾದರೆ ಅಪರಾಧ ಎಸಗುವವರಿಗೆ ಶಿಕ್ಷೆಯ ಭಯ ಮೂಡಲು ಹೇಗೆ ಸಾಧ್ಯ?

ಇದನ್ನು ಓದಿ ಬಿಲ್ಕಿಸ್‌ ಬಾನು ಪ್ರಕರಣ | ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಕ್ಷಮಾದಾನ?; ಗುಜರಾತ್‌, ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಈ ಸಮಾಜ ನ್ಯಾಯ- ಅನ್ಯಾಯಗಳ ಬಗ್ಗೆ, ಹೆಣ್ಣುಮಕ್ಕಳು, ದಲಿತರು, ಅಲ್ಪಸಂಖ್ಯಾತರ ಮೇಲಿನ ಕ್ರೌರ್ಯದ ಬಗ್ಗೆ, ಅದಕ್ಕೆ ಕಾರಣವಾಗಿರುವ ಆಡಳಿತ ವ್ಯವಸ್ಥೆಯ ಬಗ್ಗೆ ತಿರಸ್ಕಾರ ಸೂಚಿಸುವ ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಂಡಿದೆ ಎಂಬುದಕ್ಕೆ ಉತ್ತರಪ್ರದೇಶ, ಗುಜರಾತಿನ ಚುನಾವಣಾ ಫಲಿತಾಂಶಗಳೇ ಸಾಕ್ಷಿ. ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಆಕೆಯ ಮೃತದೇಹವನ್ನು ಪೊಲೀಸರೇ ಸುಟ್ಟು ಹಾಕಿರುವ ಪ್ರಕರಣದಲ್ಲಿ ದೇಶದಲ್ಲೇ ಸುದ್ದಿಯಾಗಿತ್ತು. ಉನ್ನಾಂವ್ ಎರಡೆರಡು ಭೀಕರ ಅತ್ಯಾಚಾರ ಪ್ರಕರಣಗಳಿಗೆ ಸುದ್ದಿಯಾಗಿತ್ತು. ಆದರೂ ದಶಕದಿಂದ ಆಡಳಿತ ನಡೆಸುತ್ತಿರುವವರಿಗೆ ಜೈ ಎಂದಿದ್ದಾರೆ ಅಲ್ಲಿನ ಜನ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಸ್ತ್ರೀ ಸಮೂಹವೂ ಸಲೀಸಾಗಿ ಸ್ವೀಕರಿಸಿದಂತಿದೆ.

ಬಿಲ್ಕಿಸ್‌ ಬಾನೊಳ ಕಾನೂನು ಹೋರಾಟಕ್ಕೆ ಶೀಘ್ರ ನ್ಯಾಯ ಸಿಗಬೇಕು. ಗಂಭೀರ ಪ್ರಕರಣದ ಅಪರಾಧಿಗಳಲ್ಲಿ ʼಸನ್ನಡತೆʼ ಹುಡುಕುವವರಿಗೂ ತಕ್ಕ ಪಾಠ ಆಗಬೇಕು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...

ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು...

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...