ಮೇಲ್ಮಟ್ಟದ ಮಹಿಳಾ ರಾಜಕೀಯ ಪ್ರಾತಿನಿಧ್ಯ ಕರ್ನಾಟಕದ ಮಾದರಿಯಾಗಲಿ: ಡಾ.ಸಬೀಹಾ ಭೂಮಿಗೌಡ

Date:

Advertisements

“ಶಾಸನಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ದೊರಕಿಸಿಕೊಡುವ ಕರ್ನಾಟಕ ಮಾದರಿ ಅಗತ್ಯವಿದೆ” ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಹೇಳಿದರು.

‘ಜಾಗೃತ ಕರ್ನಾಟಕ’ ವತಿಯಿಂದ ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ’ನಮ್ಮ ಕರ್ನಾಟಕ ನಮ್ಮ ಮಾದರಿ- ಚಿಂತನಾ ಸಮಾವೇಶ’ದ ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾತಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಯಿತು. ಅದರಿಂದ ಶೇ. 52ರಷ್ಟು ಹೆಣ್ಣುಮಕ್ಕಳು ಗ್ರಾಮ ಮಟ್ಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಆದರೆ, ಶಾಸನಸಭೆಗಳಲ್ಲಿ ಇದು ಮರೀಚಿಕೆಯಾಗಿದೆ. ಮೇಲ್ಮಟ್ಟದಲ್ಲಿ ಹೆಣ್ಣುಮಕ್ಕಳಿಗೆ ಪ್ರಾತಿನಿಧ್ಯ ದೊರಕಿಸಲು ಚಳವಳಿಗಳಾಗಬೇಕು. ಸಮ ಸಮಾಜ ಸಾಧ್ಯವಾಗಬೇಕೆಂದರೆ ಮೇಲ್ಮಟ್ಟದ ರಾಜಕೀಯದಲ್ಲಿ ಮಹಿಳೆಯರು ಇರಬೇಕಾಗುತ್ತದೆ. ಕರ್ನಾಟಕದಿಂದಲೇ ಅದು ಸಾಧ್ಯವಾಗಬೇಕಿದೆ” ಎಂದು ಅವರು ಆಶಿಸಿದರು.

Advertisements

“ಮಹಿಳೆಯರ ಆರ್ಥಿಕತೆ, ರಾಜಕೀಯ ಪ್ರಾತಿನಿಧ್ಯ ತುಂಬಾ ಕೆಳಗಿದೆ. ಮೇಲ್ಮುಖ ಚಲನೆಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬೇಕಾಗಿದೆ. ಕರ್ನಾಟಕ ಮಾದರಿಯನ್ನು ರೂಪಿಸುವಾಗ ಈ ಕುರಿತು ಚಿಂತಿಸಬೇಕಿದೆ” ಎಂದು ತಿಳಿಸಿದರು.

“ಜಂಡರ್‌ ಬಜೆಟಿಂಗ್‌ ಆದರೂ ಮಹಿಳೆಯರು ಫಲಾನುಭವಿಗಳಾಗುತ್ತಿಲ್ಲ. ಕಾರಣ ನಿಯಮಾವಳಿಗಳು ತೊಡಕಾಗಿವೆ. ಮನೆ, ಆಸ್ತಿಪಾಸ್ತಿಯ ಒಡೆತನದ ಅರ್ಹತೆಯನ್ನು ನಿಯಮವಾಗಿಸಲಾಗಿದೆ. ಫಲಾನುಭವಿಯಾಗಬೇಕಾದರೆ ಆಸ್ತಿಯ ಒಡೆತನ ಇರಬೇಕೆಂದರೆ ಹೇಗೆ ಸಾಧ್ಯ? ಈ ಕಾರಣ ನೀಡಿ ಮಹಿಳಾ ಫಲಾನುಭವಿಗಳು ಇಲ್ಲವೆಂದು ಅನುದಾನವನ್ನು ಹಿಂತಿರುಗಿಸಲಾಗುತ್ತಿದೆ. ನಿಯಮಗಳನ್ನು ಮಹಿಳಾಸ್ನೇಹಿಯಾಗಿ ರೂಪಿಸಬೇಕು. ಒಡೆತನದ ಪ್ರಶ್ನೆ ಮಹಿಳೆಯರಿಗೆ ಎಷ್ಟಿದೆ ಎಂಬುದನ್ನು ತಿಳಿಯದೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ತೊಂದರೆಯಾಗುತ್ತದೆ” ಎಂದು ಜಂಡರ್‌ ಬಜೆಟಿಂಗ್‌ನಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದರು.

“ಉಳುವವನೇ ಭೂಮಿಯ ಒಡೆಯ ಎನ್ನುವ ನೀತಿ ತುಂಬಾ ಮುಖ್ಯವಾದದ್ದು. ಭೂರಹಿತರಿಗೆ ಭೂಮಿ ಸಿಕ್ಕಿದ್ದು ಮುಖ್ಯವಾದ ಸಂಗತಿ. ಜೊತೆಗೆ ಸ್ವಾಮಿನಾಥನ್ ವರದಿಯ ಶಿಫಾರಸ್ಸಿನಂತೆ ಹೆಣ್ಣಮಕ್ಕಳಿಗೆ ಆಸ್ತಿಯ ವಿಚಾರದಲ್ಲಿ ಜಂಟಿ ಪಟ್ಟಾ (Joint Patta) ಅವಕಾಶ ದೊರಕಬೇಕು. ಆಗ ಹೆಣ್ಣು ಮಕ್ಕಳು ಫಲಾನುಭವಿಗಳಾಗಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ: ದೇವರಾಜ ಅರಸು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ – ಪ್ರೊ. ಜೇಮ್ಸ್ ಮ್ಯಾನರ್, ಲಂಡನ್

“ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ಶಕ್ತಿ ಯೋಜನೆಗೆ ಬಂದ ಪ್ರತಿಕ್ರಿಯೆಗಳು ಪುರುಷ ಪ್ರಧಾನ ವ್ಯವಸ್ಥೆಯ ದಿಗಿಲನ್ನು ತೋರುತ್ತವೆ. ಕಲ್ಯಾಣ ಕಾರ್ಯಕ್ರಮಗಳಿಂದ ಆಗಿರುವ ಪ್ರಯೋಜನಗಳ ಕುರಿತು ಲೇಖನಗಳು ಬಂದಿವೆ. ಆದರೆ ಅವು ಈ ಜನರಿಗೆ ತಿಳಿದಿಲ್ಲ. ಹೆಂಗಸರು ತಮ್ಮ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುತ್ತಾರೆಂಬ ಭಯ ಗಂಡಸರಲ್ಲಿದೆ” ಎಂದು ಅವರು ಹೇಳಿದರು.

“ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನಿ ಎಂದು ಗುರುತಿಸುವ ಪ್ರಯತ್ನವು ಪುಳಕ ತಂದಿದೆ” ಎಂದ ಅವರು, “ಯೋಜನೆಗಳು ಲೈಂಗಿಕ ಅಲ್ಪಸಂಖ್ಯಾತರನ್ನೂ ಒಳಗೊಳ್ಳುತ್ತಿರುವುದು ಮೆಚ್ಚುವಂತಹದ್ದು. ಇದರ ಜೊತೆಗೆ ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿಯೇ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಅಧ್ಯಯನವಾಗಿದೆ. ಆ ವರದಿಯ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.

“ಪರಿಶಿಷ್ಟ ಸಮುದಾಯಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಅನುದಾನವನ್ನು ಮೀಸಲಿಟ್ಟಂತೆ ಮಹಿಳೆಯರ ಉನ್ನತಿಗಾಗಿ ಬಜೆಟ್‌ನಲ್ಲಿ ನಿರ್ದಿಷ್ಟ ಹಣವನ್ನು ಮೀಸಲಿಡುವ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದು ಅವರು ಒತ್ತಾಯಿಸಿದರು.

“ಜನಸಂಖ್ಯಾ ಆಧಾರಿತ ಮಹಿಳಾ ಪ್ರಾತಿನಿಧ್ಯ ಬರಬೇಕು. ನಿಗಮ ಮಂಡಳಿಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು (ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಒಳಗೊಂಡಂತೆ) ಮಹಿಳೆಯರಿಗೆ ನೀಡಬೇಕು. ಪುರುಷರ ಮನೋಧರ್ಮವನ್ನು ಬದಲಿಸುವಂತಹ, ಲಿಂಗತ್ವ ಸೂಕ್ಷ್ಮಗಳನ್ನು ಬೆಳೆಸುವ ತರಬೇತಿಗಳನ್ನು ರೂಪಿಸಬೇಕು. ಶಿಕ್ಷಣ, ಉದ್ಯೋಗ, ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಸಮಾನರು ಎಂಬುದನ್ನು ತರಬೇತಿಗಳ ಮೂಲಕ ಬೆಳೆಸಬೇಕಿದೆ. ಲಿಂಗತ್ವ ಸಮಾನತೆಯ ಆಶಯವನ್ನು ಕರ್ನಾಟಕದಿಂದಲೇ ಆರಂಭಿಸುವ ಮಾದರಿ ಬೇಕಿದೆ” ಎಂದು ಅವರು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ: ಆರ್ಥಿಕ ಶಕ್ತಿ ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆ ಮಾಡುವುದೇ ಕರ್ನಾಟಕ ಮಾದರಿ: ಡಾ.ಎ.ನಾರಾಯಣ

ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರ ಹಾಜರಿ ಇರುವುದನ್ನು ಉದ್ದೇಶಿಸಿ ಮಾತನಾಡಿದ ಅವರು, “ಇಂತಹದ್ದೊಂದು ಮಹತ್ವದ ಚರ್ಚೆಯನ್ನು ಮಾಡುವ ಸಂದರ್ಭದಲ್ಲಿ ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಹೆಣ್ಣುಮಕ್ಕಳು ಕಾರ್ಯಕ್ರಮಗಳಿಗೆ ಬರುವುದಿಲ್ಲ ಎಂಬ ಸಬೂಬು ನೀಡುವುದಕ್ಕಿಂತ, ಇಲ್ಲಿಗೆ ಬಂದಿರುವ ಒಬ್ಬೊಬ್ಬರು ತಮ್ಮ ಮನೆಯಿಂದ ಒಬ್ಬ ಮಹಿಳೆಯನ್ನು ಕರೆತಂದಿದ್ದರೂ ಚಿತ್ರಣ ಬದಲಾಗುತ್ತಿತ್ತು” ಎಂದು ಕುಟುಕಿದರು.

ಲಂಡನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್‌ ಮ್ಯಾನರ್‌ ಆನ್‌ಲೈನ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಜೀಂ ಪ್ರೇಂಜಿ ವಿವಿಯ ಪ್ರಾಧ್ಯಾಪಕ ಡಾ.ಎ.ನಾರಾಯಣ ದಿಕ್ಸೂಚಿ ಭಾಷಣ ಮಾಡಿದರು. ಬಯಲು ಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯ ರೆಡ್ಡಿಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

Download Eedina App Android / iOS

X