ಸುಪ್ರೀಮ್ ಕೋರ್ಟು ಇತ್ತೀಚೆಗೆ ಬಿಡುಗಡೆ ಮಾಡಿದ 30 ಪುಟಗಳ ಕೈಪಿಡಿಯು ಅತ್ಯುತ್ತಮವೂ ಮತ್ತು ಪ್ರಶಂಸನೀಯವೂ ಆದ ಮಾದರಿ. ಲಿಂಗಸೂಕ್ಷ್ಮ ನ್ಯಾಯಶಾಸ್ತ್ರದೆಡೆಗೆ ಪ್ರಗತಿಪರ ಹೆಜ್ಜೆಯಿದು ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಮಹಿಳೆಯರ ವಿರುದ್ಧ ಬಳಕೆಯಲ್ಲಿರುವ ಪೂರ್ವಗ್ರಹಪೀಡಿತ ಗಂಡಾಳಿಕೆಯ ಒಳಾರ್ಥಗಳನ್ನು ಧ್ವನಿಸುವ ಪದಪ್ರಯೋಗಗಳ ಕುರಿತು ವಕೀಲರು ಮತ್ತು ನ್ಯಾಯಾಧೀಶರ ಗಮನ ಸೆಳೆಯಲಾಗಿದೆ
ಲಿಂಗ ಸಂಬಂಧೀ ಪೂರ್ವಗ್ರಹ ವಿಶೇಷವಾಗಿ ಭಾರತದಲ್ಲಿ ಆಳಕ್ಕೆ ಬೇರು ಇಳಿಸಿರುವ ಸಾಮಾಜಿಕ ಅನಿಷ್ಠಗಳಲ್ಲೊಂದು. ಅಸಮಾನತೆಯೇ ಇದರ ಆಡಿಪಾಯ. ಗಂಡಾಳಿಕೆಯ ಸಮಾಜ ನಿರ್ಮಿಸಿರುವ ಈ ಅಸಮಾನತೆಯು ಹೆಜ್ಜೆ ಹೆಜ್ಜೆಗೂ ಮಹಿಳೆಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾನತೆಯನ್ನು ನಿರಾಕರಿಸುವುದಲ್ಲದೆ ಅವರನ್ನು ಕೀಳಾಗಿ ಕಾಣುತ್ತ ಬಂದಿದೆ. ಈ ಲಿಂಗ ಅಸಮಾನತೆ ನಿತ್ಯ ಓದಿ ಬರೆಯುವ ಭಾಷೆಯಲ್ಲೂ ಹೊಕ್ಕುಬಳಕೆಯಾಗಿ ಬೆಳೆದು ನಿಂತಿದೆ. ಸಂವಿಧಾನದಲ್ಲಿ ಸಾರಲಾಗಿರುವ ಲಿಂಗ ಸಮಾನತೆಯ ನೀತಿಯನ್ನು ಅನುದಿನವೂ ಉಲ್ಲಂಘಿಸುತ್ತಿದೆ. ಸಮಾನತೆಗಾಗಿ ತುಡಿಯುವ ಪ್ರಾಮಾಣಿಕ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಮಾತ್ರವೇ ಈ ತರತಮವನ್ನು ಕಾಲಾನುಕ್ರಮದಲ್ಲಿ ತೊಡೆದು ಹಾಕಬಲ್ಲದು.
ಈ ದಿಸೆಯಲ್ಲಿ ಸುಪ್ರೀಮ್ ಕೋರ್ಟು ಇತ್ತೀಚೆಗೆ ಬಿಡುಗಡೆ ಮಾಡಿದ 30 ಪುಟಗಳ ಕೈಪಿಡಿಯು ಅತ್ಯುತ್ತಮವೂ ಮತ್ತು ಪ್ರಶಂಸನೀಯವೂ ಆದ ಮಾದರಿ. ಲಿಂಗಸೂಕ್ಷ್ಮ ನ್ಯಾಯಶಾಸ್ತ್ರದೆಡೆಗೆ ಪ್ರಗತಿಪರ ಹೆಜ್ಜೆಯಿದು ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಮಹಿಳೆಯರ ವಿರುದ್ಧ ಬಳಕೆಯಲ್ಲಿರುವ ಪೂರ್ವಗ್ರಹಪೀಡಿತ ಗಂಡಾಳಿಕೆಯ ಒಳಾರ್ಥಗಳನ್ನು ಧ್ವನಿಸುವ ಪದಪ್ರಯೋಗಗಳ ಕುರಿತು ವಕೀಲರು ಮತ್ತು ನ್ಯಾಯಾಧೀಶರ ಗಮನ ಸೆಳೆಯಲಾಗಿದೆ. ವಾದಮಂಡನೆ- ತೀರ್ಪು ನೀಡಿಕೆ ಸೇರಿದಂತೆ ನ್ಯಾಯಾಲಯದ ಎಲ್ಲ ಹಂತಗಳ ವ್ಯವಹಾರಗಳಲ್ಲಿ ಕೈಬಿಡಬೇಕಾದ ಅವಹೇಳನಕಾರಿ ಪದಪ್ರಯೋಗಗಳು ಯಾವುವೆಂದು ಪಟ್ಟಿ ಮಾಡಿ ಅವುಗಳಿಗೆ ಪರ್ಯಾಯವಾಗಿ ಸಭ್ಯ- ಮಾನವೀಯ ಪದಪ್ರಯೋಗಗಳು ಅಥವಾ ವಾಕ್ಯ ವಿವರಣೆಗಳನ್ನು ನೀಡಲಾಗಿದೆ. ಲೈಂಗಿಕ ಕಿರುಕುಳ, ಲೈಂಗಿಕ ಹಲ್ಲೆ, ಅತ್ಯಾಚಾರ ಮತ್ತಿತರೆ ಅಪರಾಧಗಳಲ್ಲಿ ಮಹಿಳೆಯೇ ತಪ್ಪಿತಸ್ಥೆ ಎಂಬ ಭಾವ ಮೂಡಿಸುವ ಭಾಷಾಪ್ರಯೋಗಗಳು ಈಗಲೂ ಬಳಕೆಯಲ್ಲಿವೆ.
ಸಾಂಪ್ರದಾಯಿಕ ಉಡುಗೆಗಳನ್ನು ಧರಿಸದಿರುವ, ಧೂಮಪಾನ- ಮದ್ಯಪಾನ ಮಾಡುವ ಮಹಿಳೆ ಸಮಸ್ಯೆಗಳನ್ನು ಕೈಯಾರೆ ಕರೆಯುವವಳು ಮತ್ತು ಈಕೆಯ ‘ಪ್ರಕಟಿತ ಒಪ್ಪಿಗೆ’ ಬೇಕಿಲ್ಲ ಎಂಬುದು ರೂಢಗತ ಮತ್ತು ಪೂರ್ವಗ್ರಹಪೀಡಿತ ಭಾವನೆ ಎಂದು ಕೈಪಿಡಿ ಸಾರುತ್ತದೆ. ಮಹಿಳೆಯು ಅತಿಯಾಗಿ ಭಾವತೀವ್ರಳು, ತರ್ಕರಹಿತಳು ಹಾಗೂ ತೀರ್ಮಾನ ಕೈಗೊಳ್ಳಲು ಅಸಮರ್ಥಳು ಎಂಬುದು ಸರಿಯಲ್ಲ. ಕುಟುಂಬದ ಇತರೆ ಸದಸ್ಯರ ಕಾಳಜಿ-ಶುಶ್ರೂಷೆ, ಪತಿಸೇವೆ, ಅಡುಗೆ, ಮನೆಗೆಲಸಗಳೇ ಆಕೆಯ ಪರಮಕರ್ತವ್ಯ ಎಂಬ ಭಾವನೆ ತಪ್ಪು, ಆಕೆ ಇಲ್ಲ ಎಂದರೆ ಅದರ ಅರ್ಥ ಹೌದು ಎಂದೇ ತಿಳಿಯಬೇಕು, ದೈಹಿಕವಾಗಿ ಆಕೆ ಅತ್ಯಾಚಾರಿಯ ವಿರುದ್ಧ ಸೆಣಸದೆ ಹೋದರೆ, ಆಕೆಯ ಸಮ್ಮತಿಯಿಂದಲೇ ಅತ್ಯಾಚಾರ ನಡೆದಿದೆ, ಬಲಿಷ್ಠ ಜಾತಿಯ ಗಂಡಸರು, ‘ಕೆಳಜಾತಿ’ಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದಿಲ್ಲ ಎಂಬ ರೂಢಗತ ಅರ್ಥಗಳು- ವ್ಯಾಖ್ಯಾನಗಳು ಅನಾಹುತಕಾರಿ. ಮಹಿಳೆಯ ಗುಣಲಕ್ಷಣಗಳ ಕುರಿತ ರೂಢಗತ ಪರಂಪರಾಗತ ಊಹೆಗಳನ್ನು ಪಟ್ಟಿ ಮಾಡಿ ಅವುಗಳು ನೂರಕ್ಕೆ ನೂರು ತಿರಸ್ಕಾರ ಯೋಗ್ಯ ಎಂದು ಕೈಪಿಡಿಯು ನ್ಯಾಯಾಧೀಶರು ಮತ್ತು ಕಾನೂನು ಸಮುದಾಯಕ್ಕೆ ತಿಳಿಯಹೇಳಿದೆ.
”ವ್ಯಕ್ತಿಯ ಲಿಂಗತ್ವವು ತರ್ಕಬದ್ಧ ಚಿಂತನೆಯ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ ಅಥವಾ ಅಂತಹ ಚಿಂತನೆಯ ಮೇಲೆ ಪ್ರಭಾವ ಬೀರುವುದಿಲ್ಲ” ಎಂದು ಕೈಪಿಡಿಯು ಗಮನಸೆಳೆದಿದೆ.
ಭಾರತದಲ್ಲಿ ವಿಶೇಷವಾಗಿ ಹೈಕೋರ್ಟು, ಸುಪ್ರೀಮ್ ಕೋರ್ಟುಗಳ ಭಾಷೆ ಇಂಗ್ಲಿಷೇ ಆಗಿದೆ. ಈ ಹಿನ್ನೆಲೆಯಲ್ಲಿ ಈ ಕೈಪಿಡಿ ಸ್ವಾಭಾವಿಕವಾಗಿಯೇ ಇಂಗ್ಲಿಷ್ ಪದಪ್ರಯೋಗಗಳು ಮತ್ತು ವಾಕ್ಯಗಳಿಗೆ ಸಂಬಂಧಿಸಿದೆ. ಪೂರ್ವಗ್ರಹಪೀಡಿತ- ರೂಢಮಾದರಿ- ಸ್ತ್ರೀದ್ವೇಷ- ಲಿಂಗ ಅಸಮಾನತೆಯ ಮೂಲದಿಂದ ಹುಟ್ಟಿದ ಪದಪ್ರಯೋಗಗಳಿವು.
ಉದಾಹರಣೆಗೆ SPINSTER= ವೃದ್ಧಕನ್ಯೆ ಅಥವಾ ವಿವಾಹ ಸಂಭವ ವಯೋಮಾನ ಮೀರಿದ ಅವಿವಾಹಿತೆ. SEDUCTRESS=ಮೋಹಿನಿ,.ಆಕರ್ಷಣೆಗಳಿಂದ ಪುರುಷನನ್ನು ದುರ್ಮಾರ್ಗಕ್ಕೆ ಬೀಳಿಸುವವಳು. MISTRESS= ಇಟ್ಟುಕೊಂಡವಳು…ಉಪಪತ್ನಿ, SLUT= ವ್ಯಭಿಚಾರಿಣಿ, ಶೀಲಗೆಟ್ಟವಳು, ಹಾದರಗಿತ್ತಿ, AFFAIR= ಅಕ್ರಮ ಲೈಂಗಿಕ ಸಂಬಂಧ. CHASTE WOMAN,= ಪತಿವ್ರತೆ, DUTIFUL WIFE= ಕರ್ತವ್ಯಪಾರಾಯಣಪತ್ನಿ ಎಂಬ ಪೂರ್ವಗ್ರಹಪೀಡಿತ, ರೂಢಗತ, ಅವಹೇಳನಕಾರಿ ಪದಗುಚ್ಛಗಳನ್ನು ಕೈಪಿಡಿ ತಿರಸ್ಕರಿಸಿದೆ. ಇಂತಹ ಪದಪ್ರಯೋಗಗಳು ಮತ್ತು ಅವುಗಳಿಗೆ ಲಿಂಗಸಂವೇದನಾಶೀಲ ಪರ್ಯಾಯಪದಗಳ ಕೋಷ್ಟಕವನ್ನೇ ನೀಡಿದೆ.
ಲಿಂಗ ಅಸ್ಮಿತೆಯೆಂಬುದು ಹೆಣ್ಣು-ಗಂಡಿಗೆ ಮಾತ್ರವೇ ಸೀಮಿತವಲ್ಲ, ಬದಲಾಗಿ ಕಾಲಮಾನದಲ್ಲಿ ವಿಕಾಸಗೊಳ್ಳುವ ಲಿಂಗ ತರಂಗಾಂತರವಾಗಿ ಬಗೆಯುವಂತೆ ಕೈಪಿಡಿ ತಾಕೀತು ಮಾಡಿದೆ, ಇಂತಹ ಕೈಪಿಡಿಯೊಂದನ್ನು ರಚನೆಗೆ ಕ್ರಮ ಕೈಗೊಂಡ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಕೈಪಿಡಿಯನ್ನು ಸಾಕಾರಗೊಳಿಸಿದ ನ್ಯಾಯಮೂರ್ತಿಗಳಾದ ಮೌಶಮಿ ಭಟ್ಟಾಚಾರ್ಯ, ಪ್ರತಿಭಾಸಿಂಗ್ ಹಾಗೂ ಪ್ರೊ.ಝೂಮಾ ಸೇನ್ ಅಭಿನಂದನಾರ್ಹರು.
