ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಿಂದ ಈ ದಿನ.ಕಾಮ್ ಪ್ರತ್ಯಕ್ಷ ವರದಿ ಸರಣಿಯಲ್ಲಿ ‘ಫೈರ್ ಬ್ರ್ಯಾಂಡ್’ ಮಾಜಿ ಪೊಲೀಸ್ ಅಧಿಕಾರಿ ತೌನೋಜಮ್ ಬೃಂದಾ ಅವರ ವಿಶೇಷ ಸಂದರ್ಶನ
ಪ್ರ: ಖುದ್ದು ಮುಖ್ಯಮಂತ್ರಿಯವರೇ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಮತ್ತು ಹಿಂಸಾಚಾರ ಭುಗಿಲೆದ್ದಾಗ ಕ್ರಮ ಜರುಗಿಸದೆ ಕಣ್ಮುಚ್ಚಿ ಕುಳಿತ್ತಿದ್ದರು ಎಂಬ ಗಂಭೀರ ಆರೋಪಗಳಿವೆ
ಪ್ರಭುತ್ವದ ಸಹಭಾಗವಿಲ್ಲದೆ ಈ ಪ್ರಮಾಣದ ಜನಾಂಗೀಯ ಹಿಂಸಾಚಾರ ನಡೆಯಲು ಸಾಧ್ಯವಿಲ್ಲ. ಆದ್ದರಿಂದ, ಸ್ವಾಭಾವಿಕವಾಗಿಯೇ ಈ ಹಿಂಸೆಯಲ್ಲಿ ಪ್ರಭುತ್ವದ ಪಾತ್ರವಿದೆ. ಮಣಿಪುರ ಸರ್ಕಾರವು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು – ಅದರಲ್ಲೂ ವಿಶೇಷವಾಗಿ ಮೇ 3 ಮತ್ತು 4ರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯ ಮತ್ತು ಅವಕಾಶವಿತ್ತು. ಚೂರಚಾಂದಪುರ ಅತ್ಯಂತ ಹೆಚ್ಚು ಜನದಟ್ಟಣೆಯ ಪಟ್ಟಣವಾಗಿದೆ. ರಾಜ್ಯ ಪೊಲೀಸ್ ವ್ಯವಸ್ಥೆ ಅಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರೀಯ ಪಡೆಗಳನ್ನೂ ಅಲ್ಲಿ ನಿಯೋಜಿಸಲಾಗಿದೆ. ಮೇ 3ರಂದೇ ಹಿಂಸಾಚಾರವನ್ನು ಹತ್ತಿಕ್ಕಲು ಲಭ್ಯವಿದ್ದ ಎಲ್ಲಾ ಪಡೆಗಳನ್ನು ಮುಖ್ಯಮಂತ್ರಿ ಬಳಸಿಕೊಳ್ಳಬಹುದಿತ್ತು. ಘರ್ಷಣೆಗಳು ಬೆಳಗ್ಗೆ 11.30 ರಿಂದ ಮಧ್ಯಾಹ್ನ 3 ರವರೆಗೆ ನಡೆದವು. ಹೆಚ್ಚುವರಿ ಪಡೆಗಳು ಚೂರಚಾಂದಪುರವನ್ನು ತಲುಪಲು ಕೇವಲ 45 ರಿಂದ 50 ನಿಮಿಷಗಳು ಸಾಕಿತ್ತು. ಈ ಎರಡು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು, ಸಮಯಕ್ಕೆ ಸರಿಯಾಗಿ ಹಿಂಸಾಚಾರವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಜರುಗಿಸಲು ರಾಜ್ಯ ಸರ್ಕಾರ ಏಕೆ ವಿಫಲವಾಯಿತು ಎಂದು ನಾವು ಪ್ರಶ್ನಿಸಬೇಕಾಗಿದೆ. ರಾಜ್ಯದ ಸಹಭಾಗಿತ್ವವಿಲ್ಲದೆ ಈ ಪ್ರಮಾಣದ ಹಿಂಸಾಚಾರ ನಡೆಯಲು ಸಾಧ್ಯವೇ ಇಲ್ಲ. ಹಾಗಾದರೆ, ಹಿಂಸಾಚಾರವನ್ನು ಮುಂದುವರೆಸುವುದರ ಹಿಂದಿನ ರಾಜ್ಯದ ಹಿತಾಸಕ್ತಿಯಾದರೂ ಏನು – ಹೀಗೆ ಮಾಡುವುದರಿಂದ ರಾಜ್ಯಕ್ಕಾಗುವ ಪ್ರಯೋಜನಗಳೇನು?
ಪ್ರಶ್ನೆ: ನೀವು ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಮಾಜಿ ಪೊಲೀಸ್ ಅಧಿಕಾರಿ. ಆದರೆ ನೀವು ನಿಮ್ಮ ವೃತ್ತಿಜೀವನವನ್ನು ತ್ಯಜಿಸಬೇಕಾಯಿತು. ಈಗ ರಾಜಕಾರಣಕ್ಕೆ ಧುಮುಕಿದ್ದೀರಿ. ಮಣಿಪುರದಲ್ಲಿ ತಪ್ಪನ್ನು ಸರಿಪಡಿಸುವ ವಿಚಾರವಾಗಿ ನೀವು ರಾಜಕಾರಣಿಯಾಗಿ ಉತ್ತಮ ಕೆಲಸ ಮಾಡಬಹುದು ಎಂದು ನಿಮಗನಿಸುತ್ತದೆಯೇ?
ಯಾರಾದರೊಬ್ಬರು ವ್ಯವಸ್ಥೆಗೆ ಸವಾಲು ಎಸೆಯಬೇಕಿತ್ತು. ನನಗೆ ನನ್ನ ರಾಜ್ಯದ ಹಿತಾಸಕ್ತಿಯೇ ಎಲ್ಲಕ್ಕಿಂತ ಮೊದಲು. ಹಾಗಾಗಿ, ವ್ಯವಸ್ಥೆಗೆ ಸವಾಲು ಹಾಕುವವರು ನನ್ನಂತವರೇ ಆಗಬೇಕಿತ್ತು. ರಾಜಕೀಯದಲ್ಲಿರುವುದರಿಂದ ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಅರ್ಥವಲ್ಲ. ಚುನಾವಣಾ ವ್ಯವಸ್ಥೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಅಷ್ಟು ದೊಡ್ಡ ಮೊತ್ತದ ಹಣವನ್ನು ಪ್ರಾಮಾಣಿಕ ವ್ಯಕ್ತಿ ಭರಿಸಲಾಗುವುದಿಲ್ಲ. ನನ್ನ ಪಾಲಿಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದೆಂದರೆ, ತಡವಾಗಿಯೇ ಆಗಲಿ, ನಮ್ಮ ನಾಡನ್ನು ನಾವು ನೋಡಿಕೊಳ್ಳಲು ಅಗತ್ಯವಾದ ಸುಧಾರಣೆಯನ್ನು ತರುವುದೇ ಆಗಿದೆ. ಆದರೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ. ಜನ ಎಚ್ಚೆತ್ತುಕೊಂಡಿದ್ದಾರೆ. ಮಾದಕ ವಸ್ತುಗಳ ಮಾಫಿಯಾ ರಾಜ್ಯದ ಭದ್ರತೆಗೆ ಒಡ್ಡುತ್ತಿರುವ ಬೆದರಿಕೆಯ ಬಗ್ಗೆ ಅವರಿಗೆ ತಿಳಿದಿದೆ. ಆದರ ಪ್ರಭಾವವನ್ನು ನಾವು ಕಾಣುತ್ತಿದ್ದೇವೆ.
ಪ್ರಶ್ನೆ: ರಾಜಕಾರಣಿಯಾಗಿ, ಮಣಿಪುರವನ್ನು ಸ್ವಚ್ಛಗೊಳಿಸುವಲ್ಲಿ ನಿಮ್ಮ ಪಾತ್ರವೇನು?
ಜನಸಾಮಾನ್ಯರ ನಡುವೆ ಜಾಗೃತಿ ಮೂಡಿಸುವಲ್ಲಿ ನನ್ನ ಪಾತ್ರವಿದೆ. ಎಲ್ಲ ಸಮುದಾಯದ ಜನರು ಎಚ್ಚೆತ್ತುಕೊಳ್ಳಬೇಕು. ತಮ್ಮ ನಿಜ ಶತ್ರುಗಳು ಯಾರು ಎಂಬುದನ್ನು ಅರಿಯಬೇಕು. ನಾವು ಕೋಮುವಾದಿ ಮನೋಭಾವದಿಂದ ಹೊರಬರಬೇಕು. ನಮ್ಮ ಈ ಸ್ಥಿತಿಗೆ ಕಾರಣರಾಗಿರುವ ಸಂಸ್ಥೆಗಳಿಂದ ನಾವು ಜವಾಬು ಪಡೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ನಾವು ಅವರನ್ನು ಹೊಣೆಗಾರರನ್ನಾಗಿಸಬೇಕು. ಇದು ನಾನು ನಿರ್ವಹಿಸುತ್ತಿರುವ ಪಾತ್ರ.
ಪ್ರಶ್ನೆ: ಮಾಜಿ UNLF ಮುಖ್ಯಸ್ಥರ ಸೊಸೆಯಾಗಿರುವುದರಿಂದ, ನಿಮ್ಮ ನಿಷ್ಠೆ-ನಿಯತ್ತನ್ನು ಪ್ರಶ್ನಿಸಲಾಗಿದೆ ಎಂದು ಹೇಳಿದ್ದೀರಿ. ಅಲ್ಲದೆ, ನೀವು ಬಿಜೆಪಿಯನ್ನು ಎದುರು ಹಾಕಿಕೊಂಡ ನಂತರ ಮಾದಕ ವಸ್ತುಗಳ ಭಯೋತ್ಪಾದನಾ ಜಾಲದ ವಿಷಯವನ್ನು ನಿಮ್ಮ ರಾಜಕೀಯ ಬೆಳವಣಿಗೆಗಾಗಿ ಬಳಸಿಕೊಳ್ಳುತ್ತಿದ್ದೀರಿ ಎಂಬ ಆರೋಪವೂ ಇದೆ.
ಇಡೀ ಭಾರತದಲ್ಲಿ ಗರಿಷ್ಠ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳ ಪೈಕಿ ನಾನೂ ಒಬ್ಬಳು. ಇವೆಲ್ಲಾ ನಾನು ರಾಜಕೀಯ ಸೇರುವ ಮುನ್ನ ನಡೆದದ್ದು. ಸತತ ಎರಡು ಸರ್ಕಾರಗಳ ದುರಾಡಳಿತವನ್ನು ಪ್ರಶ್ನಿಸಿ ನಾನು ನನ್ನ ಸೇವೆಗೆ ಎರಡು ಬಾರಿ ರಾಜೀನಾಮೆ ನೀಡಿದ್ದೇನೆ. ನನ್ನ ಎರಡನೆಯ ಅವಧಿಯಲ್ಲಿ, ಅಧಿಕಾರಿಗಳು ಮತ್ತು ಶಾಸಕರ ನಡುವಿನ ರಾಜಕೀಯ ನಂಟುಗಳ ಕಾರಣ ಪೊಲೀಸ್ ಅಧಿಕಾರಿಯಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೆ. ಅಧಿಕಾರಿಗಳ ಮೇಲೆ, ವಿಶೇಷವಾಗಿ ರಾಜ್ಯ ಪೊಲೀಸ್ ಆಡಳಿತದಲ್ಲಿ ರಾಜಕಾರಣಿಗಳು ನಡೆಸುವ ಹಸ್ತಕ್ಷೇಪದಿಂದಾಗಿ ಏನನ್ನೂ ಸಾಧಿಸಲಾಗುತ್ತಿಲ್ಲ ಎಂದರಿತೆ. ಡ್ರಗ್ಸ್ ಹಾವಳಿಯ ಬಗ್ಗೆ ರಾಜ್ಯವನ್ನು ಯಾರಾದರೂ ಎಚ್ಚರಗೊಳಿಸಬೇಕಿತ್ತು. ಇಲ್ಲದಿದ್ದರೆ, ನಮ್ಮನ್ನು ಹೇಗೆ ಕೊಲ್ಲಲಾಗುತ್ತಿದೆ ಎಂಬುದೂ ನಮಗೆ ಗೊತ್ತಾಗುತ್ತಿರಲಿಲ್ಲ. ರಾಜಕೀಯವೇ ನನಗೆ ಮುಖ್ಯವಾಗಿದ್ದರೆ, ನನ್ನ ಹಿನ್ನೆಲೆಯನ್ನು ಬಳಸಿಕೊಂಡು ಯಾವುದಾದರೂ ದೊಡ್ಡ ವೇದಿಕೆಯಿಂದ ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಿದ್ದೆ. ನಾನು ಎಂದಿಗೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪೊಲೀಸ್ ಸೇವೆಯಲ್ಲಿದ್ದಾಗ ನಾನು ಕೋಟಿಗಟ್ಟಲೆ ಸಂಪಾದಿಸಬಹುದಿತ್ತು. ಮುಖ್ಯಮಂತ್ರಿಯೊಂದಿಗೆ ಸ್ನೇಹ ಬೆಳೆಸಬಹುದಿತ್ತು. ಅವರೊಂದಿಗೆ ಒಳ್ಳೆಯ ಒಡನಾಟವನ್ನೇ ಹೊಂದಿದ್ದೆ. ಹೊಸ ಸರ್ಕಾರಕ್ಕೆ ಪ್ರಶಸ್ತಿಯನ್ನೂ ತಂದುಕೊಟ್ಟಿದ್ದೆ. ನನಗೆ ಅಧಿಕಾರದ ಹಪಾಹಪಿಯಿದ್ದಿದ್ದರೆ ಸೇವೆಯಲ್ಲೇ ಉಳಿದು, ಹಣ ಸಂಪಾದಿಸಿ, ನಂತರದಲ್ಲಿ ಆರಾಮವಾಗಿ ರಾಜಕೀಯಕ್ಕೆ ಕಾಲಿಟ್ಟು, ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯಬಹುದಿತ್ತು.
ಪ್ರಶ್ನೆ: ಹೆಚ್ಚುವರಿ ಎಸ್‌ಪಿಯಾಗಿ ನೀವು ಮಾಡಿದ ಒಳ್ಳೆಯ ಕೆಲಸಕಾರ್ಯಗಳನ್ನೆಲ್ಲಾ ನೀವು ಪೊಲೀಸ್ ಸೇವೆಯನ್ನು ತೊರೆದ ನಂತರ ರದ್ದುಗೊಳಿಸಲಾಗಿದೆಯೇ?
ಇಲ್ಲ, ಅದನ್ನು ರದ್ದುಗೊಳಿಸಲಾಗಿಲ್ಲ. ಡ್ರಗ್ಸ್ ಮಾಫಿಯಾದ ಬಗ್ಗೆ ಇಡೀ ರಾಜ್ಯವೇ ಈಗ ಎಚ್ಚೆತ್ತುಕೊಂಡಿದೆ. ನನ್ನ ಉದ್ಯೋಗ, ಆರ್ಥಿಕ ಭದ್ರತೆ ಮತ್ತು ನನ್ನ ಕುಟುಂಬದ ಸುರಕ್ಷತೆಯನ್ನು ಬಿಟ್ಟುಕೊಟ್ಟು ಸಾಕಷ್ಟು ತ್ಯಾಗ ಮಾಡಿದ್ದೇನೆ. ಆದರೆ, ಜನ ಎಚ್ಚೆತ್ತುಕೊಂಡಿರುವುದೇ ನನ್ನ ಪಾಲಿನ ದೊಡ್ಡ ಸಾಧನೆ.
ಪ್ರಶ್ನೆ: ಕಾದಾಡುತ್ತಿರುವ ಎರಡೂ ಸಮುದಾಯಗಳಿಗೆ ಸೇರಿದ ಮಣಿಪುರದ ಮಹಿಳೆಯರು ತಮ್ಮವರ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಹಿಂಸಾಚಾರದ ನಿದರ್ಶನಗಳಿವೆ. ಇದು ಸಮರ್ಥನೀಯವೇ?
ಮಣಿಪುರದ ಮಹಿಳೆಯರು, ಅದರಲ್ಲೂ ಮುಖ್ಯವಾಗಿ ಮೈತೇಯಿ ಮಹಿಳೆಯರು ಸಮಾಜದ ಹಿತರಕ್ಷಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಪ್ರಪಂಚದಲ್ಲೆಲ್ಲೂ ನಡೆಯದ ಎರಡು ಮಹಿಳಾ ಯುದ್ಧಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಜನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಿರುವ ಸ್ಥಿತಿ ಇದೀಗ ಒದಗಿದೆ. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯದ ಪಡೆಗಳು ಸಕ್ರಿಯವಾಗಿಲ್ಲ. ರಾಜ್ಯ ಆಡಳಿತಾಂಗಗಳು ವಿಫಲವಾದಾಗ, ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ನಾವು ಮಹಿಳೆಯರನ್ನಾಗಲೀ, ಜನರನ್ನಾಗಲೀ ದೂಷಿಸಲು ಸಾಧ್ಯವಿಲ್ಲ – ಇದು ಸಂಭವಿಸಿರುವುದು ರಾಜ್ಯಾಂಗದ ವೈಫಲ್ಯದಿಂದಾಗಿ.
ಪ್ರ: ‘ಮೈರಾ ಪೈಬಿಸ್’ (ಮೈತೇಯಿ ಮಹಿಳಾ ಸಂಘಟನೆ) ಹಿಂಸಾಚಾರವನ್ನು ಪ್ರಚೋದಿಸಿರುವ ಆರೋಪವಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಅನುವಾಗುವಂತೆ ಕುಕಿ ಮಹಿಳೆಯರನ್ನು ಮೈತೇಯಿ ಗಂಡಸರ ವಶಕ್ಕೆ ಕೂಡ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ..
ಮೈರಾ ಪೈಬಿಸ್ ಮೇಲೆ ಹತ್ತು ಹಲವು ಆರೋಪಗಳನ್ನು ಹೊರಿಸಲಾಗುತ್ತಿದೆ. ಹಿಂಸಾಚಾರ ಭುಗಿಲೆದ್ದಾಗ ಜನರ ಗುಂಪುಗಲಭೆಗಳು ದೊಂಬಿಗೆ ತಿರುಗಿಕೊಂಡವು. ಜನಸ್ತೋಮಕ್ಕೆ ಯಾವುದೇ ವಿವೇಚನೆಯಿರುವುದಿಲ್ಲ. ಮಹಿಳೆಯರು ಭಾಗವಹಿಸಿದ್ದರೋ ಇಲ್ಲವೋ ನಮಗೆ ಗೊತ್ತಿಲ್ಲ. ಬಹುಶಃ ಕೆಲವು ಮಹಿಳೆಯರು ಭಾಗವಹಿಸಿರಬಹುದು – ಆದರೆ ಈ ಬಗ್ಗೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಮೀರಾ ಪೈಬಿಗಳನ್ನು ದೂಷಿಸಲು ಸಾಧ್ಯವಿಲ್ಲ. ಎಲ್ಲ ಮಹಿಳೆಯರಿಗೂ ಮೀರಾ ಪೈಬಿಸ್ ಎಂದು ಹಣೆಪಟ್ಟಿ ಹಚ್ಚುವುದು ಸಾಧ್ಯವಿಲ್ಲ. ಚೂರಚಾಂದಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಚೂರಚಾಂದಪುರದಲ್ಲಿ ಮಹಿಳೆಯರು ನಾಪತ್ತೆಯಾಗಿದ್ದಾರೆ. ಕುಕಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರಗಳಿಗೆ ಮತ್ತು ಕುಕಿ ಮಹಿಳೆಯರು ನಾಪತ್ತೆಯಾಗಿರುವುದಕ್ಕೆ ನಾವು ಅವರನ್ನು ದೂಷಿಸಬಹುದೇ? ಎಲ್ಲದಕ್ಕೂ ಮೀರಾ ಪೈಬಿಸ್ ದೂಷಣೆ ಸರಿಯಲ್ಲ.
ಇದನ್ನೂ ಓದಿ ʼಈ ದಿನʼ ವಿಶೇಷ ಸಂದರ್ಶನ ಭಾಗ-1 | ‘ಮಣಿಪುರವನ್ನು ಒಡೆದರೆ, ನಾವು ಭಾರತವನ್ನೇ ಒಡೆಯುತ್ತೇವೆ’- ತೌನೋಜಮ್ ಬೃಂದಾ
ಪ್ರಶ್ನೆ: ಮೈತೇಯಿಗಳು ಮತ್ತು ಕುಕಿಗಳು ಮುಂದೆ ಎಂದಾದರೂ ಶಾಂತಿಯುತವಾಗಿ ಒಟ್ಟಿಗೆ ಬಾಳಬಲ್ಲರು ಎಂದನಿಸುತ್ತದೆಯೇ?
ನಾವು ಶಾಂತಿಯುತವಾಗಿ ಒಟ್ಟಿಗೆ ವಾಸಿಸುತ್ತೇವೆ. ಇದು ನಮ್ಮ ವ್ಯವಸ್ಥೆಯಲ್ಲಿನ ಆಡಳಿತ ಮತ್ತು ರಾಜಕೀಯ ಸುಧಾರಣೆಯನ್ನು ಅವಲಂಬಿಸಿವೆ.
ಪ್ರಶ್ನೆ:ನೀವು ರಾಜಕಾರಣದ ಆಟವನ್ನೇ ಬದಲಿಸುವ ರಾಜಕಾರಣಿಯಾಗಲಿದ್ದೀರಿ ಎಂದು ಮಣಿಪುರದ ಯುವಜನರು ಭಾವಿಸಿದ್ದಾರೆ. ರಾಜಕೀಯದಲ್ಲಿ ನಿಮ್ಮ ಪಾತ್ರದ ಬಗ್ಗೆ ಅವರಿಗೆ ಉತ್ಸಾಹವಿದೆ…
75 ವರ್ಷಗಳಿಂದ ಆಡುತ್ತಿರುವ ಈ ರಾಜಕೀಯದಾಟವನ್ನು ಬದಲಿಸಲೇಬೇಕಿದೆ. ಮುಂದಿನ ದಿನಗಳಲ್ಲಿ ಬದಲಾವಣೆಗಳನ್ನು ಕಾಣಲಿದ್ದೇವೆ.
ಪ್ರಶ್ನೆ: ನಿಮ್ಮ ಮುಂದಿನ ನಡೆಗಳೇನು? ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಿರಾ?
ನನ್ನ ಮುಂದಿನ ಹೆಜ್ಜೆಗಳ ಬಗ್ಗೆ ಈಗ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ಈಗಷ್ಟೇ ವೈಯಕ್ತಿಕ ದುರಂತವೊಂದನ್ನು ಅನುಭವಿಸಿದ್ದೇನೆ. ನನ್ನ ಮಗನನ್ನು ಕಳೆದುಕೊಂಡಿದ್ದೇನೆ.

ಅಶ್ವಿನಿ ವೈ ಎಸ್
ಪತ್ರಕರ್ತೆ