- ಅಭಿಮಾನಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ
- ಕಾಂಗ್ರೆಸ್ ಪಕ್ಷದಲ್ಲಿ ಬೇರೂರಿದರೆ ನಿಮಗೆ ಸೂಕ್ತ ಸ್ಥಾನಮಾನ : ಡಿ.ಕೆ. ಶಿವಕುಮಾರ್ ಭರವಸೆ
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ, ಆಯನೂರು ಮಂಜುನಾಥ್ ಈಗ ಮತ್ತೆ ಪಕ್ಷ ಬದಲಾಯಿಸಿದ್ದು, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ‘ಕೈ’ ಹಿಡಿದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಆಯನೂರು ಮಂಜುನಾಥ್ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಆಯನೂರು ಮಂಜುನಾಥ್ ಜೊತೆಗೆ ನಾಗರಾಜ್ ಗೌಡ ಹಾಗೂ ಅವರ ಅಭಿಮಾನಿ ಬಳಗ ಕಾಂಗ್ರೆಸ್ ಸೇರಿದರು.
ಬಳಿಕ ಮಾತನಾಡಿದ ಆಯನೂರು ಮಂಜುನಾಥ್, ಯಾವುದೇ ಷರತ್ತು ಇಲ್ಲದೆಯೇ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಹಳ ದೊಡ್ಡ ಸಂಖ್ಯೆಯ ನಾಯಕರು ಜೊತೆಗಿದ್ದಾರೆ. ಬರುವ ದಿನಗಳಲ್ಲಿ ಪಂಚಾಯತಿ ಜಿಪಂ ತಾಪಂ ಚುನಾವಣೆಯಲ್ಲಿ ನನ್ನ ಎಲ್ಲ ಶ್ರಮ ಹಾಕುತ್ತೇನೆ ಎಂದು ಹೇಳಿದರು.
ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಎಲ್ಲರಿಗೂ ನಾನು ಹೇಳುವುದು ಇಷ್ಟೇ. ನೀವು ಕಾಂಗ್ರೆಸ್ ಪಕ್ಷದಲ್ಲಿ ಬೇರೂರಿದರೆ ನಿಮಗೆ ಸೂಕ್ತ ಸ್ಥಾನಮಾನಗಳು ಸಿಗಲಿವೆ. ನೀವು ಬಂದು ಹೋಗುವ ಪ್ರವೃತ್ತಿ ಮೈಗೂಡಿಸಿಕೊಂಡರೆ ನಿಮಗೆ ಸಿಗಬೇಕಾದ ಅವಕಾಶಗಳು ತಪ್ಪುತ್ತವೆ, ಅಷ್ಟೇ ಅಲ್ಲ ಜನ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದರು.
ರಾಷ್ಟ್ರ ಧ್ವಜದ ಗುರುತು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸವಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತರಿದ್ದರು.