ನಿಗದಿತ ಸಮಯಕ್ಕೆ ಚುನಾವಣೆಗಳನ್ನು ನಡೆಸಲು ವಿಫಲವಾದ ಹಿನ್ನಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯೂಎಫ್‌ಐ) ವಿರುದ್ಧ ವಿಶ್ವ ಕುಸ್ತಿ ಫೆಡರೇಷನ್ ಕಠಿಣ ಕ್ರಮ ಕೈಗೊಂಡಿದ್ದು, ಡಬ್ಲ್ಯೂಎಫ್‌ಐ ಸದಸ್ಯತ್ವವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಭಾರತದ ಕುಸ್ತಿ ಆಡಳಿತ ಮಂಡಳಿಯಾಗಿರುವ ಡಬ್ಲ್ಯೂಎಫ್‌ಐ ಜೂನ್ 2023 ರಲ್ಲಿ ಚುನಾವಣೆಗಳನ್ನು ನಡೆಸಬೇಕಿತ್ತು. ಆದಾಗ್ಯೂ, ಭಾರತೀಯ ಕುಸ್ತಿಪಟುಗಳ ಸರಣಿ ಪ್ರತಿಭಟನೆಗಳು ಮತ್ತು ವಿವಿಧ ರಾಜ್ಯ ಘಟಕಗಳ ಕಾನೂನು ಅರ್ಜಿಗಳ ಕಾರಣದಿಂದಾಗಿ ಚುನಾವಣೆಗಳನ್ನು ಪದೇ ಪದೇ ಮುಂದೂಡಲಾಗಿದೆ.
ಭಾರತದ ಪ್ರಮುಖ ಕುಸ್ತಿಪಟುಗಳು ಅದರ ಕಾರ್ಯನಿರ್ವಹಣೆಯ ವಿರುದ್ಧ ಪ್ರತಿಭಟಿಸಿದ ನಂತರ ಹಾಗೂ ಅದರ ಆಗಿನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದಾಗ ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಮೊದಲು ಜನವರಿಯಲ್ಲಿ ಹಾಗೂ ನಂತರ ಮೇ ತಿಂಗಳಲ್ಲಿ ಅಮಾನತುಗೊಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕಾವೇರಿ ನೀರು ವಿವಾದ: ಸುಪ್ರೀಂಕೋರ್ಟ್‌ಗೆ ಕರ್ನಾಟಕ ಅಫಿಡೆವಿಟ್ ಸಲ್ಲಿಕೆ
ಪ್ರಸ್ತುತ ಭಾರತೀಯ ಒಲಿಂಪಿಕ್ ಅಸೋಸಿಯೇಶನ್-ರಚಿತವಾದ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ಸಮಿತಿಯು ಡಬ್ಲ್ಯುಎಫ್ಐನ ದಿನನಿತ್ಯದ ವ್ಯವಹಾರಗಳನ್ನು ನಿರ್ವಹಿಸುತ್ತಿದೆ.
ಚುನಾವಣೆಗಳು ವಿಳಂಬವಾದರೆ ಅಮಾನತುಗೊಳಿಸುವುದಾಗಿ ಡಬ್ಲ್ಯುಎಫ್‌ಐಗೆ ವಿಶ್ವ ಕುಸ್ತಿ ಫೆಡರೇಷನ್ ಈ ಹಿಂದೆ ನೋಟಿಸ್ ನೀಡಿತ್ತು. ಅಲ್ಲದೆ ಮುಂದಿನ 45 ದಿನಗಳಲ್ಲಿ (ಜುಲೈ 15 ರೊಳಗೆ) ಭಾರತದ ಕುಸ್ತಿ ಫೆಡರೇಶನ್‌ಗೆ ಚುನಾವಣೆ ನಡೆಯದಿದ್ದರೆ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಎಂದು ಮೇ 30 ರಂದು ಎಚ್ಚರಿಕೆಯನ್ನೂ ನೀಡಿತ್ತು.
ಈ ಹಿಂದೆ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಜುಲೈ 11 ರಂದು ಚುನಾವಣೆ ನಡೆಯಬೇಕಿತ್ತು.