ದೇಶ ಸ್ವಚ್ಚ ಮಾಡುವ ಜನತೆಗೆ, ನಗರ ಕಟ್ಟಲು ದುಡಿಯುವ ಜನತೆಗೆ ವಾಸಕ್ಕೊಂದು ಸೂರಿಲ್ಲ. ಈ ದೇಶದ ಪ್ರಜೆಗಳು ನಾವು ನಮಗೂ ಎಲ್ಲರಂತೆ ಬದುಕುವ ಸಂವಿಧಾನ ಬದ್ಧ ಹಕ್ಕು ಬೇಕೆಂದು ಅಗ್ರಹಿಸಿ ಮಂಡ್ಯ ತಾಲೂಕಿನ ತಮಿಳು ಕಾಲೋನಿ ನಿವಾಸಿಗಳು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಅನಿದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಗುರುವಾರ ಸಂಜೆ ಕೊಳಚೆ ಅಭಿವೃದ್ಧಿ ಮಂಡಳಿಯವರು ಬಂದು ಸೋಮವಾರ ಲೀಗಲ್ ಒಪೀನಿಯನ್(ಸೂಕ್ತ ಕಾನೂನು ಅಭಿಪ್ರಾಯ) ಬರುತ್ತದೆ. ಬಳಿಕ ಹಸ್ತಾಂತರ ಮಾಡಿಕೊಳ್ಳುತ್ತೇವೆ. ಪ್ರತಿಭಟನೆ ವಾಪಸ್ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಿವಾಸಿಗಳು ಹಸ್ತಾಂತರ ಅದೇಶ ಕಾಪಿ ಕೈಗೆ ಸಿಗುವ ತನಕ ಹೋರಾಟ ಮುಂದುವರೆಸುತ್ತೇವೆಂದು ಪಟ್ಟು ಹಿಡಿದಿದ್ದಾರೆ.
ಮಂಡ್ಯ ತಾಲೂಕು, ಮದ್ದೂರು ಕೆಇಬಿ ಕಚೇರಿ ಮುಂಭಾಗದಲ್ಲಿರುವ ತಮಿಳುಕಾಲೋನಿ ನಿವಾಸಿಗಳು, ಸುಮಾರು 70 ವರ್ಷಗಳಿಂದ ವಾಸಿಸುತ್ತಿರುವ ಜಾಗದಲ್ಲಿ ಸುಮಾರು 114 ಕುಟುಂಬಗಳಿವೆ. ಮದ್ದೂರಿನ ಬೀದಿಗಳನ್ನು ಸ್ವಚ್ಛಪಡಿಸುವ ಪೌರಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ, ಮೂಟೆ ಹೊರುವ ಕಾರ್ಮಿಕರಾಗಿ, ಮನೆಕಟ್ಟುವವರಾಗಿ, ಮನೆ ಕೆಲಸಕ್ಕೆ ನೆರವಾಗುವವರಾಗಿ, ಸಮುದಾಯ ಭವನಗಳಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಹತ್ತು ಹಲವು ರೀತಿಗಳಲ್ಲಿ ಈ ನಗರವನ್ನು ಕಟ್ಟುತ್ತಿದ್ದಾರೆ. ಮದ್ದೂರು ನಗರವನ್ನು ಸುಂದರವಾಗಿಸಲು ಶ್ರಮಿಸಿದ ಈ ಜನಗಳು ತಾವೆ ವಾಸಿಸುವ ಭೂಮಿ ಹಕ್ಕಿಗಾಗಿ, ತಲೆಮಾರುಗಳು ಕಳೆದರು ಇನ್ನೂ ಹೋರಾಡುತ್ತಲೇ ಇರಬೇಕಾದ ದುಸ್ಥಿತಿ ನಮ್ಮ ಕಣ್ಣಮುಂದೆ ಇದೆ.
ಈ ವಿಚಾರದಲ್ಲಿ ಹಲವಾರು ಹೋರಾಟಗಳು ನಡೆದು, 1976ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿನ ಹಲವು ಪಟ್ಟಭದ್ರರ ದಬ್ಬಾಳಿಕೆಯಿಂದ ಹಾಗೂ ಶ್ರಮಿಕ ನಿವಾಸಿಗಳ ರಕ್ಷಣೆ ಮಾಡಬೇಕಾದವರೇ ಶಾಮೀಲಾಗಿ ಎಸಗಿದ ಮೋಸದಿಂದಾಗಿ ಬಹಳ ಕಾಲ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ತಮ್ಮ ವಾಸದ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿವಾಸಿಗಳು ಹೋರಾಟ ಮಾಡುತ್ತಾ ಬರುತ್ತಿದ್ದಾರೆ.
ಸರ್ಕಾರ ಮತ್ತು ಜನಪ್ರತಿನಿಧಿಗಳು ಚುನಾವಣೆ ಸಂದರ್ಭಗಳಿಂದ ಇಲ್ಲಿಯ ತನಕ ಬಾಯಿಮಾತಿನ ಭರವಸೆಗಳನ್ನು ಕೊಡುವುದನ್ನು ಬಿಟ್ಟರೆ ಅಲ್ಲಿನ ನಿವಾಸಿಗಳಿಗೆ ಭೂಮಿ ಹಕ್ಕನ್ನು ಕೊಡಿಸುವ ಕೆಲಸ ಸರ್ಕಾರದಿಂದ ಮತ್ತು ಜಿಲ್ಲಾಡಳಿತ ವತಿಯಿಂದ ಕೈಗೊಂಡಿಲ್ಲ. ಇಲ್ಲಿಯ ನಿವಾಸಿಗಳಿಗೆ ಹಕ್ಕುಪತ್ರಗಳು ಇಲ್ಲದೆ, ವಸತಿಯನ್ನು ನಿರ್ಮಿಸಿಕೊಳ್ಳುವ ಯಾವ ಯೋಜನೆಯ ಅಡಿಯಲ್ಲೂ ಫಲಾನುಭವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸರಿಯಾದ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂದರೂ ಪ್ರತಿ ಬಾರಿ ಪರದಾಡಬೇಕಿದೆ ಮತ್ತು ಹೋರಾಟ ಮಾಡುತ್ತಾ ಪಡೆದುಕೊಳ್ಳಬೇಕಿದೆ.
“ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಹಮ್ಮಿಕೊಂಡಿರುವ ಅನಿದಿಷ್ಠಾವಧಿ ಪ್ರತಿಭಟನೆಯನ್ನು ತೀವ್ರಗೊಳಿಸಬಾರದು ಎಂದರೆ ಇನ್ನೆರಡು ದಿನಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಾರ್ಕಿಕ ಅಂತ್ಯ ಕಾಣಬೇಕು. ಇಲ್ಲದಿದ್ದಲ್ಲಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿರುವ ವಸತಿ ಮಂತ್ರಿಗಳನ್ನು ಕಂಡು ಅವರಿಗೆ ನಮ್ಮ ಅಳಲನ್ನು ತೋಡಿಕೊಳ್ಳುತ್ತೇವೆ. ನಂತರ ಪರಿಹಾರ ಸಿಗದಿದ್ದರೆ ಸೆಪ್ಟೆಂಬರ್ 01 ರಿಂದ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ಪಾದಯಾತ್ರೆ ಆರಂಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೆಚ್ಚುವರಿ ವಸತಿ ಮಂಜೂರಾತಿಗೆ ಆಗ್ರಹಿಸಿ ವಸತಿ ಸಚಿವರಿಗೆ ಮನವಿ
“ಜಿಲ್ಲಾಡಳಿತ ಕೂಡಲೇ ಮದ್ದೂರು ತಮಿಳು ಕಾಲೋನಿಯ ಜಾಗವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡಬೇಕು. ತಮಿಳು ಕಾಲೋನಿಯ 114 ವಾಸಿಸುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು. ಮುಂದೆ ಯಾವುದೇ ಸಂಘ ಸಂಸ್ಥೆಗಳಿಂದ, ಭೂ-ವಿರೋಧಿ ಶಕ್ತಿಗಳಿಂದ, ಬಲಾಢ್ಯರಿಂದ ನಿವಾಸಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.