‘ಈ ದಿನ’ ಸಂಪಾದಕೀಯ | ಆರ್‌ಟಿಇ ದಾಖಲಾತಿ ಕುಸಿತ; 2018ರ ತಿದ್ದುಪಡಿ ರದ್ದತಿ ಅತ್ಯವಶ್ಯ

Date:

Advertisements
ರಾಜ್ಯದಲ್ಲಿ ಪ್ರಸ್ತಕ ಶೈಕ್ಞಣಿಕ ಸಾಲಿನಲ್ಲಿ ಒಟ್ಟು ಆರ್‌ಟಿಇ ಸೀಟು ಕಲ್ಪಿಸಲಾಗಿದ್ದದ್ದು 15,372. ಆದರೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 3,363 ಮಾತ್ರ. ನಾಲ್ಕು ಶೈಕ್ಷಣಿಕ ಜಿಲ್ಲೆಗಳಲ್ಲಂತೂ ಒಂದು ದಾಖಲಾತಿಯೂ ನಡೆದಿಲ್ಲ. ಇದು ಹೀಗೆಯೇ ಮುಂದುವರಿದರೆ...

ಒಂದೊಮ್ಮೆ ಸಂಚಲನ ಹುಟ್ಟುಹಾಕಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಇದೀಗ ಪೋಷಕರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಕಾಯ್ದೆಯಡಿ ಶಾಲೆಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿರುವುದು ಇದಕ್ಕೆ ಕಾರಣ. ರಾಜ್ಯದಲ್ಲಿ ಪ್ರಸ್ತಕ ಶೈಕ್ಞಣಿಕ ಸಾಲಿನಲ್ಲಿ ಒಟ್ಟು ಆರ್‌ಟಿಇ ಸೀಟು ಕಲ್ಪಿಸಲಾಗಿದ್ದದ್ದು 15,372. ಆದರೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 3,363 ಮಾತ್ರ.

ರಾಜ್ಯದ ಶೈಕ್ಷಣಿಕ ಜಿಲ್ಲೆಗಳ ಪೈಕಿ ಚಿಕ್ಕೋಡಿ, ಮೈಸೂರು, ಕಲಬುರಗಿ, ಬೆಳಗಾವಿ, ಗದಗ, ಬೆಂಗಳೂರು ದಕ್ಷಿಣದಲ್ಲಿ ಮಾತ್ರವೇ ಆರ್‌ಟಿಇ ಮೂಲಕ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಮೂರಂಕಿಯನ್ನು ದಾಟಿದೆ. ಈ ಪೈಕಿ ಅತ್ಯಂತ ಹೆಚ್ಚು ಮಕ್ಕಳು ದಾಖಲಾಗಿರುವುದು ಚಿಕ್ಕೋಡಿಯಲ್ಲಿ (402). ಇನ್ನು, ಉತ್ತರ ಕನ್ನಡ, ಹಾಸನ, ಕೊಡಗು ಹಾಗೂ ಮಧುಗಿರಿಯಲ್ಲಿ ಆರ್‌ಟಿಇನಡಿ ಒಬ್ಬರೂ ದಾಖಲಾಗಿಲ್ಲ ಎಂಬುದು ಆಘಾತಕಾರಿ ವಿಷಯ.

ಆರ್‌ಟಿಇ ಜಾರಿಗೆ ಬಂದದ್ದು 2010ರ ಏಪ್ರಿಲ್‌ನಲ್ಲಿ. ಸರ್ವಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಮೂಲಕ ಉತ್ತಮ ಕಲಿಕಾ ವಾತಾವರಣ ಮೂಡಿಸುವುದು ಇದರ ಮುಖ್ಯ ಉದ್ದೇಶ. ಕೂಲಿಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಅಲೆಮಾರಿಗಳು, ಬುಡಕಟ್ಟು ಜನರು, ಅಲಕ್ಷಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದುದನ್ನು ತಪ್ಪಿಸಲೆಂದೇ ಈ ಕಾಯ್ದೆ ಜಾರಿ ಮಾಡಿದ್ದು ಗಮನಾರ್ಹ. ಕಾಯ್ದೆಯಡಿ, 6ರಿಂದ 14 ವರ್ಷದ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಸಂಕಲ್ಪ ಮಾಡಲಾಗಿತ್ತು. ಇಂತಹ ಮಹತ್ವದ ಕಾಯ್ದೆ ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗುವುದು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಯಲ್ಲಿನ ದೊಡ್ಡ ಹಿನ್ನಡೆಯೇ ಸರಿ.

Advertisements

ಆರಂಭದಲ್ಲಿ ಭರಪೂರ ಸ್ಪಂದನೆ ಗಳಿಸಿದ್ದ ಈ ಕಾಯ್ದೆ ಹಳ್ಳ ಹಿಡಿಯಲು ಕೆಲವು ಪ್ರಮುಖ ಕಾರಣಗಳಿವೆ. ಅದರಲ್ಲಿ, ಆರಂಭಕ್ಕೆ ಬಹಳಷ್ಟು ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾದ ಮಕ್ಕಳನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರು ನಡೆಸಿಕೊಂಡ ರೀತಿ ಬಹಳ ಮುಖ್ಯವಾದುದು. ಈ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಠಡಿಯಿಂದ ಹೊರಗೆ ನಿಲ್ಲಿಸುವುದು, ಹೋಮ್‌ ವರ್ಕ್ ಮತ್ತಿತರ ನೆಪಗಳನ್ನು ಮುಂದೊಡ್ಡಿ ಅವಮಾನಿಸುವುದು, ಆರ್‌ಟಿಇ ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಪ್ರತ್ಯೇಕ ಕೂರಿಸುವುದು… ಹೀಗೆ ಸಾಲು-ಸಾಲು ಪ್ರಕರಣಗಳು ಎಲ್ಲೆಡೆಯಿಂದ ವರದಿಯಾದವು. ಆರ್‌ಟಿಇ ತಮ್ಮ ಮಕ್ಕಳ ಬದುಕನ್ನು ಬದಲಿಸುತ್ತದೆ ಎಂದುಕೊಂಡಿದ್ದ ಪೋಷಕರಿಗೆ ಈ ಘಟನೆಗಳು ಭ್ರಮನಿರಸನ ಮಾಡಿದ್ದವು.

ಪೋಷಕರಲ್ಲಿ ಕಾಯ್ದೆಯ ಬಗೆಗಿನ ವಿಶ್ವಾಸ ಕಡಿಮೆ ಆಗತೊಡಗಿದ್ದಾಗಲೇ, 2018ರಲ್ಲಿ ಮಹತ್ವದ ತಿದ್ದುಪಡಿ ಮಾಡಲಾಯಿತು. ಆ ಪ್ರಕಾರ, ಪೋಷಕರು ವಾಸಿಸುವ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಖಾಸಗಿ ಶಾಲೆ ಇದ್ದಲ್ಲಿ, ಮಕ್ಕಳನ್ನು ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ದಾಖಲು ಮಾಡುವಂತಿರಲಿಲ್ಲ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಓದಿಸಬೇಕು ಎಂದು ಕನಸು ಕಾಣುತ್ತಿದ್ದ ಪೋಷಕರಿಗೆ ಈ ಹೊಸ ನಿಯಮ ನುಂಗಲಾರದ ತುತ್ತಾಯಿತು. ಇದರ ಸಂಪೂರ್ಣ ಲಾಭವನ್ನು ಖಾಸಗಿ ಶಾಲೆಗಳು ಪಡೆದುಕೊಂಡವು. ಮಹತ್ವಾಕಾಂಕ್ಷಿ ಕಾಯ್ದೆಗೆ ಸ್ವತಃ ಸರ್ಕಾರವೇ ಕೊಟ್ಟ ಬಲವಾದ ಪೆಟ್ಟಿದು.

ಹೀಗೆ, ಕಳೆದ 13 ವರ್ಷಗಳಿಂದ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತ ಕುಂಟುತ್ತ ಸಾಗಿಬರುತ್ತಿರುವ ಕಾಯ್ದೆಗೆ ಮರುಜೀವ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ನಿಯಮ ತಿದ್ದುಪಡಿ ಆದ ನಂತರವಂತೂ ಕಾಯ್ದೆಯಲ್ಲಿ ಜೀವ ಉಳಿದಿಲ್ಲ ಎಂಬುದು ಶಿಕ್ಷಣ ತಜ್ಞರ ಸ್ಪಷ್ಟ ಅಭಿಪ್ರಾಯ. ಹಾಗಾಗಿಯೇ, ಆರ್‌ಟಿಇ ಅಡಿ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಇದನ್ನೇ ನೆಪವಾಗಿಟ್ಟುಕೊಂಡು ಆರ್‌ಟಿಇ ಅಡಿಯ ದಾಖಲಾತಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಕಸರತ್ತು ತೆರೆಮರೆಯಲ್ಲಿ ನಡೆದಿದೆ. ಇದರಿಂದ ಖಾಸಗಿ ಶಾಲೆಗಳಿಗಷ್ಟೇ ನೇರ ಲಾಭ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, 2018ರಲ್ಲಿ ಮಾಡಿದ್ದ ತಿದ್ದುಪಡಿಯನ್ನು ಮರುಶೀಲನೆ ಮಾಡಿ, ವಸ್ತುಸ್ಥಿತಿಗೆ ಅನುಗುಣವಾಗಿ ಬದಲಿಸುವುದು ಮಾತ್ರವೇ ಈ ಕಾಯ್ದೆಯನ್ನು ಉಳಿಸಿಕೊಳ್ಳುವ ಏಕೈಕ ದಾರಿ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X