ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡಿನ ಊಟಿಯಲ್ಲಿ ಮಹಿಳೆಯರೇ ನಿರ್ವಹಿಸುತ್ತಿರುವ ಚಾಕೋಲೆಟ್ ಕಾರ್ಖಾನೆಗೆ ಇತ್ತೀಚಿಗೆ ಭೇಟಿ ನೀಡಿ ತಾವು ಚಾಕೋಲೆಟ್ ಮಾಡುವ ವಿಧಾನವನ್ನು ಕಲಿತುಕೊಂಡಿರುವುದಾಗಿ ಹೇಳಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತಮಿಳುನಾಡಿನ ಜನಪ್ರಿಯ ಚಾಕೋಲೆಟ್ ಬ್ರಾಂಡ್ ‘ಮಾಡೀಸ್’ ಕಾರ್ಖಾನೆಯ ಕೆಲಸಗಾರರೊಂದಿಗೆ ರಾಹುಲ್ ಗಾಂಧಿ ಚಾಕೋಲೆಟ್ ತಯಾರಿಸಿದ್ದು, ಇದೇ ವೇಳೆ ಸಿಹಿ ಮಿಠಾಯಿ ವಸ್ತುಗಳ ಮೇಲಿನ ಜಿಎಸ್‌ಟಿ ಕುರಿತು ಚರ್ಚಿಸಿದ್ದಾರೆ.
ಚಾಕೋಲೆಟ್ ಕಾರ್ಖಾನೆಯ ವಿವಿಧ ಕೆಲಸಗಳನ್ನು ಮಾಡಲು 70 ಮಹಿಳೆಯರನ್ನು ಮಾಡೀಸ್ ಸಂಸ್ಥೆ ನೇಮಿಸಿಕೊಂಡಿದ್ದು, ಚಾಕೋಲೆಟ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ವಿವರವಾದ ಮಾಹಿತಿಯನ್ನು ರಾಹುಲ್ ಗಾಂಧಿ ಮಹಿಳೆಯರಿಂದ ಕೇಳಿ ತಿಳಿದುಕೊಂಡಿದ್ದಾರೆ.
“70 ಮಹಿಳೆಯರ ಅದ್ಭುತ ತಂಡವು, ಊಟಿಯ ಜನಪ್ರಿಯ ಚಾಕೊಲೇಟ್ ಕಾರ್ಖಾನೆಯೊಂದನ್ನು ನಿರ್ವಹಿಸುತ್ತಿದೆ. ಮಾಡೀಸ್ ಚಾಕೋಲೆಟ್ ಸಂಸ್ಥೆಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಹಾನ್ ಸಾಮರ್ಥ್ಯಕ್ಕೆ ಗಮನಾರ್ಹವಾದ ಸಾಕ್ಷಿಯಾಗಿದೆ. ನನ್ನ ಇತ್ತೀಚಿನ ನೀಲಗಿರಿ ಭೇಟಿಯ ಸಂದರ್ಭದಲ್ಲಿ ತೆರೆದುಕೊಂಡದ್ದು ಇಲ್ಲಿದೆ. ಈ ಸಾಧನೆಯ ಹಿಂದಿನ ಶಕ್ತಿಗಳಾದ ಮುರಳೀಧರ್ ರಾವ್ ಮತ್ತು ಸ್ವಾತಿ ಅವರ ಉದ್ಯಮಶೀಲತಾ ಮನೋಭಾವವು ಸ್ಪೂರ್ತಿದಾಯಕವಾಗಿದೆ. 70 ಮಹಿಳೆಯರು ಕೂಡ ಅಷ್ಟೇ ಸ್ಪೂರ್ತಿದಾಯಕರಾಗಿದ್ದಾರೆ. ನಾನು ರುಚಿ ಕಂಡ ಹಲವು ಚಾಕೋಲೆಟ್‌ಗಳಲ್ಲಿ ಈ ಚಾಕೋಲೆಟ್ ಅತ್ಯದ್ಭುತವಾಗಿದೆ” ಎಂದು ಚಾಕೋಲೆಟ್ ಕಾರ್ಖಾನೆಗೆ ಭೇಟಿ ನೀಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದ ರಾಹುಲ್ ಗಾಂಧಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಅಸಂಖ್ಯಾತ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳಂತೆಯೇ ಮಾಡೀಸ್ ಚಾಕೋಲೆಟ್‌ಗೂ ಜಿಎಸ್‌ಟಿಯ ಬಿಸಿ ಮುಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಿಂತ ಕೇಂದ್ರಕ್ಕೆ ದೊಡ್ಡ ಉದ್ಯಮಗಳೇ ಹೆಚ್ಚು ಆಸಕ್ತಿದಾಯಕವಾಗಿವೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಮುಜಾಫರ್‌ನಗರ ಶಾಲೆ ಮುಚ್ಚಲು ಆದೇಶ
ಹಲವು ವಿಷಯಗಳನ್ನು ಚರ್ಚಿಸಿದ ನಂತರ ರಾಹುಲ್ ಅವರಿಗೆ ಮಹಿಳೆಯರು ಮಾಡೀಸ್ ಚಾಕೋಲೆಟ್ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು.
ರಾಹುಲ್ ಗಾಂಧಿಯವರು ಕೇರಳದ ವಯನಾಡ್‌ನಲ್ಲಿರುವ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಹೋಗುತ್ತಿರುವಾಗ ಊಟಿಗೂ ಭೇಟಿ ನೀಡಿದ್ದರು.