ಕಲಬುರಗಿ ಸೀಮೆಯ ಕನ್ನಡ | ‘ಗಂಡ ಇದ್ದ ಮಾತ್ರಕ್ಕೆ ಹೆಣ್ಣು ಶ್ರೇಷ್ಠಳಾಗಲ್ಲ, ಗಂಡ ಇಲ್ಲಾಂದ್ರೆ ಕನಿಷ್ಠಳೂ ಆಗಲ್ಲ…’

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

"ನಿನ್ನ ಮನಸ್ಸಿಗೆ ಬಂದದ್ದು ಮಾಡು. ಆದ್ರ, ಹಬ್ಬ-ಪೂಜಾಗಳು ಮಾಡಬೇಕಲ್ಲ ಅಂತ ಟೆನ್ಷನ್ ಮಾಡಿಕೊಂಡು ಮಾಡೊದ್ರಾಗ ಅರ್ಥ ಇಲ್ಲ. ನೀ ಮಾಡೋ ಪೂಜಾ-ಹಬ್ಬಗಳೆಲ್ಲ ನಿನಗಾಗಿ ಮಾತ್ರ ಮಾಡಬೇಕೇ ಹೊರತು ಆಜುಬಾಜುದವರು ಮಾಡತಾರಂತ ಮಾಡೊದಲ್ಲ. ನಿನಗ ಅದರಲ್ಲಿ ಆಸಕ್ತಿ, ನಂಬಿಕಿ ಇದ್ರ ಮಾಡು..."

ಸುಮಾ ಗಡಿಬಿಡಿಯಿಂದ ಹೂವಿನ ಬುಟ್ಟಿ ಹಿಡದು ಬಂದುಳು. “ಏನ್ಮಾಡಲತಿದೇ… ಆಯ್ತ ಕೆಲಸ?” ಅಂದಳು.

“ಈಗ ಬೆಳಗಾಗೇದ. ಇನ್ನ ಶುರು ಆಗತಾವ ಕೆಲಸಗಳು. ನೀ ಎನೆ ಮುಂಜಮುಂಜಾನಿ ಎಲ್ಲಿಗಿ ಹೊಂಟೀ?” ಅಂದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾಳೆ ಶುಕ್ರವಾರ ಲಕ್ಷ್ಮಿ ಪೂಜಾ ಮಾಡಬೇಕಲ… ಹೂವ ತರಬೇಕು. ಇಲ್ಲಂದ್ರ ಮಂದಿ ಎಲ್ಲರೂ ಕಡಕೊಂಡ ಹೋಗಬಿಡತಾರ. ಅದಕ್ಕ ಮೊದಲ ನಿಮ್ಮ ಮನಿಗಿ ಬಂದಿನಿ. ನೀನರ ಯಾವ ಪೂಜಾ ಪಾಠ ಮಾಡಲ. ನಿನಗರ ಹೂವ ಬೇಕಾಗಲ ಅಲ್ಲ… ಅದಕ್ಕ ದಾಸವಾಳ, ಕನಕಾಂಬರಿ ಕಡಕೊಂಡ ಹೋಗತೀನಿ ನೋಡು. ತಡ ಆದ್ರ ಮತ್ಯಾರರ ಒಯ್ಯತಾರ,” ಅಂತ ಓಡಕೊಂತ ಹೂವಿನ ಗಿಡದ ಕಡಿ ನಡದಳು.

“ಎಲ್ಲಾ ಹೂವ ಕಡಿಬ್ಯಾಡೇ… ನನಗೂ ಸ್ವಲ್ಪ ಇಡು,” ಅಂದೆ.

“ನಿನಗ ಎದಕ? ಮನ್ಯಾಗ ಇರೊ ಒಂದು ದೇವರಿಗಿ ಒಂದು ಹೂವ ಸಾಕು. ನಿಂದೇ ಛಲೋ ನೊಡವ್ವ. ಯಾವ ಪೂಜಾ ಪಾಠ ಇಲ್ಲದೆ ಆರಾಮ ಇದ್ದಿ,” ಅಂದಳು. ಅವಳು ನನಗ ಹೊಗಳತಾಳೋ ತೆಗಳತಾಳೋ ಅರ್ಥ ಆಗಿಲ್ಲ.

“ನಾಳಿಗಿ ಊಟಕ್ಕ ಮುತೈದಿರಿಗಿ ಹುಡಕಬೇಕೆ. ಐದು ಮಂದಿಗಿ ಕರಿತೀನಿ. ಅವರಿಗೂ ಹುಡಕಬೇಕ ಆಗತದ. ಇಲ್ಲಂದ್ರ ಎಲ್ಲರೂ ಎಂಗೇಜ್ ಆಗತಾರ. ನೀ ನಮ್ಮ ಮನಿಗಿ ಬರಬೇಕ ನೋಡು. ಮೊದಲೇ ಹೆಳತೀನಿ. ಇನ್ನ ನಾಲ್ಕು ಮಂದಿಗಿ ಹುಡಕತೀನಿ. ಹಂಗೇ ಅಡಗಿ ಮಾಡೋರಿಗಿ ಹುಡಕಬೇಕು. ಭಾಂಡಿ ತೊಳೆರು ಯಾರು ಸಿಗಲಹೋಗ್ಯಾರ. ಈ ಹಬ್ಬ ಪೂಜಾಗಳು ಬಂದ್ರ ಜೀವ ಧಸ್ ಅನಲತದ ನೋಡು. ನಿಂದೆ ಪದ್ಧತಿ ಛಲೋ ಅದಾ ನೋಡವ್ವ ಈ ಯಾವ ಉಸಾಬರಿ ಇಲ್ಲ,” ಅಂದಳು.

“ಅಲ್ಲೇ… ನಿಂದೇ ಪದ್ಧತಿ ಛಲೋ ಅಂತಿ; ನೀನು ನನ್ನ ಹಂಗೇ ಆರಾಮ ಇರು ಮತ್ತ. ಇಟ ಟೆನ್ಷನ್ ಮಾಡಿಕೊಂಡು ಯಾಕ ಮಾಡತಿ ಇವೆಲ್ಲ? ನೀ ಒಂದು ಹಬ್ಬ ಆಗಲಿ, ಪೂಜಾಗಳಾಗಲಿ ಖುಷಿಯಿಂದ ಮಾಡಿದಿ ಏನ್? ಹಬ್ಬ ಬಂದ್ರ ಟೆನ್ಷನ್ ಶುರು ಆಗತದ. ಪೂಜಾ, ಅಡಗಿ, ತೊಳಿ-ಬಳಿ ಅಂತ ಬಿ.ಪಿ ಎರಸಕೋತಿ. ಮತ್ತ ದವಖಾನಿಗಿ ಅಲೀತಿ. ಮತ್ತ ಯಾರ ಎನ್ ಮಾಡತಾರ ಅವು ಮಾಡಿದಂಗ ಹೊಸ-ಹೊಸ ಪೂಜಾಗಳು ಮಾಡಬೇಕ ಅಂತೀ… ಸುಮ್ನ ಯಾಕ ಮಾಡಬೇಕು ಅವೆಲ್ಲ ಟೆನ್ಷನ್ ಮಾಡಿಕೊಂಡು?” ಅಂದೆ.

“ಐ… ನೀವು ಬಸವ ತತ್ವದೋರು ಹಿಂಗೇ ಹೆಳತೀರಿ. ಮನ್ಯಾಗ ಪೂಜಾ-ಪಾಠ, ವ್ರತ ಅಂತ ಇರಬೇಕು. ನಾವ ಮಾಡಿದ್ರೆ ನಮ್ಮ ಮಕ್ಕಳು ಕಲೀತಾರ, ಇಲ್ಲಂದ್ರ ಅವಕ್ಕ ಸಂಪ್ರದಾಯ, ಸಂಸ್ಕೃತಿ ಅಂತ ಏನ ಗೊತ್ತಾಗತ. ಒಂದೀಟ ಹೈರಾಣ ಆಗತದ ಖರೆ, ಆದ್ರ ಮನಸ್ಸಿಗಿ ನೆಮ್ಮದೀರಾ ಇರತದಲ್ಲ,” ಅಂದಳು.

“ನೀ ನೆಮ್ಮದಿಯಾಗಿ ಇದ್ದದ್ದು ನಾ ನೋಡೆ ಇಲ್ಲ ಬಿಡು,” ಅಂದೆ ನಕ್ಕೋತ. “ಹಬ್ಬ ಬಂದ್ರ ಮನ್ಯಾಗ ಗಂಡ, ಮಕ್ಕಳಿಗೆಲ್ಲ ನೆಮ್ಮದಿ ಕೆಡಸಿ ಬಿಡತಿ. ನೀ ಮಾಡೋ ಈ ಪೂಜಾಗಳಿಂದ ನಿನ್ನ ಗಂಡ-ಮಕ್ಕಳಿಗಿ ಅನುಕೂಲಕಿಂತ ಅನಾನೂಕೂಲನೆ ಹೆಚ್ಚಿಗಿ ಆಗತದ ಹೌದಿಲ್ಲ? ತೊಳಿ-ಬಳಿ, ಮಡಿ-ಮುಡಚಟ ಅಂತ ನೀ ದೇವರ ಹಿಂಬಳಿ ಹತ್ತತಿ. ಅವರಿಗಿ ಟೈಮಿಗಿ ಸರಿಯಾಗಿ ಅಡಗಿ ಮಾಡಕ್ಕ ಆಗಲ್ಲ ನಿನಗ. ಈಗ ನೋಡು… ಮಕ್ಕಳು ಸ್ಕೂಲ್‌ಗೆ ಹೋಗೋ ಟೈಮನಾಗ ಅವರಿಗಿ ತಿಂಡಿ ಮಾಡಕೊಟ್ಟು ಟಿಫನ್ ಕಟ್ಟಕೋಡದು ಬಿಟ್ಟು ಹೀಂಗ ಮನಿಮನಿ ತಿರುಗಿ ಹೂವಾ ಕಡಿಲತಿದಿ. ನಿನ್ನ ಗಂಡ ಹೊಟಲದ ತಿಂಡಿ ತಂದು ಮಕ್ಕಳಿಗಿ ಕಟ್ಟಿಕೊಟ್ಟಿರಬಹುದು,” ಅಂದೆ.

“ಐ… ಈ ಪೂಜಾ-ಹಬ್ಬಗಳೆನು ದಿನಾ ಇರತಾವೇನು? ನಾ ಏನ್ ನನ್ನ ಸಲ್ಯಾಕ ಮಾಡ್ತಿನೇನೆ… ಗಂಡ-ಮಕ್ಕಳು ಚಂದ ಇರಲಿ ಅಂತೇ ಮಾಡತೀನಿ,” ಅಂದಳು.

“ಸುಮಾ… ನಾವು ಹೆಣ್ಣುಮಕ್ಕಳು ಎಲ್ಲಾ ಮಾಡದೇ ಗಂಡಮಕ್ಕಳ ಸಲುವಾಗಿ. ಹಬ್ಬ-ಪೂಜಾಗಳು ಮಾಡಬ್ಯಾಡ ಅಂತ ನಾ ಹೇಳಿಲ್ಲ. ಆದ್ರ ಅದ ಒಂದು ವ್ಯಸನ ಆಗಬಾರದು. ಈಗ ನೋಡು. ನೀ ಹೀಂಗ್ ಮನಿಮನಿ ತಿರುಗಿ ಹೂ ಜಮಾಸಿ ನಿಮ್ಮ ಮನ್ಯಾಗ ದೇವರಿಗಿ ಎರಸ್ತಿ. ಆದ್ರ ಇದರ ಫಲ ನಿನಗ ಸಿಗತದ ಅಂತ ತಿಳಕೊಂಡಿ ಏನ್…? ಯಾರು ನೀರು-ಗೊಬ್ಬರ ಹಾಕಿ ಬೆಳಸಿರತಾರ ಅವರಿಗಿ ಸಿಗತದ ಆ ಫಲ. ನಿನಗ ಹೂ ಬೇಕಾದ್ರ ಖರೀದಿಸಿ ತಂದು ದೇವರಿಗಿ ಏರಸು. ರೈತರಿಗಿ ಅನೂಕೂಲ ಆಗತದ. ನೀ ತಂದದ್ಕೂ ಸಾರ್ಥಕ ಆಗತದ. ಹಿಂಗ ಹೇಳತೀನಿ ಅಂತ ತಪ್ಪು ತಿಳಕೋಬ್ಯಾಡ. ಪೂಜಾಗಳು ನಮ್ಮಲ್ಲಿ ಎನ ಇರತಾವ ಅಷ್ಟೇ ಉಪಯೋಗಿಸಿ ಮಾಡಬೇಕು. ಅವರಿವರ ಮನ್ಯಾಗಿಂದ ತಂದು, ಸಾಲ ಮಾಡಿ ಪೂಜಾ ಮಾಡಿದ್ರ ಏನೂ ಉಪಯೋಗ ಇಲ್ಲ. ಬಸವಾದಿ ಶರಣರು ಇದನ್ನೆ ಹೇಳ್ಯಾರ್. ಅವರು ಪೂಜೆಗಳಿಗಿಂತ ಕಾಯಕಕ್ಕ ಹೆಚ್ಚು ಪ್ರಾಧ್ಯಾನ್ಯತೆ ಕೊಡತಿದ್ರೂ…”

ಸುಮಾ ಹೂವಿನ ಬುಟ್ಟಿ ಇಟ್ಟು ಸಮ್ನ ಕುಂತಳು.

“ಈಗ ನೀ ಪೂಜಗಳಿಂದ ಮನಶ್ಯಾಂತಿ ಸಿಗತದ ಅಂತ ಹೇಳದಿ. ಆದ್ರ ಕೆಲ ಪೂಜಗಳಿಂದ ಸಮಾಜದಲ್ಲಿ ಕೆಲವರ ಮನಸ್ಥಿತಿನೂ ಹಾಳಾಗತದ. ಈಗ ಲಕ್ಷ್ಮಿ ಪೂಜಕ್ಕ ಅರಶಿನ-ಕುಂಕುಮಕ್ಕ, ಉಟಕ್ಕ ಉಡಿ ತುಂಬಲಾಕ ಮುತೈದೇರಿಗಿ ಕರೀತೀವಿ. ಗಂಡ ಇಲ್ಲದವರ ಮ್ಯಾಲ್ ಎಂತ ಪರಿಣಾಮ ಬೀರತದ? ನಾವು ಒಮ್ಮೆಯರ ವಿಚಾರ ಮಾಡೀವೇನು? ಈಂತಹ ಆಚರಣೆಗಳಿಂದ ನಾವು ಅವರ ಮನಸ್ಸು ನೋಯಿಸತೇವೆ. ಮುತೈದೇರಿಗಿ ಕರದು ಉಡಿ ತುಂಬೋದು ಹಿಂದಿನಿಂದ ಬಂದ ಸಂಪ್ರದಾಯ ಇರಬಹುದು. ನಾವು ಪ್ರಜ್ಙಾವಂತರು ಅದನ್ನೆ ಮುಂದುವರೆಸಿಕೊಂಡು ಹೋಗೋ ಅವಶ್ಯಕತೆ ಅದಾ ಏನ್ ಹೇಳು… ಹೆಣ್ಣುಮಕ್ಕಳಂದ್ರ ನಾವೆಲ್ಲ ಒಂದೇ. ಆದರ ಗಂಡ ಇದ್ದರ ಅವಳಿಗಿ ಕಾಲು ತೊಳದು ಪೂಜಾ ಮಾಡತೀವಿ. ಇಲ್ಲಂದ್ರ ಅವಳಿಗಿ ಪೂಜಾ ಪಾಠದಿಂದ ದೂರ ಇಡತಿವಿ. ಇದು ನಾವು ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿಗಿ ಮಾಡೋ ಅವಮಾನ ಆಗತದ ಅಲ್ಲ ನೀನೆ ಹೇಳು…” ಅಂದೆ.

ಸುಮಾ ನನ್ನ ಮುಖ ನೋಡಕೊಂತ ಕುಂತೇ ಇದ್ದಳು.

“ನಮ್ಮ ಮಕ್ಕಳಿಗಿ ನಾವು ಏನ್ ಕಲಸ್ತಿವಿ ಅಂದ್ಯಲ್ಲ. ನಾವು ನಮ್ಮ ಮಕ್ಕಳಿಗಿ ಮನುಷ್ಯರ ನಡುವೆ ತಾರತಮ್ಯ ಮಾಡೋದು ಕಲಿಸಬಾರದು. ಇವಳು ಮುತೈದಿ, ಇವಳು ವಿಧವೆ, ಇವರು ಉಚ್ಚ ಜಾತಿಯವರು, ಇವರು ಕೆಳಗಿನವರು ಇದೆಲ್ಲ ಮಕ್ಕಳು ನಮ್ಮಿಂದಾನೇ ಕಲಿತಾರ. ಮಕ್ಕಳಿಗಿ ನಾವು ಕಲಿಸಬೇಕಾದದ್ದು ಶರಣರ ವಚನಗಳ ಅರ್ಥಗಳನ್ನು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು. ಇವನ್ನು ತಿಳಕೊಂಡರ ಮಕ್ಕಳು ಸಂಸ್ಕಾರವಂತರೇ ಆಗತಾರ…” ಅಂದೆ.

“ನೀ ಹೇಳದು ಖರೆನೆ ಬಿಡು. ಆದ್ರ, ಹಿಂದಿನಿಂದ ಮಾಡಿಕೊಂಡು ಬಂದ ಆಚರಣೆ ಹಾಂಗ ಬಿಡಲಕ್ಕ ಮನಸ್ಸು ಒಪ್ಪಬೇಕಲ್ಲ…” ಅಂದಳು.

“ಬಿಡು ಅಂತ ನಾ ಎಲ್ಲಿ ಹೇಳತೀನಿ… ನಿನ್ನ ಮನಸ್ಸಿಗೆ ಬಂದದ್ದು ಮಾಡು. ಆದ್ರ, ಹಬ್ಬ-ಪೂಜಾಗಳು ಮಾಡಬೇಕಲ್ಲ ಅಂತ ಟೆನ್ಷನ್ ಮಾಡಿಕೊಂಡು ಮಾಡೊದ್ರಾಗ ಅರ್ಥ ಇಲ್ಲ. ನೀ ಮಾಡೋ ಪೂಜಾ-ಹಬ್ಬಗಳೆಲ್ಲ ನಿನಗಾಗಿ ಮಾತ್ರ ಮಾಡಬೇಕೇ ಹೊರತು ಆಜುಬಾಜುದವರು ಮಾಡತಾರಂತ ಮಾಡೊದಲ್ಲ. ನಿನಗ ಅದರಲ್ಲಿ ಆಸಕ್ತಿ, ನಂಬಿಕಿ ಇದ್ರ ಮಾಡು, ಅಷ್ಟೆ. ಒಂದು ತಿಳಕೋ… ಒಂದು ಹೆಣ್ಣಿನ ಸ್ಥಾನಮಾನ ಅವಳ ಗಂಡನಿಂದ ಅಳೆಯೋ ಕಾಲ ಅಲ್ಲ ಇದು. ಗಂಡ ಇದ್ದ ಮಾತ್ರಕ್ಕೆ ಅವಳು ಶ್ರೇಷ್ಠಳಾಗಲ್ಲ, ಇಲ್ಲಂದ್ರೆ ಕನಿಷ್ಠಳಾಗಲ್ಲ. ಅರಶಿನ-ಕುಂಕುಮ ನಾವು ಹೆಣ್ಣಮಕ್ಕಳು ಮದಿವಿಗಿಂತ ಮೊದಲು ಉಪಯೋಗಿಸತಿದ್ದೆವು. ಅವುಗಳನ್ನು ನಮ್ಮಿಂದ ಕಸಕೊಳ್ಳೊ ಅಧಿಕಾರ ಯಾರಿಗೂ ಇಲ್ಲ…”

“…ಬಳಿ, ಕುಂಕುಮ, ತಾಳಿ ಇವೆಲ್ಲವೂ ಕೇವಲ ಸೌಂದರ್ಯ ಸಾಧನಗಳು ಮಾತ್ರ. ಹೆಣ್ಣಿಗೆ ಗಂಡ ಎಷ್ಟು ಮುಖ್ಯನೋ ಗಂಡಿಗಿ ಹೆಂಡತಿ ಅದಕ್ಕಿಂತಲೂ ಮುಖ್ಯವಾಗಿರತಾಳ. ಕೇವಲ ಪುರುಷನ ಉಪಸ್ಥಿತಿ, ಅನುಪಸ್ಥಿತಿಯಿಂದ ಒಂದು ಹೆಣ್ಣಿನ ಅಸ್ತಿತ್ವ ನಿರ್ಧರಿಸುವದು ತಪ್ಪು. ಇದು ನನ್ನ ಅಭಿಪ್ರಾಯ. ನಾವು ಮಾಡೋ ಪೂಜಾಗಳೆಲ್ಲ ತೋರಿಕೆಯವು. ನಾವು ಪೂಜಾ ಮಾಡಿ ಸುಮ್ನ ಎಲ್ಲಿರತೀವಿ. ಮತ್ತ ಆಜುಬಾಜುದವರಿಗಿ ಕರದು ತೊರಸದರೆ ನಮಗ ಸಮಾಧಾನ. ಇಲ್ಲಂದ್ರ ಎಲ್ಲರ ಮನಿ ಲಕ್ಷ್ಮಿದೇರು ಅವರವರ ಸ್ಟ್ಯಾಟಸ್‌ದಾಗರ ಇರತಾರ…” ಅಂದೆ. 

ಸುಮಾನ ಬುಟ್ಟಿ ತುಂಬಾ ಹೂ ಕಡಿದು ಕೊಟ್ಟು, ನಾನೂ ಸ್ವಲ್ಪ ಇಟಕೊಂಡೆ.

“ನೀ ಹೇಳಿದಂಗ ನಾ ಈ ಯಾವ ಪೂಜಾ-ಪಾಠಗಳು ಮಾಡಂಗಿಲ್ಲ. ಆದ್ರ ನಾನೂ ದೇವರಿಗಿ ನಂಬತಿನಿ, ಆರಾಧಿಸತೀನಿ. ಆದ್ರ, ಬಸವಾದಿ ಶರಣರ ವೈಚಾರಿಕತೆಗಳಡಿಯಲ್ಲಿ. ನನ್ನ ಮತ್ತು ದೇವರ ಮಧ್ಯ ಬರಲು ನಾನು ಯಾರಿಗೂ ಅವಕಾಶ ಕೊಡಲ್ಲ,” ಅಂದಾಗ ಸುಮಾ ಮೌನವಾಗಿ ಕುಂತೇ ಇದ್ದಳು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಮುಖ್ಯಚಿತ್ರ – ಸಾಂದರ್ಭಿಕ | ಕೃಪೆ: ಮುರಳೀಧರನ್ ಅಳಗಾರ್

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

6 COMMENTS

    • ಪ್ರತಿಕ್ರಿಯೆಗಾಗಿ ನನ್ನಿ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದ

    • ಥ್ಯಾಂಕ್ಯೂ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದ

  1. ಹಬ್ಬ ಹರಿದಿನಗಳ ಆಚರಣೆಗಳ ನೆಪದಲ್ಲಿ ನಡೆಯಬಹುದಾದ ಅನಾಚಾರಗಳ ಅನಾವರಣ ತುಂಬ ಎಚ್ಚರಿಕೆಯಿಂದಲೆ ಮಾಡಿರುವಿರಿ. ನಮ್ಮ ನೆಲದ ಭಾಷೆಯಲ್ಲಿ ವಿವರಿಸಿದ್ಜು ನನಗಂತೂ ತುಂಬಾ ಇಷ್ಟವಾಯ್ತು ಮೇಡಂ. ಆಡಿಯೋ ಕೂಡ ಮತ್ತೆ ಮತ್ತೆ ಕೇಳುವಂತಿದೆ. ಅಭಿನಂದನೆಗಳು ತಮಗೆ.

    • ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಅಭಿಪ್ರಾಯವನ್ನು ಲೇಖಕರ ಗಮನಕ್ಕೆ ತರಲಾಗಿದೆ. ನಿಮ್ಮಿಂದ ಮತ್ತಷ್ಟು ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...