(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಲೈಂಗಿಕ ಕಿರುಕುಳದ ಬಗ್ಗೆ ಯಾರೂ ಏಕೆ ಮುಕ್ತವಾಗಿ ಮಾತಾಡುವುದಿಲ್ಲ ಅನ್ನುವುದು ಗಂಭೀರ ವಿಚಾರ. ಅತ್ಯಾಚಾರ, ಕಿರುಕುಳಗಳ ಬಗ್ಗೆ ಮುಕ್ತವಾಗಿ ಮಾತಾಡದೆ ಇರುವುದಕ್ಕೆ ಕಾರಣ 'ಮರ್ಯಾದೆ ಹೋಗುತ್ತದೆ' ಎಂಬುದು. ಇದರಷ್ಟು ವಿಪರ್ಯಾಸ ಇನ್ನೊಂದಿಲ್ಲ. ತಪ್ಪು ಮಾಡಿದ್ದು ಯಾರೋ, ಮರ್ಯಾದೆ ಹೋಗಿದ್ದು ಯಾರದ್ದೋ!
ಲೈಂಗಿಕ ದೌರ್ಜನ್ಯದ ಕುರಿತಂತೆ ನಾವು ಮಾತುಕತೆಗೆ ಇಳಿಯುವುದು ಕೆಲವು ನೇರ ಪ್ರಶ್ನೆಗಳ ಜೊತೆಗೆ. ಲೈಂಗಿಕ ಕಿರುಕುಳ ಅಂದರೆ ಏನು? ಅಸಭ್ಯವಾಗಿ ಕಣ್ಣು ಮಿಟುಕಿಸುವುದು, ಸನ್ನೆ ಮಾಡಿ ಕರೆಯುವುದು ಇತ್ಯಾದಿಗಳನ್ನು ಲೈಂಗಿಕ ಕಿರುಕುಳ ಅಂತ ಅನೇಕರು ಗುರುತಿಸಿಕೊಂಡಿರುವುದಿಲ್ಲ. ಮುಟ್ಟಿಯೋ ಮುಟ್ಟದೆಯೋ ಹೆಣ್ಣುಮಕ್ಕಳಿಗೆ ತಮ್ಮ ದೇಹದ ಮೇಲೆ ಅಸಭ್ಯವಾದ ಭಾವದ ಅನುಭವವಾದರೆ ಅದು ಲೈಂಗಿಕ ಕಿರುಕುಳವೇ ಸರಿ ಎಂದು ಖಚಿತಪಡಿಸುತ್ತೇವೆ.
ಎಲ್ಲಿ ನಡೆಯುತ್ತದೆ? ಈ ಪ್ರಶ್ನೆಗೆ ಎಲ್ಲಿ ನಡೆಯುವುದಿಲ್ಲ ಎಂದು ಮರುಪ್ರಶ್ನೆ ಕೇಳುವ ಹಾಗೆ ಇರುತ್ತದೆ. ಮನೆಯಲ್ಲಿ, ಶಾಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಜನಸಂದಣಿ ಇಲ್ಲದಿರುವಲ್ಲಿ, ಜನಸಂದಣಿ ಇರುವಲ್ಲಿ, ಪವಿತ್ರವಾದ ದೇವಸ್ಥಾನಗಳಲ್ಲಿ… ಹೀಗೆ ಎಲ್ಲ ಕಡೆಗಳಲ್ಲೂ ನಡೆದಿವೆ. ಯಾರ ಮೇಲೆ ನಡೆಯುತ್ತದೆ? ಎಳೆ ಹಸುಳೆಯಿಂದ ಹಿಡಿದು ವಯಸ್ಸಾದವರ ಮೇಲೆಯೂ ನಡೆಯುತ್ತದೆ. ಗಂಡುಮಕ್ಕಳ ಮೇಲೆಯೂ ನಡೆಯುತ್ತದೆ.
ಅತ್ಯಂತ ಗಂಭೀರ ವಿಚಾರ – ಯಾಕೆ ನಡೆಯುತ್ತದೆ – ಎಂಬುದು. ಹೆಣ್ಣುಮಕ್ಕಳ ಉಡುಪಿನ ಶೈಲಿ ಕಾರಣ; ಹೆಣ್ಣುಮಕ್ಕಳ ಸಡಿಲವಾದ ವರ್ತನೆಗಳು ಕಾರಣ; ಅವರು ಹೋಗಬಾರದ ಹೊತ್ತಿನಲ್ಲಿ ಹೋಗಿದ್ದು ಕಾರಣ; ಅವರು ನಿಲ್ಲಬಾರದ ಸ್ಥಳದಲ್ಲಿ ನಿಂತಿದ್ದು ಕಾರಣ; ಅವರು ಅಗತ್ಯಕ್ಕಿಂತ ಹೆಚ್ಚು ನಕ್ಕಿದ್ದು ಕಾರಣ… ಹೇಳುತ್ತಾ ಹೋಗಬಹುದು. ಕೆಲವರು ಈ ಕಾರಣಗಳನ್ನು ಅಲ್ಲಗೆಳೆಯುವ ಪ್ರಯತ್ನ ಮಾಡಿದರೂ ಖಚಿತತೆ ಇರುವುದಿಲ್ಲ. ಅದಕ್ಕಾಗಿ ಈ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸುವ ಪ್ರಯತ್ನ ಮಾಡುತ್ತೇವೆ. ಚಿಕ್ಕ ಮಕ್ಕಳ ಮೇಲೆಯೂ, ವಯಸ್ಸಾದವರ ಮೇಲೆಯೂ ನಡೆಯುತ್ತದೆ; ತಲೆ ತಗ್ಗಿಸಿಕೊಂಡು ನಡೆವವರ ಮೇಲೂ ನಡೆಯುತ್ತದೆ; ಕಡಿಮೆ ಬಟ್ಟೆ ಹಾಕಿದವರ ಮೇಲೆಯೂ, ಮೈ ತುಂಬಾ ಬಟ್ಟೆ ಹಾಕಿಕೊಂಡವರ ಮೇಲೆಯೂ ನಡೆಯುತ್ತದೆ; ಮನೆಯೊಳಗೂ ನಡೆಯುತ್ತದೆ; ರಕ್ತ ಸಂಬಂಧಿಗಳಿಂದಲೇ ನಡೆಯುತ್ತದೆ ಎಂದಾದರೆ ಕನಿಷ್ಠ ಬಟ್ಟೆಯೇ ಒಂದು ಕಾರಣ ಯಾಕಾಗಬೇಕು? ಆಕರ್ಷಣೆ ಆಗುತ್ತದೆ ಎಂದಾದರೆ, ಯಾರಿಗೆ ಯಾವ ಹೊತ್ತಿಗೆ ಯಾವುದು ಆಕರ್ಷಣೆ ಆಗುತ್ತದೆ ಎಂಬುದು ಯಾರಿಗೆ ಗೊತ್ತು? ಆಕರ್ಷಣೆಯೇ ಒಂದು ಕಾರಣ ಹೌದಾದರೆ, ಹೆಣ್ಣುಮಕ್ಕಳಿಗೂ ಗಂಡುಮಕ್ಕಳ ಮೇಲೆ ಆಕರ್ಷಣೆ ಆಗುವುದಿಲ್ಲವೇ? ಆಕರ್ಷಣೆ ಅನ್ನುವುದು ಸಹಜ. ಆದರೆ, ಬಲವಂತವಾಗಿ, ಇಚ್ಛೆಗೆ ವಿರುದ್ಧವಾಗಿ ಯಾರನ್ನೂ ಕಿರುಕುಳ ಮಾಡುವುದು ಸರಿಯಲ್ಲ. ಆಕರ್ಷಣೆಯನ್ನು ನಿಭಾಯಿಸಲು ಕಲಿಯುವುದೇ ನಿಜವಾದ ಗಂಡಸುತನ ಆಗಬೇಕು. ಕಿರುಕುಳ, ಅತ್ಯಾಚಾರದಂತಹ ಕ್ರಿಯೆಗಳಿಗೆ ಯಾವುದೇ ಸಮರ್ಥನೆ ಇಲ್ಲ ಎಂಬುದನ್ನು ಎಲ್ಲರೂ ಎದೆಯೊಳಗೆ ಇಳಿಸಿಕೊಳ್ಳಬೇಕು. ಗಂಡುಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳಗಳು ನಡೆಯುತ್ತವೆ. ಇದು ಕೂಡ ಅಷ್ಟೇ ಅಮಾನವೀಯ ಹೌದು. ಆದರೆ, ಇದಕ್ಕೆ ಕಾರಣ ಆ ಗಂಡುಹುಡುಗರ ಬಟ್ಟೆ, ವರ್ತನೆ ಅಂತ ಹೇಳುತ್ತೇವೆಯೇ?
ಯಾಕೆ ಈ ಬಗ್ಗೆ ಮುಕ್ತವಾಗಿ ಮಾತಾಡುವುದಿಲ್ಲ ಅನ್ನುವುದು ಮತ್ತೊಂದು ಮುಖ್ಯ ವಿಚಾರ. ಅತ್ಯಾಚಾರ, ಕಿರುಕುಳಗಳ ಬಗ್ಗೆ ಮುಕ್ತವಾಗಿ ಮಾತಾಡದೆ ಇರುವುದಕ್ಕೆ ಕಾರಣ ‘ಮರ್ಯಾದೆ ಹೋಗುತ್ತದೆ’ ಎಂಬುದು. ಇದರಷ್ಟು ವಿಪರ್ಯಾಸ ಇನ್ನೊಂದಿಲ್ಲ. ತಪ್ಪು ಮಾಡಿದ್ದು ಯಾರೋ, ಮರ್ಯಾದೆ ಹೋಗಿದ್ದು ಯಾರದ್ದೋ. ಈ ಮರ್ಯಾದೆ ಹೋಗುವ ಭಯಕ್ಕೇ ಇದರ ಬಗ್ಗೆ ಯಾರೂ ಹೇಳಿಕೊಳ್ಳುವುದಿಲ್ಲ. ಹಿಂಸೆ ಅನುಭವಿಸಿದವರೇ ಅದಕ್ಕೆ ಹೊಣೆಗಾರರೂ ಆಗಿಬಿಡುವುದೇ ಇಂತಹ ಸಮಸ್ಯೆ ಗಟ್ಟಿಯಾಗಿ ಬೇರೂರಲು ಕಾರಣ. ಒಂದು ಮನ ತಟ್ಟುವ ಘಟನೆ ಹೀಗಿದೆ… ಒಬ್ಬ ಯುವತಿ ಜನನಿಬಿಡ ಬಸ್ಸಿನಲ್ಲಿ ಪಯಣಿಸುವಾಗ, ಒಬ್ಬ ಗಂಡಸು ಅವಳ ಬೆನ್ನಿಗೆ ತನ್ನನ್ನು ಒತ್ತಿ-ಒತ್ತಿ, ಅವನಿಗೆ ಅಲ್ಲಿಯೇ ವೀರ್ಯಸ್ಖಲನ ಆಗಿಬಿಡುತ್ತದೆ. ಅವಳು ಹಿಂದೆ ಮುಟ್ಟಿಕೊಂಡಾಗ ಕೈಗೆ ಅಂಟು ತಾಗುತ್ತದೆ. ಅಸಹ್ಯ ಆಗುತ್ತದೆ. ಕಾಲೇಜಿಗೆ ಹೋಗಿದ್ದೇ, ಕೈ ತೊಳೆದುಕೊಳ್ಳುತ್ತಾಳೆ. ಅಲ್ಲಿಗೇ ನಿಲ್ಲುವುದಿಲ್ಲ. ಮತ್ತೆ-ಮತ್ತೆ ಕೈ ತೊಳೆದುಕೊಳ್ಳುತ್ತಾಳೆ. ಕೈ ತೊಳೆವ ಗೀಳು ಹತ್ತಿಕೊಳ್ಳುತ್ತದೆ. ಕೈಗೆ ಹತ್ತಿದ್ದು ಮೊದಲ ಸಾರಿ ತೊಳೆದಾಗಲೇ ಹೋಗಿದೆ. ಆದರೆ, ಮನಸ್ಸಿಗೆ ತಾನು ಗಲೀಜಾದೆ ಎಂದು ಅಂಟಿರುವ ಭಾವ ಮಾತ್ರ ಕಾಡುತ್ತಿರುತ್ತದೆ. ಇದನ್ನು ಗಮನಿಸಿದ ಗೆಳತಿಯರು, ಕಾಲೇಜಿನ ಸಿಸ್ಟರ್‌ಗೆ ವಿಷಯ ತಿಳಿಸುತ್ತಾರೆ. ಆಕೆ ಈ ಯುವತಿಯನ್ನು ಹತ್ತಿರ ಕರೆದು ಮಾತಾಡಿಸಿ, ಕೈಯನ್ನು ಪ್ರೀತಿಯಿಂದ ಸವರಿ, ಮೆತ್ತಗೆ ಒಂದು ಮುತ್ತು ಕೊಟ್ಟು, “ಇದು ಕೆಲಸ ಮಾಡುವ ಕೈ. ಇದು ಗಲೀಜಾಗಲು ಸಾಧ್ಯವೇ ಇಲ್ಲ,” ಅಂತ ಹೇಳಿದ್ದೇ ಅವಳಿಗೆ ಸಮಾಧಾನ ಸಿಗುತ್ತದೆ. ಕಿರುಕುಳಗಳು ನಡೆದಾಗ ತಾವೇ ಕೆಟ್ಟುಹೋದೆವು ಎಂಬಂತಹ ಮನೋಭಾವನೆ ಹುಟ್ಟಿಸಿರುವುದೇ ಹೆಣ್ಣುಮಕ್ಕಳ ಬಾಯಿ ಕಟ್ಟಿಹಾಕುತ್ತದೆ.
ಲೈಂಗಿಕ ದೌರ್ಜನ್ಯದ ಕುರಿತು ಮಾತಾಡುವಾಗ ಹೆಚ್ಚಿನ ಸಾರಿ ಒಂದು ಆಂತರಿಕ ಸಮೀಕ್ಷೆ ಮಾಡುತ್ತೇವೆ. ಸಮೀಕ್ಷೆಯ ಸ್ವರೂಪ ಹೀಗಿದೆ; ಎಲ್ಲರ ಕೈಗೆ ಒಂದು ಪುಟ್ಟ ಚೀಟಿ ಕೊಡುತ್ತೇವೆ. ‘ನನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ. ಆದರೆ, ಈಗ ಅದರ ನೆನಪು ಕಾಡುತ್ತಿಲ್ಲ’ ಎಂದಾದರೆ ಚೀಟಿ ಮೇಲೆ ‘ಎ’ ಎಂದು ಬರೆಯಬೇಕು. ‘ನನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ. ಈಗ ನೆನಪಿಸಿಕೊಂಡರೂ ಮನಸ್ಸಿಗೆ ಕಿರಿಕಿರಿ ಆಗುತ್ತದೆ’ ಎಂದಾದರೆ ‘ಬಿ’ ಎಂದು ಹಾಕಬೇಕು. ‘ನನ್ನ ಮೇಲೆ ಲೈಂಗಿಕ ಕಿರುಕುಳ ಈಗಲೂ ನಡೆಯುತ್ತಾ ಇದೆ’ ಎಂದಾದರೆ ‘ಸಿ’ ಎಂದು ಬರೆಯಬೇಕು. ‘ನನ್ನ ಮೇಲೆ ಇದುವರೆಗೂ ಯಾವುದೇ ರೀತಿಯ ಲೈಂಗಿಕ ಕಿರುಕುಳ ನಡೆದೇ ಇಲ್ಲ’ ಎಂದಾದರೆ ‘ಡಿ’ ಎಂದು ಬರೆಯಬೇಕು. ಎಲ್ಲವನ್ನೂ ಒಟ್ಟು ಹಾಕಿ ಎಣಿಸಿದರೆ ಸಾಧಾರಣವಾಗಿ ‘ಎ’ ಮತ್ತು ‘ಬಿ’ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಅಂದಾಜು ಹೇಳುವುದಾದರೆ, ‘ಎ’ ಮತ್ತು ‘ಬಿ’ ಸೇರಿದಂತೆ ಸುಮಾರು ಶೇಕಡ 70ರಷ್ಟು ಇರುತ್ತದೆ. ‘ಸಿ’ ಶೇಕಡ 10ರಷ್ಟು ಇರುತ್ತದೆ; ‘ಡಿ’ ಉತ್ತರಗಳು ಶೇಡಕ 20ರಷ್ಟು ಇರುತ್ತದೆ. ಈ ಸಮೀಕ್ಷೆ ಮಾಡಿದಾಗ, ಎಲ್ಲರಿಗೂ ಈ ಸಮಸ್ಯೆಯ ತೀವ್ರತೆಯ ಅರಿವಾಗುತ್ತದೆ. ಯಾರಿಗೆ ಏನು ಅನುಭವವಾಗಿದೆ ಎಂಬುದು ಗೊತ್ತಾಗದಿದ್ದರೂ ಇದೊಂದು ದಾರುಣವಾದ ಅನುಭವ ಆಗಿರುವುದರಿಂದ, ಸಮೀಕ್ಷೆ ಆದ ಮೇಲೆ ಎಲ್ಲರಿಗೂ ಮನಸ್ಸಿಗೆ ಸಮಾಧಾನ ತರುವ, ಧೈರ್ಯ ತುಂಬುವ ಮಾತಾಡುತ್ತೇವೆ. ಅಷ್ಟೇ ಅಲ್ಲ, ‘ಈಗಲೂ ನಡೆಯುತ್ತಿದೆ’ ಎಂದವರಿಗೆ, ಮನಸ್ಸು ನಿರಾಳವಾಗುವಂತಹ, ಧೈರ್ಯ ತುಂಬುವಂತಹ ಕೆಲವು ಸಲಹೆ, ಸೂಚನೆಗಳನ್ನು ಕೊಡುತ್ತೇವೆ. ಈ ಚಟುವಟಿಕೆ ಬಹಳ ಕಣ್ಣು ತೆರೆಸುವ ಹಾಗೆ ಇರುತ್ತದೆ. ಹೆಣ್ಣುಮಕ್ಕಳಿಗೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ಗೊತ್ತಿರುತ್ತದೆ, ಆದರೆ ತಮ್ಮ ಜೊತೆಜೊತೆಗೇ ಇರುವ ಅಷ್ಟೊಂದು ಮಂದಿಯ ಮೇಲೆ ನಡೆದಿರುವುದು ಗೊತ್ತಿರುವುದಿಲ್ಲ. ಗಂಡುಮಕ್ಕಳಿಗೆ ಈ ಪ್ರಮಾಣದಲ್ಲಿ ಇದು ನಡೆಯುತ್ತಿದೆಯೇ, ನಮ್ಮ ತಂಡದೊಳಗೆಯೇ ಹೀಗಿದೆಯೇ ಎಂದು ಅನಿಸುತ್ತದೆ. ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ.
ಕೆಲವೊಮ್ಮೆ ‘ಇ’ ಅಂದರೆ, ‘ನಾನು ಲೈಂಗಿಕ ಕಿರುಕುಳ ಮಾಡಿದ್ದೇನೆ’ ಎಂಬ ಇನ್ನೊಂದು ಅಂಶ ಕೂಡ ಇಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಗಂಡುಮಕ್ಕಳು, ಹೆಣ್ಣುಮಕ್ಕಳು ಇದ್ದಾಗ ಮಾತ್ರವೇ ಈ ಅಂಶ ಇಡುತ್ತೇವೆ. ಯಾರನ್ನೂ ಗುರುತಿಸುವ ಹಾಗೆ ಆಗಬಾರದು ಎಂಬುದೇ ಇದರ ಉದ್ದೇಶ. ತರಬೇತಿಯ ಪ್ರಕ್ರಿಯೆಯಲ್ಲಿ ಲೈಂಗಿಕ ದೌರ್ಜನ್ಯದ ಕುರಿತಂತೆ ಸಾಕಷ್ಟು ಮಾತುಕತೆ ನಡೆದು ಮನಸ್ಸು ತೆರೆದುಕೊಂಡಿರುವ ಹೊತ್ತಿನಲ್ಲಿ, ಅನೇಕ ಗಂಡುಮಕ್ಕಳು ಚೀಟಿಯಲ್ಲಿ ಗೌಪ್ಯವಾಗಿ ತಾವೂ ಕಿರುಕುಳ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಹಾಗೆ ಒಪ್ಪಿಕೊಂಡವರಿಗಾಗಿ, ಅವರು ಮುಂದೆ ಇಡಬಹುದಾದ ಹೆಜ್ಜೆಗಳ ಬಗ್ಗೆ ಮಾತಾಡುತ್ತೇವೆ. ಇಂತಹ ಚರ್ಚೆಗಳಲ್ಲಿ, ಅನೇಕ ಗಂಡುಮಕ್ಕಳು, ಇಂತಹ ಕಿರುಕುಳಗಳು ತಮಗೆ ಇಷ್ಟವಿರದೆ ಹೋದರೂ ಹೇಗೆ ಸಮವಯಸ್ಕರ ಒತ್ತಡಕ್ಕೆ ಬಲಿಯಾಗುತ್ತಾರೆ; ಹೇಗೆ ಇತರರು ಇಂತಹ ಕಿರುಕುಳದಲ್ಲಿ ತೊಡಗಿರುವಾಗ ತಡೆಗಟ್ಟುವುದಕ್ಕೂ ಹಿಂಜರಿಕೆ ಆಗುತ್ತದೆ ಎಂಬುದನ್ನು ವಿವರಿಸುತ್ತಾರೆ. ಒಬ್ಬಿಬ್ಬರು ತರಬೇತಿ ನಂತರ ನಮ್ಮ ತಂಡದವರಿಗೆ ಕರೆ ಮಾಡಿ, ತಮ್ಮ ತಪ್ಪನ್ನು ನೇರವಾಗಿ ಒಪ್ಪಿಕೊಂಡಿದ್ದು ಕೂಡ ಇದೆ.
ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ದಾರಿಯಲ್ಲಿ ಮೌನ ಮುರಿಯುವುದೇ ಮೊದಲ ಹೆಜ್ಜೆಯಾಗಿದೆ; ಮತ್ತೆ ಹೆಜ್ಜೆಗೆ ಹೆಜ್ಜೆಗಳು ಸೇರಿಕೊಳ್ಳುತ್ತವೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮುಖ್ಯ ವಿಷಯ ಇದು. ಅದನ್ನು ನೀವು ಯಾವುದೇ ಹಿಂಜರಿಕೆ ಇಲ್ಲದೇ ತುಂಬಾ ನೇರವಾಗಿ ಅರ್ಥವಾಗುವಂತೆ ಹೇಳಿದ್ದಿರಿ. 👌👌😊😊
ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ.
ಬೆಚ್ಚಿಬೀಳಿಸುವ ಸಂಗತಿ.
ಎಲ್ಲಾ ಕಲಿಮನೆ(school)ಗಳಲ್ಲಿ ಈ ಬಗೆಯ ಒರೆತ ಆಗಬೇಕು. ಮಕ್ಕಳು ಮುದುಡದಂತೆ ನೋಡಿಕೊಳ್ಳಬೇಕು.
ನಿಮ್ಮ ಅಭಿಪ್ರಾಯ ನಿಜ; ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದವರು ಆಲೋಚಿಸಬೇಕಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.