ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿರುವ ಗುಣಮಟ್ಟ ನಿಯಂತ್ರಣ ಮತ್ತು ಪ್ರಯೋಗಾಲಯದ ವಿಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರು ಬುಧವಾರ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಗುಣನಿಯಂತ್ರಣ ಮತ್ತು ಪ್ರಯೋಗಾಲಯ ವಿಭಾಗದಲ್ಲಿ ಆಗಸ್ಟ್ 11ರಂದು ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ 9 ಸಿಬ್ಬಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಮುಖ್ಯ ಎಂಜಿನಿಯರ್ ಶಿವಕುಮಾರ್ ಮತ್ತು ಜ್ಯೋತಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು.
ಸ್ಫೋಟ ಸಂಭವಿಸಿದ ಬಳಿಕ ಪ್ರಯೋಗಾಲಯದ ಒಳಗೆ ಬೆಂಕಿ ತೀವ್ರವಾಗಿ ಕಾಣಿಸಿಕೊಂಡಿದೆ. ಈ ವೇಳೆ, ಒಳಗಿದ್ದವರು ಹೊರಗೆ ಬರುವುದಕ್ಕೂ ಹರಸಾಹಸ ಪಡಬೇಕಾಯಿತು. ಹೊರಗೆ ಬಂದವರು ಬೆಂಕಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಅಗ್ನಿ ಅವಘಡ | ಕತ್ತಲಾದ ಜ್ಯೋತಿಯ ಬಾಳಿಗೆ ಜೀವ ತುಂಬಲು ಮುಂದಾದ ಪಾಲಿಕೆ
ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡದಿಂದ ಒಟ್ಟು 9 ಮಂದಿಗೆ ಗಾಯವಾಗಿದೆ. ಈ ಪೈಕಿ 2 ಮಹಿಳೆಯರು, 7 ಪುರುಷರಿಗೆ ಗಾಯವಾಗಿದೆ. ಮುಖ್ಯ ಅಭಿಯಂತರರಾದ ಶಿವಕುಮಾರ್ ಅವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲಾಗಿತ್ತು. ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು ಎಂದು ಬಿಬಿಎಂಪಿ ತಿಳಿಸಿದೆ.