- ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಬಿಸಿಸಿಐ
- ಬುಧವಾರದಿಂದ ಆರಂಭವಾಗಲಿರುವ ಏಪ್ಯಾ ಕಪ್ ಟೂರ್ನಿ
ಬುಧವಾರದಿಂದ ಪ್ರಾರಂಭವಾಗಲಿರುವ ಮಹತ್ವದ ಏಷ್ಯಾ ಕಪ್ ಟೂರ್ನಿಯ ಮೊದಲ ಎರಡು ಪಂದ್ಯಗಳಿಂದ ಭಾರತದ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್ ಹೊರಗುಳಿದಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ನಂತರ ತಂಡದಲ್ಲಿ ಹೆಸರಿಸಲಾದ 31 ವರ್ಷದ ಕನ್ನಡಿಗ ಕೆ ಎಲ್ ರಾಹುಲ್, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ ತಂಡವನ್ನು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಮುಖ್ಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಕೆ ಎಲ್ ರಾಹುಲ್ ಸಣ್ಣಪುಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದರು.
“ಕೆ ಎಲ್ ರಾಹುಲ್ ನಮ್ಮೊಂದಿಗೆ ಉತ್ತಮವಾಗಿ ಮುನ್ನಡೆಯುತ್ತಿದ್ದಾರೆ. ಆದರೆ ಕ್ಯಾಂಡಿ ಪ್ರವಾಸದ ಮೊದಲ ಭಾಗಕ್ಕೆ ಅವರು ಅಲಭ್ಯರಾಗುತ್ತಾರೆ” ಎಂದು ಪ್ರವಾಸ ಹೊರಡುವ ಮುನ್ನ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ರಾಹುಲ್ ಟೂರ್ನಿಯಲ್ಲಿ ಭಾಗವಹಿಸುವ ಕುರಿತು ಸೆಪ್ಟೆಂಬರ್ 4 ರಂದು ಕರೆ ನೀಡಲಾಗುವುದು ಎಂದು ದ್ರಾವಿಡ್ ಮಾಹಿತಿ ನೀಡಿದ್ದಾರೆ.
“ಮುಂದಿನ ಕೆಲವು ದಿನಗಳವರೆಗೆ ‘ನ್ಯಾಷನಲ್ ಕ್ರಿಕೆಟ್ ಅಕಾಡೆಮಿ’ ಅವರನ್ನು ನೋಡಿಕೊಳ್ಳುತ್ತದೆ. ಸೆಪ್ಟೆಂಬರ್ 4ರಂದು ಮರುಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಆದರೆ, ಅವರು ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗುತ್ತಾರೆ” ದ್ರಾವಿಡ್ ತಿಳಿಸಿದರು.
ಅಲ್ಲದೇ, ಈ ಬಗ್ಗೆ ಬಿಸಿಸಿಐ ಕೂಡ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಕೆ ಎಲ್ ರಾಹುಲ್ ಲಭ್ಯವಿರುವುದಿಲ್ಲ’ ಎಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮೀಸಲು ಆಟಗಾರನಾಗಿ ಪ್ರವಾಸಗೈಯಲಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಏಷ್ಯಾ ಕಪ್‌ನ ಮೊದಲ ಪಂದ್ಯವು ಬುಧವಾರ ಮುಲ್ತಾನ್‌ನಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ.
ಟೀಂ ಇಂಡಿಯಾ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.