ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ಚೇತರಿಕೆ ಕಂಡಿದ್ದು, ಡಾಕ್ಟರ್ ಪಿ ಸತೀಶ್ ಚಂದ್ರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಪೊಲೊ ಆಸ್ಪತ್ರೆ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಪೊಲೊ ಆಸ್ಪತ್ರೆ, “ಕುಮಾರಸ್ವಾಮಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 30) ಬೆಳಗ್ಗೆ ತಡರಾತ್ರಿ ಆಸ್ಪತ್ರೆ ದಾಖಲಾಗಿದ್ದಾರೆ. ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ” ಎಂದು ತಿಳಿಸಿದೆ.
ಅನಿತಾ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಕುಮಾರಸ್ವಾಮಿ ಅವರು ಆರಾಮವಾಗಿದ್ದಾರೆ. ಊಹಾಪೋಹದ ಸುದ್ದಿಗಳನ್ನ ಹರಡಬೇಡಿ. ರಾಜ್ಯದ ಜನತೆ ಗಾಬರಿಯಾಗೋದು ಬೇಡ. ಯಾರೂ ಸಹ ಆತಂಕಪಡುವುದು ಬೇಡ ನಾಳೆಯೇ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಾನೇ ಬೇಡ ಅಂದಿದ್ದೀನಿ” ಎಂದು ಅನಿತಾ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
“ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಮತ್ತೆ ಓಡಾಟ ಶುರು ಮಾಡ್ತಾರೆ. ತುಂಬಾ ಆರಾಮವಾಗಿ ಇದ್ದಾರೆ, ದಯವಿಟ್ಟು ಸುಳ್ಳುಸುದ್ದಿ ಹರಡೋದು ಬೇಡ” ಎಂದು ಇದೇ ವೇಳೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.