ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟ ಹರಿಹರದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
“ರಾಯಚೂರಿನ ದೀಕ್ಷಾ ಕನ್ಸಲ್ಟೆನ್ಸಿ ಹೆಸರಿನ ಮ್ಯಾನ್ ಪವರ್ ಏಜೆನ್ಸಿಯಡಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕೆಲಸಕ್ಕೆ ಕುತ್ತು ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೊರಗುತ್ತಿಗೆ ನೌಕರರು ಆಗ್ರಹಿಸಿದರು.
“ರಾಯಚೂರು ಮೂಲದ ದೀಕ್ಷಾ ಕನ್ಸಲ್ಟೆನ್ಸಿ ಸಂಸ್ಥೆ ಯಾವುದೇ ತಾರತಮ್ಯವಿಲ್ಲದೇ ಪಾರದರ್ಶಕವಾಗಿ ಕಾರ್ಮಿಕ ಸಿಬ್ಬಂದಿಗಳಾದ ತಮಗೆ ಪ್ರತಿ ತಿಂಗಳು ವೇತನ ನೀಡುತ್ತಿದ್ದಾರೆ. ಸಕಾಲಕ್ಕೆ ಇಎಸ್ಐ ಕಟ್ಟುತ್ತಿದ್ದಾರೆ. ಸಮವಸ್ತ್ರ, ಬ್ಯಾಡ್ಜ್ ಸೇರಿದಂತೆ ಎಲ್ಲ ಸೌಲಭ್ಯ ನೀಡುತ್ತಿದ್ದಾರೆ. ಈವರೆಗೆ ತಮಗೆ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಸಂಸ್ಥೆಯವರು ಯಾವುದೇ ಲೋಪವನ್ನೂ ಎಸಗಿಲ್ಲ” ಎಂದರು.
“ಹರಿಹರದ ಆಶ್ರಯ ಕಾಲನಿಯ ಡಾ. ಬಿ ಆರ್ ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಮತ್ತು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ರಾಯಚೂರು ಮೂಲದ ಏಜೆನ್ಸಿ ಹಾಗೂ ಸಿಬ್ಬಂದಿಗಳ ವಿರುದ್ಧ ದುರುದ್ದೇಶದಿಂದ ಟೆಂಡರ್ ರದ್ದುಪಡಿಸಿ, ಬೇರೆಯವರಿಗೆ ಅವಕಾಶ ಮಾಡಿಕೊಡುವ ಹುನ್ನಾರ ನಡೆದಿದೆ” ಎಂದು ಆರೋಪಿಸಿದರು.
“ತಾವ್ಯಾರೂ ಯಾವುದೇ ದೂರು ಪತ್ರಕ್ಕೆ ಸಹಿ ಹಾಕದಿದ್ದರೂ, ತಮ್ಮ ಸಹಿಗಳನ್ನು ಸೃಷ್ಟಿಸಿಕೊಂಡು, ಮೆ.ದೀಕ್ಷಾ ಕನ್ಸಲ್ವೆನ್ಸಿ ಸಂಸ್ಥೆ ವಿರುದ್ಧ ಮತ್ತು ದಾವಣಗೆರೆ ಶಾಖೆಯ ಸಿಬ್ಬಂದಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಬೇರೆ ಸಂಘಟನೆಗಳಿಂದಲೂ ಇದೇ ರೀತಿ ದೂರು ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವೆಲ್ಲರೂ ಹೊಟ್ಟೆಪಾಡಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್, ನಾನ್ ಕ್ಲಿನಿಕಲ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಬರುವ ತಿಂಗಳ ಸಂಬಳದಲ್ಲೇ ಜೀವನ ನಿರ್ವಹಿಸಬೇಕಾಗಿದೆ” ಎಂದು ತಿಳಿಸಿದರು.
“ಒಂದು ವೇಳೆ ಯಾವುದೇ ಸಂಘಟನೆಯಿಂದ ಬರುವ ದುರುದ್ದೇಶಪೂರಿತ ದೂರಿನ ವಿಷಯಗಳು ಅಥವಾ ಸಂಗತಿಗಳನ್ನು ಜಿಲ್ಲಾಡಳಿತ, ಸರ್ಕಾರ ಮಾನ್ಯ ಮಾಡಿದರೆ ನಮಗೆಲ್ಲರಿಗೂ ಏನಾದರೂ ತೊಂದರೆಯಾಗಿ, ನಿರುದ್ಯೋಗಿಗಳಾದರೆ ಕುಟುಂಬ ಸಮೇತ ತೀವ್ರ ಸಂಕಷ್ಟಕ್ಕೆ ಸಿಲುಕುತ್ತೇವೆ. ಈಗ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಒಂದು ಹೊತ್ತಿನ ಊಟಕ್ಕಾಗಿ ಹಗಲಿರುಳು ದುಡಿಯುತ್ತಿದ್ದೇವೆ. ಕಾರ್ಮಿಕರ ಅನ್ನವನ್ನು ಕಸಿಯುವ ಕೆಲಸ ಮಾಡುತ್ತಿರುವ ಹಾಗೂ ನಮ್ಮೆಲ್ಲರ ಹೆಸರನ್ನು ದುರುಪಯೋಗಪಡಿಸಿಕೊಂಡು ನಮ್ಮ ಕೆಲಸಕ್ಕೆ ತೊಂದರೆ ಉಂಟುಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆ ಗುತ್ತಿಗೆ ನೌಕರರುಗಳಾದ ತಿಪ್ಪೇಸ್ವಾಮಿ, ನಿರ್ಮಲಮ್ಮ, ಲಲಿತಮ್ಮ, ಸುರೇಶ, ಸುಧಾ, ರತ್ನಮ್ಮ, ಎಚ್ ಡಿ ಸುರೇಂದ್ರ, ಉಮೇಶ, ರತ್ನಮ್ಮ, ನಿಂಗರಾಜ, ಪಿ.ನವೀನ, ಎಚ್ ದೇವರಾಜ, ಮಣಿಕಂಠ, ಎಚ್ ರೇಣುಕಮ್ಮ, ಸಿ ವೀರೇಶ, ಕರಿಬಸಪ್ಪ, ಅನುಕುಮಾರ, ಜಯಮ್ಮ, ಆರ್ ತಿಪ್ಪೇಶ ನಾಯ್ಕ, ಎ ರೂಪಾ, ಶಕುಂತಲಮ್ಮ, ಎಚ್ ರುದ್ರಪ, ಆರ್ ಮಧು, ಬಿ ಸೋಮೇಶ್ವರ, ಟಿ ಪರಮೇಶ, ಬಿ ಶಂಕರ, ಬಿ ನವೀನ, ಅರುಣ, ದುರುಗಮ್ಮ, ಕೆ ಜಿ ವಿಶಾಲ, ಡಿ ರತ್ನಮ್ಮ, ಎನ್ ಎಚ್ ಮಂಜುಳಾ ಸೇರಿದಂತೆ ಇತರರು ಇದ್ದರು.