ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ನಿರಂತರವಾಗಿ ಎದುರಿಸುತ್ತಿದ್ದ ಮಡಿಕೇರಿ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕಿ ಗೀತಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಡಿಕೇರಿ ಡಿಪೋದಿಂದ ಅವರನ್ನು ಹಾಸನ ಜಿಲ್ಲೆಯ ರಾಮನಾಥಪುರ ಡಿಪೋಗೆ ವರ್ಗಾವಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಿಡಿಸಿದೆ.
ಗೀತಾ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೊಹಮ್ಮದ್ ಅಲಿ ಅವರನ್ನು ಪ್ರಭಾರ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಎಂಟು ವರ್ಷಗಳಿಂದ ಮಡಿಕೇರಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಗೀತಾ ರವರ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದವು. ಹಿಂದಿನ ಸರ್ಕಾರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೂ, ಅಂದಿನ ಸ್ಥಳೀಯ ಶಾಸಕರ ನೆರವು ಪಡೆದು ಮಡಿಕೇರಿಯಲ್ಲಿಯೇ ಉಳಿದಿದ್ದರು.
ಇದೀಗ, ಬುಧವಾರ ಡಿಪೋದ ಕಿರಿಯ ಸಹಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ತಮ್ಮ ಈ ಸ್ಥಿತಿಗೆ ಗೀತಾ ಅವರೇ ಕಾರಣ ಎಂದು ಆರೋಪಿಸಿದ್ದರು. ಈ ಬೆನ್ನಲ್ಲೇ ಗೀತಾ ಅವರನ್ನು ವರ್ಗಾವಣೆ ಮಾಡಲಾಗಿದೆ.