ನೀಗೊನಿ | ಅಯ್ಯನ ಕಣ್ಣಿಗೆ – ಅಲ್ಸಣ್ಣೊಳ್ಗೆ ಹಣ್ಣೆಲ್ಲ ನರ್ಸಿ, ಅಂಟೆಲ್ಲ ನಾಗಮ್ಮ…!

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಅಯ್ಯ ಹೇಳ್ದಂಗೆ ಗಾಡಿ ಕಟ್ಟಿ ಕೋಡಿ ಕಾಯ್ತಾ ನಿಂತ. ಮನೆ ಒಳಗಡೆ ಅಯ್ಯ-ಅಮ್ಮೋರ್ದು ಇಬ್ರೂದು ಮಾತು ಜೋರ್ಜೋರಾಗೆ ನಡಿತಿತ್ತು. "ತ್ಥೋ… ಇವ್ರ ಜಗ್ಳ ಮುಗ್ಯೋದ್ರಾಗೆ ನಾನ್ ತಿನ್ಕಬಿಡ್ಬೋದಿತ್ತಲ್ಲ, ಯೇಟೊತ್ತಿಗೆ ಮುಗಿತದೋ," ಅಂದ್ಕಂಡು ಕಾಯ್ದ...

ಭಾಗ – 6

ಹ್ವಾದಹ್ವಾದಲ್ಲೆಲ್ಲಾ ಈ ನೀಗೊನಿಯದೇ. ಈ ನೀಗೊನಿದು ಏನಾದ್ರೂ ಇಸೇಸ ಇದ್ಯಾ… ನೀಗೊನಿ ಎತ್ರುದಲ್ಲಿ ಇರ್ವ ಹಳ್ಳಿ. ಸುಮಾರು ನೂರೈವತ್ತು ಇನ್ನೂರು ವರ್ಸುಗ್ಳಿಂದೆ ಕಟ್ಕೊಂಡಿರೋ ಹಳ್ಳಿ. ಸುತ್ಮುತ್ ಮೂವತ್ತಳ್ಳಿಗೆ ಎದ್ಕಾಣಂಗೆ ನಿಂತಿತ್ತು. ಸುತ್ತೆಲ್ಲ ಆಳೆತ್ತರ್ದ ಗಿಡ್ಗಳು, ಆಕಾಸ ಮುಟ್ಸೋ ಮರ್ಗಳಿಂದ ಆವರಿಸಿ ಎತ್ರುದಲ್ಲಿ ನಿಂತು ದೂರ್ದಲ್ಲಿರೋರ್ಗೆ ಕೈಬೀಸಿ ಕರೆವ ನೆಂಟುಸ್ನಂತೆ ಕಾಣ್ತಿತ್ತು. ಜಯ್ಮಂಗ್ಲಿ ನದಿ ದೇವ್ರಾಯ್ನದುರ್ಗದಲ್ಲಿ ಹುಟ್ಟಿ ದುರ್ಗದಳ್ಳಿ, ಅನುಪ್ನಳ್ಳಿ ಹಳ್ಳದಾಗೆ ತುಂಬಿಹರ್ದು ಬರೋದು ಒಂದ್ಕಡೆಯಾದ್ರೇ, ದುರ್ಗದನಾಗೇನಳ್ಳಿ ತವಾಸಿ ಬಳುಸ್ಕಂಡು ನೀಗೊನಿಯ ಒನ್ಪರ್ಲಾಂಗು ದೂರ್ದಾಗೆ ಕೂಡ್ಕಂಡಾಗ ಬಾಳೆಗೊನಿ ತರಾ ತರ್ವ ತರ್ವಾಗಿ ಹರಿತಿತ್ತು. ನೀಗೊನಿ ಎಡ್ಗಡಿಕ್ಕೆ ಕೆಳ್ಗೆ ತುಂಬಿ ಹರಿವ ಜಯ್ಮಂಗ್ಲಿ. ಜಯ್ಮಂಗ್ಲಿ ತರ್ವತರ್ವಾಗಿ ಹರ್ಯೋ ಕಾರಣಕ್ಕೋ ಏನೋ ಈ ಊರಿಗೆ ಈ ಹೆಸರು ಬನ್ದಿರಬಹುದು. ಎಲ್ಡ್ ಕಡಿಂದ ಜಯ್ಮಂಗ್ಲಿ ಸೇರ್ತಿದ್ರಿಂದ ಏನೋ ಈ ಊರ್ಗೆ ನೀರಿನ ಗೊನಿ, ನೀರ ತನಿ ಅನ್ತ ಕರಿತಿದ್ರೇನೋ. ಮಳ್ಗಾಲ ಬಂತೆಂದರೆ ಜಯ್ಮಂಗ್ಲಿ ಉಕ್ಕರಿತ್ತಿತ್ತು. ನೀಗೊನಿ ಎತ್ರುದಲಿ ಇದ್ದುರಿಂದ ಜಯ್ಮಂಗ್ಲಿ ಎಷ್ಟೇ ಪಡಿಪಾಟ್ಲು ಪಟ್ರು ನೀಗೊನಿನಾ ಮುಟ್ಟಕ್ಕಾಗ್ತಿರ್ಲಿಲ್ಲ. ಉದ್ದುದ್‍ನಾಲ್ಗೆ ಹಾಸುದ್ರೂ ನೀಗೊನಿ ಎಟುಕ್ತಿರಲಿಲ್ಲ. ಆದ್ರೂ ಕಾಯ್ತಲೇ ಇರದು ನೀಗೊನಿನಾ ನುಂಗ್ಬೇಕನ್ತಾ… ಆಗಿರ್ಲಿಲ್ಲ. ಬ್ಯಾಸ್ಗೆ ಕಾಲದಲ್ಲಿ ಯಾವ್ದೇ ಸಿಟ್ಟು, ಸೆಡವುಗಳಿಲ್ಲದೆ ತನ್ನ ಪಾಡಿಗೆ ತಾನು ಹರಿತ್ತಿತ್ತು ಜಯ್ಮಂಗ್ಲಿ. ಹರಿತ್ತಿದ್ದ ಜಾಡಲ್ಲಿ ಗಿಡ್ಮರಗಳೆಲ್ಲ ಬೆಳ್ದು ಸುತ್ಮುತ್ತೆಲ್ಲ ದೊಡ್ಡ ವನಂತ್ರವೇ ಆಗೋಗಿತ್ತು. ನೀಗೊನಿಯ ಮೂಡ್ಲು ಕಡಿಕೆ ಈ ಜಯ್ಮಂಗ್ಲಿನೇ ಎಲ್ಮರೆಯಾಗ್ಬಿಟ್ಟಿತ್ತು. ಅದ್ನ ದಾಟಿ ಆ ಕಡಿಕೆ ಹೋಗೋದು ಕಷ್ಟವೇ ಆಗಿತ್ತು. ನೀಗೊನಿಯಾಚ್ಗೆ ಮರ್ಗಳಿಂದ ಕೂಡಿದ್ದ ವನಾನ್ತ್ರ, ಅದ್ನೂ ಯಂಗಾದ್ರೂ ದಾಟುದ್ರೆ ಸದಾ ಬೋರ್ರನೆ ಹರಿವ ಈ ಜಯ್ಮಂಗ್ಲಿ. ಇದ್ನೆಲ್ಲ ದಾಟೋಗೋದು ಕಸ್ಟವಾಗಿತ್ತು ಈ ನೀಗೊನಿಯೋರ್ಗೆ. ಅಂಗೂ ಹೋಗ್ಬೇಕಾದ್ರೇ ಬಿದ್ರು ಬೊಂಬ್ಗಳ ತೆಪ್ದಾಗೆ ತೇಲ್ಬೇಕಿತ್ತು. ಇಲ್ಲ ಅಂದ್ರೇ ಬ್ಯಾಸ್ಗೆ ತಂಕ ಕಾಯ್ಬೇಕಿತ್ತು. ಅದ್ಕೋ ಏನೋ, ಮೂಡ್ಲು ಕಡಿಕೆ ನೆಂಟುಸ್ತನಗಳು ಹೆಚ್ಚು ಬೆಳ್ದಿರಲಿಲ್ಲ. ಮಳೆಗಾಲ್ದಾಗೆ ಹೋಗ್ಲೇಬೇಕಂದ್ರೇ ದಕ್ಸಣದ್ ಕಡೆ ಇರೋ ವಡ್ರಳ್ಳಿ ತಾವಾಸಿ ಹೋಗಿ, ಅಲ್ಲಿಂದ ಜಯ್ಮಂಗ್ಲಿ ಎಡ್ಕೆ ಬಿಟ್ಕಂಡು ಬೈಚರಳ್ಳಿ ತಾವಾಸಿ ವೀರಕ್ಕಸಮುದ್ರ್ರ ತಲುಪಬೇಕಿತ್ತು. ಅಲ್ಲಿಂದ ರಾಮ್ಪುರ… ಇಂಗೇ ಮುಂದಕ್ಕೆ ಹೋಗ್ಬೇಕಿತ್ತು. ಸುತ್ಬಳ್ಸು. ಇಷ್ಟೆಲ್ಲ ತಾಡಪಡಿ ಯಾಕೆ ಅಮ್ತಾ ಯಾರೂನೂ ಮೂಡ್ಲು ಕಡಿಕೆ ಯಾವ್ದೇ ಯವಾರ ಇಟ್ಕಂಡಿರ್ಲಿಲ್ಲ. ಎಲ್ಲಾನೂ ಈ ಕಡಿಕೆ ನಡಿತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾಗ – 7

ಅಯ್ಯ ಹೇಳ್ದಂಗೆ ಗಾಡಿ ಕಟ್ಟಿ ಕೋಡಿ ಕಾಯ್ತಾ ನಿಂತ. ಮನೆ ಒಳಗಡೆ ಅಯ್ಯ-ಅಮ್ಮೋರ್ದು ಇಬ್ರೂದು ಮಾತು ಜೋರ್ಜೋರಾಗೆ ನಡಿತಿತ್ತು. “ತ್ಥೋ… ಇವ್ರ ಜಗ್ಳ ಮುಗ್ಯೋದ್ರಾಗೆ ನಾನ್ ತಿನ್ಕಬಿಡ್ಬೋದಿತ್ತಲ್ಲ, ಯೇಟೊತ್ತಿಗೆ ಮುಗಿತದೋ,” ಅಂದ್ಕಂಡು ಕಾಯ್ದ. ಯೇಟೋ ಹೊತ್ತಾದ್ಮೇಲೆ ಅಯ್ಯ ಬಂದ್ರು. “ಕೋಡಿ ಜಾಸ್ತಿ ವಟ್ಟೆ ಅಸಿತದೇನೋ?” “ಇರ್ಲಿ ಅಯ್ಯ ಹೋಗಾನಾ…” “ಸರಿ… ಅಲ್ಲಿ ಅಲ್ಸನ್ನಣ್ಣು ಇದ್ಯಲ್ಲ, ಎರಡನ್ನೂ ಗಾಡಿ ಒಳ್ಕಾಕ, ತಿಮ್ಕಮ್ತ ಹೋಗಾನ,” ಎಂದ್ರು ಅಯ್ಯ. ಅವ್ರಗು ಹಸ್ವಾಗಿತ್ತು. “ಆಯ್ತು…” ಅಮ್ತಾ ಕೋಡಿ ಹಣ್ಗಳ್ನ ಒಳ್ಗ ಹಾಕ್ಕಂಡು, ಗಾಡ್ಗೆ ಈಚ್ಲು ಸಾಪೆ ಹೊದ್ಸಿ, ಕೆಳಕ್ಕೆ ನೆಲ್ಲುಲ್ಲು ಹಾಕಿ ಮೆತ್ಗೆ ಮಾಡ್ದ. ಗಾಡಿ ಮ್ಯಾಲೆ ಕಮಾನಾಗಿ ಬಿದ್ರುಗಳ್ದಿಂದ ಬಾಗ್ಸಿ, ಅದ್ಕೆ ಗರಿಸಾಪೆನ ಕಟ್ಟಿ ಒಳಕ್ಕೆ ಬಿಸ್ಲು, ಮಳಿ ಬೀಳ್ದಂಗೆ ವಪ್ಪಾರನೂ ಕಟ್ಟಿದ್ದ ಕೋಡಿ. “ಲೇ ಕೋಡಿ… ಮಳೆ ಬ್ಯಾರೇ ಬತಿದೆ. ಈ ಮಳ್ಗೆ ಕಾಲ-ಅಕಾಲ ಅಂಬೋದೇ ಇಲ್ಲ. ದಾರಿಬಟ್ಟೆ ಹ್ಯಂಗಿರ್ತದೋ… ಒಂದೈದಾರು ಸೂಡಿಗಳ್ನ ತಗೋಳೋ – ಯಾವ್ದುಕ್ಕೂ ಇರ್ಲಿ,” ಎನ್ದು… “ಯಿನ್ನೂ ಉಗಾದಿ ಮೊನ್ನೆ-ಮೊನ್ನೆ ಮುಗ್ದಿದೆ. ಆಗ್ಲೇ ಸುರ್ವಾಗಿದೆ ಮಳಿ,” ಎನ್ದೇನೋ ಮನಸ್ನಾಗೇ ಹೇಳ್ಕೊತ್ತಿದ್ರು ಅಯ್ಯ. ಕೋಡಿಗೆ ಅಯ್ಯನ ಮಾತು ಸರಿ ಅನ್ಸುತು. ದನ್ದ ಕೊಟ್ಗೆಗೆ ಹೋಗಿ, ಬಿಡುವಿದ್ದಾಗ ತೆಂಗಿನ್ಗರಿಗಳಿಂದ ಮಾಡಿದ್ದ ಸೂಡಿಗಳನ್ನೆತ್ತಿ ನೆನಿದಂಗೆ ಗಾಡಿ ಕೆಳ್ಗೆ ಬದಿಯಲ್ಲಿ ಕಟ್ಟಿದ. ಅಂಗೇ ಕೊಟ್ಗೆಲಿನ ಬೆಂಕಿಂದ ಸೂಡಿಯನ್ನು ಹಚ್ಕೊಂಡು ಗಾಡ್ಗೆ ಕಟ್ದ. ಅಯ್ಯ ಸ್ವಲ್ಪ ಹರ್ಸದಿಂದ, ಸ್ವಲ್ಪ ಮುನಿಸ್ನಿಂದ ಗಾಡಿ ಹತ್ತಿದರು.

ಕೋಡಿ ಗಾಡಿಯಿಂದ್ಕೆ ಈಚ್ಲು ಸಾಪೆ ಕೆಳಕ್ಕಿಳಿಬಿಟ್ಟ ಒಳ್ಕೆ ನೀರ್ಬರ್ದಂಗೆ. ಎತ್ಗುಳು ನೊಗ ಹೊತ್ತು ನಿಂತಿದ್ವು. ಅವ್ಗುಳ ಕೊಂಬಿಗೆ ಎಣ್ಣೆ ತೀಡಿ, ತುದಿಗೆ ಸಣ್ಣ-ಸಣ್ಣ ಗೆಜ್ಜೆ ಕಟ್ಟಿದ್ದ ಕೋಡಿ. ಆ ಮೈಲಗ್ಳು ಎದ್ದು ಕಾಣಂಗೆ ಎತ್ರುವಾಗೇ ಇದ್ವು. ಬಾಗಿದ ಎದ್ರುಬದ್ರುವಾಗಿರೋ ಎಲ್ಡು ಕೊಂಬ್ಗಳು ಎತ್ಗುಳ್ನ ಇನ್ನಷ್ಟು ಎತ್ರ ಮಾಡಿದ್ವು. ಬೆಳ್ಗಿರೋ ಹಣೆ ಮ್ಯಾಲೆ ಕೆಂಪ್ನಾಮ ಗೆರೆ ಕೊಯ್ದು, ಕೊಳ್ಗೆ ಕುರಿದಾರ ಕಟ್ಟಿದ್ದ ದುಷ್ಟಿ ಆಗ್ದಿರ್ಲಿ ಅಂತ. ಆ ಕುರಿದಾರ್ಕೆ ಗಂಟೆ ಕಟ್ಟಿದ್ದರಿಂದ ಸುತ್ಮುಮುತ್ಗೆಲ್ಲ ಕರೆ ಕಳಿಸುತ್ತಿತ್ತು. ಅದು ಆ ಕಡಿಕ್ಕೆಲ್ಲ ಪರ್ಚಿತವಾದ್ರಿಂದ ಸಲೀಸಾಗಿ ಹೋಗ್ಬೋದಿತ್ತು. ಕಪ್ಪಟ್ಟೆ ಕತ್ಲುರಾತ್ರಿಯಾದ್ರುನೂ ಗಳ್ಗಂಟೆ ಸಬ್ದುವೇ ಹಾದಿ ತೋರುಸ್ತಿತ್ತು. ದಾರಿ ಉದ್ಕೂ ಕಪ್ಪಟ್ಲೆ ಕತ್ಲು, ತೊಟ-ತೊಟ ತೊಟಿಕ್ಕುತಿರೋ ಹನ್ಗಳಿಂದ ದೂರ್ದೊರ್ಗು ಗಂಟೆ ಮಳೆ ಜೊತೆಲಿ ನಡಿತಿದ್ವು. ಮಳೆಗಾಳಿಗೆ ಎದ್ರದೆ ಸಣ್ಗೆ ಉರಿತಿದ್ದ ಸೂಡಿ ಹಾದಿ ತೋರುಸ್ತಿತ್ತು. ಅದ್ರಿಂದ ಬರ್ತಿದ್ದ ಕಾವು ಗಾಡಿವೊಳ್ಗೆ ಬೆಚ್ಗಿಟ್ಟಿತ್ತು. ಅಯ್ಯನ ಮಕನ ಕೆಂಪು ಮಾಡಿತ್ತು. ಮೊದ್ಲೇ ಕೆಂಪ್ಗೆ ಮಾರಿ ಹೊತ್ತಿದ್ದ ಅಯ್ಯ ಯೀಗ ಇನ್ನಷ್ಟು ಕೆಂಪಾಗಿದ್ರು. ನೀಳವಾದ ಮೂಗಿನ ತುದಿ ಅದ್ರ ಕೆಳ್ಗೆ ಒತ್ತುತ್ತಾಗಿ ಸುರುಳಿಯಾಕಾರದ ಕೂದ್ಲು ದಸ್ಟಪುಸ್ಟವಾಗಿ ಬೆಳ್ಕಂಡಿದ್ವು. ಬೆಳ್ಗೆ ತಾನೇ ಹಜಾಮ್ರ ಈರ ಬಂದು ಕೆನ್ನೆ ಮ್ಯಾಲೀನ ಕೂದ್ಲನಾ ತಗ್ದುಹೋಗಿದ್ದ. ಅದ್ಕೆ ಸೂಡಿಯ ಬೆಳ್ಕಲ್ಲಿ ಮತ್ತಷ್ಟು ರಂಗೊಳ್ಸುತಿದ್ರು. ಮೂಗ್ನ ಮೇಲೆ ಬಿಳಿಯ ಕಣ್ಗಳ ನಡ್ವೆ ಕರಿಗುಡ್ಡೆಗಳು – ನೋಡೋರ್ಗೆ ನಡುಕ ಹುಟ್ಸಂಗೆ ಕಾಣ್ತಿದ್ವು. ಅದ್ರ ಮ್ಯಾಲೇ ವಿಶಾಲವಾದ ಹಣೆ. ಹಣ್ಗೆ ಅಂಟ್ಕಂಡಂತೆ ಸುತ್ಕಂಡಿದ್ದ ಪೇಟ ಅಯ್ಯನ ಸುಂದ್ರಂಗನಾಗ್ಸಿತ್ತು.

ಮನಿಂದ ವಲ್ಟಾಗ ಅಯ್ಗಳ ಮೊಕ ಕೆಂಪುಕೆಂಪಾನೆ ರಕುತದಲ್ಲಿ ಅದ್ದಂಗೆ ಇದ್ದುದ್ದು ಊರ್ನ ಹಿಮ್ಬಾಸಿಗೆ ಬಂತಕ್ಷಣ ತಿಳಿಮೋಡವಾಯ್ತು. ಉತ್ರುದ್ ಕಡೆ ಇರೋ ಹಾದೀಲಿ ನಡೀತಾ ನಡೀತಾ… ಮುದ್ಮಲ್ಲಯ್ಯನಗುಂಡಿ ದಾಟಿ, ಬಾರೆ ಹತ್ತಿದ ಚಣದಲ್ಲೇ ಸಿಟ್ಟೆಲ್ಲಾ ಮೋಡ್ದಿಂದ ನೀರು ಇಳ್ದಂಗೆ ಇಳ್ದು ತಂಪಾಗೋಯ್ತು. ಸುತ್ಮುತ್ತೆಲ್ಲಾ ನೀರರ್ದು ಹರ್ದು ಹಾದಿನೇ ಮುಚ್ಚೋಗಿತ್ತು. ಎತ್ಗುಳ್ಗೆ ಹಾದಿ ಗೊತ್ತಿದ್ರಿಂದ ಅಷ್ಟೇನೂ ತೊಂದ್ರೆ ಇಲ್ದೇನೆ ನಡಿತಿದ್ವು. ಅಲಟ್ಟಿ ಬಾರೆಯಿಂದ ಹರ್ದು ಬರ್ತಿರೋ ನೀರು ಮುದ್ಮಲ್ಲಯ್ಯನಗುಂಡಿ ತುಂಬ್ಸಿಬಿಟ್ಟಿತ್ತು. ಯಾವಾಗ್ಲೋ ಮುದ್ಮಲ್ಲಯ್ಯ ಹಸು-ಕರು ಕುಡಿಲಕ್ಕೆ ಅಂತ ಕಟ್ಟಿದ್ದ ಗುಂಡಿ ಅದು. ನೀರು ತುಂಬಿ-ತುಂಬಿ ಅದು ದೊಡ್ಡ ಕೆರೆಯಂಗೇ ಆಗೋಗ್ಬಿಟ್ಟಿತ್ತು. ನೀಗೋನಿಯ ಉತ್ರುಕ್ಕೆ ಈ ಮುದ್ಮಲ್ಲಯ್ಯನ ಗುಂಡಿಯೇ ಕೊನೆ. ಅಲ್ಲಿಂದ ಮ್ಯಾಲ್ಕಿರುವ ದೊಡ್ಡ ಗುಡ್ಡ ಆ ನೀಗೋನಿನ ಕೋಟೆಯಂತೆ ಮುಚ್ಚಿಕೊಂಡಿತ್ತು. ಅದ್ನ ತಟಾದ್ರೇ ನೀಗೋನಿನೇ ಕಾಣ್ತಿರ್ಲಿಲ್ಲ. ಇಲ್ನೋಡುದ್ರೇ ಮ್ಯಾಲ್ಗಡೆ ಮಳೆ ಜೋರಾಗಿರೋದ್ಕೆ ಮುದ್ಮಲಯ್ಯನ ಗುಂಡಿ ತುಂಬಿ ಗ್ಯಾರಳ್ಳ ದಾಟಿ ಜಯ್ಮಂಗ್ಲಿ ಕಡ್ಕೆ ನೀರರಿತಿತ್ತು. ಓಡಾಡಿ ಸಣ್ಣ ಜಾಡಾಗಿದ್ದ ಆ ಹಾದೆಗೆ ಗಾಡಿ ಉಳ್ಳುತ್ತಿತ್ತು. ಎತ್ಗುಳ್ನ ಕೋಡಿ ಹಾದಿ ಹುಡಿಕ್ಕೊಂಡು ನಡುಸ್ತಿದ್ದ. ಒಳ್ಗಡೆ ಅಯ್ಯ ಕೋಪ ಇಳ್ದ ಮೇಲೆ ಅಲ್ಸನ್ನಣ್ಣನ್ನಾ ಕುಯ್ಯೋಕ್ ಸುರುಮಾಡ್ಕಂಡ್ರು… ಸುಲ್ದು-ಸುಲ್ದು ಕೋಡಿಗೂ ಕೊಡ್ತಾ, ತಾವು ತಿನ್ತಾ ಇದ್ರು. ಅಲ್ಸಣ್ಣೊಳ್ಗೆ ಹಣ್ಣೆಲ್ಲಾ ನರ್ಸಿಯಾಗಿ, ಅಂಟ್ನೆಲ್ಲ ನಾಗಮ್ಮನ್ನಾಗಿ ಕಾಣ್ತ ಇದ್ರು ಅಯ್ಯ…

…ಮುಂದುವರಿಯುವುದು

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಕಲಾಕೃತಿ ಕೃಪೆ: ಎಡ್ಸನ್ ವ್ಯಾಲಿ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...