- ಬೆಂಗಳೂರು ಓನ್, ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ತಿದ್ದುಪಡಿ ಸೌಲಭ್ಯ
- ಹೊಸ ಪಡಿತರ ಕಾರ್ಡಿಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಕಲ್ಪಿಸದ ಸರ್ಕಾರ
ರಾಜ್ಯದಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ ದೊರಕುವ ‘ಗೃಹ ಲಕ್ಷ್ಮಿ’ ಯೋಜನೆ ಜಾರಿಗೆ ಬಂದಿರುವ ನಡುವೆಯೇ ಸರ್ಕಾರ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಇಂದಿನಿಂದ(ಸೆ.1) ಅವಕಾಶ ಕಲ್ಪಿಸಿದೆ.
ಆದರೆ, ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಯಾವಾಗ ಅನುಮತಿ ನೀಡುತ್ತದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ.
ಈಗಾಗಲೇ ಬಿಪಿಎಲ್ ಕಾರ್ಡ್ಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸರ್ಕಾರ ಇನ್ನೂ ವಿಲೇವಾರಿ ಮಾಡಿಲ್ಲ. ಇದರ ಮಧ್ಯೆ ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳಾಗಲು ಬಿಪಿಎಲ್ ಕಾರ್ಡ್ಗಾಗಿ ಜನರು ಮುಗಿ ಬೀಳುತ್ತಿದ್ದಾರೆ.
ಕಾರ್ಡ್‌ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರಿಂದ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ 2000 ರೂ. ಗೃಹಲಕ್ಷ್ಮೀ ಯೋಜನೆಯಿಂದ ಹಲವರು ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಇಂದಿನಿಂದ(ಸೆ.1) ಅವಕಾಶ ಕಲ್ಪಿಸಿದ್ದು, ಸೆ.10ರವರೆಗೆ ಈ ಸೇವೆ ಲಭ್ಯವಿರಲಿದೆ.
ಸದ್ಯದ ಆಹಾರ ಇಲಾಖೆಯ ನಿಯಮದ ಪ್ರಕಾರ ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನ ಎನ್ನುವ ಕಲ್ಪನೆಯನ್ನು ತೆಗೆದು ಹಾಕಲಾಗಿದ್ದು, ‘ಯಜಮಾನಿ’ಗೆ ಅವಕಾಶ ಕಲ್ಪಿಸಲಾಗಿದೆ. ಕುಟುಂಬ ಸದಸ್ಯರ ಪೈಕಿ ಯಾರು ಹಿರಿಯ ಮಹಿಳೆ ಇರುತ್ತಾರೋ ಅವರ ಆಧಾರ್ ಕಾರ್ಡಿನ ವಿವರಗಳನ್ನು ಹಾಕಿದಾಗ ರೇಷನ್ ಕಾರ್ಡ್ ‘ಆಟೊಮ್ಯಾಟಿಕ್’ ಆಗಿ ಹಿರಿಯ ಮಹಿಳೆಯ ಹೆಸರಿಗೆ ‘ರಿಜಿಸ್ಟರ್’ ಆಗುತ್ತಿತ್ತು.
ಆಹಾರ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡಿನಲ್ಲಿ ಪುರುಷರೇ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಬದಲಾವಣೆ ಮಾಡಲು ಈ ಮೊದಲೇ ಸೂಚಿಸಲಾಗಿತ್ತಾದರೂ ಹಲವು ಮಂದಿ ಇನ್ನೂ ಮಾಡಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿಯ ಫಲಾನುಭವಿ ಆಗಬೇಕಾದರೆ ಬದಲಾಯಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಹೀಗಾಗಿ ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಏನೆಲ್ಲಾ ಬದಲಾವಣೆಗೆ ಅವಕಾಶ?
ರೇಷನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಯೋರ್ವರು, “ರೇಷನ್ ಕಾರ್ಡ್ ತಿದ್ದುಪಡಿಗೆ ಇಂದಿನಿಂದ ಸೆ. 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ವನ್ ಹಾಗೂ ಕರ್ನಾಟಕ ಒನ್, ಮಂಗಳೂರು ಒನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಇದೆ” ಎಂದು ತಿಳಿಸಿದರು.
“ಹೊಸ ಪಡಿತರ ಚೀಟಿಗೆ ಅವಕಾಶ ಕಲ್ಪಿಸಿದ್ದಾರಾ ಎಂದು ಕೇಳಿಕೊಂಡು ದಿನಂಪ್ರತಿ ನೂರಾರು ಜನ ಕಚೇರಿಗೆ ಬರುತ್ತಿದ್ದಾರೆ. ಸರ್ಕಾರ ಯಾವಾಗ ಅದಕ್ಕೆ ಅನುಮತಿ ನೀಡುತ್ತದೆ ಎಂಬ ಬಗ್ಗೆ ಇನ್ನೂ ಇಲಾಖೆಯ ಹಿರಿಯ ಅಧಿಕಾರಿಗಳಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಸದ್ಯಕ್ಕೆ ತಿದ್ದುಪಡಿಗೆ ಮಾತ್ರ. ಇದರ ಅವಕಾಶವನ್ನು ಜನ ಬಳಸಿಕೊಳ್ಳಬೇಕು” ಎಂದು ಮಾಹಿತಿ ನೀಡಿದರು.