ರಾಜ್ಯ ರಾಜ್ಯಗಳ ನಡುವೆ ಅಸಮತೆ ಜೋಕಾಲಿ-ದೇವನೂರ ಮಹಾದೇವ

Date:

ಇಂದೂ ಕೂಡ ಜಾಗತೀಕರಣದ ಸೋಂಕು ರೋಗದ ಈ ಟ್ರಿಕಲ್‍ಡೌನ್ ಮೇಲಿಂದ ತೊಟ್ಟಿಕ್ಕುವ ಥಿಯರಿಗೆ ಜೋತು ಬಿದ್ದ ಭಾರತದ ಆರ್ಥಿಕ ತಜ್ಞರು ಹಾಗೂ ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ನೇತಾಡುತ್ತ ತೇಲಾಡುತ್ತಿದೆ. ಆಳ್ವಿಕೆಯೂ, ಕ್ರೋನಿಬಂಡವಾಳಶಾಹಿಗಳೂ ‘ನೀ ನನಗಿದ್ದರೆ, ನಾ ನಿನಗಾಗಿ’ ಎಂಬ ಸಹಕಾರಿ ತತ್ವದಂತೆ ಆಲಿಂಗಿಸಿಕೊಂಡಿವೆ  

ಇಂದು ಇಲ್ಲಿ ನಡೆಯುತ್ತಿರುವ ‘ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು’ ಎಂಬ ಗಂಭೀರವಾದ, ಜಟಿಲವಾದ ಹಾಗೂ ಸಂಕೀರ್ಣವಾದ ಈ ಚಿಂತನಾ ಸಭೆ ಇಂಗ್ಲಿಷ್‌ಮಯವಾಗಿದೆ. ಇಂಗ್ಲಿಷ್‌ ಓದುತ್ತಿದ್ದರೆ ಅಥವಾ ಕೇಳುತ್ತಿದ್ದರೆ ನನಗೆ ಅರ್ಥವಾದುದ್ದಕ್ಕಿಂತ ಅರ್ಥವಾಗದೆ ಇರುವುದೇ ಹೆಚ್ಚು ಅನ್ನಿಸತೊಡಗುತ್ತದೆ. ಜೊತೆಗೆ ನಾನು ಅರ್ಥ ಮಾಡಿಕೊಂಡಿರುವುದರಲ್ಲಿ ತಪ್ಪಿರಬಹುದಾ ಎಂಬ ಅನುಮಾನದ ಪಿಶಾಚಿ ಇಣುಕಿ ನೋಡುತ್ತಿರುತ್ತದೆ. ಇಂತಹ ಸಂಕಷ್ಟದಲ್ಲಿರುವ ನಾನು ಈಗ ತಜ್ಞ ಅಂದುಕೊಂಡು ಮಾತಾಡಬೇಕಾಗಿದೆ!

ಇಂದು, ಮುಂದುವರೆದ ರಾಜ್ಯಗಳ ಆದಾಯದ ಹಣಕಾಸನ್ನು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಅನುದಾನವಾಗಿ ನೀಡುವುದರ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ. ಇದರಿಂದ ಮುಂದುವರಿಯುವುದು ತಪ್ಪೇ ಎಂಬ ವಾದವೂ ಹುಟ್ಟಿಕೊಂಡಿದೆ. ನೋಡುವುದಾದರೆ, ಇಂಥ ಸಮಸ್ಯೆಗಳು ಆಯಾಯ ರಾಜ್ಯಗಳ ಒಳಗೂ ಕೂಡ ಇದೆಯಲ್ಲಾ! ಈಗ ನಮ್ಮ ರಾಜ್ಯದಲ್ಲೇ ಇರುವ ಹಿಂದುಳಿದ ಪ್ರದೇಶಗಳಿಗೆ ನಾವು ವಿಶೇಷ ಅನುದಾನ ನೀಡುವುದಿಲ್ಲವೇ? ಯಾಕೆಂದರೆ, ನಾವು ಒಂದು ರಾಜ್ಯವಾಗಿದ್ದೇವೆ ಅದಕ್ಕಾಗಿ. ಅದನ್ನು ಸಹಜ ಕರ್ತವ್ಯವೆಂದು ಅರ್ಥಮಾಡಿಕೊಂಡು ಒಪ್ಪಿಕೊಂಡಿದ್ದೇವೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ವಾತಿ ಶಿವಾನಂದ್ ಅವರು ʻಜಾಗೃತ ಕರ್ನಾಟಕʼ ಸಮಾವೇಶದಲ್ಲಿ ಮಾತಾಡುತ್ತ ಕರ್ನಾಟಕ ಏಕೀಕರಣದ ಬಗ್ಗೆ ಪ್ರಸ್ತಾಪಿಸಿದರು. ಆಗಲೂ ಇಂಥವೇ ವಾದಗಳು ಇದ್ದವು. ಆಗ ಮೈಸೂರು ಪ್ರಾಂತ್ಯದವರಿಗೆ ತಾವು ಮುಂದುವರೆದಿದ್ದೇವೆ, ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನೂ ಸೇರಿಸಿಕೊಂಡರೆ ಅವರನ್ನು ನಾವು ಸಾಕಬೇಕಾಗಿ ಬರುತ್ತದೆ ಎಂಬ ಭಾವನೆ ಇತ್ತಂತೆ. ಇಲ್ಲೊಂದು ಆಸಕ್ತಿದಾಯಕ ಸಂಗತಿಯನ್ನು ಸ್ವಾತಿ ಹೇಳುತ್ತಾರೆ. ವಾಸ್ತವದಲ್ಲಿ ಮುಂಬೈ ಕರ್ನಾಟಕವು ಶಿಕ್ಷಣದಲ್ಲಿ ಮುಂದಿತ್ತು ಹಾಗೂ ಹೈದರಾಬಾದ್ ಕರ್ನಾಟಕವು ಹೆಚ್ಚು ಆಹಾರ ಧಾನ್ಯ ಉತ್ಪಾದನೆಯ ಸಾಧ್ಯತೆಯನ್ನು ಹೊಂದಿದ್ದ ಪ್ರದೇಶವಾಗಿತ್ತು ಎನ್ನುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದರ ಸ್ಪಷ್ಟತೆಗಾಗಿ ನಮ್ಮ ಬೃಹತ್ ಬೆಂಗಳೂರು ನೋಡಿದರೆ, ಇಲ್ಲಿ ಜನಸಂಖ್ಯೆ ಒಂದು ಕೋಟಿಗೂ ಮಿಗಿಲಾಗಿದೆ. ಇದು ಐಟಿಬಿಟಿ ಜೊತೆಗೆ ಇನ್ನಿತರ ವಹಿವಾಟುಗಳ ನಗರ. ಇಂಥವರ ಕೆಲಸ ಕಾರ್ಯಗಳಿಗೆ ಮಾರುಕಟ್ಟೆ ವಿನಿಮಯದರವು ಹೆಚ್ಚಿದೆ. ಹೀಗಾಗಿ, ಇವರ ಆದಾಯವೂ ಹೆಚ್ಚಾಗಿದೆ. ಹೆಚ್ಚಿಗೆ ಆದಾಯದ ಇಂಥವರು- ‘ತಾವು ಹೆಚ್ಚಿಗೆ ತೆರಿಗೆ ಕಟ್ಟುತ್ತೇವೆ, ಅದು ಬೇರೆ ಕಡೆಗೆ ಹೋಗುತ್ತಿದೆ’ ಎಂದುಕೊಳ್ಳುತ್ತಲೂ ಇದ್ದಾರೆ. ಬೆಂಗಳೂರಿನ ಹೆಚ್ಚು ತೆರಿಗೆ ಕಟ್ಟುವ ಈ ಅದೃಷ್ಟವಂತರಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಕಮ್ಮಿ ವಿನಿಮಯ ದರದ ಆಹಾರ ಇತ್ಯಾದಿಗಳು ಸಿಗದೆ, ಅವರು ವಿದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಜೀವನ ಸಾಗಿಸಬೇಕಾಗಿ ಬಂದಿದ್ದರೆ ಏನಾಗುತ್ತಿತ್ತು?
ಅವರ ದುಡಿಮೆ ತಿಂಗಳ ಕೊನೆಗೆ ಸಾಲದೆ ಕಣ್ಣು ಬಾಯಿ ಬಿಡಬೇಕಾಗಿ ಬರುತ್ತಿತ್ತು. ನಮ್ಮ ಆದಾಯದ ಒಂದಿಷ್ಟು ಭಾಗವನ್ನು ನಮ್ಮನ್ನು ಪೊರೆಯುತ್ತಿರುವ ಇತರ ಕಡೆಗೂ ಹರಿಯಬೇಕಾಗಿರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಸಂವೇದನೆ ನಮಗೆ ಬೇಕಾಗಿದೆ. ನಾನು ಹೇಳುತ್ತಿರುವುದು ಇಷ್ಟೇ -ನಾವು ಒಂದು ರಾಜ್ಯಕ್ಕೆ ಸೇರಿದವರಾದ್ದರಿಂದ ಹೇಗೆ ಅರ್ಥ ಮಾಡಿಕೊಂಡು ರಾಜ್ಯದೊಳಗಿನ ಹಿಂದುಳಿದ ಪ್ರದೇಶಗಳ ಜೊತೆ ಹಂಚಿಕೊಳ್ಳಲು ಒಪ್ಪಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ದೇಶವು ರಾಜ್ಯಗಳ ಒಕ್ಕೂಟವಾಗಿರುವುದರಿಂದ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಒಂದಿಷ್ಟು ಹೆಚ್ಚು ಅನುದಾನ ಹಂಚಿಕೊಂಡರೆ ಅದನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗಿದೆ, ಒಪ್ಪಿಕೊಳ್ಳಬೇಕಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ದುಡಿಮೆದಾರರ ಹಸಿವಿಗೆ ಸ್ಪಂದಿಸಬೇಕಿದೆ.

ಈಗ ಪ್ರಶ್ನೆ -ಎಲ್ಲಿಯವರೆಗೆ? ಎಲ್ಲೆಡೆ ಸಬಲೀಕರಣವಾಗುವವರೆಗೆ. ಅದೂ ಎಲ್ಲಿಯವರೆಗೆ? ಉತ್ತರ ಎಲ್ಲಿದೆಯೋ ಅದು ನನಗೆ ಗೊತ್ತಿಲ್ಲ. ಯಾಕೆಂದರೆ ಭಾರತದ ಆರ್ಥಿಕ ನೀತಿಗಳು ಹುಲಿಗೆ ಹುಣ್ಣು ಬಂದ ಕತೆಯಂತಿದೆ. ಒಂದು ಹುಲಿಗೆ ಹುಣ್ಣು ಬಂತಂತೆ. ಆ ಹುಲಿ ಇನ್ನೊಂದು ಕಡೆ ಗಾಯ ಮಾಡಿಕೊಂಡು ತನಗಿದ್ದ ಹುಣ್ಣನ್ನು ಕಿತ್ತು ಹೊಸತಾಗಿ ಗಾಯ ಮಾಡಿಕೊಂಡಿದ್ದ ಜಾಗಕ್ಕೆ ಅದನ್ನು ನೆಟ್ಟಿತ್ತಂತೆ. ಹುಲಿ ಹುಣ್ಣಿನ ಕತೆ ಹೀಗೆ ಸಾಗುತ್ತದೆ. ಭಾರತವೂ ಹೀಗೇ ಸಾಗುತ್ತಿದೆ. ಆಳ್ವಿಕೆಯು, ರೋಗಲಕ್ಷಣಗಳಿಗೆ ಮದ್ದು ನೀಡುತ್ತಿದೆ. ರೋಗ ಉಳಿದೇ ಇದೆ.

ಆಯ್ತು, ರೋಗ ಎಲ್ಲಿದೆ? ನಮ್ಮ ಎಸ್.ಆರ್.ಹಿರೇಮಠರ ಬಾಳಕಥನದ ಒಂದು ಪ್ರಸಂಗ ಹೇಳುವೆ. ಇಸವಿ 1969. ಎಸ್.ಆರ್‌ ಹಿರೇಮಠರು ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕದಲ್ಲಿದ್ದಾಗ Development Reconsidered ಪುಸ್ತಕದ ಲೇಖಕ ಎಡ್ಗರ್ ಓವನ್ ಅವರ ಜೊತೆಗೆ ಅಮೆರಿಕಾದ ಭಾರತೀಯ ವಿದ್ಯಾರ್ಥಿ ಸಂಘವು ಸಂವಾದ ಏರ್ಪಡಿಸಿದಾಗ ಅವರು ಪ್ರಸ್ತಾಪಿಸಿದ ಮುಖ್ಯ ಸಂಗತಿ- Trickle Down ಥಿಯರಿ ಬಗ್ಗೆ. ಓವನ್ ಅವರು ಬಡತನ ನಿವಾರಣಾ ಕ್ಷೇತ್ರದಲ್ಲಿ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರ್ಷಾನುಗಟ್ಟಲೆ ಕಾರ್ಯನಿರ್ವಹಿಸಿದವರು. ಅವರು ತಮ್ಮ ಅನುಭವದ ಕಥೆಯ ವ್ಯಥೆಯನ್ನು ಭಾರತೀಯ ವಿದ್ಯಾರ್ಥಿಗಳೊಡನೆ ಹಂಚಿಕೊಳ್ಳುತ್ತಾರೆ. ಆಳ್ವಿಕೆಯು ಮೇಲ್ವರ್ಗದ ಕೆಲವರಿಗೆ ಸಂಪತ್ತು ಮಾಡಲು ಉತ್ತೇಜನ ಕೊಟ್ಟರೆ ಆಗುವ ಅಭಿವೃದ್ಧಿಯು ಕೆಳಕ್ಕೆ ತೊಟ್ಟಿಕ್ಕುತ್ತಾ, ತಳಮಟ್ಟದಲ್ಲಿರುವ ಬಡವರಿಗೂ ತಲುಪಿ, ಒಟ್ಟಾರೆ ಏಳ್ಗೆಯಾಗುತ್ತದೆ -ಎಂಬ ಟ್ರಿಕಲ್ ಡೌನ್ ಆರ್ಥಿಕ ಸಿದ್ಧಾಂತವು, ತಮ್ಮ ಸುದೀರ್ಘ ಅನುಭವದಲ್ಲಿ ಆಚರಣೆಯಲ್ಲಿ ಬಂದ ನಿದರ್ಶನಗಳಿಲ್ಲ, ಇಂದೊಂದು Failed Theory ಅನ್ನುತ್ತಾರೆ.

ಇಂದೂ ಕೂಡ ಜಾಗತೀಕರಣದ ಸೋಂಕು ರೋಗದ ಈ ಟ್ರಿಕಲ್‍ಡೌನ್ ಮೇಲಿಂದ ತೊಟ್ಟಿಕ್ಕುವ ಥಿಯರಿಗೆ ಜೋತು ಬಿದ್ದ ಭಾರತದ ಆರ್ಥಿಕ ತಜ್ಞರು ಹಾಗೂ ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ನೇತಾಡುತ್ತ ತೇಲಾಡುತ್ತಿದೆ. ಆಳ್ವಿಕೆಯೂ, ಕ್ರೋನಿಬಂಡವಾಳಶಾಹಿಗಳೂ ‘ನೀ ನನಗಿದ್ದರೆ, ನಾ ನಿನಗಾಗಿ’ ಎಂಬ ಸಹಕಾರಿ ತತ್ವದಂತೆ ಆಲಿಂಗಿಸಿಕೊಂಡಿವೆ. ಉದಾಹರಣೆ ಬೇಕೆ? ಇಂದಿನ ಮಾಧ್ಯಮದ ವರಸೆ ನೋಡಿ ಸಾಕು! ಹಾಗಾಗೇ, ಅಂಬಾನಿ ಅದಾನಿ ಇತ್ಯಾದಿ ನೂರಾರು ಕಾರ್ಪೊರೇಟ್ ಉಳ್ಳವರಿಗೆ ದೇಶದ ಸಂಪತ್ತನ್ನು ಸುರಿಯುತ್ತಿದ್ದು, ಇಲ್ಲಿ ಪ್ರಜೆಗಳು ಮೇಲಿಂದ ತಮಗೂ ಒಂದಿಷ್ಟು ಸೋರಬಹುದೆಂದು ಆಕಾಶ ನೋಡುತ್ತ ಕಾಯುತ್ತಿದ್ದಾರೆ. 1% ಜನರಿಗೆ 40% ಸಂಪತ್ತನ್ನು ಮೇಲಿಂದ ಸುರಿದಿದ್ದಕ್ಕೆ ಅದು ತಳಕಚ್ಚಿರುವ 50% ಜನರಿಗೆ ತೊಟ್ಟಿಕ್ಕಿಸಿರುವುದು (trickle down) 3% ಮಾತ್ರ! (Oxfam ವರದಿ). ಆ ಕಾರ್ಪೊರೇಟ್ ಸಂಪತ್ತು ಮಾಯಾ ರೂಪದಲ್ಲಿ ವಿದೇಶಗಳಿಗೂ ವಲಸೆ ಹೋಗುತ್ತಿದೆ. ಈ ಟ್ರಿಕಲ್ ಡೌನ್ ಆರ್ಥಿಕ ನೀತಿಯಿಂದಾಗಿ ಭಾರತದ ರಾಜ್ಯಗಳ ಆರ್ಥಿಕ ಸ್ಥಿತಿಯು ಬೇಸಿಗೆ ನದಿಯಂತೆ ಸಾಯುತ್ತ-ಬದುಕುತ್ತ-ಸಾಗುತ್ತ ಅನುದಾನಕ್ಕಾಗಿ ಹಾತೊರೆಯುವಂತಾಗಿದೆ. ಹಾಗಾಗಿ ಸಮಸ್ಯೆ ಇರುವುದು ಒಂದು ರಾಜ್ಯಕ್ಕೆ ಹೆಚ್ಚು ಕೊಡುತ್ತಾರೆ, ಇನ್ನೊಂದು ರಾಜ್ಯಕ್ಕೆ ಕಡಿಮೆ ಕೊಡುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ, ಇಂದಿನ ಕಾಲಮಾನದಲ್ಲಿ ಕಾರ್ಪೊರೇಟುಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೆಚ್ಚು ಅನುಕೂಲವಾಗುತ್ತಿದೆ ಎಂಬುದರಲ್ಲಿದೆ. ಕಾರ್ಪೋರೇಟ್ ಸೆಕ್ಟರ್ ಗಳು ನುಂಗಿ ಎಸೆದದ್ದನ್ನು ನಮ್ಮ ಆರ್ಥಿಕ ತಜ್ಞರು, ಯೋಜನಾ ತಜ್ಞರು ರಾಜ್ಯಗಳ ಅಸಮತೆಗೆ ಯಾವಾಗಲೂ ತೇಪೆ ಹಾಕುತ್ತಲೇ ಇರಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ರಾಜ್ಯಗಳ ಸಬಲೀಕರಣವಾಗುವುದಾದರೂ ಹೇಗೆ? ರಾಜ್ಯ ಸಬಲೀಕರಣವಾಗದೇ ರಾಜ್ಯಗಳ ನಡುವೆ ಆರ್ಥಿಕ ಅಸಮತೋಲನ ನೀಗುವುದಾದರೂ ಯಾವಾಗ?

ಯಾವಾಗ ಅಂದರೆ, ಭಾರತವು ತನ್ನ ಟ್ರಿಕಲ್ ಡೌನ್ ಆರ್ಥಿಕ ನೀತಿಯಿಂದ ಬಚಾವಾದಾಗ, ಇದು ನಿಜ. ಇದನ್ನು ಕೆಲ ಕಾಲ ಪಕ್ಕಕ್ಕಿಟ್ಟು ಇದ್ದುದರಲ್ಲೇ ದೇಶದ ಬದುಕನ್ನು ಸಹ್ಯ ಮಾಡುವ ದಿಕ್ಕಲ್ಲೂ ನೋಡಿದಾಗ- ಮೊದಲನೆಯದಾಗಿ ನಮ್ಮ ಬಲಿಷ್ಠ ಕೇಂದ್ರ ಅನ್ನಿಸಿಕೊಂಡಿರುವ ಸರ್ಕಾರವು ಸ್ವಲ್ಪ ಸಂವಿಧಾನದ ಮೊದಲ ಆರ್ಟಿಕಲ್ “India, that is Bharat, shall be a union of States” ನೆನಪಿಸಿಕೊಂಡು, ಒಕ್ಕೂಟ ಸರ್ಕಾರವಾಗಿ ವರ್ತಿಸಬೇಕಾಗಿದೆ. ಇದಾಗದಿದ್ದರೆ ಕೇಂದ್ರ ಸರ್ಕಾರ ಅನ್ನುವುದು ರಾಜ್ಯಗಳ ಪಾಲಿಗೆ ಯಮದೂತರಂತಾಗುತ್ತದೆ. ಪ್ರೊ.ಚಂದ್ರ ಪೂಜಾರಿಯವರ “ಫೆಡರಲ್ ಸ್ಟ್ರಕ್ಚರನ್ನು ಅಲುಗಾಡಿಸುತ್ತಿರುವ ಇತ್ತೀಚಿನ ಕೆಲವು ಬದಲಾವಣೆಗಳು”[ಹೊಸತು ಪತ್ರಿಕೆ, ಸೆಪ್ಟೆಂಬರ್, 2023] ಲೇಖನದಲ್ಲಿ- “14ನೆಯ ಹಣಕಾಸು ಸಮಿತಿಯು [2015ರಿಂದ2020] ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲನ್ನು ಶೇಕಡ 32ರಿಂದ 42ಕ್ಕೆ ಏರಿಸಿತು. ಆದರೆ ಶೇಕಡ 10ರಷ್ಟು ಏರಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ಇಷ್ಟಪಡಲಿಲ್ಲ. ಹಾಗೆಂದು ಹಣಕಾಸು ಸಮಿತಿ ತೀರ್ಮಾನವನ್ನು ಬದಲಾಯಿಸುವಂತಿಲ್ಲ. ಆದುದರಿಂದ ಶೇಕಡ 42ನ್ನು ಶೇಕಡ 32ರಲ್ಲೇ ಇರಿಸಿಕೊಳ್ಳಲು ಕೇಂದ್ರ ಸರಕಾರ ಬೇರೆ ದಾರಿ ಹುಡುಕಿತು. ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಎರಡು ಪಾಲಿದೆ. ಒಂದು ಮೂಲ ತೆರಿಗೆ, ಮತ್ತೊಂದು ಸೆಸ್ ಮತ್ತು ಸರ್‌ಚಾರ್ಜ್‌. ಮೂಲ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಕೇಂದ್ರ ಏರಿಸುತ್ತಾ ಹೋಯಿತು” ಎಂದು ವಿವರಿಸುತ್ತಾರೆ. ಇದರಲ್ಲೇನಾದರೂ ಒಂದು ನೀತಿ ಇದೆಯೇ? ಅಲ್ಪಸ್ವಲ್ಪವಾದರೂ ನ್ಯಾಯ ಇದೆಯೆ? ದುರಂತವೆಂದರೆ ಇದು ಕೇಂದ್ರ ಸರ್ಕಾರದ ಕುತಂತ್ರದ ನಡೆ. ಆದರೆ ಇದನ್ನೇ ‘ಚಾಣಾಕ್ಷ’ ನಡೆ ಎನ್ನುವವರೂ ಇದ್ದಾರೆ!

ಕೇಂದ್ರ ಸರ್ಕಾರದ ಈ ಕಾರ್ಯವೈಖರಿ ನೋಡಿದಾಗ, ಕನ್ನಡದ ಜಾನಪದ ಗೀತೆಯ- “ಜವರಾಯ ಬಂದಾರೆ ಬರಿಗೈಲಿ ಬರಲಿಲ್ಲ… ಕುಡುಗೋಲು ಹಿಡಿದು ತಾ ಬಂದ… ಒಳ್ಳೊಳ್ಳೆ ಮರವ ಕಡಿಯೂತ ಬಂದಾ…” ಹೀಗಲ್ಲದೇ ಮತ್ತೇನು? ಕೇಂದ್ರದ ಇಂಥೆಲ್ಲಾ ಮಲತಾಯಿ ಧೋರಣೆಯ ನೀತಿಯಿಂದಾಗಿ ಆ ರಾಜ್ಯಗಳು ತಮ್ಮನ್ನು ನಿಭಾಯಿಸಲು ಹೆಚ್ಚೆಚ್ಚು ಸಾಲಗಾರರಾಗಬೇಕಾಗಿ ಬರುತ್ತಿದೆ. ರಾಜ್ಯಗಳು ಮಾತಾಡುತ್ತಿಲ್ಲ. ಕೇಂದ್ರ ಹಂಚಿಕೊಳ್ಳದ ಸೆಸ್, ಸರ್‌ಚಾರ್ಜ್‌ ತೆರಿಗೆ ಹೆಚ್ಚಾದಂತೆ, ಕೇಂದ್ರದ ಹೆಚ್ಚಾದ ತೆರಿಗೆ ಪ್ರಮಾಣದ ಅನುಪಾತದಲ್ಲಿ ರಾಜ್ಯಗಳಿಗೆ ಪಾಲು ದೊರಕುವ ಮೂಲ ತೆರಿಗೆಯಲ್ಲಿನ ರಾಜ್ಯಗಳ ಪಾಲೂ ಹೆಚ್ಚಾಗಬೇಕು ಎಂಬುದರಲ್ಲಿ ಒಂದು ನ್ಯಾಯ ಇದೆಯಲ್ಲವೇ? ರಾಜ್ಯಗಳ ಕಾಲು ಕತ್ತರಿಸಿ, ಚಲನೆಯನ್ನೇ ಕುಂಠಿತಗೊಳಿಸಿರುವ ಜಿಎಸ್‍ಟಿ ತೆರಿಗೆ ಪದ್ಧತಿಯನ್ನೇ ಮರು ಪರಿಶೀಲನೆಗೆ ಒಳಪಡಿಸಬೇಕಾಗಿದೆ.
ಇಷ್ಟು ಮಾತ್ರವಲ್ಲ, ರಾಜ್ಯಗಳು ಸಬಲೀಕರಣವಾಗುವುದು ಯಾವಾಗ ಅಂದರೆ, ರಾಜ್ಯಗಳ ಒಳಗೂ ವಿಕೇಂದ್ರಿಕರಣದ ಕಡೆಗೆ ಚಲಿಸಿದಾಗ- ಸ್ಥಳೀಯವಾಗಿ ಗುಡಿ ಕೈಗಾರಿಕೆ, ಅದಕ್ಕೆ ಮಾರುಕಟ್ಟೆ ದೊರಕಿದಾಗ, ಸಣ್ಣ ಸಣ್ಣ ಕೈಗಾರಿಕೆಗಳು ವಿಪುಲವಾದಾಗ ಉದ್ಯೋಗಗಳು ಅಲ್ಲಲ್ಲೆ ಹುಟ್ಟಿಕೊಳ್ಳುತ್ತವೆ. ಸಬಲೀಕರಣ ಎಂಬ ಮಾತು ನಡೆದಾಡತೊಡಗುತ್ತದೆ. ಇಷ್ಟೇ ಅಲ್ಲ, ಪ್ರಕೃತಿ-ಪರಿಸರ ಲೂಟಿ ನಿಲ್ಲಲೂಬೇಕು. ಜೊತೆಗೆ ಸ್ವಾಯತ್ತ ಸಂಸ್ಥೆಗಳು ಹೆಚ್ಚು ಸ್ವಾಯತ್ತವಾಗಬೇಕು. ಸಾರ್ವಜನಿಕ ಸಂಪತ್ತು ಸಾರ್ವಜನಿಕವಾಗೇ ಉಳಿಯಬೇಕು. ಜೊತೆಜೊತೆಗೆ ಸಾಮಾಜಿಕ ನ್ಯಾಯವೂ ನಡೆಯುತ್ತಿರಬೇಕು- ಹೀಗೆ ಹೀಗೆ ಇಂಥವು! ಇವು ಮಾತ್ರ ಭಾರತವನ್ನು ಕಾಪಾಡಬಲ್ಲವು. ಆಗ ರಾಜ್ಯ-ರಾಜ್ಯಗಳ ನಡುವೆ ಸಮತೆಯು ಸಮೀಪಿಸಬಹುದು.

ಇದನ್ನು ಓದಿ ಅದಾನಿ ಹೊಸ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ರಾಹುಲ್‌ ಗಾಂಧಿ ಒತ್ತಾಯ

ಕೊನೆಯದಾಗಿ ಒಂದು ಮಾತು; ರಾಜ್ಯಗಳ ಒಕ್ಕೂಟವಾದ ದೇಶದಲ್ಲಿ, ಇದ್ದುದರಲ್ಲೇ ಹೊಟ್ಟೆಬಟ್ಟೆಗೆ ನೇರವಾಗಿರುವ ರಾಜ್ಯಗಳು, ತಮಗಿಂತಲೂ ಅತ್ತತ್ತ ಎಂಬಂತಿರುವ ರಾಜ್ಯಗಳಿಗೆ- ತಮ್ಮ ಆದಾಯವನ್ನು ಅಷ್ಟಿಷ್ಟು ಹಂಚಿಕೊಳ್ಳುವುದನ್ನು ಕರ್ತವ್ಯ ಎಂದು ಭಾವಿಸಿ, ಭಾರತದ ಒಕ್ಕೂಟ ಸ್ವರೂಪವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಹೇಳುತ್ತಿರುವುದರ ಜೊತೆಗೆ, ಇನ್ನೊಂದು ಸಮಸ್ಯೆ ಭುಗಿಲೆದ್ದಿದೆ- ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಲೋಕಸಭಾ ಸ್ಥಾನಗಳ ಮರುವಿಂಗಡಣೆ. ಇದಾದರೆ ರಾಜ್ಯಗಳ ಲೋಕಸಭಾ ಸ್ಥಾನಗಳೇ ಏರುಪೇರಾಗಿ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಾಹಾಕಾರ ಏಳುತ್ತದೆ. ಒಕ್ಕೂಟ ವ್ಯವಸ್ಥೆಯಡಿ ಇರುವಾಗ ಕಷ್ಟಸುಖ ಹಂಚಿಕೊಳ್ಳಬೇಕು ಎಂಬ ನೀತಿ ಸರಿಯಾದುದು, ಸಹಜವೆ- ನಮ್ಮ ರಾಜ್ಯದೊಳಗೇ ಇರುವ ‘ಹಿಂದುಳಿದ ಪ್ರದೇಶಗಳೊಂದಿಗೆ’ ಹೆಚ್ಚಿನ ಅನುದಾನ ಹಂಚಿಕೊಳ್ಳುವ ಹಾಗೆ. ಆದರೆ, ರಾಜಕೀಯ ಪ್ರಾತಿನಿಧ್ಯವನ್ನೂ ಹಾಗೆಯೇ ಮಾಡಬೇಕು ಎಂಬುದು ಸೂಕ್ತವಲ್ಲ, ಇವೆರಡೂ ಬೇರೆ ಬೇರೆಯೇ. ಏನಾದರೂ ಈ ರೀತಿ ಮಾಡಿದರೆ- ಭಾರತ ಒಂದು ಒಕ್ಕೂಟ ಅನ್ನಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ಎಲ್ಲಾ ಲಕ್ಷಣವಿರುವ ಜನಸಂಖ್ಯೆಗನುಗುಣ, ಕ್ಷೇತ್ರ ವಿಂಗಡಣೆಯ ಪರಿಕಲ್ಪನೆಗೆ ಅಡ್ಡಗಾಲು ಹಾಕಬೇಕಾಗಿದೆ. ಭಾರತದ ಸುಪ್ತ ಮನಸ್ಸಿನ ವಿವೇಚನೆ, ವಿವೇಕ ಈಗ ಎಚ್ಚರಗೊಳ್ಳಬೇಕಾಗಿದೆ.

[ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟಿ ಫೋರಂ ಸಹಯೋಗದಲ್ಲಿ, ದಿನಾಂಕ 26.8.2023ರಂದು ಮೈಸೂರಿನಲ್ಲಿ ಏರ್ಪಡಿಸಿದ್ದ “ಕ್ಷೇತ್ರ ಪುನರ್ ವಿಂಗಡಣೆ: ಅಂತರ್‌ರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಅಕ್ಷರ ರೂಪ]

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ...

ದೇಶವಾಸಿಗಳು ʼಕ್ವಿಟ್ ಎನ್‍ಡಿಎʼ ಮತ್ತು ʼಸೇವ್ ಇಂಡಿಯಾʼ ಚಳವಳಿಗೆ ಸನ್ನದ್ಧರಾಗಬೇಕಿದೆ..

ಕೋಮುವಾದಿಗಳು ಮತ್ತು ಜಾತಿವಾದಿಗಳ ಅನೈತಿಕ ಮೈತ್ರಿ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತದಲ್ಲಿ...