ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಲಂಚ ಆರೋಪದ ಪತ್ರಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರ ಕೈವಾಡ ಇದೆ ಎಂಬ ಮಾಹಿತಿ ಬಯಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಪತ್ರ ಪ್ರಕರಣ ರಾಜ್ಯ ಸರ್ಕಾರದ ವಿರುದ್ಧ ಟೀಕಿಸಲು ಪ್ರತಿಪಕ್ಷಗಳಿಗೆ ಅಸ್ತ್ರವಾಗಿತ್ತು. ಪ್ರತಿಪಕ್ಷಗಳಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ತನಿಖೆಯನ್ನು ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳು ಕೆ.ಆರ್.ಪೇಟೆಯ ಕೃಷಿ ಇಲಾಖೆಯ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ಗುರುಪ್ರಸಾದ್ ಇಬ್ಬರು ಅಧಿಕಾರಿಗಳನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ, ಬಂಧಿತ ಗುರುಪ್ರಸಾದ್ ವಿಚಾರಣೆ ವೇಳೆ ಮಹತ್ವದ ಅಂಶಗಳನ್ನು ಬಾಯಿಬಿಟ್ಟಿದ್ದಾರೆ.
ಇಡೀ ಪತ್ರ ಪ್ರಕರಣದ ಹಿಂದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರ ಕೈವಾಡ ಇದೆ ಎಂದು ಬಂಧಿತ ಅಧಿಕಾರಿಗಳು ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸಿಐಡಿ ಅಧಿಕಾರಿಗಳು ಕರೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಸಿಐಡಿ ವಿಚಾರಣೆ ವೇಳೆ ಜಂಟಿ ನಿರ್ದೇಶಕರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಮುಂದುವರಿದು, ಜಂಟಿ ನಿರ್ದೇಶಕ ಕೈವಾಡದ ಕುರಿತು ಮಹತ್ವದ ಸಾಕ್ಷ್ಯಾಧಾರ ಸಿಐಡಿಗೆ ಲಭ್ಯವಾಗಿದೆ. ಸಾಕ್ಷ್ಯದ ಸತ್ಯಾಸತ್ಯತೆ ಪರಿಶೀಲನೆಗೆ ಸಿಐಡಿ ಪೊಲೀಸರು ಎಫ್ಎಸ್ಎಲ್ಗೆ ರವಾನೆ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದಾರೆ.