ವಿಶ್ವ ವಿಖ್ಯಾತ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುವ ಗಜಪಯಣಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಮೈಸೂರು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ಅಭಿಮನ್ಯು, ಭೀಮ, ಗೋಪಿ, ಧನಂಜಯ, ವರಲಕ್ಷ್ಮಿ, ಅರ್ಜುನ, ವಿಜಯ, ಮಹೇಂದ್ರ, ಕಂಜನ್ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಿ, ಕಲಾ ತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು. ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಈ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, “ನಾಡಹಬ್ಬ ದಸರಾ ಸಂಭ್ರಮಕ್ಕೆ ಕಾಡಿನಿಂದ ನಾಡಿನೆಡೆಗೆ ಗಜಪಯಣ ಆರಂಭವಾಗಿದೆ. ಈ ಪೈಕಿ ಒಂಬತ್ತು ಆನೆಗಳಿದ್ದು, ಎಂಟು ಈಗಾಗಲೇ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದು, ಒಂದು ಆನೆ ಹೊಸದಾಗಿ ಸೇರ್ಪಡೆಯಾಗಿದೆ. ಈ ಹಿಂದೆ ಇದ್ದ ಆನೆಗೆ ಮದ ಬಂದಿರುವ ಕಾರಣ ಹೊಸ ಆನೆಯನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯೂ ಅಭಿಮನ್ಯು ಅಂಬಾರಿ ಹೊರಲಿದ್ದಾನೆ” ಎಂದು ತಿಳಿಸಿದರು.
ಗಜಪಯಣಕ್ಕೆ ಚಾಲನೆ ನೀಡಿ ಸಚಿವ ಡಾ ಎಚ್ ಸಿ ಮಹದೇವಪ್ಪ ಮಾತನಾಡಿ, “ಗಜಪಯಣಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರಲಾಗುವುದು. ದಸರಾ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ನಾಡಹಬ್ಬ ದಸರಾಕ್ಕೆ ಹೊರಟ ಗಜ ಪಯಣಕ್ಕೆ ಶಾಸಕ ಗಣೇಶ್ ಪ್ರಸಾದ್ ಚಾಲನೆ
“ಸೆಪ್ಟಂಬರ್ 4 ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದ್ದು, ಅಂದು ಸಂಜೆ 5.30ರಿಂದ 6ರವರೆಗೆ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ” ಎಂದರು.
ಅಭಿಮನ್ಯು ನೇತೃತ್ವದ 9 ಗಜಪಡೆ: ಗಜಪಯಣದ ಮೊದಲ ತಂಡದಲ್ಲಿ ಈ ಬಾರಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಲಿವೆ. ಇದರಲ್ಲಿ ಎರಡು ಹೆಣ್ಣಾನೆಗಳಿವೆ. ಅವುಗಳಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಕ್ಯಾಪ್ಟನ್ ಅಭಿಮನ್ಯು ಮತ್ತು ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮಿ, ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ ಹಾಗೂ ಹೆಣ್ಣಾನೆ ವಿಜಯಾ, ರಾಂಪುರ ಆನೆ ರೋಹಿತ್, ಹಿರಣ್ಯಾ ಮೊದಲು ಭಾಗವಹಿಸಲಿವೆ.
ಗಜಪಯಣ ಚಾಲನೆ ಸಮಯದಲ್ಲಿ ಶಾಸಕ ಜಿ ಟಿ ಹರೀಶ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.