ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆಗಳ ನಿವಾರಣೆ ಸೇರಿದಂತೆ ರೈತರಿಗೆ ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಹಲವು ಕಾರ್ಯಕ್ರಮಗಳು ಇಂದಿನ ರಾಜ್ಯ ಸರ್ಕಾರ ರದ್ದುಗೊಳಿಸಿ ರೈತರಿಗೆ ಸಂಕಷ್ಟಕ್ಕೆ ಸಿಲುಕಿಸಿದ್ದು, ಕೂಡಲೇ ಸರ್ಕಾರ ರೈತರ ಧೈರ್ಯ ತುಂಬಿ ಯುದ್ದೋಪದಿಯಲ್ಲಿ ಕ್ರಮಕೈಗೊಳ್ಳಲು ಒತ್ತಾಯಿಸಿ ಸೆಪ್ಟೆಂಬರ್ 8ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷ ಕುಶಾಲರಾವ ಪಾಟೀಲ್ ಗಾದಗಿ ಹೇಳಿದರು.
ಔರಾದ ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆಯಂತೆ 40% ಮಳೆ ಕಡಿಮೆ ಆಗಿದೆ, ಎಲ್ಲಾ ಕಡೆ ನೀರಿನ ಹಾಹಾಕಾರ ಅಭಾವ ಉಂಟಾಗಿದ್ದು ಭವಿಷ್ಯದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ತೊಂದರೆ ಉಂಟಾಗುವ ಆತಂಕ ಎದುರಾಗಿದೆ. ರೈತರ ಪಂಪಸೆಟ್ ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಉಂಟಾಗಿದೆ. ಇದರಿಂದ ರೈತರ ನೀರಾವರಿಗೆ ತುಂಬಾ ಸಮಸ್ಯೆಯಾಗಿದೆ” ಎಂದು ಹೇಳಿದರು.
ನೂರು ದಿನದಲ್ಲಿ 42 ರೈತರ ಆತ್ಮಹತ್ಯೆ:
“ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಸುಮಾರು 42 ರೈತರು ಆತ್ಮಹತ್ಯೆ ಪ್ರಕರಣಗಳು ವರದಿ ಆಗಿರುವುದು ಆತಂಕದ ಸಂಗತಿ. ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿದ ರಾಜ್ಯದ 51 ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರಾಜ್ಯ ಸರ್ಕಾರ ರದ್ದುಗೊಳಿಸಿದೆ, ರೈತ ಕುಟುಂಬಗಳಿಗೆ ಸಹಾಧನ ನೀಡುವ ಉದ್ದೇಶದಿಂದ ಜಾರಿಗೊಳಿಸಿದ ರೈತ ನಿಧಿ ಯೋಜನೆ, ಭೂ ಸಿರಿ ಯೋಜನೆ, ಸ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ, ಎಪಿಎಂಸಿ ಕಾನೂನು ರದ್ದು, ಕೃಷಿ ಭೂಮಿ ಮಾರಾಟ ಕಾನೂನು, ಹಾಗೂ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಯೋಜನೆಗಳು ಸರ್ಕಾರ ಕೈಬಿಡಲು ನಿರ್ಧರಿಸಿದ್ದು ಅಘಾತಕಾರಿಯಾಗಿದೆ” ಎಂದು ದೂರಿದರು.
“ರೈತರ ಅನುಕೂಲಕ್ಕಾಗಿ ಜಾರಿಗೊಳಿಸಿದ ಎಲ್ಲಾ ಯೋಜನೆಗಳನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೇ ಮರು ಅನುಷ್ಠಾನಕ್ಕೆ ಒತ್ತಾಯಿಸಿ ಸೆ. 8 ರಂದು ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ ಕಚೇರಿಗಳ ಮುಂಭಾಗ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗುವುದು” ಎಂದು ಹೇಳಿದರು.
ರಾಜ್ಯದ ಬಹುತೇಕ ಭಾಗದಲ್ಲಿ ಬರಗಾಲದ ಛಾಯೆ ಆವರಿಸಿದೆ, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಾ ಕಡೆ ಮಳೆಯಾಗದೇ ಅನಾವೃಷ್ಠಿ ಉಂಟಾಗಿದೆ, ಆದರೆ ಕಾಂಗ್ರೇಸ್ ಶಾಸಕರ ಇರುವ ಕ್ಷೇತ್ರಗಳು ಮಾತ್ರ ಬರಗಾಲ ಪೀಡಿತ ತಾಲೂಕು ಘೋಷಿಸಿರುವುದು ರೈತರಿಗೆ ಮಾಡಿರುವ ಬಹುದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿ ನಿಯಮಾನುಸಾರ ಉಳಿದ ತಾಲೂಕುಗಳು ಸಮೀಕ್ಷೆ ನಡೆಸಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದೀರಾ? ಬೀದರ್ | ಪೊಲೀಸ್ ಪೇದೆ ಆತ್ಮಹತ್ಯೆ
ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಸಂಜುಕುಮಾರ ಪಾಟೀಲ್, ತಾಲೂಕು ಬಿಜೆಪಿ ಪ್ರಭಾರಿ ವೀರಣ್ಣ ಕಾರಬಾರಿ, ಜಿಲ್ಲಾ ರೈತ ಮೋರ್ಚಾದ ರಾಜಕುಮಾರ್ ಹಡಕುಂಚಿ, ಔರಾದ ತಾಲೂಕು ರೈತ ಮೋರ್ಚಾದ ಅಧ್ಯಕ್ಷ ನಾಗಶೆಟ್ಟಿ ಗಾದಗಿ, ತಾಲೂಕು ಕಾರ್ಯದರ್ಶಿ ಸಂತೋಷ ಬೋರಾಳೆ, ಬಿಜೆಪಿ ತಾಲೂಕು ಕಾರ್ಯದರ್ಶಿ ಖಂಡೋಬಾ ಸೇರಿದಂತೆ ಇತರರಿದ್ದರು.