- ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಪ್ರಯತ್ನ ಮಾಡುತ್ತೇವೆ ಎಂದ ಮಾಜಿ ಪ್ರಧಾನಿ
- ಎಚ್.ಡಿ. ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ
ಚುನಾವಣಾ ಅಕ್ರಮಕ್ಕೆ ಸಂಬಂಧಿಸಿ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವ ಅನರ್ಹಗೊಳಿಸಿರುವ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿ ಮಾತನಾಡಿರುವ ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, “ನ್ಯಾಯಾಲಯದ ತೀರ್ಪು ನೋಡಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ದೇವೇಗೌಡರ ಕುಟುಂಬದ ಮನೆ ದೇವರಾಗಿರುವ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ಹೈಕೋರ್ಟ್ ತೀರ್ಪಿನ ಪ್ರತಿ ನನ್ನ ಕೈಗೆ ಇನ್ನೂ ದೊರೆತಿಲ್ಲ. ಸಂಸದ ಸ್ಥಾನ ಅಸಿಂಧು ಎಂದು ತೀರ್ಪು ನೀಡಿದ್ದಾರೆ. ಅದರ ಬಗ್ಗೆ ಈಗ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಪೂರ್ತಿ ಆದೇಶ ಓದದೇ ಮಾಜಿ ಪ್ರಧಾನಿಯಾಗಿ ಪ್ರತಿಕ್ರಿಯೆ ನೀಡುವುದು ಯೋಗ್ಯವೂ ಅಲ್ಲ, ಸಮಂಜಸ ಕೂಡ ಅಲ್ಲ. ಸಂಪೂರ್ಣ ತೀರ್ಪಿನ ಪ್ರತಿ ಓದಿದ ಬಳಿಕವಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ’ ‘ ಎಂದು ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಬಗ್ಗೆ ಬಂದಿರುವ ಆದೇಶದ ಬಗ್ಗೆ ಹೇಳಿಕೆ ನೀಡಿದರು.

‘ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸ್ವಾಭಾವಿಕವಾಗಿ ಇದ್ದೇ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಪ್ರಯತ್ನ ಮಾಡುತ್ತಾರೆ. ಅಲ್ಲಿ ಏನಾಗುತ್ತೆ ಅಂತ ನಾನು ಹೇಳಬಾರದು. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಇದನ್ನು ಓದಿ : ‘ಭಾರತ’ವೆಂದರೆ ಹಿಂದೂರಾಷ್ಟ್ರ, ‘ಇಂಡಿಯಾ’ ಎಂದು ಕರೆಯಬೇಡಿ : ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್
“ನಾನು ಸದ್ಯ ದೇವಾಲಯಕ್ಕೆ ಪೂಜೆ ಮಾಡಲೆಂದು ಕುಟುಂಬದೊಂದಿಗೆ ಬಂದಿದ್ದೇನೆ. ಪೂಜೆಯಲ್ಲಿ ಪ್ರಜ್ವಲ್ ಭಾಗವಹಿಸಿದ ನಂತರ ಬೆಂಗಳೂರಿಗೆ ತೆರಳಿದ್ದಾರೆ” ಎಂದು ಮಾಜಿ ಪ್ರಧಾನಿ ಮಾಹಿತಿ ನೀಡಿದರು.
“ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಭಾನುವಾರ ಮಧ್ಯಾಹ್ನದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ನಾಲೈದು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದೇನೆ. ಈ ಬಾರಿ ಆರೋಗ್ಯ ಸ್ವಲ್ಪ ತೊಂದರೆ ಆಗಿದ್ದು, ವೈರಲ್ ಇಂಫೆಕ್ಷನ್‌ನಿಂದ ಈ ರೀತಿ ಆಗಿದೆ” ಎಂದು ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಮಾಹಿತಿ ನೀಡಿದರು.