ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ 6 ವರ್ಷಗಳ ಕಳೆದ ಕರಾಳ ನೆನಪಿನ ದಿನವಾಗಿ, ಗೌರಿಯವರ ಸಮಾಧಿಗೆ ಒಡನಾಡಿಗಳು ಪುಷ್ಪನಮನ ಸಲ್ಲಿಸಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೌರಿ ಸಮಾಧಿಯ ಬಳಿ ಸೇರಿದ ಹೋರಾಟಗಾರರು, ಒಡನಾಡಿಗಳು ನುಡಿನಮನ ಸಲ್ಲಿಸಿದರು. ಗೌರಿಯವರ ಹೋರಾಟವನ್ನು ಮೆಲುಕು ಹಾಕಿದರು.
“ನೂರು ಗುಂಡುಗಳು ತೂರಿ ಬಂದರೂ ಗುಡುಗುಡು ಗುಡುಗುಡು ಗುಡುಗುವೆವು” ಎಂಬ ಹಾಡಿಗೆ ಎಲ್ಲರೂ ದನಿ ಸೇರಿಸಿ, ಗೌರಿಯವರ ಆಶಯಗಳನ್ನು ಕಾಡಿಟ್ಟುಕೊಳ್ಳುವ ಸಂಕಲ್ಪ ಮಾಡಲಾಯಿತು.
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿ ಮಾತನಾಡಿದ ಹೋರಾಟಗಾರರಾದ ನೂರ್ ಶ್ರೀಧರ್, “ಸಣ್ಣದೊಂದು ನಿರಾಳತೆಯನ್ನು ಕಂಡಿದ್ದೇವೆ. ಸಣ್ಣದೊಂದು ನಿಟ್ಟುಸಿರು ಸಿಕ್ಕಿದೆ. ಗೌರಿಯವರ ಎದೆಯ ಮೇಲಿನ ಚಪ್ಪಡಿಯ ಭಾರ ಸ್ವಲ್ಪ ಕಡಿಮೆಯಾಗಿದೆ. ನಮ್ಮ ಕುತ್ತಿಗೆಯ ಮೇಲೆ ಕೂತಿದ್ದ ದುಸ್ವಪ್ನ ಮತ್ತು ದುರಾಡಳಿತವನ್ನು ಸ್ವಲ್ಪ ಮಟ್ಟಿಗೆ ಸರಿಸಿದ್ದೇವೆ” ಎಂದು ಬಣ್ಣಿಸಿದರು.
“ಹಲವು ಪರ್ಯಾಯ ಸಂಸ್ಥೆಗಳು ಚಿಗುರೊಡೆದಿವೆ. ಗೌರಿಯ ಕುಟುಂಬ ವಿಶಾಲವಾಗುತ್ತಿದೆ. ಎಲ್ಲ ಕಡೆ ಇರುವ ಜೀವಪರ ಕೊಂಡಿಗಳು ಬೆಸೆಯುತ್ತಿವೆ. ಗುರಿಯ ಜೊತೆ ಸಾಗುತ್ತಿದ್ದೇವೆ. 2024ಕ್ಕೆ ನಮ್ಮ ಜವಾಬ್ದಾರಿ ಹೆಚ್ಚಿದೆ” ಎಂದು ಎಚ್ಚರಿಸಿದರು.
ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ಗೌರಿಯಕ್ಕ ನಮಗೆಲ್ಲ ಒಂದು ರೆಫರೆನ್ಸ್. ಅವರು ಅಂದು ಹೇಳಿದ ಎಲ್ಲ ಮಾತುಗಳು ಇಂದು ಸತ್ಯವಾಗುತ್ತಿವೆ. ಮನೆಯ ಹಿರಿಯಕ್ಕನನ್ನು ಕಳೆದುಕೊಂಡಿದ್ದೇವೆ” ಎಂದು ತಿಳಿಸಿದರು.
ಗೌರಿಯವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, “ಗೌರಿ ಫ್ಯಾಮಿಲಿ ಬೆಳೆಯುತ್ತಿದೆ. ಇಂದು ಅವಳು ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು. ವೈಯಕ್ತಿಕವಾಗಿ ಸಿದ್ದರಾಮಯ್ಯನವರೆಂದರೆ ಆಕೆಗೆ ಪ್ರೀತಿ. ಅವಳ ಹೋರಾಟ ನಿರಂತರವಾಗಿರುತ್ತದೆ. ನಾವು 2024ಕ್ಕೆ ಮುನ್ನಡೆಯೋಣ” ಎಂದರು. ಮಾತನಾಡುತ್ತಾ ಗದ್ಗದಿತರಾದರು.
ನಟ ದುನಿಯಾ ವಿಜಯ್ ಮಾತನಾಡಿ, “ಗೌರಿಯಕ್ಕ ಯಾವಾಗಲೂ ಬೆನ್ನು ತಟ್ಟುತ್ತಿದ್ದವರು. ಜಿಮ್‌ನಲ್ಲಿ ಸಿಗುತ್ತಿದ್ದರು. ನನ್ನ ಸ್ವಃತ ಅಕ್ಕನನ್ನು ಕಳೆದುಕೊಂಡಿದ್ದೇನೆ” ಎಂದರು.
ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ರೈತ ನಾಯಕರಾದ ರಾಕೇಶ್ ಟಿಕಾಯತ್, ಬಲ್ವಿಂದರ್ ಸಿಂಗ್, ಗೌರಿಯವರ ತಾಯಿ ಇಂದಿರಾ ಲಂಕೇಶ್, ಗೌರಿ ಒಡನಾಡಿಗಳಾದ ಸಿರಿಮನೆ ನಾಗರಾಜ್, ಡಾ.ಎಚ್.ವಿ.ವಾಸು, ಕೆ.ಎಲ್.ಅಶೋಕ್, ವಿ.ಎಸ್.ಶ್ರೀಧರ್, ಶಿವಸುಂದರ್, ಮಲ್ಲಿಗೆ ಸಿರಿಮನೆ, ದು.ಸರಸ್ವತಿ, ದೀಪು ಮೊದಲಾದವರು ಹಾಜರಿದ್ದು ಗೌರಿ ನೆನಪುಗಳನ್ನು ಮೆಲುಕು ಹಾಕಿದರು. ಹಾಡಗಾರರಾದ ಜನಾರ್ದನ್ (ಜೆನ್ನಿ), ಚಿಂತನ್ ವಿಕಾಸ್ ಅವರು ಪಿ.ಲಂಕೇಶ್ ಅವರ ’ಅವ್ವ’ ಕವನವನ್ನು ಹಾಡುವ ಮೂಲಕ ಗೌರಿ ಸ್ಮರಣೆಗೆ ಮೆರುಗು ತಂದರು.
ಇದನ್ನು ಓದಿ ಗೌರಿ ನೆನಪು | ಅನಾಮಿಕ ಅಮಾಯಕ ಜನಗಳ ಮನದಾಳದಲ್ಲಿ ಗೌರಿ
ಸಂಜೆ ಗೌರಿ ನೆನಪು ಕಾರ್ಯಕ್ರಮ: ಬೆಂಗಳೂರಿನ ಪುರಭವನದಲ್ಲಿ ಇಂದು (ಸೆಪ್ಟೆಂಬರ್ 5) ಸಂಜೆ 5 ಗಂಟೆಗೆ ಗೌರಿ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ರೈತ ನಾಯಕ ರಾಕೇಶ್ ಟಿಕಾಯತ್, ಸಾಮಾಜಿಕ ಹೋರಾಟಗಾರರಾದ ಏಂಜೆಲಾ ಅಂಗದ್, ಬಹುಭಾಷಾ ನಟ ಪ್ರಕಾಶ್ ರೈ, ಕೇರಳಾ ಶಾಸಕಿ ಶೈಲಜಾ ಟೀಚರ್, ಪತ್ರಕರ್ತೆ ಸುಪ್ರಿಯಾ ಶ್ರೀನಟೆ, ಉಡುಪಿ ಮುಸ್ಲಿಂ ಒಕ್ಕೂಟದ ಮುಖಂಡ ಯಾಸೀನ್ ಮಲ್ಪೆ ಹಾಜರಿರಲಿದ್ದಾರೆ.
ಗೌರಿ ಸ್ಮರಣೆಯ ಚಿತ್ರಗಳು


