ಭಾರತ ತಂಡದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಆಗಾಗ ಬಿಸಿಸಿಐನ ಅವ್ಯವಸ್ಥೆಯ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಲೇ ಇರುತ್ತಾರೆ. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿರುದ್ಧವೇ ‘ಭ್ರಷ್ಟ’ ಹಾಗೂ ‘ದುರಹಂಕಾರಿ’ ಎಂದು ತಿರುಗಿ ಬಿದ್ದಿದ್ದ ವೆಂಕಟೇಶ್ ಪ್ರಸಾದ್ ಅದ್ಯಾಕೋ ತಮ್ಮ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದಾರೆ.
ನಿನ್ನೆ(ಸೆ.10) ಮಧ್ಯಾಹ್ನ 3.54ರ ಸುಮಾರಿನಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ, ‘ಸಾಮಾನ್ಯವಾಗಿ ಭ್ರಷ್ಟವಲ್ಲದ ಸಂಸ್ಥೆಯ ಕಠಿಣ ಅಭಿವೃದ್ಧಿಯನ್ನು ಸಣ್ಣ ಮಟ್ಟದಲ್ಲಿ ಮಾತ್ರವಲ್ಲದೆ ದೊಡ್ಡ ಮಟ್ಟದಲ್ಲಿ ಕಸಿದುಕೊಂಡು ಭ್ರಷ್ಟಗೊಳಿಸಲು ಒಬ್ಬ ಭ್ರಷ್ಟ ಹಾಗೂ ದುರಹಂಕಾರಿ ವ್ಯಕ್ತಿಯಿಂದ ಸಾಧ್ಯವಾಗುತ್ತದೆ’ ಎಂದು ಪರೋಕ್ಷವಾಗಿ ಜಯ್ ಶಾ ವಿರುದ್ಧ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.
ಹೀಗೆ ಬರೆದುಕೊಂಡ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದರು. ಟ್ವಿಟ್ ಡಿಲೀಟ್ ಮಾಡಿದ್ದಕ್ಕೆ ನೆಟ್ಟಿಗರು ವೆಂಕಟೇಶ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ನಂತರದಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದ ವೆಂಕಟೇಶ್ ಪ್ರಸಾದ್, ಇದೊಂದು ಸಾಮಾನ್ಯ ಟ್ವೀಟ್ ಆಗಿದ್ದು, ಒಬ್ಬ ಭ್ರಷ್ಟ ವ್ಯಕ್ತಿಯು ಯಾವುದೇ ಕ್ಷೇತ್ರದಲ್ಲಿ ಸಂಸ್ಥೆಯ ಬಹಳಷ್ಟು ಒಳ್ಳೆಯ ಕೆಲಸವನ್ನು ಹೇಗೆ ಹಾಳು ಮಾಡಬಹುದು ಎಂದು ಹೇಳಿದ್ದೆ. ನನ್ನ ಇತರ ಟ್ವೀಟ್‌ಗಳು ಬಿಸಿಸಿಐ ಬಗ್ಗೆ ಮಾತನಾಡಿರುವ ಕಾರಣ ಇದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಟ್ವೀಟನ್ನು ಅಳಿಸಿದ್ದೇನೆ ಎಂದು ಹೇಳಿದ್ದರು.
ನೆಟ್ಟಿಗರು ಮತ್ತೆ ವೆಂಕಟೇಶ್ ಅವರ ಮೇಲೆ ಗರಂ ಆದ ಕಾರಣ ಇನ್ನೊಂದು ಟ್ವೀಟ್ ಮಾಡಿರುವ ವೆಂಕಿ, ನಾನು ಹೇಳಿದ್ದ ಟ್ವೀಟ್ ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ, ಕಾರ್ಪೊರೇಟ್ ಪ್ರತಿಯೊಂದು ಕ್ಷೇತ್ರದಲ್ಲಿರುವುದು ನಿಜ ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಟವಾಡಿದ ಧೋನಿ
ಇದಾದ ನಂತರ ಟ್ವೀಟ್ ಡಿಲೀಟ್ ಮಾಡಿದ್ದನ್ನು ಬಹಿರಂಗಪಡಿಸಿದವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಹಾಗೂ ರೀಟ್ವೀಟ್ ಮಾಡತೊಡಗಿದ್ದಾರೆ. ಇದಲ್ಲವೂ ಜಯ್ ಶಾ ಮೇಲಿನ ಭಯದಿಂದ ಹೀಗೆ ಮಾಡಲಾಗುತ್ತಿದೆ ಎಂದು ನೆಟ್ಟಿಗರು ವೆಂಕಟೇಶ್ ಪ್ರಸಾದ್ ವಿರುದ್ಧ ತಿರುಗೇಟು ನೀಡುತ್ತಿದ್ದಾರೆ.

ಇದಕ್ಕೂ ಒಂದು ದಿನ ಮುನ್ನ ವೆಂಕಟೇಶ್ ಪ್ರಸಾದ್, ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೂಪರ್-4ರ ಪಂದ್ಯಕ್ಕೆ ಮಾತ್ರ ಮೀಸಲು ದಿನ ಕಲ್ಪಿಸಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.
“ಇದು ಖಂಡಿತವಾಗಲೂ ನಾಚಿಕೆಗೇಡಿನ ಸಂಗತಿಯಾಗಿದೆ. ಆಯೋಜಕರು ಅಪಹಾಸ್ಯ ಮಾಡುತ್ತಿದ್ದಾರೆ. ಇತರೆ ಎರಡು ತಂಡಗಳಿಗೆ ನಿಯಮಗಳು ವಿಭಿನ್ನವಾಗಿರುವುದರಿಂದ ಟೂರ್ನಿಯು ಅನೈತಿಕವಾಗಿದೆ. ಇದರಲ್ಲಿ ನ್ಯಾಯ ಇದೆಯಾ? ಮೊದಲನೇ ದಿನ ಮಳೆ ಬಂದು ಪಂದ್ಯ ರದ್ದಾಗಿ, ಮೀಸಲು ದಿನವೂ ಭಾರಿ ಮಳೆಯಾಗಲಿ. ಆ ಮೂಲಕ ಇವರ ದುರುದ್ದೇಶದ ಯೋಜನೆ ವಿಫಲವಾಗಲಿ,” ಎಂದಿದ್ದರು.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನವನ್ನು ನೀಡಿದೆ. ಆದರೆ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ಪಂದ್ಯಕ್ಕೆ ಮೀಸಲು ದಿನ ನೀಡಲಾಗಿರಲಿಲ್ಲ.