ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಿಂದ ಪ್ರೇರಣೆ ಪಡೆದಿರುವ ತಮಿಳುನಾಡು ಸರ್ಕಾರ ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ಪ್ರತಿ ತಿಂಗಳು ತಲಾ 1 ಸಾವಿರ ರೂ.ನಂತೆ ಆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಯೋಜನೆಗೆ ಸೆ.15ರಿಂದ ಚಾಲನೆ ನೀಡಲಿದೆ.
ಯೋಜನೆ ಆರಂಭಿಸುವ ಬಗ್ಗೆ ಚೆನ್ನೈನ ಸೆಕ್ರೆಟೇರಿಯಟ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ‘ಮಹಿಳೆಯರ ಜೀವನದ ಗುಣಮಟ್ಟ ಹೆಚ್ಚಿಸಲು ಆರಂಭಿಸಿರುವ ಈ ಯೋಜನೆಯ ಉಪಕ್ರಮ “ಮಗಲಿರ್ ಉರಿಮೈ ತೊಗೈ” ಯೋಜನೆಯಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು, ಇದನ್ನು ನಗದೀಕರಿಸಿಕೊಳ್ಳಲು ಅವರಿಗೂ ಎಟಿಎಂ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಅರ್ಹ ಮಹಿಳೆಯರಿಗೆ ಸೆಪ್ಟೆಂಬರ್ 15 ರಿಂದ ಅವರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಜಮಾ ಮಾಡುವಂತೆ ನಾವು ವ್ಯವಸ್ಥೆ ಮಾಡಿದ್ದೇವೆ. ಒಟ್ಟು 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 1,06,50,000 ಮಂದಿ ಪ್ರಯೋಜನಕ್ಕಾಗಿ ಅಂತಿಮ ಪಟ್ಟಿ ಮಾಡಲಾಗಿದೆ’ ಎಂದರು.
ಈ ಸುದ್ದಿ ಓದಿದ್ದೀರಾ? ಜಿ 20 ಶೃಂಗಸಭೆ ಮುಗಿದಿದೆ, ಮೋದಿ ಸರ್ಕಾರ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು: ಮಲ್ಲಿಕಾರ್ಜುನ ಖರ್ಗೆ
ಮಾಜಿ ಮುಖ್ಯಮಂತ್ರಿ, ದಿವಂಗತ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದಂದು ಪ್ರಾರಂಭಿಸಲಿರುವ ಯೋಜನೆಯನ್ನು ವರ್ಚುವಲ್ ಮೂಲಕ ಪರಿಶೀಲಿಸಿದ ಮುಖ್ಯಮಂತ್ರಿ, ಅದರ ಅನುಷ್ಠಾನದ ಮೇಲ್ವಿಚಾರಣೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ವಹಿಸಲು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರಿಗೆ ಸೂಚಿಸಿದರು.
“ಎಟಿಎಂ ಕಾರ್ಡ್ಗಳನ್ನು ಆರಂಭದಲ್ಲಿ ನಿರ್ದಿಷ್ಟ ಸಂಖ್ಯೆಗಳಿಗೆ ನೀಡಲಾಗುವುದು. ನಂತರದಲ್ಲಿ ಎಲ್ಲರಿಗೂ ನೀಡಬೇಕಾಗುತ್ತದೆ. ಆದರೆ ಯೋಜನೆಗೆ ಆಯ್ಕೆಯಾದ ಎಲ್ಲರಿಗೂ ಎಟಿಎಂ ಕಾರ್ಡ್ಗಳಿಗಾಗಿ ಕಾಯುವ ಬದಲು ತಕ್ಷಣ ನಗದು ಒದಗಿಸುವ ಯೋಜನೆಯನ್ನು ಕೂಡ ಆರಂಭಿಸಲಾಗುತ್ತದೆ” ಎಂದು ಸ್ಟಾಲಿನ್ ಹೇಳಿದರು.
ತಮಿಳುನಾಡು ಸರ್ಕಾರ 2023-24ರ ಬಜೆಟ್ನಲ್ಲಿ ಈ ಯೋಜನೆಗೆ 7 ಸಾವಿರ ಕೋಟಿ ರೂ. ನಿಗದಿಪಡಿಸಿದೆ ಎಂದು ಹೇಳಿದ್ದರೂ, ಯೋಜನೆಗೆ ಹೆಚ್ಚು ವೆಚ್ಚವಾಗಲಿದೆ ಎಂದು ನಂಬಲಾಗಿದೆ. ಈ ಯೋಜನೆಗೆ ವಾರ್ಷಿಕ 12,000 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಪರವಾಗಿ ಫಲಾನುಭವಿಗಳಿಗೆ ಸೆಪ್ಟೆಂಬರ್ 15 ರಂದು ಎಸ್ಎಂಎಸ್ ಕಳುಹಿಸಲಾಗುವುದು. ಯೋಜನೆಯಲ್ಲಿ ಸಂಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿವರಗಳನ್ನು ಎಸ್ಎಂಎಸ್ ಹೊಂದಿರುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನ ಪಡೆಯಲು ಶಾರ್ಟ್ಲಿಸ್ಟ್ ಆಗದವರಿಗೆ ಏಕೆ ಆಗಿಲ್ಲ ಎಂಬ ಕಾರಣವನ್ನು ನೀಡಲಾಗುವುದು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶಕ್ಕೇ ಮಾದರಿಯಾಗುತ್ತಿದೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಅಭಿನಂದನೆಗಳು ಸರ್ ಸಿದ್ದರಾಮಯ್ಯ ಅವರಿಗೆ 🙏