ಅನುಮತಿ ದೊರೆತರೂ, ದೊರೆಯದಿದ್ದರೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಎನ್ನುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ಭಕ್ತಿಯಿಲ್ಲ. ಭಯೋತ್ಪಾದಕ ಮನಸ್ಥಿತಿ ಇದೆ ಎಂದು ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸುತ್ತೇವೆಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿ ಭಾಸ್ಕರ್ ಪ್ರಸಾದ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಬಿಜೆಪಿ ಮತ್ತು ಸಂಘ ಪರಿವಾರ ಸಮಾಜದಲ್ಲಿ ಗಲಭೆಗಳನ್ನು ಸೃಷ್ಟಿ ಮಾಡಲು ಅವಕಾಶಗಳಿಗಾಗಿ ನಿರಂತರ ತಡಕಾಟದಲ್ಲಿ ತೊಡಗಿರುತ್ತವೆ. ಅದರ ಭಾಗವಾಗಿ ಇದ್ಗಾ ಮೈದಾನಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪಟ್ಟು ಹಿಡಿಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಹುಬ್ಬಳ್ಳಿ ಈದ್ಗಾ ಮೈದಾನ ಹಿಂದಿನಿಂದಲೂ ಇವರ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗುತ್ತ ಬಂದಿದೆ. ಮುಸ್ಲಿಮರನ್ನು ವಿಲನ್ ಮಾಡಲು ಈ ಹಿಂದುತ್ವ ಪಡೆಗಳು ಪಾಕ್ ಧ್ವಜ ಹಾರಿಸುವ, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡುವ ನೀಚ ಕಾರ್ಯಗಳನ್ನು ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ” ಎಂದು ಕಿಡಿಕಾರಿದ್ದಾರೆ.
“ಅನುಮತಿ ನೀಡದಿದ್ದರೂ ಹುಬ್ಬಳ್ಳಿ ಇದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿಯೇ ತಿರುತ್ತೇವೆ ಎಂಬ ಬಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ನೆಲದ ಕಾನೂನು ಧಿಕ್ಕರಿಸುವ ಮಾತುಗಳನ್ನಾಡಿದ್ದಾರೆ. ಬಿಜೆಪಿಯ ದ್ವೇಷದ ತಂತ್ರಗಳಿಗೆ ಸರ್ಕಾರ ಸೊಪ್ಪು ಹಾಕಬಾರದು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಾವುದೇ ಕಾರಣಕ್ಕೂ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು” ಎಂದು ಒತ್ತಾಯಿಸಿದ್ದಾರೆ.