ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಾರೆ.
ಚೈತ್ರಾ ಕುಂದಾಪುರ ಹೇಳಿದ್ದು ಇಷ್ಟು: “ಸ್ವಾಮೀಜಿ ಬಂಧನವಾಗಲಿ ದೊಡ್ಡವರ ಹೆಸರು ಹೊರ ಬರತ್ತೆ!”. ಯಾರು ದೊಡ್ಡವರು? ಖಂಡಿತಾ ಬಿಜೆಪಿ ಅಥವಾ ಆರ್‌ಎಸ್‌ಎಸ್ ಮುಖಂಡರು ಯಾರಾದರೂ ಇರಬಹುದು. ಏಕೆಂದರೆ ಕೋಟಿ ಸಂಪಾದಿಸುವಷ್ಟು ಬುದ್ಧಿ ಇರುವ ಗೋವಿಂದರು, ಅದನ್ನು ಯಾರಾದರೂ ಅಧಿಕೃತ ಅಥವಾ ಜನಪ್ರಿಯ ಬಿಜೆಪಿ ಮುಖಂಡರಿಗೆ ತಲುಪಿಸಿದರೆ ಮಾತ್ರ ತನಗೆ ಟಿಕೆಟ್ ಸಿಗಬಹುದು, ಚೈತ್ರಾರಿಗೆ ಕೊಟ್ಟರೆ ಅದು ಅಸಾಧ್ಯ ಎಂದು ತಿಳಿಯದಷ್ಟು ಮೂರ್ಖರಾಗಿರಲು ಸಾಧ್ಯವಿಲ್ಲ.
ಬಿಜೆಪಿ ಈ ದೇಶದಲ್ಲಿ ಕೋಮುವಾದ, ಹಿಂದುತ್ವ, ಧರ್ಮ ರಕ್ಷಣೆ ಎಂಬ ವಿಷಯಗಳಿಂದ ಅಧಿಕಾರಕ್ಕೆ ಬಂದರೂ ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತಾ ಇರುವುದು ವ್ಯಾಪಕ ಅವ್ಯಾಹತ ಭ್ರಷ್ಟಾಚಾರ. ದೇಶವನ್ನೇ ಬೆರಳೆಣಿಕೆಯ ಬಹುರಾಷ್ಟ್ರೀಯ ಕಂಪೆನಿ ಮಾಲೀಕರ ಕೈಗೆ ಪರೋಕ್ಷವಾಗಿ ನೀಡುತ್ತಾ ಇದೆ. ಚೈತ್ರಾ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದಾಗ ಗೋವಿಂದ ಎಂಬ ಉದ್ಯಮಿಗೆ ಮೊದಲು ಕೇಸರಿ ಶಾಲು ಹಾಕಿಸಿದ್ದು, ಆಮೇಲೆ ಅವರನ್ನು ಹಿಂದೂ ಮುಖಂಡ ಎಂದು ಹೊಗಳಿ ಅಟ್ಟಕ್ಕೇರಿಸಿದ್ದು, ಆಮೇಲೆ ಅವರಿಂದ ಕೋಟ್ಯಂತರ ರೂ. ಕಬಳಿಸಿದ್ದು, ಇದಾದ ಬಳಿಕ ಬಿಜೆಪಿಯ ನಾಯಕರಾದ ಶೋಭಾ ಹಾಗೂ ಸುನೀಲ್ ಅವರು ಪ್ರತಿಕ್ರಿಯಿಸಿ, “ನಮಗೆ ಚೈತ್ರಾ ಪರಿಚಯವಿಲ್ಲ” ಎಂದು ಹೇಳಿರುವುದು ಶತಮಾನದ ದೊಡ್ಡ ಜೋಕ್.
ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಾರೆ. ಹಾಗಾಗಿ ತನಿಖಾ ಸಂಸ್ಥೆಗಳು ಕೂಡ ಇದೇ ನಿಟ್ಟಿನಲ್ಲಿ ತನಿಖೆ ನಡೆಸಿದರೆ ದೊಡ್ಡವರು ಯಾರು ಎಂಬುದು ಗೊತ್ತಾಗುತ್ತದೆ.
ಒಟ್ಟಾರೆ ಸಾರಾಂಶ ಏನೆಂದರೆ ಕರಾವಳಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಯುವ ಜನತೆಯನ್ನು ಬಿಜೆಪಿ ಯಾವತ್ತೋ ಹಾಳು ಮಾಡಲು ಪ್ರಾರಂಭಿಸಿ ಆಗಿದೆ. ಈಗ ಆರ್ಥಿಕವಾಗಿ ಮುಂದೆ ಬಂದವರೂ ಹಾಳಾಗುತ್ತಾ ಇದ್ದಾರೆ. ಗೋವಿಂದ ಪೂಜಾರಿಯವರು ಸೂಟುಬೂಟಿನ ಮೇಲೆ ಕೇಸರಿ ಶಾಲು ಹಾಕಿ ತಿರುಗಾಡುವುದಕ್ಕಿಂತ ಜೀವನದಲ್ಲಿ ವಾಮಮಾರ್ಗದಲ್ಲಿ ಯಶಸ್ಸು ಕಾಣುವ ಪ್ರಯತ್ನವನ್ನು ನಿಲ್ಲಿಸಿ ನೇರ ಮಾರ್ಗದಲ್ಲಿ ಬದುಕಿ ಯಶಸ್ವಿಯಾದರೆ, ಅದೇ ನೈಜ ಧರ್ಮ ಪಾಲನೆ ಆಗುತ್ತದೆ. ಶಾಲು, ಹಾಡು, ಧ್ವಜ, ಘೋಷಣೆ ಇವೆಲ್ಲವೂ ಸಂಕೇತಗಳು. ಬದುಕು ಸಾಗಿಸುವ ರೀತಿ ಧರ್ಮಮಾರ್ಗದಲ್ಲಿ ಇರದೇ ಸಂಕೇತಗಳಿಂದ ಏನೂ ಲಾಭವಿಲ್ಲ.

ಅಮೃತ್ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ