ಕಂದಾಯ ದಾಖಲೆಗಳಲ್ಲಿ ತಪ್ಪುಗಳದೇ ರಾಜ್ಯಭಾರ. ಶೇ.75ಕ್ಕೂ ಹೆಚ್ಚು ರೈತರ ಭೂ ದಾಖಲೆಗಳು ಒಂದಿಲ್ಲೊಂದು ರೀತಿಯ ತಪ್ಪುಗಳಿಂದ ಕೂಡಿವೆ. ಒಂದು ಊರಿನಲ್ಲಿ ಎಲ್ಲ ಭೂ ದಾಖಲೆಗಳು ಸರಿಯಾಗಿರುವ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇರುವುದಿಲ್ಲ ಎಂದರೆ, ಈ ಸಮಸ್ಯೆಯ ಗಂಭೀರತೆ ಮತ್ತು ವ್ಯಾಪಕತೆಯನ್ನು ಅರ್ಥ ಮಾಡಿಕೊಳ್ಳಬಹುದು. ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು, ಅವುಗಳ ರಗಳೆಗಳನ್ನು ಬಗೆಹರಿಸಿಕೊಳ್ಳುವುದು ಪ್ರತಿಯೊಬ್ಬ ರೈತನ ಜೀವಿತಾಶಯಗಳಲ್ಲಿ ಒಂದಾಗಿರುತ್ತದೆ.
ಸಾವಿಲ್ಲದ ಮನೆಯ ಸಾಸಿವೆ ಸಿಗುವುದು ಹೇಗೆ ಸಾಧ್ಯವಿಲ್ಲವೋ ಹಾಗೆ ಭೂವಿವಾದ, ಭೂದಾಖಲೆ ಸಂಬಂಧದ ತಂಟೆ ತಕರಾರು ತಗಾದೆ ಇಲ್ಲದ ರೈತ ಸಿಗುವುದು ಬಹು ಅಪರೂಪ. ವಾರಕ್ಕೊಮ್ಮೆಯಾದರೂ ನಾಡ ಕಚೇರಿ, ತಾಲ್ಲೂಕು ಕಚೇರಿಗೆ ಭೇಟಿ ಕೊಡದ ರೈತರು ವಿರಳ. ಅಷ್ಟರ ಮಟ್ಟಿಗೆ ಅವು ರೈತರ ಬದುಕಿನ ಭಾಗವಾಗಿವೆ. ತಮ್ಮ ಜಮೀನು ದಾಖಲೆ, ಬೆಳೆ ವಿವರ, ಬೆಳೆ ಪರಿಹಾರ, ಜಮೀನು ತಿದ್ದುಪಡಿ, ಮಾರಾಟ, ಅಣ್ಣತಮ್ಮಂದಿರು-ಅಕ್ಕತಂಗಿಯರೊಂದಿಗೆ ವಿಭಾಗ (ಪಾಲು ಪಾರೀಖತ್), ಮಕ್ಕಳು ಮೊಮ್ಮಕ್ಕಳಿಗೆ ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಮಾರ್ಟ್ ಗೇಜ್.. ಎಲ್ಲದಕ್ಕೂ ರೈತರು ಕಂದಾಯ ಇಲಾಖೆಯ ಕಚೇರಿಗಳನ್ನು ಆಶ್ರಯಿಸಬೇಕಾಗಿದೆ. ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು ಮತ್ತು ಅವುಗಳಿಗೆ ಸಂಬಂಧಿಸಿದ ರಗಳೆಗಳನ್ನು ಬಗೆಹರಿಸಿಕೊಳ್ಳುವುದು ಪ್ರತಿಯೊಬ್ಬ ರೈತನ ಜೀವಿತಾಶಯಗಳಲ್ಲಿ ಒಂದಾಗಿರುತ್ತದೆ.
ಭೂ ದಾಖಲೆಗಳು ಜಾರಿಗೆ ಬಂದ ಕಥೆ ಆಸಕ್ತಿಕರವಾಗಿದೆ. ಬ್ರಿಟೀಷರ ಕಾಲದಲ್ಲಿ ತೆರಿಗೆ ವಸೂಲಿಗೆ ಅನುಕೂಲವಾಗಲಿ ಎಂದು 1869ರಲ್ಲಿ ಮೊದಲ ಬಾರಿಗೆ ಭೂಮಿಯ ಮೂಲ ಸರ್ವೆ ಮಾಡಲಾಯಿತು. ಆಗ ಬ್ರಿಟೀಷರು ಭಾರತದಲ್ಲಿ ರೈತರ ಅನುಭವದಲ್ಲಿದ್ದ ಪ್ರತಿಯೊಂದು ಜಮೀನಿಗೂ ಪ್ರಪ್ರಥಮವಾಗಿ ಒಂದು ಸರ್ವೆ ನಂಬರನ್ನು ನೀಡಿ, ಪ್ರತಿಯೊಂದು ಸರ್ವೆ ನಂಬರ್‌ಗೂ ಚಕ್ಕುಬಂದಿ, ಉದ್ದ ಅಗಲ ಅಳತೆ ಬರುವ ಗಣಿತದ ನಕ್ಷೆಯನ್ನು ಅಭಿವೃದ್ಧಿಪಡಿಸಿದರು. ಹಳ್ಳಕೊಳ್ಳ, ಖರಾಬು, ದಾರಿ ಇತ್ಯಾದಿ ಆಧರಿಸಿ ಮೂಲ ಟಿಪ್ಪಣಿ, ಮೂಲ ನಕಾಶೆ, ಪಕ್ಕಾ ಪುಸ್ತಕ, ಪ್ರತಿ ಪುಸ್ತಕ ಸಿದ್ಧಪಡಿಸಲಾಯಿತು. ಈಗಲೂ ಅವು ಯಾವುದೇ ಜಮೀನು ಅಥವಾ ಭೂಮಿಯ ಅಧಿಕೃತ ಮತ್ತು ಮೂಲ ದಾಖಲೆಗಳಾಗಿವೆ.
ನಂತರ 1905ರಲ್ಲಿ ರೀ ಸರ್ವೆ ಮಾಡಲಾಯಿತು. ಅದರಲ್ಲಿ 1869ರ ಸರ್ವೆಯ ಲೋಪಗಳನ್ನು ಸರಿಪಡಿಸಲಾಯಿತು. ನಂತರ 1935ರಲ್ಲಿ ಹಿಸ್ಸಾ ಸರ್ವೆ ಮಾಡಲಾಯಿತು. ಆಗ ಪಾಲನಿ ಪದ್ಧತಿಯಲ್ಲಿ ಅಳತೆ ಮಾಡಲಾಗಿತ್ತು. ಈಗಲೂ ಸರ್ವೆ ಇಲಾಖೆಯಲ್ಲಿರುವ ಮೂಲ ದಾಖಲೆಗಳು 1935ರಲ್ಲಿ ತಯಾರಾದಂಥವು. ಸ್ವಾತಂತ್ರ್ಯಾನಂತರ, 1965ರಲ್ಲಿ, ಸೆಕೆಂಡರಿ ರೀ ಕ್ಲಾಸಿಫಿಕೇಷನ್ ಶುರುವಾಯಿತು. ರಸ್ತೆ, ಜಲ ಯೋಜನೆ, ಅರಣ್ಯ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಂಡು ಭೂಮಿಯನ್ನು ಪುನರ್ ವರ್ಗೀಕರಣ ಮಾಡಲಾಯಿತು. ಸರ್ಕಾರವು ಪ್ರತಿ 30 ವರ್ಷಕ್ಕೊಮ್ಮೆ ಈ ರೀ ಕ್ಲಾಸಿಫಿಕೇಷನ್ ಸರ್ವೆಯನ್ನು ಮಾಡಬೇಕು. ಆದರೆ, 1965ರ ನಂತರ ಮರು ಸರ್ವೆ ಆಗಲೇ ಇಲ್ಲ. ಅದರಿಂದಾಗಿ ನಮ್ಮ ಭೂ ಕಂದಾಯ ಕೂಡ ಪರಿಷ್ಕರಣೆ ಆಗಿಲ್ಲ.
1904ರಲ್ಲಿ ಹಳ್ಳಿ ನಕ್ಷೆಗಳು ತಯಾರಾದವು. ಹಳ್ಳಿ ನಕ್ಷೆಗಳನ್ನು ಸೇರಿಸಿದರೆ ಹೋಬಳಿ ನಕ್ಷೆ ಸಿಗುತ್ತದೆ. ಅವನ್ನೆಲ್ಲ ಒಟ್ಟುಗೂಡಿಸಿದರೆ, ತಾಲ್ಲೂಕು ನಕ್ಷೆ ಸಿಗುತ್ತದೆ. ಹೀಗೆ ಜಿಲ್ಲಾ ನಕ್ಷೆ, ರಾಜ್ಯ ನಕ್ಷೆ ಮತ್ತು ಇಡೀ ದೇಶದ ನಕ್ಷೆ ಸಿಗುತ್ತದೆ. ಈಗ ವ್ಯಾಪಕವಾಗಿ ಬಳಕೆಯಾಗುತ್ತಿರುವ ಗೂಗಲ್ ಮ್ಯಾಪ್‌ಗೆ ಆಧಾರವಾಗಿರುವುದು ಇದೇ ನಕ್ಷೆಗಳು.
1920ರ ನಂತರ ಕ್ರಯ ಪತ್ರಗಳು (ಸೇಲ್ ಡೀಡ್) ಜಾರಿಗೆ ಬಂದವು. ಆನಂತರ ಇಂಡೆಕ್ಸ್ ಆಫ್ ಲ್ಯಾಂಡ್ ಮತ್ತು ರೆಕಾರ್ಡ್ಸ್ ಆಫ್ ರೈಟ್ಸ್ (ಐಎಲ್‌ಆರ್‌ಆರ್) ಬಂತು. 1965ರಲ್ಲಿ ರೀ ಕ್ಲಾಸಿಫಿಕೇಷನ್ ಟಿಪ್ಪಣ್ ಬಂತು. 1968ರ ನಂತರ ಕೈ ಬರಹದ ಪಹಣಿಗಳು ಜಾರಿಗೆ ಬಂದವು. ಶಾನುಭೋಗರು ಆಗ ಯಾವ ಜಮೀನಿನಲ್ಲಿ ಯಾರು ಅನುಭೋಗದಲ್ಲಿದ್ದಾರೆ ಎನ್ನುವುದರ ಆಧಾರದ ಮೇಲೆ ಕೈ ಬರಹದ ಪಹಣಿಗಳನ್ನು ಬರೆಯುತ್ತಿದ್ದರು. ಜಮೀನು ಮಾರಾಟಗಳು ಹೆಚ್ಚಾದಂತೆ ಜಮೀನು ಹಸ್ತಾಂತರ ಸೂಚಿಸುವ ಮ್ಯುಟೇಷನ್, ಎನ್‌ಕಂಬ್ರೆನ್ಸ್ ಸರ್ಟಿಫಿಕೇಟ್ (ಇಸಿ) ದಾಖಲೆಗಳು ಚಾಲ್ತಿಗೆ ಬಂದವು.
2000ನೇ ವರ್ಷದಿಂದ ಕಂದಾಯ ದಾಖಲೆಗಳ ಡಿಜಟಲೀಕರಣ ಶುರುವಾಯಿತು. ಕಂಪ್ಯೂಟರೀಕೃತ ಪಹಣಿ ಜಾರಿಗೆ ಬಂತು. 1900ರಿಂದ ಶಾನುಭೋಗರು ಬರೆದಿದ್ದ ಸರ್ವೆ ದಾಖಲೆಗಳು, ಪಹಣಿಗಳು, ಮ್ಯುಟೇಷನ್‌ಗಳು ಗಣಕೀಕರಣಗೊಂಡವು.
ಇವತ್ತು ರೈತರು ಅನುಭವಿಸುತ್ತಿರುವ ಅನೇಕ ಕಷ್ಟಗಳಿಗೆ ಮೂಲ ಕಾರಣ ಶಾನುಭೋಗರ ಕೈಬರಹದಲ್ಲಿದೆ. ಶಾನುಭೋಗರು ಕ್ರಯ ಪತ್ರ, ಪಹಣಿ, ಮ್ಯುಟೇಷನ್ ಇತ್ಯಾದಿಗಳಲ್ಲಿ ಬರೆದಿದ್ದ ಬರಹವನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಮಹಾ ಪ್ರಯಾಸದ ಕೆಲಸ. ಅದು ಒಂದು ರೀತಿಯ ಮೋಡಿ ಬರಹ. ಅದನ್ನು ಓದಿ ಅರ್ಥ ಮಾಡಿಕೊಳ್ಳುವುದಿರಲಿ, ಅದು ಯಾವ ಭಾಷೆಯದು ಎಂದು ಕಂಡುಹಿಡಿಯಲೂ ಕೂಡ ಕೆಲವೊಮ್ಮೆ ತಿಣುಕಾಡಬೇಕು, ಹಾಗಿದೆ ಅವುಗಳ ಲಿಪಿ. ಆಗ ಬಹುತೇಕ ರೈತರು ಅನಕ್ಷರಸ್ಥರು. ಹೀಗಾಗಿ ಶಾನುಭೋಗರು ಬರೆದಿದ್ದೇ ಬರಹ ಎಂಬಂತಾಗಿತ್ತು. ಭೂತಗನ್ನಡಿ ಹಾಕಿ ಓದಿದರೂ ಪದಗಳನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಿಲ್ಲ. ಈಗ ವಿವಿಧ ನ್ಯಾಯಾಲಯಗಳಲ್ಲಿರುವ, ತಹಶೀಲ್ದಾರ್, ಎಸಿ ಕಚೇರಿಗಳಲ್ಲಿರುವ ರೈತರ ಸಾವಿರಾರು ತಗಾದೆಗಳಿಗೆ ಶಾನುಭೋಗರ ಈ ಮೋಡಿ ಬರಹವೇ ಕಾರಣ. ಅನೇಕ ಬಾರಿ ಒಂದು ಅಂದಾಜಿನ ಮೇಲೆ ಅರ್ಥ ಮಾಡಿಕೊಂಡು ಅವುಗಳ ಬಗ್ಗೆ ಒಂದು ನಿರ್ಣಯಕ್ಕೆ ಬರಲಾಗುತ್ತದೆ.
ಕೈಬರಹದ ದಾಖಲೆಗಳನ್ನು ಗಣಕೀಕರಣ ಮಾಡುವಾಗ ಕಂದಾಯ ಇಲಾಖೆಯ ಸಿಬ್ಬಂದಿಗೆ ಶಾನುಭೋಗರ ಬರಹ ಅರ್ಗವಾಗದೇ ಇರುವುದು ಕೂಡ ಭೂ ದಾಖಲೆಗಳಲ್ಲಿನ ಅಸಂಖ್ಯಾತ ಲೋಪಗಳಿಗೆ ಒಂದು ಮುಖ್ಯ ಕಾರಣವಾಗಿದೆ. ಇವುಗಳ ಜೊತೆಗೆ ರೈತರು ವಿಭಾಗ ಮಾಡಿಕೊಳ್ಳುವಾಗ, ಹಸ್ತಾಂತರ ಮಾಡುವಾಗ ಸೃಷ್ಟಿಸಿಕೊಂಡ ತಕರಾರುಗಳೂ ಸೇರಿ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಕೆಲವರಿಗಂತೂ ಅವರಿಗೆ ಇರುವ ಜಮೀನಿನ ವಿಸ್ತೀರ್ಣಕ್ಕಿಂತ ಆ ಜಮೀನು ಕುರಿತ ಇರುವ ತಂಟೆ ತಕರಾರುಗಳ ಸಂಖ್ಯೆಯೇ ದೊಡ್ಡದಿದೆ.
ಜಮೀನು ಎನ್ನುವುದು ರೈತರ ಬದುಕಿನ ಮೂಲಾಧಾರ, ನಿಜ. ಆದರೆ, ವಾಸ್ತವವಾಗಿ, ಅದೊಂದು ಆಸ್ತಿ. ಬಹುತೇಕ ರೈತರು ಒಂದಿಲ್ಲೊಂದು ಸಂದರ್ಭದಲ್ಲಿ ಜಮೀನು ಮಾರುತ್ತಾರೆ. ಹೆಣ್ಣು ಮಕ್ಕಳ ಮದುವೆ ಮಾಡಲು ಜಮೀನು ಮಾರುವವರ ಸಂಖ್ಯೆ ನಮ್ಮಲ್ಲಿ ದೊಡ್ಡದಿದೆ. ಹಾಗೆಯೇ ತಿಥಿ ಮಾಡಲು ಕೂಡ ನಮ್ಮಲ್ಲಿ ಜಮೀನು ಮಾರಿದವರಿದ್ದಾರೆ. (ರಾಮ್ ರೆಡ್ಡಿ ನಿರ್ದೇಶನದ ಕನ್ನಡದ ಶ್ರೇಷ್ಠ ಚಿತ್ರಗಳಲ್ಲೊಂದಾದ ’ತಿಥಿ’ಯ ವಸ್ತು ಇದೇ). ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಮೀನು ಮಾರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇನ್ನು ಅಪ್ಪ, ಅಮ್ಮ, ಹೆಂಡತಿ ಮಕ್ಕಳ ಕಾಯಿಲೆ ಕಸಾಲೆಯ ಸಂದರ್ಭದಲ್ಲೂ ಜಮೀನು ಮಾರಿದವರಿದ್ದಾರೆ. ಇಂಥ ಸಂದರ್ಭಗಳಲ್ಲೆಲ್ಲ ಜಮೀನು ದಾಖಲೆಗಳು ಸಮರ್ಪಕವಾಗಿಲ್ಲದೇ, ಸಿಕ್ಕ ಬೆಲೆಗೆ ಭೂಮಿ ವಿಲೇವಾರಿ ಮಾಡಿ ಬದುಕಿನ ಆಧಾರ ಕಳೆದುಕೊಂಡ ರೈತರ ಸಂಖ್ಯೆ ನಮ್ಮಲ್ಲಿ ಗಣನೀಯವಾಗಿದೆ. ಇದೆಲ್ಲ ನಮ್ಮ ಹಣೆಬರಹ ಎಂದು ಅಂದುಕೊಳ್ಳುತ್ತಾ ಕಷ್ಟ ನಷ್ಟ ಅನುಭವಿಸುವ ರೈತರ ಬವಣೆಗೆ ವಾಸ್ತವ ಕಾರಣ ಶಾನುಭೋಗರ ಕೈಬರಹ.
ಪಹಣಿ (ರೆಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ- ಆರ್‌ಟಿಸಿ) ವ್ಯಾಪಕವಾಗಿ ಬಳಕೆಯಾಗುವ ಭೂಮಿಯ ಪ್ರಾಥಮಿಕ ದಾಖಲೆಯಾಗಿದೆ. ಪಹಣಿಯಲ್ಲಿ 16 ಕಾಲಂಗಳು ಇದ್ದು, ಅವು ಜಮೀನಿನ ಸಮಗ್ರ ಮಾಹಿತಿ ನೀಡುತ್ತವೆ. ಸರ್ವೆ ನಂಬರ್, ವಿಸ್ತೀರ್ಣ, ಖರಾಬು, ಹಕ್ಕುದಾರನ ಹೆಸರು, ರಸ್ತೆ, ಹಳ್ಳ, ದಾರಿ, ಖುಷ್ಕಿ, ತರಿ, ಭಾಗಾಯ್ತು, ಅಡಮಾನ, ಸಾಗುವಳಿ ಪದ್ಧತಿ ಹೀಗೆ ಎಲ್ಲವನ್ನೂ ಪ್ರತ್ಯೇಕ ಕಾಲಂಗಳಲ್ಲಿ ನಮೂದಿಸಲಾಗುತ್ತದೆ. 2000ದಿಂದ ಇವೆಲ್ಲವನ್ನೂ ‘ಭೂಮಿ’ ಸಾಫ್ಟ್‌ವೇರ್‌ನಲ್ಲಿ ಅಳವಡಿಸುವ ಕಾರ್ಯ ಆರಂಭವಾಯಿತು. ಕ್ರಯ ಪತ್ರಗಳನ್ನು ಕೈಯಲ್ಲಿ ಬರೆಯುವ ಪದ್ಧತಿ ಹೋಗಿ ಕಂಪ್ಯೂಟರ್‌ನಲ್ಲಿ ಮುದ್ರಿಸುವ ಪರಿಪಾಠ ಬೆಳೆಯಿತು. ಭೂಮಿ ತಂತ್ರಾಂಶ ಅಭಿವೃದ್ಧಿಪಡಿಸಿ, ರೈತರಿಗೆ ತಾಲ್ಲೂಕು ಕಚೇರಿಯ ಹೊರಗೂ ಪಹಣಿ, ಮ್ಯುಟೇಷನ್‌ಗಳು ಲಭ್ಯವಾಗುವಂತೆ ಮಾಡಲಾಯಿತು. ಜೊತೆಗೆ ಉಪನೋಂದಣಾಧಿಕಾರಿಗಳು (ಸಬ್ ರಿಜಿಸ್ಟ್ರಾರ್‌ಗಳು) ಕಾವೇರಿ ತಂತ್ರಾಂಶದ ಮೂಲಕ ಕ್ರಯ ಪತ್ರಗಳನ್ನು ಮಾಡತೊಡಗಿದರು. ಇದೆಲ್ಲದರಿಂದ ಭೂ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ಒಂದು ಹಂತಕ್ಕೆ ಬಂತು ಎನ್ನುವುದೇನೋ ನಿಜ. ಆದರೆ, ಈಗಗಾಲೇ ಇರುವ ಲೋಪಗಳನ್ನು ಸರಿಪಡಿಸುವುದು ದುಸ್ಸಾಧ್ಯದ ಕೆಲಸವಾಗಿ ಪರಿಣಮಿಸಿದೆ.
ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಕುಟುಂಬಗಳಾಗುತ್ತಿವೆ. ಅವರು ಜಮೀನನ್ನು ಹಂಚಿಕೊಂಡು ಬೇರೆ ಬೇರೆಯಾಗಿ ಉಳುಮೆ ಮಾಡುತ್ತಿದ್ದಾರೆ. ಆದರೆ, ದಾಖಲೆಗಳಲ್ಲಿ ಮಾತ್ರ ಬದಲಾಗಿರುವುದಿಲ್ಲ. ಸಾಗುವಳಿ ಮಾಡುತ್ತಿರುವ ರೈತ ಒಬ್ಬನಾಗಿದ್ದರೆ, ಆತನ ತಾತ ಮುತ್ತಾತನ ಹೆಸರಿನಲ್ಲಿಯೇ ಇನ್ನೂ ಪಹಣಿ ಬರುತ್ತಿರುತ್ತದೆ. ಜಮೀನು ಒಬ್ಬನ ಹೆಸರಿನಲ್ಲಿದ್ದರೆ, ಅದರ ಪಹಣಿ ಮತ್ತೊಬ್ಬರ ಹೆಸರಿನಲ್ಲಿರುತ್ತದೆ. ಪವತಿ ಖಾತೆ ಆಗಿಲ್ಲದೇ ಇರುವುದು, ಕಾಲಂ 9ರಲ್ಲಿ ವಿಸ್ತೀರ್ಣ ತಪ್ಪಾಗಿ ನಮೂದಾಗಿರುವುದು, ಒಂದೇ ಪಹಣಿಯಲ್ಲಿ ಹತ್ತಾರು ಮಂದಿ ಖಾತೆದಾರರಿದ್ದು, ಪ್ರತಿಯೊಬ್ಬರಿಗೂ ಅವರ ವಿಸ್ತೀರ್ಣಕ್ಕೆ ತಕ್ಕಂತೆ ಪ್ರತ್ಯೇಕ ಪಹಣಿ ಇಲ್ಲದಿರುವುದು, ಪೋಡಿಯಾಗದೇ ಇರುವುದು ಇಂಥವೇ ನೂರೆಂಟು ಲೋಪಗಳು. ಜಂಟಿ ಮಾಲೀಕತ್ವದಲ್ಲಿ ಒಬ್ಬನ ವಿಸ್ತೀರ್ಣ ಅಥವಾ ಹೆಸರು ಇತ್ಯಾದಿ ತಪ್ಪಿದ್ದರೆ, ಉಳಿದ ಮಾಲೀಕರು ಕೂಡ ಅದರ ಮೇಲೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಕಂದಾಯ ಇಲಾಖೆಗೆ ಎಡತಾಕಿ ಅದನ್ನು ಬೇಗ ಸರಿಪಡಿಸಿಕೊಳ್ಳುವುದೂ ಸಾಧ್ಯವಿಲ್ಲ.
ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ
ಇದು ಒಬ್ಬಿಬ್ಬರು ರೈತರ ಕಥೆಯಲ್ಲ; ಶೇ.75ಕ್ಕೂ ಹೆಚ್ಚು ರೈತರ ಭೂ ದಾಖಲೆಗಳು ಇಂಥ ತಪ್ಪುಗಳಿಂದ ಕೂಡಿವೆ. ಒಂದು ಊರಿನಲ್ಲಿ ಎಲ್ಲ ಭೂ ದಾಖಲೆಗಳು ಸರಿಯಾಗಿರುವ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇರುವುದಿಲ್ಲ ಎಂದರೆ, ಸಮಸ್ಯೆಯ ಗಂಭೀರತೆ ಮತ್ತು ವ್ಯಾಪಕತೆಯನ್ನು ಅರ್ಥಮಾಡಿಕೊಳ್ಳಬಹುದು.