ವರ್ತಮಾನ | ಕನ್ನಡ ಸಾಹಿತ್ಯ ಬರಹಗಳಲ್ಲಿ ಜಾತಿಯ ಗೈರುಹಾಜರಿ ಸಹಜವೋ ಅಸಹಜವೋ?

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಎಚ್ ಆರ್ ಸುಜಾತ ಅವರ 'ಪದುಮ ಪುರುಷ' ಕಥಾ ಸಂಕಲನ ಕುರಿತ ಸಂವಾದ ಕಾರ್ಯಕ್ರಮ ಹಾಸನದಲ್ಲಿ ಸೆಪ್ಟೆಂಬರ್ 2ರಂದು ನಡೆಯಿತು. ಅಂದು ರೋಹಿತ್ ಅಗಸರಹಳ್ಳಿ ಅವರು, ಲೇಖಕಿ ಸುಜಾತ ಅವರಿಗೆ ಕೇಳಿದ ಪ್ರಶ್ನೆಯೊಂದು ಹುಟ್ಟುಹಾಕಿದ ಸಂವಾದ ಮತ್ತು ನಂತರದ ಆಲೋಚನೆಗಳಿವು

“ಕಾರ್ಪೊರೇಟ್ ಆಫೀಸು, ಸರ್ಕಾರಿ ಕಚೇರಿ, ಹಳ್ಳಿ-ಪಟ್ಟಣಗಳು… ಹೀಗೆ ಎಲ್ಲೆಡೆಯೂ ಜಾತಿ ಭೂತ ನಮ್ಮನ್ನು ಬಿಡದೇ ಕಾಡುತ್ತಿದೆ. ಆದರೆ, ಇತ್ತೀಚೆಗೆ ಬರೆಯುತ್ತಿರುವ ಹಲವು ಕತೆಗಾರರ ಕತೆಗಳಲ್ಲಿ ಜಾತಿ ಎಂಬುದು ಗೈರಾಗಿರುತ್ತದೆ. ಇದು ಹೇಗೆ ಸಾಧ್ಯ? ‘ಪದುಮ ಪುರುಷ’ ಸಂಕಲನದ ಅಷ್ಟೂ ಕತೆಗಳಲ್ಲಿ ಎಲ್ಲಿಯೂ ಜಾತಿ ಇಣುಕುವುದಿಲ್ಲ. ಕತೆಗಳಲ್ಲಿ ಜಾತಿಯ ಪ್ರಸ್ತಾಪ ಬರಲೇಬೇಕು ಅಂತೇನಿಲ್ಲ. ಆದರೆ, ಅದು ಏಕೆ ಗೈರಾಗಿದೆ ಎಂಬುದಕ್ಕೆ ಕಾರಣವಿರಬೇಕಲ್ವಾ? ಸಮಾಜದಲ್ಲಿ ಬೇರೂರಿರುವ ಜಾತಿ ಕತೆಗಳಲ್ಲಿ ಗೈರಾಗುವುದೆಂದರೆ ಎಲ್ಲೋ ಏನೋ ತಪ್ಪಿದೆ ಅಂತ ಅರ್ಥ. ವಾಸ್ತವದಲ್ಲಿ ಗೈರಾಗದ ಜಾತಿ, ಬರಹದ ಭಾವುಕಲೋಕದಲ್ಲಿ ಮಾತ್ರ ಗೈರಾದರೆ ನಾವು ಹೆದರಬೇಕಾಗುತ್ತದೆ. ಲೇಖಕರಾದವರು ಸಮಕಾಲೀನ ತವಕ ತಲ್ಲಣಗಳಿಗೆ ಮುಖಾಮುಖಿಯಾಗಬೇಕು. ನಮ್ಮ ಸಮಾಜದ ಚಿತ್ರಣ ಕಟ್ಟಿಕೊಡುವ ನಿಮ್ಮ ಕತೆಗಳಲ್ಲಿ ಏಕೆ ಜಾತಿ ಗೈರುಹಾಜರಾಗಿದೆ?”

– ಹಾಸನದಲ್ಲಿ ಸೆಪ್ಟೆಂಬರ್ 2ರಂದು ನಡೆದ, ಎಚ್ ಆರ್ ಸುಜಾತ ಅವರ ‘ಪದುಮ ಪುರುಷ’ ಕಥಾ ಸಂಕಲನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪುಸ್ತಕದ ಬಗ್ಗೆ ಮಾತನಾಡಿದ ರೋಹಿತ್ ಅಗಸರಹಳ್ಳಿ ಅವರು, ಸುಜಾತ ಅವರಿಗೆ ಕೇಳಿದ ಪ್ರಶ್ನೆ ಇದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂಕಲನದ ಕತೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನೇ ಹೆಚ್ಚು ಆಡಿದ ರೋಹಿತ್ ಅವರು, ಮಾತಿನ ಕೊನೆಗೆ ಕೇಳಿದ ಈ ಪ್ರಶ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಸುಜಾತ ಅವರನ್ನೂ ಒಳಗೊಂಡಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಲವರು ಈ ಪ್ರಶ್ನೆಗೆ ನೀಡಿದ ಉತ್ತರ, ಬರಹಗಾರರ ಒಂದು ವಲಯದಲ್ಲಿ ಬೇರೂರಿರುವ ಅನುಕೂಲಸಿಂಧು ಧೋರಣೆಗೆ ಕನ್ನಡಿ ಹಿಡಿಯುವಂತಿತ್ತು.

ರೋಹಿತ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸುಜಾತ ಅವರು, “50 ವರ್ಷಗಳ ಹಿಂದೆ ನಮ್ಮೂರಿನಲ್ಲಿ ಜಾತೀಯತೆ ಅಷ್ಟಾಗಿ ಇರಲಿಲ್ಲ. ನಮ್ಮೂರಿನಲ್ಲಿ ಒಕ್ಕಲಿಗರ ಕೇರಿ ಮತ್ತು ದಲಿತರ ಕೇರಿ ಇದ್ದರೂ ಎಲ್ಲ ಕೂಡಿ ಬಾಳುತ್ತಿದ್ದರು. ಆಗ ನಮ್ಮೂರಿನಲ್ಲಿ ಶಿಕ್ಷಣ ಪಡೆಯದವರೇ ಹೆಚ್ಚಿದ್ದರು. ಈಗ ಎಲ್ಲರಿಗೂ ಶಿಕ್ಷಣ ದೊರೆಯುತ್ತಿರುವುದರಿಂದ ನಮ್ಮ ನಡುವೆ ಗೆರೆ ಎದ್ದಿದೆ. ಈಗ ಅವರು ಮೊದಲಿನ ಹಾಗೆ ನಮ್ಮನ್ನು ಒಳಗೊಳ್ಳುವುದಿಲ್ಲ. ಬೆಂಗಳೂರಿನಲ್ಲಂತೂ ನಾವು ಯಾರೇ ನಮ್ಮ ಮನೆಗೆ ಬಂದರೂ, ನೀವು ಯಾವ ಜಾತಿ ಅಂತ ಕೇಳಲಿಲ್ಲ. ಇದುವರೆಗೂ ನಾನು ಜಾತಿಯ ಬಗ್ಗೆ ಯೋಚನೆ ಮಾಡಿರಲಿಲ್ಲ. ಈ ಕಾರಣಕ್ಕಾಗಿ ನನ್ನ ಕತೆಗಳಲ್ಲಿ ಜಾತಿ ಗೈರುಹಾಜರಾಗಿರಬಹುದು,” ಎಂದರು.

ಎಚ್ ಆರ್ ಸುಜಾತ ಅವರು ತಮ್ಮ ಬರಹಗಳಲ್ಲಿ ಕಟ್ಟಿಕೊಡುತ್ತಿರುವ ಹೊಸಹಳ್ಳಿಯ ಸಮೀಪವೇ ನಾನು ಬಾಲ್ಯದಲ್ಲಿ ಹೆಚ್ಚು ಒಡನಾಡಿದ ಊರುಗಳಿವೆ. ಸುಜಾತ ಅವರ ಭಾವಬಿತ್ತಿಯಲ್ಲಿರುವ ಬಾಲ್ಯದ ಊರು 50 ವರ್ಷಗಳ ಹಿಂದಿನದ್ದಾಗಿದ್ದರೆ, ನನ್ನ ಮನಸ್ಸಿನಲ್ಲಿ ನೆಲೆಯೂರಿರುವ ಬಾಲ್ಯ ಕಾಲದ ಊರು 25ರಿಂದ 30 ವರ್ಷಗಳಷ್ಟು ಹಿಂದಿನದ್ದು. ದಲಿತರನ್ನು ಒಳಗೆ ಬಿಟ್ಟುಕೊಳ್ಳುವ, ಘನತೆಯಿಂದ ನಡೆಸಿಕೊಳ್ಳುವ ಒಂದೇ ಒಂದು ನಿದರ್ಶನವೂ ನನ್ನ ನೆನಪಿನ ಬಿತ್ತಿಯಲ್ಲಿ ಅಚ್ಚಾಗಿರಲಿಲ್ಲ. ಹೀಗಾಗಿ, ಸಂವಾದದ ವೇಳೆ ಲೇಖಕಿ ಪದೇ-ಪದೇ ಪ್ರಸ್ತಾಪಿಸುತ್ತಿದ್ದ ಊರಿಗೂ ನಾನು ಕಂಡ ಊರುಗಳಿಗೂ ಸಾವಯವ ಸಂಬಂಧ ಏರ್ಪಡಲೇ ಇಲ್ಲ.

ಸಾಹಿತ್ಯಕ್ಕೆ ರಾಜಕೀಯ, ಜಾತಿ-ಧರ್ಮ ಎಳೆದು ತರಬೇಡಿ ಎಂದು ವಾದಿಸುವವರು, ಆ ಮೂಲಕ ಸಾಧಿಸಲು ಹೊರಡುವುದಾದರೂ ಏನೆಂದು ತಿಳಿಯಲು ಹೆಚ್ಚು ತಿಣುಕಾಡಬೇಕಿಲ್ಲ. ಕತೆಗೆ ಅಗತ್ಯವಿಲ್ಲದ ಏನನ್ನೇ ಒತ್ತಾಯಪೂರ್ವಕವಾಗಿ ಎಳೆದು ತಂದು ತುರುಕಿದರೂ ಅದು ದುರ್ಬಲವಾಗಿ ತೋರುವುದಲ್ಲವೇ? ಕತೆ-ಕವಿತೆ-ಕಾದಂಬರಿಯಂತಹ ಸಾಹಿತ್ಯಕ ಪ್ರಕಾರಗಳಲ್ಲಿ ಜಾತಿ-ಧರ್ಮ, ರಾಜಕೀಯ ನುಸುಳಿದ ಮಾತ್ರಕ್ಕೆ ಅವು ದುರ್ಬಲವಾಗಲಾರವು. ಆದರೆ, ಇವೆಲ್ಲವೂ ತೀರಾ ಹಾಸುಹೊಕ್ಕಾಗಿರುವ ಸಮಾಜದ ಚಿತ್ರಣ ಕಟ್ಟಿಕೊಡುವಾಗ, ಇವುಗಳ ಇರುವೇ ಗೋಚರವಾಗದ ಹಾಗೆ ಬರೆಯುವುದು ಸಹಜವೇ? ಸೃಜನಶೀಲ ಬರಹದಲ್ಲಿ ಜಾತಿ ತರಬಾರದು ಎನ್ನುವ ನಿಲುವು ತಳೆಯುವುದು ಕೂಡ ದೊಡ್ಡ ಮಿತಿಯೇ ಅಲ್ಲವೇ? ಜಾತಿ ತಮ್ಮ ಅನುಭವಕ್ಕೇ ಬಂದಿಲ್ಲ ಎಂದು ಬಿಡುಬೀಸಾಗಿ ಹೇಳಿಕೊಳ್ಳುವ ಸದವಕಾಶ ಯಾರಿಗೆ ಮಾತ್ರ ಒಲಿಯಲಿದೆ ಎಂಬುದನ್ನು ಅರಿಯುವ ಸಂಯಮ-ಸೂಕ್ಷ್ಮತೆಯನ್ನಾದರೂ ಬರಹಗಾರರಿಂದ ನಿರೀಕ್ಷಿಸುವುದು ಕಿಡಿಗೇಡಿತನವೇ?

“ಬರೆಯೋಕೆ ಕೂತಾಗ, ‘ಬ್ರಾಹ್ಮಣರ ಪಾತ್ರ ತರೋಣ, ಲಿಂಗಾಯತರ ಪಾತ್ರ ತರೋಣ’ ಅಂತ ಯೋಚಿಸುವುದು ಕಮರ್ಷಿಯಲ್ ಸಿನಿಮಾ ತೆಗೆಯೋಕೆ ಹೊರಟವರು ಯೋಚಿಸಿದಂತೆ ತೋರುವುದಿಲ್ಲವೇ?” ಎಂದು ಲೇಖಕಿ ಜ ನಾ ತೇಜಶ್ರೀ ಸಂವಾದದಲ್ಲಿ ಪಾಲ್ಗೊಂಡು ಕೇಳಿದರು.

“ಬರೆಯೋ ಕತೆಗಳಲ್ಲಿ ಒಂದೋ ಮುಸ್ಲಿಮರ ಪಾತ್ರ ಇರಬೇಕು ಅಥವಾ ಮುಸ್ಲಿಮರ ಸಮಸ್ಯೆಗಳಿರಬೇಕು, ಇಲ್ಲ ದಲಿತರ ಸಮಸ್ಯೆಗಳಿರಬೇಕು, ಇಲ್ಲ ಹೆಣ್ಣುಮಕ್ಕಳ ಅತ್ಯಾಚಾರದ ಸಮಸ್ಯೆ ಇರಬೇಕು. ಈ ಮೂರು ಇದ್ರೆ ಕತೆ ಕ್ಲಿಕ್ಕು. ಇಂದು ಬರಿತಿರೋ ಕೆಲವು ಯುವ ಕತೆಗಾರರು ಹೀಗೆ ಮಾತಾಡೋದನ್ನ ಕೇಳಿದ್ದೀನಿ. ಕತೆ ಕ್ಲಿಕ್ ಮಾಡ್ಬೇಕು ಅಂತ ಹೀಗೆ ಸುಮ್ಮನೆ ತುರುಕೋಕೆ ಆಗುತ್ತಾ?” ಎಂದರು ತೇಜಶ್ರೀ.

ಮುಸ್ಲಿಮರು ಮತ್ತು ದಲಿತರ ಸಮಸ್ಯೆಗಳನ್ನು ಕತೆಗಳಲ್ಲಿ ಬಲವಂತವಾಗಿ ತಂದು ತುರುಕಿ ಅಂತ ರೋಹಿತ್ ಅಗಸರಹಳ್ಳಿ ಅವರು ಹೇಳಲಿಲ್ಲ. ಆದರೆ, ಜಾತಿ-ಧರ್ಮದ ಕಾರಣಕ್ಕೆ ದಲಿತರು-ಮುಸ್ಲಿಮರ ಮೇಲೆ ಸಮಾಜ ಇಂದಿಗೂ ತೋರುತ್ತಿರುವ ಅಸಹನೆ ತಮ್ಮ ಅನುಭವಕ್ಕೇ ಬಂದಿಲ್ಲ ಎಂದು ಬರಹಗಾರರು ಹೇಳುವುದು, ಅವರ ಗ್ರಹಿಕೆಯ ಮಿತಿಯಲ್ಲವೇ?

ಜಾತಿ-ಧರ್ಮದ ಕಾರಣಕ್ಕೆ ತಮ್ಮೊಂದಿಗೆ ಬದುಕುತ್ತಿರುವ ಸಹಜೀವಿಗಳು ಅನುಭವಿಸುವ ಯಾತನೆಯನ್ನು ಗ್ರಹಿಸಲು ಸೋಲುವ ಬರಹಗಾರರು ಸೃಷ್ಟಿಸುವ ಸಾಹಿತ್ಯ, ಸಂಕುಚಿತತೆಯ ಪರಿಧಿಯಲ್ಲಿ ಬಂಧಿಯಾಗುವುದಿಲ್ಲವೇ? ಸಂಕುಚಿತ ದೃಷ್ಟಿಕೋನಕ್ಕೆ ಶುದ್ಧ ಸಾಹಿತ್ಯದ ಪೋಷಾಕು ತೊಡಿಸಿ ಬೀಗುವ ಹೊಣೆಗೇಡಿತನವೇ ಈ ಕಾಲಕ್ಕೆ ಬೇಕಿರುವ ಸಾಹಿತ್ಯಕ ಮೌಲ್ಯವೇ?

“ನಿಮ್ಮ ಸೃಜನಶೀಲ ಬರಹಗಳಲ್ಲಿ ಜಾತಿಯ ಗೈರುಹಾಜರಿ ಏಕಿದೆ?” ಎಂಬ ಸರಳ ಪ್ರಶ್ನೆಗೆ ಉತ್ತರಿಸಲೇ ತಿಣುಕಾಡುವ ಬರಹಗಾರರು, ತಮ್ಮ ಬರಹಗಳ ಮೂಲಕ ನಮ್ಮ ಅರಿವಿನ ಪರಿಧಿ ವಿಸ್ತರಿಸಬಲ್ಲರೆ?

“ಆ ಸ್ಪರ್ಧೆಯ ತೀರ್ಪುಗಾರರ ಮಾನದಂಡಗಳು, ಅವರು ಗೆಲ್ಲಿಸಿದ ಕೆಲವು ಕತೆಗಳು ಜಿಗುಪ್ಸೆ ಮೂಡಿಸುತ್ತಿದ್ದವು. ಒಂದು ಬಹುಮಾನ ಗಂಡಸರಿಗೆ, ಇನ್ನೊಂದು ಹೆಣ್ಮಕ್ಳಿಗೆ, ಉಳಿದದ್ದು ಇನ್ನೊಬ್ಬರಿಗೆ – ಅದರಲ್ಲೂ ಒಬ್ಬರು ಅಲ್ಪಸಂಖ್ಯಾತರು ಅಂತೆಲ್ಲ ‘ಸಾಮಾಜಿಕ ನ್ಯಾಯ’ದಡಿಯಲ್ಲಿ ಕಥಾ ಪ್ರಶಸ್ತಿಗಳು ಹಂಚಲ್ಪಡುತ್ತಿವೆ ಎನಿಸಿಬಿಡುತ್ತಿತ್ತು. ಆದರೆ, ಯಾವ ಪ್ರಶಸ್ತಿಗಳೂ ಯಾರಿಗೂ, ಯಾವುದಕ್ಕೂ ಮಾನದಂಡ ಆಗಲಾರವು…”

– ಇವು, ಇತ್ತೀಚೆಗೆ ಪ್ರಕಟವಾದ ಕಥಾ ಸಂಕಲನವೊಂದರ ಲೇಖಕರ ಮಾತಿನಲ್ಲಿರುವ ಸಾಲುಗಳು. ಈ ಮಾತುಗಳು ಮತ್ತು ‘ಪದುಮ ಪುರುಷ’ ಕಥಾ ಸಂಕಲನ ಕುರಿತ ಸಂವಾದದ ವೇಳೆ ವ್ಯಕ್ತವಾದ ಅಭಿಪ್ರಾಯಗಳು ನಮ್ಮ ಸಾಹಿತ್ಯ ವಲಯವನ್ನು ಆವರಿಸಿರುವ ಸಂಕುಚಿತತೆಗೆ ಕನ್ನಡಿ ಹಿಡಿಯುವುದಿಲ್ಲವೇ?

ಬದುಕಿನ ವಿವರಗಳನ್ನು ಕಥನ ಕೌಶಲದ ಮೂಲಕ ದಾಟಿಸಲು ಹೊರಟವರ ಕತೆಗಳಲ್ಲಿ ಗೈರಾಗುವ ವಿವರಗಳು, ಅವುಗಳನ್ನು ಬರೆದವರ ನೋಟಕ್ರಮದಲ್ಲಿರುವ ಮಿತಿಗಳತ್ತ ಬೆಟ್ಟು ಮಾಡುವುದಿಲ್ಲವೇ?

ಪುಸ್ತಕದಲ್ಲಿನ ಮಿತಿಗಳ ಕುರಿತು ವಸ್ತುನಿಷ್ಠವಾಗಿ ವಿಶ್ಲೇಷಿಸುವ ವಿಮರ್ಶಕರನ್ನು ಸಂವಾದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ ಕಾರಣಕ್ಕೆ, ಎಚ್ ಆರ್ ಸುಜಾತ ಅವರಿಗೆ ಜಾತಿಯ ಅನುಪಸ್ಥಿತಿ ಕುರಿತ ಪ್ರಶ್ನೆ ಎದುರಾಯಿತು. ಆದರೆ, ಜಾತಿಯ ಇರುವು ಈಗ ಮೊದಲಿನಷ್ಟು ತೀವ್ರವಾಗಿಲ್ಲವೆಂದೋ, ಜಾತಿ ತಮ್ಮ ಅನುಭವಕ್ಕೆ ಬಂದಿಲ್ಲವೆಂದೋ ಹೇಳುವ ಹಲವು ಬರಹಗಾರರು, ತಮ್ಮ ನಿಲುವಿನೊಂದಿಗೆ ಸಹಮತ ಹೊಂದಿರುವವರಿಂದಲೇ ಪುಸ್ತಕಕ್ಕೆ ಮುನ್ನುಡಿ, ಬೆನ್ನುಡಿ ಬರೆಸುವುದಲ್ಲದೆ, ಅಂತಹವರನ್ನೇ ಪುಸ್ತಕದ ಕುರಿತು ಮಾತನಾಡಲು ಆಹ್ವಾನಿಸುವುದರಿಂದ ಅವರಿಗೆ ಇಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಸಂದರ್ಭ ಎದುರಾಗಲಾರದು. ಆಯ್ದುಕೊಂಡ ಕಥಾವಸ್ತುವಿಗೆ ಸೂಕ್ತವಲ್ಲದ್ದನ್ನು ತುರುಕುವುದು ಹೇಗೆ ಸರಿ ಅಲ್ಲವೋ, ಹಾಗೆಯೇ ಸೇರ್ಪಡೆಯಾಗಲೇಬೇಕಿದ್ದ ಸಂಗತಿಗಳನ್ನು ಸೇರಿಸದಿರುವುದು ಕೂಡ ಮಿತಿಯೇ ಅಲ್ಲವೇ? ಇಂತಹ ಮಿತಿಗಳು ತಮ್ಮ ಬರಹಗಳಲ್ಲಿ ಇರುವುದನ್ನು ಓದುಗರು ಮತ್ತು ವಿಮರ್ಶಕರು ಗಮನಕ್ಕೆ ತಂದಾಗ, ಅದನ್ನು ಒಪ್ಪಿಕೊಳ್ಳುವುದು, ಆತ್ಮವಿಮರ್ಶೆ ಮಾಡಿಕೊಳ್ಳುವುದು ಬರಹಗಾರರ ಆದ್ಯತೆ ಆಗಬೇಕಲ್ಲವೇ?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಎಚ್ ಕೆ ಶರತ್
ಎಚ್ ಕೆ ಶರತ್
ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಷ್ಟ್ರು. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಣಿಯದ ಆಸಕ್ತಿ. ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೊಂದು ಇಷ್ಟದ ಕಸುಬು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...