(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
"ನಿಮಗೆ ಲೈಂಗಿಕ ಕ್ರಿಯೆ ಬೇಡ ಅನಿಸಿದಾಗ, ಗಂಡನ ಬಳಿ, ಇಂದು ಬೇಡ, ಅಂತ ಹೇಳುವಿರಾ?" ಎಂಬ ಪ್ರಶ್ನೆಗೆ ಬಂದ ಉತ್ತರ, "ಅದು ಹೇಗೆ ಸಾಧ್ಯ! ಬಿಡಬೇಕಲ್ಲಾ..." ಅಂತ. ಮತ್ತೆ ಇದೇ ಪ್ರಶ್ನೆ ಅವಳ ಗಂಡನ ಬಳಿ ಕೇಳಿದರೆ, "ಅವಳು ಹೇಗೆ ಬೇಡ ಹೇಳುತ್ತಾಳೆ!" ಎಂಬ ಉತ್ತರ
ಮಹಿಳೆಯರು ಸಶಕ್ತರಾಗಬೇಕು, ಸಬಲೀಕರಣದ ಪ್ರಕ್ರಿಯೆಗಳು ನಡೆಯಬೇಕು – ಇಂತಹ ಮಾತುಗಳು ಬಹಳ ಕಾಲದಿಂದ ಕೇಳಿಬರುತ್ತಿವೆ. ಏನಿದು ಸಶಕ್ತತೆ ಅಂದರೆ? ನಮಗೆ ಬೇಕಾದ ಶಕ್ತಿ ಪಡೆಯುವುದೇ ಸಶಕ್ತತೆ ಅಂತ ಅಂದುಕೊಳ್ಳುವುದಾದರೆ, ನಮಗೆ ಶಕ್ತಿ ಕೊಡುವ ಅಂಶಗಳು ಯಾವುವು? ಇದಕ್ಕೆ ಉತ್ತರವೂ ಪುರುಷಪ್ರಧಾನ ವ್ಯವಸ್ಥೆಯೊಳಗೆ ಅಡಗಿದೆ. ಬದುಕಿನ ಎಲ್ಲ ವಲಯಗಳಲ್ಲಿ ಮಹಿಳೆಯರ ಮೇಲೆ ನಿಯಂತ್ರಣ ಹೇರುವ, ಅಧೀನತೆಗೆ ಒಳಗಾಗಿಸುವ ಸಾಮಾನ್ಯ ಅಂಶಗಳೇನು? ಜ್ಞಾನ, ಶಿಕ್ಷಣ, ಚಲನಶೀಲತೆ, ಆರೋಗ್ಯ, ಶ್ರಮ, ಪ್ರಜನನ ಅಂಶಗಳು, ಲೈಂಗಿಕತೆ, ವಿರಾಮ, ಆರ್ಥಿಕತೆ, ಭೂಮಿ, ವಸತಿ – ಈ ವಿಚಾರಗಳು ಮಹಿಳೆಯರಿಗೆ ಅಥವಾ ಯಾರಿಗಾದರೂ ಶಕ್ತಿ ಕೊಡುವ ಅಂಶಗಳು. ಕಲಿಯಲು, ಜ್ಞಾನ ಬೆಳೆಸಿಕೊಳ್ಳಲು ಅವಕಾಶ ಸಿಕ್ಕಾಗ, ಬೇಕಾದ ಹಾಗೆ ಓಡಾಡಲು ಅವಕಾಶ ಸಿಕ್ಕಾಗ, ಆರೋಗ್ಯ ರಕ್ಷಣೆಗೆ ಸರಿಯಾದ ವ್ಯವಸ್ಥೆ ಇದ್ದಾಗ, ಶ್ರಮಕ್ಕೆ ಸರಿಯಾದ ಬೆಲೆ ಮತ್ತು ಗೌರವ ಸಿಕ್ಕಾಗ, ದೇಹದ ಅರಿವು ಸಿಕ್ಕಾಗ, ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಸಿಕ್ಕಾಗ, ಯಾವಾಗ ಹೆರಬೇಕು-ಬೇಡ ಎಂಬುದನ್ನು ನಿರ್ಧರಿಸಲು ಅವಕಾಶ ಸಿಕ್ಕಾಗ, ಬದುಕಿನ ಅಗತ್ಯಗಳನ್ನು ಈಡೇರಿಸಲು ಬೇಕಾದ ಹಣ, ಆಸ್ತಿ ಇದ್ದಾಗ – ಸಬಲರು ಅಥವಾ ಸಶಕ್ತರು ಅನಿಸುತ್ತದೆ.
ಶಕ್ತಿ ಕೊಡುವ ಅಂಶಗಳನ್ನು ಒಂದು ರೀತಿಯಲ್ಲಿ ಸಂಪನ್ಮೂಲಗಳು ಅಂತ ಕರೆಯಬಹುದು. ಅಂದರೆ, ಮಹಿಳೆಯರು ವಸ್ತುರೂಪದ ಹಾಗೂ ಬೌದ್ಧಿಕ ರೂಪದ ಸಂಪನ್ಮೂಲಗಳ ಮೇಲೆ ಹಿಡಿತ ಅಥವಾ ನಿಯಂತ್ರಣ ಪಡೆದುಕೊಳ್ಳುವುದೇ ಸಶಕ್ತತೆಯ ಪ್ರಕ್ರಿಯೆ ಎಂದು ವಿವರಿಸಲಾಗುತ್ತದೆ. ನಿಯಂತ್ರಣ ಪಡೆಯುವುದು ಎಂದರೆ ಕಸಿದುಕೊಳ್ಳುವುದಲ್ಲ; ನಮ್ಮದನ್ನು ನಮ್ಮದಾಗಿಸಿಕೊಳ್ಳುವ ಪ್ರಕ್ರಿಯೆ. ಇದನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಒಂದೊಂದು ಸಂಪನ್ಮೂಲವನ್ನೂ ವಿಸ್ತಾರವಾಗಿ, ಆಳವಾಗಿ ನೋಡಬೇಕು. ಇವುಗಳ ಮೇಲೆ ಹಿಡಿತ ಪಡೆಯುವುದು ಎಂದರೆ ಏನು ಎಂಬುದನ್ನು ಗುರುತಿಸಿಕೊಳ್ಳಬೇಕು. ಸಣ್ಣ ಉದಾಹರಣೆ ಕೊಡುವುದಾದರೆ… ಒಬ್ಬ ಮಹಿಳೆ ಯಾವುದೋ ಉದ್ಯೋಗ ಮಾಡುತ್ತಾಳೆ. ಅವಳಿಗೆ ಅದರಿಂದ ಹಣ ಸಿಗುತ್ತದೆ. ಅಂದರೆ, ಅವಳಿಗೆ ಆರ್ಥಿಕ ಸಂಪನ್ಮೂಲ ನಿಲುಕುವ ಹಾಗೆ ಇದೆ, ಎಟುಕುತ್ತದೆ ಅಂತ ಅರ್ಥ. ಆದರೆ, ಆ ಹಣವನ್ನು ಅವಳು ತನಗೆ ಬೇಕಾದ ಹಾಗೆ ಖರ್ಚು ಮಾಡುವುದಕ್ಕೆ ಅವಕಾಶ ಇಲ್ಲ ಎಂದರೆ, ಅವಳಿಗೆ ಅದರ ಮೇಲೆ ಹಿಡಿತ ಇಲ್ಲ ಅಂತ ಅರ್ಥ. ಕರ್ನಾಟಕದಲ್ಲಿ ಮಹಿಳೆಯರ ಸ್ಥಾನಮಾನ ಕುರಿತ ಅಧ್ಯಯನವೊಂದರಲ್ಲಿ ಮಹಿಳೆಯರ ಬಳಿ ಮಾತುಕತೆ ನಡೆದಿತ್ತು:
“ನಿಮ್ಮ ಬಳಿ ನಿಮ್ಮದೇ ಒಡವೆ ಇದೆಯೇ?”
“ಇದೆ,” ಎಂಬ ಉತ್ತರ ಬಂತು.
“ನಿಮಗೆ ಏನೋ ಕಷ್ಟ ಬಂದಾಗ ನೀವು ಅದನ್ನು ಅಡ ಇಡುವುದೋ ಮಾರುವುದೋ ಸಾಧ್ಯವೇ?” ಇನ್ನೊಂದು ಪ್ರಶ್ನೆ. “
“ಅಯ್ಯೋ… ಇಲ್ಲವೇ ಇಲ್ಲ,” ಅಂದರೆ, ಆಕೆಗೆ ಆ ಸಂಪನ್ಮೂಲದ ಮೇಲೆ ಹಿಡಿತ ಇಲ್ಲ ಅಂತ ಅರ್ಥ.
ಹಾಗೇನೇ ‘ಜ್ಞಾನ’ ಎಂಬ ಸಂಕೀರ್ಣ ವಿಚಾರವನ್ನು ಸಂಪನ್ಮೂಲ ಎಂದು ನೋಡಿದರೆ, ಶಾಲೆಗೆ ಹೋಗುವ, ಓದುವ, ತಿಳಿವಳಿಕೆ ಪಡೆಯುವ ಅವಕಾಶವೇ ಸಿಗಲಿಲ್ಲ ಎಂದಾದರೆ, ಅವಳಿಗೆ ಆ ಜ್ಞಾನವೆಂಬ ಸಂಪನ್ಮೂಲ ನಿಲುಕುವುದೇ ಇಲ್ಲ ಎಂದಾಯಿತು. ಇನ್ನು, ಹಿಡಿತದ ಪ್ರಶ್ನೆಯೇ ಇಲ್ಲ. ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದರೂ, ಅವಳಿಗೆ ಸ್ವಂತ ಆಲೋಚನೆಗೆ ಆ ಶಿಕ್ಷಣ ಅವಕಾಶ ಕೊಡುವುದಿಲ್ಲ ಅಂದರೆ, ಆ ಜ್ಞಾನದ ಮೇಲೆ ಅವಳಿಗೆ ಹಿಡಿತ ಇಲ್ಲ ತಾನೇ? ಇನ್ನೂ ವಿವರವಾಗಿ ನೋಡಿದರೆ, ಶಿಕ್ಷಣ ಅವಳಿಗೆ, “ನೀನು ಹೆಣ್ಣು… ನಿನ್ನ ಮೊದಲ ಜವಾಬ್ದಾರಿ ಮನೆ. ಮದುವೆ ಆಗಿ ತವರು ಮನೆಗೆ ಹೆಸರು ತರುವುದು, ಕುಟುಂಬವನ್ನು ಮಮತೆಯಿಂದ ಪೋಷಣೆ ಮಾಡುವುದೇ ನಿನ್ನ ಧರ್ಮ. ಗಂಡ ಹೊಡೆದರೂ ಸಹನೆಯಿಂದ ಅವನ ಪ್ರೀತಿ ಪಡೆಯಬೇಕು,” ಅಂತ ಕಲಿಸಿ ಕೊಡುವುದಾದರೆ ಈ ಶಿಕ್ಷಣದ ಮೇಲೆ ಅವಳಿಗೆ ಯಾವುದೇ ಹಿಡಿತ ಸಿಗಲಿಲ್ಲ, ಇದು ಅವಳ ಬದುಕನ್ನು ಬದಲಾಯಿಸುವುದಿಲ್ಲ, ಅವಳ ವ್ಯಕ್ತಿತ್ವವನ್ನು ಸ್ವಂತವಾಗಿ ರೂಪಿಸಿಕೊಳ್ಳಲು ಸಹಕರಿಸುವುದಿಲ್ಲ ಎಂದು ವಿವರಿಸಬೇಕಾಗಿಯೇ ಇಲ್ಲ. ಜ್ಞಾನದ ವಿಚಾರ ಬಂದಾಗ, ಇನ್ನೊಂದು ಅಂಶವನ್ನೂ ಗಮನಿಸಬೇಕು. ಮಹಿಳೆಯರಲ್ಲಿ ತಮ್ಮದೇ ಅನುಭವ ಆಧಾರಿತ ರಾಶಿ ಜ್ಞಾನ ಇದೆ. ಇದನ್ನು ಜ್ಞಾನ ಅಂತ ಪರಿಗಣಿಸದೆ ಇರುವುದು ಕೂಡ ಅವರ ಕೀಳರಿಮೆಗೆ ಕಾರಣವಾಗುತ್ತದೆ. ತಮ್ಮ ಜ್ಞಾನವನ್ನು ಅಭಿಮಾನದಿಂದ ಗುರುತಿಸಿಕೊಂಡು ಪ್ರತಿಪಾದಿಸುವುದು ಕೂಡ ಸಶಕ್ತತೆಯ ದಾರಿ.
ಅಧ್ಯಯನದಲ್ಲಿ ಕೇಳಿದ ಇನ್ನೊಂದು ಮುಖ್ಯ ಪ್ರಶ್ನೆ, “ನಿಮಗೆ ಲೈಂಗಿಕ ಕ್ರಿಯೆ ಬೇಡ ಅನಿಸಿದಾಗ, ಗಂಡನ ಬಳಿ, ಇಂದು ಬೇಡ, ಅಂತ ಹೇಳುವಿರಾ?” ಇದಕ್ಕೆ ಬಂದ ಉತ್ತರ, “ಅದು ಹೇಗೆ ಸಾಧ್ಯ! ಬಿಡಬೇಕಲ್ಲಾ…” ಅಂತ. ಮತ್ತೆ ಇದೇ ಪ್ರಶ್ನೆ ಅವಳ ಗಂಡನ ಬಳಿ ಕೇಳಿದರೆ, “ಅವಳು ಹೇಗೆ ಬೇಡ ಹೇಳುತ್ತಾಳೆ!” ಅನ್ನುವ ರೀತಿಯ ಉತ್ತರ ಬಂದಿತ್ತು. ಇದು ಸ್ಪಷ್ಟವಾಗಿ ಅವಳಿಗೆ ಅವಳ ಲೈಂಗಿಕತೆ ಮೇಲೆ ಕೂಡ ಹಿಡಿತ ಇಲ್ಲದಿರುವುದನ್ನು ತೋರಿಸುತ್ತದೆ. ಅಂದರೆ, ಒಟ್ಟಾರೆಯಾಗಿ ನೋಡುವಾಗ, ಸಬಲೀಕರಣ ಎಂದರೆ ಮಹಿಳೆಯರು ಈ ಸಂಪನ್ಮೂಲಗಳ ಮೇಲೆ ಹಿಡಿತ ಪಡೆಯುವ ಪ್ರಕ್ರಿಯೆ ನಡೆಯಬೇಕು ಎಂಬುದು ಎದ್ದುಕಾಣುತ್ತದೆ. ಇದು ಅಲೆಅಲೆಯಾಗಿ ಆವರಿಸಿಕೊಳ್ಳುವ ಒಂದು ಪ್ರಕ್ರಿಯೆ. ಯಾವುದೋ ಒಂದು ಸಂಪನ್ಮೂಲದ ಮೇಲೆ ಹಿಡಿತ ಸಿಗುತ್ತಿದ್ದಂತೆಯೇ ಅದು ಇನ್ನೊಂದರ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಈ ಸಬಲೀಕರಣದ ದಾರಿಯನ್ನು ಯಾರೋ ಯಾರಿಗಾಗಿಯೋ ಮಾಡಿಕೊಡುವುದಕ್ಕೆ ಆಗುವುದಿಲ್ಲ. ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಬಹುದು ಅಷ್ಟೇ ಅಥವಾ ಹೊಸ ಚಿಂತನೆಗಳಿಗೆ ತೆರೆದುಕೊಳ್ಳುವಂತಹ ವಾತಾವರಣ ಕಲ್ಪಿಸಬಹುದು ಅಷ್ಟೇ. ಅಂದರೆ, ಸಮಯ ಮತ್ತು ಅವಕಾಶ ಕಲ್ಪಿಸಬಹುದು ಅಷ್ಟೇ.
ಅಂತಿಮವಾಗಿ ಸಬಲೀಕರಣದ ದಾರಿಯನ್ನು ಮಹಿಳೆಯರೇ ವ್ಯಕ್ತಿಗತವಾಗಿಯೋ ಸಾಮೂಹಿಕವಾಗಿಯೋ ಗುರುತಿಸಿಕೊಳ್ಳಬೇಕು. ಆಗ, ಶಿಕ್ಷಣ, ಅರಿವು ಸಿಗುತ್ತಿದ್ದಂತೆಯೇ ಪುಟ್ಟ ಹುಡುಗಿಯೊಬ್ಬಳು, ‘ಚಿಕ್ಕ ವಯಸ್ಸಿಗೆ ಮದುವೆಯಾಗುವುದಿಲ್ಲ’ ಎಂದು ಸಿಡಿದೇಳುವುದು ಸಾಧ್ಯ. ಕುಟುಂಬ ಯೋಜನೆ ಬಗ್ಗೆ ಆಯ್ಕೆ ಮಾಡುವುದು ಸಾಧ್ಯ. ಗಂಡನಿಂದ ಹೊಡೆಸಿಕೊಳ್ಳುವುದು ನ್ಯಾಯ ಅಲ್ಲ, ಅದನ್ನು ಸಹಿಸಿಕೊಳ್ಳಬೇಕಾಗಿಲ್ಲ ಅಂತ ಪ್ರತಿಪಾದಿಸುವುದು ಸಾಧ್ಯ. ಭೂಮಿ, ವಸತಿ ಪಡೆದ ಹೆಣ್ಣುಮಗಳು, ಅದರ ಮೇಲೆ ತನ್ನ ಹಕ್ಕು ಸ್ಥಾಪಿಸುವುದು ಸಾಧ್ಯ. ಅತ್ಯಾಚಾರ, ದೌರ್ಜನ್ಯಗಳನ್ನು ಎದುರಿಸುವ, ನಿಭಾಯಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಸಾಧ್ಯ. ಒಟ್ಟಿನಲ್ಲಿ ಇದರ ಆಶಯ – ಮಹಿಳೆಯರ ಪರಿಸ್ಥಿತಿಯಲ್ಲಿ ಬದಲಾವಣೆ ಬಂದರೆ ಸಾಲದು, ಅವರ ಸ್ಥಾನಮಾನದಲ್ಲಿ ಬದಲಾವಣೆ ಬರಬೇಕು. ಆಕೆ ಬಳಿ ಹಣ ಇರಲಿಲ್ಲ; ಹಣ ಸಿಗುವಂತಾಯಿತು ಅಂದರೆ ಅವಳ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು. ಅವಳು ಅದರಿಂದ ಸೀರೆ, ಒಡವೆ ಕೊಂಡುಕೊಳ್ಳಬಹುದು, ಇನ್ನೇನೋ ಮಾಡಬಹುದು. ಆದರೆ, ಆ ಹಣದ ಬಗ್ಗೆ ಅವಳು ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾದಾಗ, ಹಣದ ವಿಚಾರವಾಗಿ ಕುಟುಂಬದ ಒಳಗೆ ಸಮಸಮವಾಗಿ ಮಾತುಕತೆ ಮಾಡಲು ಸಾಧ್ಯವಾದಾಗ ಅವಳ ಸ್ಥಾನಮಾನದಲ್ಲಿ ಬದಲಾವಣೆ ಬರುತ್ತದೆ. ಚುನಾವಣೆಯಲ್ಲಿ ಗೆದ್ದರೆ ಸಾಕಾಗುವುದಿಲ್ಲ, ನಿರ್ಭೀತಿಯಿಂದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾದಾಗ ಮಾತ್ರ ಆಕೆಯ ಸ್ಥಾನಮಾನದಲ್ಲಿ ಬದಲಾವಣೆ ಬರುತ್ತದೆ. ಅಸಮಾನತೆಯ ನೆಲೆಗಳನ್ನು ಪ್ರಶ್ನಿಸಲು ಶುರುಮಾಡಿದಾಗ ಮಾತ್ರ, ಮಹಿಳೆಯರ ಬದುಕಿನಲ್ಲಿ ನಿಜವಾದ ಬದಲಾವಣೆ ಸಾಧ್ಯ.
‘ಮಹಿಳಾ ಸಮಾಖ್ಯಾ’ ಯೋಜನೆ ಚಾಲ್ತಿಯಲ್ಲಿದ್ದಾಗ, ಇದೇ ಪರಿಕಲ್ಪನೆಯ ಆಧಾರದಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಾಗಿತ್ತು. ಈ ಪರಿಕಲ್ಪನೆಗಳನ್ನು ಎದೆಗಿಳಿಸಿಕೊಂಡು, ಮಹಿಳೆಯರಾಗಿ ತಾವೂ ತಮ್ಮನ್ನು ಅರ್ಥಮಾಡಿಕೊಳ್ಳುತ್ತ, ಗ್ರಾಮೀಣ ಮಹಿಳೆಯರಿಗೆ ಹೊಸ ನೋಟಗಳನ್ನು ಕೊಡಬಲ್ಲ ಯುವತಿಯರ ತಂಡವನ್ನು ಬೆಳೆಸಿತ್ತು. ಪ್ರತಿಯೊಂದು ಹಂತದಲ್ಲಿ ಅಸಮಾನತೆಯ ನೆಲೆಗಳನ್ನು ಗುರುತಿಸಬಲ್ಲ, ಪ್ರಶ್ನಿಸಬಲ್ಲ ಚಿಂತನೆಗಳನ್ನು ಹಂಚಿತ್ತು. ತಮ್ಮ ಸಂಪಾದನೆ, ತಮ್ಮ ಮದುವೆ ಇತ್ಯಾದಿ ತಮ್ಮ ಬದುಕಿನ ಆಯ್ಕೆಗಳನ್ನು ಮಾಡಿಕೊಳ್ಳಬಲ್ಲ ಶಕ್ತಿ ತುಂಬಿತ್ತು. ಸಮೂಹ ಶಕ್ತಿಯನ್ನು ಪರಿಚಯಿಸಿತ್ತು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾ
ಹೌದು ಮೇಡಂ, ನೀವೂ ಹೇಳಿರುವ ಪ್ರತಿಯೊಂದು ಮಾತು ನಿಜ .
ಇಂತಹ ಲೇಖನಗಳು ಎಲ್ಲ ಸಾಮಾನ್ಯ ಮಹಿಳೆಯರಿಗೆ ತಲುಪಬೇಕು. ಆಗ ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರ ಸ್ಥಾನಮಾನ ಇನಷ್ಟು ಎತ್ತರದಲ್ಲಿ ನಾವು ಕಾಣಬಹುದು.☺☺