ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡವೊಂದರ 13ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ವಿಜಯಲಕ್ಷ್ಮೀ(17) ಆತ್ಮಹತ್ಯೆಗೆ ಶರಣಾದ ಯುವತಿ. ಇವರು ಖಾಸಗಿ ಕಾಲೇಜವೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದರು.
ವಿಜಯಲಕ್ಷ್ಮೀ ತಂದೆ-ತಾಯಿಗೆ ವಿಚ್ಛೇದನವಾದ ಬಳಿಕ, ತನ್ನ ತಾಯಿ ಯಶೋಧ ಅವರ ಜತೆಗೆ ನಗರದ ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ವಾಸಿಸುತ್ತಿದ್ದರು.
ಸೆ.19ರಂದು ವಿಜಯಲಕ್ಷ್ಮೀ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದರಂತೆ, ಇವರು ಕಳೆದ ಒಂದು ವಾರದಿಂದ ಡಿಪ್ರೆಷನ್ಲ್ಲಿದ್ದರು ಎಂದು ತಿಳಿದುಬಂದಿದೆ.
ಸೆ.21 ರಂದು ವಿಜಯಲಕ್ಷ್ಮೀ ಸಾವನ್ನಪ್ಪಿದ್ದಾರೆ. ಸ್ನೇಹಿತರ ಮನೆಗೆ ಮಗಳು ಹೋಗಿರಬಹುದು ಎಂದು ಭಾವಿಸಿದ್ದ ತಾಯಿ ಒಂದು ದಿನ ಕಳೆದ ಬಳಿಕ ಮಗಳು ಮನೆಗೆ ವಾಪಸ್ ಬರದೇ ಇದ್ದಾಗ, ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಮಗಳ ಸಾವಿನ ಸುದ್ದಿ ತಿಳಿದಿದೆ.
ಈ ಸುದ್ದಿ ಓದಿದ್ದೀರಾ? ಓಲಾ, ರ್‍ಯಾಪಿಡೋಗಳಿಂದ ಬೈಕ್ ಟ್ಯಾಕ್ಸಿ : ಆಟೋ ಚಾಲಕರಿಗೆ ಎದುರಾದ ಮತ್ತೊಂದು ಸಂಕಷ್ಟ
ಯುವತಿ ಸಾಯುವ ಮುನ್ನ ಮಂಗಳೂರಿಗೆ ತೆರಳಿದ್ದಳು ಎಂದು ತಿಳಿದುಬಂದಿದೆ. ಹಾಗೇ, ಒಬ್ಬರಿಗೆ ಕರೆ ಮಾಡಿದ್ದು, ಯಾರಿಗೆ ಕರೆ ಮಾಡಿದ್ದರು. ಮಂಗಳೂರಿಗೆ ಏಕೆ ಹೋಗಿದ್ದರು ಎಂಬ ಪ್ರಶ್ನೆ ಮೂಡಿದೆ.
ಘಟನೆ ಸಂಬಂಧ ತಾಯಿ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತದೇಹವನ್ನ ಮರಣೊತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಈ ಬಗ್ಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, “ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡದ 13ನೇ ಮಹಡಿಯಿಂದ ಜಿಗಿದು ಓರ್ವ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ಸೆ.19 ರಂದು ಮನೆಯಿಂದ ಹೋದವರು ಧರ್ಮಸ್ಥಳಕ್ಕೆ ತೆರಳಿದ್ದಾಳೆ. ಹುಡುಗಿ ಧರ್ಮಸ್ಥಳದಲ್ಲಿ ಸುತ್ತಾಡಿದ್ದಾಗ ಈಕೆಯನ್ನು ನೋಡಿದ ಒಬ್ಬರು ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ” ಎಂದರು.
“ಬೆಂಗಳೂರಿಗೆ ವಾಪಸ್ ಬಂದ ಹುಡುಗಿ ಅಪಾರ್ಟ್ಮೆಂಟ್ ಒಳಗೆ ಹೋಗಿದ್ದಾಳೆ. ಈ ವೇಳೆ, ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ತಡೆದಾಗ 9ನೇ ಮಹಡಿಗೆ ಹೋಗಬೇಕು ಎಂದು ಹೇಳಿದ್ದಾಳೆ. ಸೆಕ್ಯೂರಿಟಿ ಗಾರ್ಡ್ ಆ ನಿವಾಸಿ ಅವರಿಗೆ ಕರೆ ಮಾಡಿ ಕೇಳಿದಾಗ ಅತಿಥಿ ಬಂದಿದ್ದಾರೆ ಎಂದು ನಿವಾಸಿ ಕಳುಹಿಸಿಕೊಡಿ ಎಂದು ಹೇಳಿದ್ದಾರೆ. ಬಳಿಕ ಹುಡುಗಿ 13ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡುಗಿ ಮಾನಸಿಕವಾಗಿ ನೊಂದಿದ್ದಳು ಎಂಬುದು ತಿಳಿದುಬಂದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.