ಓಲಾ, ರ್‍ಯಾಪಿಡೋಗಳಿಂದ ಬೈಕ್ ಟ್ಯಾಕ್ಸಿ : ಆಟೋ ಚಾಲಕರಿಗೆ ಎದುರಾದ ಮತ್ತೊಂದು ಸಂಕಷ್ಟ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಮಾಡಬೇಕು ಎಂದು ಸೆ.11 ರಂದು ‘ಬೆಂಗಳೂರು ಬಂದ್’ ಮಾಡಿ, ತಮ್ಮ ಬಲ ಪ್ರದರ್ಶನ ಮಾಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿ ಕೆಲವು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಚಾಲಕರಿಗೆ ಭರವಸೆ ನೀಡಿದ್ದರು. ಸಚಿವರ ಹೇಳಿಕೆ ಬೆನ್ನಲ್ಲೇ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಅನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಇಷ್ಟಕ್ಕೆ ಚಾಲಕರು ಹಾಗೂ ಮಾಲೀಕರು ನಿಟ್ಟುಸಿರು ಬಿಡಬೇಕು ಎನ್ನುವ ಹೊತ್ತಲ್ಲೇ, ಇದೀಗ, ಬೆಂಗಳೂರಿನಲ್ಲಿ ಓಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಇದರಿಂದ ಆಟೋ ಚಾಲಕರು ಸೇರಿದಂತೆ ಟ್ಯಾಕ್ಸಿ ಚಾಲಕರ ಬದುಕು ದುಸ್ತರವಾಗಲಿದೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಈಗ ನಮಗೆ ಜೀವನ ನಡೆಸಲು ಕಷ್ಟವಾಗಿದೆ. ಶಕ್ತಿ ಯೋಜನೆಯಿಂದಲೂ ನಮಗೆ ಕಷ್ಟವಾಗಿದೆ. ಜೊತೆಗೆ ಓಲಾ ಬೈಕ್ ಟ್ಯಾಕ್ಸಿ ಕೂಡ ಆರಂಭವಾಗಿದೆ. ಇದರಿಂದ ನಮಗೆ ಬಾಡಿಗೆ ಸಿಗುವುದಿಲ್ಲ ಎಂಬುದು ಚಾಲಕರ ಅಳಲಾಗಿದೆ.

ಓಲಾ ಕೂಡ ಅನಧಿಕೃತವಾಗಿ ಬೈಕ್ ಸೇವೆ ನೀಡಲು ಪ್ರಾರಂಭಿಸಿದೆ. ಇದನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ, ನಾವು ‘ಆಪರೇಷನ್ ಓಲಾ’ ಮಾಡುತ್ತೇವೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಸಾರಿಗೆ ಆಯುಕ್ತರಿಗೆ ಮನವಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ (ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ) ಎಲ್‌. ಹೇಮಂತ್ ಕುಮಾರ್, “ನಾವು ಯಾರಿಗೂ ಅನುಮತಿ ಕೊಡುವುದಿಲ್ಲ. ಓಲಾ, ಉಬರ್‌ಗೆ ಬೈಕ್ ಟ್ಯಾಕ್ಸಿ ನಡೆಸಲು ಲೈಸನ್ಸ್ ನೀಡಿಲ್ಲ. ಓಲಾದಿಂದ ಅರ್ಜಿ ಬಂದಿದೆ. ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಶುರು ಮಾಡಿದರೆ, ಅದನ್ನ ನಿಲ್ಲಿಸೋ ಕಾರ್ಯ ಮಾಡುತ್ತೇವೆ. ಈಗ ಓಲಾದವರು ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ನಡೆಸುತ್ತಿದ್ದಾರಾ ಎಂಬ ಬಗ್ಗೆ ಮೊದಲು ಕಾರ್ಯಾಚರಣೆ ನಡೆಸುತ್ತೇವೆ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದರು.

ಏನಿದು ಓಲಾ ಬೈಕ್ ಟ್ಯಾಕ್ಸಿ?

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾ ಈಗ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ರ‍್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸಾಲಿಗೆ ಇದೀಗ ಓಲಾ ಕೂಡ ಸೇರ್ಪಡೆಗೊಂಡಿದೆ. ಓಲಾ ಬೈಕ್ ಟ್ಯಾಕ್ಸಿ ಆರಂಭಿಸುತ್ತಿರುವ ಬಗ್ಗೆ ಇತ್ತೀಚೆಗೆ ಓಲಾ ಸಿಇಒ ಭವಿಷ್ ಅಗರ್ವಾಲ್ ಅಧಿಕೃತವಾಗಿ ಘೋಷಿಸಿದ್ದರು.

“ಓಲಾ ಆ್ಯಪ್‌ನಲ್ಲಿ ಕಾರು, ಆಟೋ ಟ್ಯಾಕ್ಸಿ ಮಾದರಿಯಲ್ಲಿ ಗ್ರಾಹಕರು ಬೈಕ್ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ. ಓಲಾ ಎಸ್1 ಎಲೆಕ್ಟ್ರಿಕ್ ಬೈಕ್‌ಗಳ ಮೂಲಕ ಬೈಕ್ ಟ್ಯಾಕ್ಸಿ ಆರಂಭಿಸಿದ್ದು, 5 ಕಿ.ಮೀ ವರೆಗೆ ₹25 ಹಾಗೂ 10 ಕಿ.ಮೀ ವರೆಗೆ ₹50 ದರ ನಿಗದಿಪಡಿಸಿದೆ. ಓಲಾದಿಂದ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವ ಪ್ರಯತ್ನ 2016ರಲ್ಲೇ ನಡೆದಿತ್ತು. ಆದರೂ, ನಾನಾ ಕಾರಣಗಳಿಂದ ಯಶಸ್ವಿಯಾಗಿರಲಿಲ್ಲ. ಇದೀಗ ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಗುರಿ ಹೊಂದಲಾಗಿದೆ” ಎಂದು ಓಲಾ ಸಿಇಒ ತಿಳಿಸಿದ್ದರು.

ಈ ಸುದ್ದಿ ಓದಿದ್ದೀರಾ? ರಜಾ ದಿನಗಳೆಂದರೆ ಖಾಸಗಿ ಬಸ್‌ಗಳಿಗೆ ಹಬ್ಬ; ದುಪ್ಪಟ್ಟಾಗುವ ಟಿಕೆಟ್‌ ದರ; ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ

ಚಾಲಕರು ಏನಂತಾರೆ?

ಖಾಸಗಿ ಸಾರಿಗೆ ಸಂಘಗಳ ಸಮಾನ ಮನಸ್ಕ ವೇದಿಕೆ ಅಧ್ಯಕ್ಷ ನಟರಾಜ್ ಶರ್ಮ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬೆಂಗಳೂರು ಬಂದ್ ಮಾಡಿದ ನಂತರ ಶೇ.5 ರಷ್ಟು ರ‍್ಯಾಪಿಡೋ ಬೈಕ್ ಸಂಚಾರ ಕಡಿಮೆಯಾಗಿತ್ತು. ಈಗ ಓಲಾ ಬೈಕ್ ಟ್ಯಾಕ್ಸಿ ಆರಂಭವಾದ ಬೆನ್ನಲ್ಲೇ ಮತ್ತೇ ರ‍್ಯಾಪಿಡೋ ಕೂಡ ಹೆಚ್ಚಾಗಬಹುದು. ಸಾರಿಗೆ ಅಧಿಕಾರಿಗಳು ಬೈಕ್ ಟ್ಯಾಕ್ಸಿ ನಡೆಸಲು ಅನುಮತಿ ನೀಡದಿದ್ದರೆ ಅಥವಾ ಲೈಸೆನ್ಸ್ ಕೊಡದೇ ಇದ್ದರೆ, ಬೈಕ್‌ಗಳು ರಸ್ತೆಯಲ್ಲಿ ಸಂಚಾರ ನಡೆಸಲು ಹೇಗೆ ಸಾಧ್ಯ. ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ಇಲ್ಲದೆ, ಇದೆಲ್ಲ ಇಷ್ಟು ರಾಜಾರೋಷವಾಗಿ ನಡೆಯುವುದಿಲ್ಲ” ಎಂದರು.

“ಈ ಬೈಕ್ ಟ್ಯಾಕ್ಸಿಗಳು ಸರ್ಕಾರಕ್ಕೆ ತೆರಿಗೆ ಕಟ್ಟದೇ, ಹೇಗೆ ನಗರದಲ್ಲಿ ಸಂಚರಿಸುತ್ತವೆ. ಈ ವೇಳೆ, ಅಂತಹ ಅನಧಿಕೃತ ಗಾಡಿಗಳನ್ನು ಹಿಡಿದು ದಂಡ ಹಾಕಬಹುದು. ಬ್ಯಾನ್ ಮಾಡಬಹುದು. ಇದನ್ನಾವುದನ್ನೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ” ಎಂದು ಹೇಳಿದರು.

ಕರುನಾಡ ವಿಜಯ ಸೇನೆ ಬೆಂಗಳೂರು ಘಟಕ ಜಿಲ್ಲಾಧ್ಯಕ್ಷ ಮಂಜುನಾಥ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ಒಂದು ವಾರದಿಂದ ಓಲಾ ಬೈಕ್ ಟ್ಯಾಕ್ಸಿ ಆರಂಭದ ಬಗ್ಗೆ ಸುದ್ದಿ ಇತ್ತು. ಗುರುವಾರ ಅಧಿಕೃತವಾಗಿ ನಗರದ ಎಂಜಿ ಎಸ್ತೆಯಲ್ಲಿ ಓಲಾ ಬೈಕ್ ಟ್ಯಾಕ್ಸಿ ಉದ್ಘಾಟನೆ ಮಾಡಿದ್ದಾರೆ. ಹಾಗಾಗಿ, ನಿನ್ನೆಯೇ ಸಾರಿಗೆ ಇಲಾಖೆಗೆ ಮನವಿ ಪತ್ರ ನೀಡಿದ್ದೇವೆ. ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದೇವೆ. ಬಳಿಕ ಸಾರಿಗೆ ಇಲಾಖೆ ಆಯುಕ್ತರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಹಾಗಾಗಿ, ಪ್ರತಿಭಟನೆ ಕೈಬಿಟ್ಟಿದ್ದೇವೆ” ಎಂದರು.

“ಸದ್ಯ ರ‍್ಯಾಪಿಡೋ ಓಡಾಟ ಕಡಿಮೆಯಾಗಿದೆ. ನಗರದಲ್ಲಿ ಕೆಲವೊಂದು ಕಡೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಡೆಯುತ್ತಿವೆ. ಸ್ವಲ್ಪ ನಿಂಯಂತ್ರಣಕ್ಕೆ ಬಂದಿದೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸಂಚಾರ ಬಂದ್ ಮಾಡಬೇಕು ಎಂದು ಬೆಂಗಳೂರು ಬಂದ್ ಮಾಡಿದ್ದೆವು. ಆಗ ನಮಗೆ ಜಯ ಸಿಕ್ಕಿದೆ. ಇನ್ನೂ ಓಲಾ ಬೈಕ್ ಟ್ಯಾಕ್ಸಿ ಮುಂದುವರೆದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದರು.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ರಾಜಾಜಿನಗರದ ಆಟೋ ಚಾಲಕ ಮಂಜುನಾಥ್, “ಓಲಾ ಬೈಕ್ ಟ್ಯಾಕ್ಸಿ ಆರಂಭವಾಗಿದೆ. ಇದರಿಂದ ನಮಗೆ ಬಾಡಿಗೆ ಬೀಳುವುದೇ ಕಡಿಮೆ ಆಗಿದೆ. ಜನರು ಆಟೋದತ್ತ ಮುಖ ಮಾಡುವುದು ಕೂಡ ಕಡಿಮೆಯಾಗಿದೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾರಿಗೆ ಇಲಾಖೆ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ, ಮುಂದೆ ಹೋರಾಟ ಮಾಡುತ್ತೇವೆ” ಎಂದರು.

ಆಟೋ ಚಾಲಕ ಕಾಂತರಾಜು ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮಗೆ ಬಾಡಿಗೆ ಕಡಿಮೆ ಸಿಗುತ್ತಿವೆ. ದಿನನಿತ್ಯದ ಸಂಪಾದನೆ ಅಷ್ಟಕಷ್ಟೆ ಇದೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. If auto wants stop bike let they collect minimize rate that Rs.15/K.M otherwise customer suffers they won’t support. Sometime they collect more for short group share .

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನರಲ್ಲಿ ಡೆಂಘೀ ಜಾಗೃತಿ: ರಾಜಧಾನಿಯಲ್ಲಿ ಸ್ವತಃ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಡೆಂಘೀ ರೋಗ ಹೆಚ್ಚಳವಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಬಗ್ಗೆ ಜನರಲ್ಲಿ...

ಬೀದರ್-ಬೆಂಗಳೂರು ವಿಮಾನ ಸೇವೆ: 2 ವಾರದಲ್ಲಿ ವರದಿ ಸಲ್ಲಿಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ

ಬೀದರ್–ಬೆಂಗಳೂರು ನಡುವೆ ನಾಗರಿಕ ವಿಮಾನಯಾನ ಸೇವೆ ಪುನ: ಆರಂಭಿಸುವ ಕುರಿತಂತೆ ವಿವಿಧ...

ಜು. 19: ಬ್ಯಾರಿ ಅಕಾಡೆಮಿ ಅಧ್ಯಕ್ಷ-ಸದಸ್ಯರ ಪದಗ್ರಹಣ; ‘ಪಿರ್ಸಪ್ಪಾಡ್‌’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪಿರ್ಸಪ್ಪಾಡ್‌ (ಬ್ಯಾರಿ ಸಾಂಸ್ಕೃತಿಕ ಸಂಭ್ರಮ)...

ಬೆಂಗಳೂರು | ‘ಸಂವಾದ’ದಿಂದ ವೃಷಭಾವತಿ ನದಿ ಉಳಿಸಿ ಆಂದೋಲನ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನೀರಿನ ಮೂಲ ನದಿ, ಕೆರೆಗಳನ್ನು...