“ಮೋದಿಯವರ ಮಹಿಳಾ ಮೀಸಲಾತಿ ಮಸೂದೆ 2024, 2029 ಹಾಗೂ 2034ರಲ್ಲೂ ಜಾರಿ ಬರುವುದಿಲ್ಲ. ಡೀಲಿಮಿಟೇಷನ್, ಜಾತಿ ಗಣತಿಯ ಕೊಕ್ಕೆ ಹಾಕಿದ್ದಲ್ಲದೇ, ಮಸೂದೆಯ ಆಯಸ್ಸು 15 ವರ್ಷ ಎಂದು ನಿಗದಿ ಮಾಡಿರುವುದು ಬಿಜೆಪಿಯ ಡೋಂಗಿತನ. ಇದು ಜಾರಿ ಆಗುವುದೇ ಅನುಮಾನ. ಚುನಾವಣೆಯ ಹುಚ್ಚಿನಿಂದಾಗಿ ಮಸೂದೆ ಪಾಸ್ ಮಾಡಿದ್ದಾರೆ ಅಷ್ಟೇ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ, ಇಷ್ಟೊಂದು ಅಡೆತಡೆಗಳನ್ನು ಹಾಕುತ್ತಿರಲಿಲ್ಲ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ” ಎಂದರು.
“ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಮಸೂದೆಯ ಆಯಸ್ಸು ಹದಿನೈದು ವರ್ಷ, ಆ ನಡುವೆ ಜನಗಣತಿ ಆಗಬೇಕು, ನಂತರ ಕ್ಷೇತ್ರ ಮರು ವಿಂಗಡನೆ ಆಗಬೇಕು. ಮಹಿಳೆಯರಿಗೆ ವಂಚನೆ ಮಾಡಿ ಅಂತನಾ ದೇವರು ಅವರನ್ನು ಕಳುಹಿಸಿದ್ದು?” ಎಂದು ವ್ಯಂಗ್ಯವಾಡಿದರು.
“ಮಹಿಳಾ ಮೀಸಲಾತಿ ಬಿಲ್ ಸಿದ್ದಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ” ಎಂದರು.
ಚಪ್ಪಾಳೆ ಹೊಡಿಬೇಡಿ, ಹೋರಾಟ ಮಾಡಿ
“ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಮಹಿಳೆಯರು ಚಪ್ಪಾಳೆ ಹೊಡಿಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರೆಸಬೇಕು. ಮಹಿಳೆಯರು ಶೇ 50 ಮೀಸಲಾತಿಗೆ ಬೇಡಿಕೆ ಇಡಬೇಕು. ಹಾಗೆಯೇ ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ವಾದವನ್ನು ನಾನು ಬಲವಾಗಿ ಪ್ರತಿಪಾದಿಸುತ್ತೇನೆ” ಎಂದರು.
“ಇದು ಪಾರ್ಲಿಮೆಂಟಿನಲ್ಲಿ ಆಗಬೇಕಿದೆ. ನಮ್ಮ ವ್ಯಾಪ್ತಿಯಲ್ಲಿ ಆಗುವಂತಿದ್ದರೆ, ಯಾವತ್ತೋ ಮಾಡಿಬಿಡುತ್ತಿದ್ದೆ. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ, ಸಮಾನ ಅವಕಾಶ ನೀಡುವುದರ ಪರ ಇದೆ” ಎಂದರು.
ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕರಾದ ಪ್ರೊ.ಮುಜಾಫರ್ ಅಸಾದಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್ ವಿಷಯ ಮಂಡಿಸಿದರು. ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕರಾದ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಬಿ.ಟಿ.ಲಲಿತಾ ನಾಯಕ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು
I N D I A ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ತಕ್ಷಣ ಜ್ಯಾರಿಗೆ ತರುವುದೇ ?
2024 ರ ಚುನಾವಣಾ ಪ್ರಣಾಳಿಕೆಯಲ್ಲಿ I N D I A ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.