ವರ್ತಮಾನ | ಹೆಣ್ಣುಮಕ್ಕಳ ಒಳ ಉಡುಪು; ಮುಚ್ಚುಮರೆಯ ಸವಾಲು, ಸಂಕುಚಿತ ಮನಸ್ಸು

Date:

Advertisements

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಮಹಿಳೆಯರ ಬಟ್ಟೆಗಳು, ಅದರಲ್ಲೂ ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವ ಹಾಗೆ ಒಣಗಿಸಲು ಹಾಕುವುದು ಸಹಜವೆಂದು ಪರಿಗಣಿಸದ ಸಾಕಷ್ಟು ಮಂದಿ ಮೂರ್ಖರು ನಮ್ಮ ನಡುವೆ ಇದ್ದಾರೆ. ದುರಂತವೆಂದರೆ, ಈ ಸಂಕುಚಿತ ಮನೋಭಾವವನ್ನೇ ಮಕ್ಕಳಿಗೂ ದಾಟಿಸುವ ಪರಿಪಾಠ ಚಾಲ್ತಿಯಲ್ಲಿದೆ

ಇತ್ತೀಚೆಗೆ ನೆರೆಹೊರೆಯ ಮನೆಯೊಂದರಲ್ಲಿ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಜಗಳ ತಾರಕಕ್ಕೇರಿ, ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಸಂಧಾನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಗಮನಕ್ಕೆ ತಾರದೆ ಮನೆ ಗೋಡೆಗೆ ಬಾಡಿಗೆದಾರರು ಮೊಳೆ ಹೊಡೆಯುತ್ತಿರುವ ಸದ್ದು ಕಿವಿಗೆ ಬಿದ್ದ ಕೂಡಲೇ ಅಲ್ಲಿಗೆ ಹೋದ ಮಾಲೀಕರು, “ಅನಗತ್ಯವಾಗಿ ಏಕೆ ಮೊಳೆ ಹೊಡೆಯುತ್ತಿದ್ದೀರಿ? ಬೇಕಿರುವಷ್ಟು ಮೊಳೆಗಳನ್ನು ಈಗಾಗಲೇ ನಾವೇ ಹೊಡೆದುಕೊಟ್ಟಿದ್ದೀವಲ್ಲ?” ಅಂತ ಪ್ರಶ್ನಿಸಿದರು. ಬಟ್ಟೆ ಒಣಗಿಸಲು ದಾರ ಕಟ್ಟುವ ಸಲುವಾಗಿ ಮೊಳೆಗಳನ್ನು ಹೊಡೆಯುತ್ತಿರುವುದಾಗಿ ಬಾಡಿಗೆದಾರರು ತಿಳಿಸಿದರು. “ಬಟ್ಟೆ ಒಣಹಾಕಲು ಮನೆ ಹೊರಗೆ ಮತ್ತು ಮಹಡಿ ಮೇಲೆ ಮೂರ್ನಾಲ್ಕು ಕಡೆ ನಾವೇ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದೀವಲ್ಲ… ಹೀಗಿದ್ದರೂ ಏಕೆ ಮನೆ ಒಳಗೆ ಬಟ್ಟೆ ಒಣಗಿಸೋಕೆ ಮೊಳೆ ಹೊಡಿತಿದ್ದೀರಿ?” ಎಂಬುದು ಮಾಲೀಕರ ಪ್ರಶ್ನೆ. “ನಮ್ಮನೇಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿದ್ದಾರೆ. ಅವರ ಬಟ್ಟೆಗಳನ್ನು ಬೀದೀಲಿ ಓಡಾಡೋರಿಗೆಲ್ಲ ಕಾಣೋ ಹಾಗೆ ಹೊರಗೆ ಒಣಗಿಸಲು ಆಗುತ್ತಾ?” ಎಂಬ ಮರುಪ್ರಶ್ನೆ ಬಾಡಿಗೆದಾರರದ್ದು. ಜಗಳ ನಿಲ್ಲಿಸಲು ಬಂದಿದ್ದ ಪೊಲೀಸರಿಗೆ ಕೂಡ ಬಾಡಿಗೆದಾರರ ವಾದದಲ್ಲಿ ಹುರುಳಿದೆ ಅನ್ನಿಸಿ, “ಒಳಗೆ ಬಟ್ಟೆ ಒಣಹಾಕೋಕೆ ಮೊಳೆ ಹೊಡೆದುಕೊಳ್ಳಲಿ ಬಿಡಿ…” ಅಂತ ಮಾಲೀಕರಿಗೆ ತಿಳಿ ಹೇಳಿ ಹೋದರು.

ಮಹಿಳೆಯರ ಬಟ್ಟೆಗಳು, ಅದರಲ್ಲೂ ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವ ಹಾಗೆ ಒಣಗಿಸಲು ಹಾಕುವುದು ಸಹಜವೆಂದು ಪರಿಗಣಿಸದ ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ. ಬಟ್ಟೆ ಒಣಗಿಸುವಂತಹ ತೀರಾ ಕ್ಷುಲ್ಲಕ ವಿಚಾರಗಳಿಗೆ ನಡೆಯುವ ಜಗಳ ಬಿಡಿಸಲು ಸಾಮಾನ್ಯವಾಗಿ ಪೊಲೀಸರು ಮಧ್ಯಪ್ರವೇಶಿಸುವುದಿಲ್ಲ. ಈ ಪ್ರಕರಣದಲ್ಲಿ ಬಾಡಿಗೆದಾರರಿಗೆ ಪೊಲೀಸರ ಪರಿಚಯವಿದ್ದ ಕಾರಣಕ್ಕೆ, ಮಾಲೀಕರನ್ನು ಸುಮ್ಮನಿರಿಸುವ ಸಲುವಾಗಿಯೇ ಅವರಿಗೆ ಬರಹೇಳಿದ್ದರು.

Advertisements

ನಾವು ತೊಡುವ ಬಟ್ಟೆಯ ವಿನ್ಯಾಸಗಳಲ್ಲಿ ತೀವ್ರಗತಿಯ ಬದಲಾವಣೆ ಆಗುತ್ತಲೇ ಇರುತ್ತವೆ. ಈಗ ಹರಿದ ಪ್ಯಾಂಟುಗಳನ್ನು ಧರಿಸುವುದು ಕೂಡ ಸಹಜ ಸಂಗತಿಯೇ ಆಗಿದೆ. ಮಹಿಳೆಯರು ಧರಿಸುವ ಒಳಉಡುಪುಗಳಿಗೆ ಸಂಬಂಧಿಸಿದಂತೆ ಇರುವ ಪೂರ್ವಗ್ರಹಗಳನ್ನು ಮೀರಲು ಅನುವು ಮಾಡಿಕೊಡುವ ವಿನ್ಯಾಸಗಳುಳ್ಳ ಬಟ್ಟೆಗಳು ಕೂಡ ಮಾರುಕಟ್ಟೆಗೆ ಬರುತ್ತಿವೆ. ಆದರೆ, ಇವು ಎಲ್ಲರ ಪಾಲಿಗೂ ಸಹಜ ಆಯ್ಕೆಯಾಗುತ್ತಿಲ್ಲ. ಟ್ರೆಂಡ್‍ಗೆ ತಕ್ಕ ಹಾಗೆ ಧರಿಸುವ ಬಟ್ಟೆಗಳಲ್ಲಿನ ವಿನ್ಯಾಸಗಳನ್ನು ಆರಿಸಿಕೊಳ್ಳುವ ಯುವ ಸಮೂಹಕ್ಕೆ ಕೂಡ, ಆಧುನಿಕ ದಿರಿಸುಗಳನ್ನು ಆಯ್ದುಕೊಳ್ಳುವಷ್ಟು ಸರಳವಾಗಿ ಈ ಕಾಲಕ್ಕೆ ಹೊಂದುವ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಅಪ್ಪಿಕೊಳ್ಳಲು ತೋರುವ ಉತ್ಸಾಹವನ್ನು ಸಮಾಜದಲ್ಲಿ ಬೇರೂರಿರುವ ಪೂರ್ವಗ್ರಹಗಳನ್ನು ಮೀರುವಲ್ಲಿ ತೋರಲಾರರು. ಹೀಗಾಗಿಯೇ, ಹೆಂಗಸರ ಒಳ ಉಡುಪುಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಬೇರೂರಿರುವ ಪೂರ್ವಗ್ರಹಗಳು ಸೇರಿದಂತೆ ಹಲವು ಸಂಕುಚಿತ ಚಿಂತನೆಗಳು ಮುಂದಿನ ತಲೆಮಾರಿಗೂ ಅನಾಯಾಸವಾಗಿ ದಾಟುತ್ತಿವೆ. ಮಹಿಳೆಯರು ಧರಿಸುವ ಒಳ ಉಡುಪಿನ ಯಾವುದೇ ಭಾಗ ಕೂಡ ಹೊರಗೆ ಇಣುಕದಿರುವ ಹಾಗೆ ನೋಡಿಕೊಳ್ಳುವುದು ಇಂದಿಗೂ ಆದ್ಯತೆಯ ಸಂಗತಿಯಾಗಿಯೇ ಉಳಿದಿದೆ.

ಒಳ ಉಡುಪುಗಳನ್ನು ಧರಿಸುವ, ತೊಳೆದು ಒಣಗಿಸುವ ವಿಚಾರದಲ್ಲಿ ಮಹಿಳೆಯರಿಗೆ ಎದುರಾಗುವ ಬಹುತೇಕ ಸವಾಲುಗಳು ಮತ್ತು ಇರಿಸುಮುರಿಸುಗಳು ಪುರುಷರಿಗೆ ಎದುರಾಗಲಾರವು. ಹೀಗಾಗಿಯೇ, ಪುರುಷರು ಒಳ ಉಡುಪುಗಳನ್ನಷ್ಟೇ ಧರಿಸಿ ಓಡಾಡುವುದು ಕೂಡ ತೀರಾ ಅಸಹಜ ಸಂಗತಿ ಏನಲ್ಲ. ಇನ್ನು, ಪುರುಷರ ಒಳ ಉಡುಪುಗಳನ್ನು ಬಹಿರಂಗವಾಗಿ ಒಣಹಾಕಿದರೂ ಅದಕ್ಕೆ ಸುತ್ತಮುತ್ತಲಿನವರು ಅಪಸ್ವರ ವ್ಯಕ್ತಪಡಿಸುವುದಿಲ್ಲ; ಬದಲಿಗೆ, ಇದೆಲ್ಲ ಸಹಜವಾಗಿಯೇ ತೋರುತ್ತದೆ.

ಮಹಿಳೆಯರ ಒಳ ಉಡುಪುಗಳಿಗೆ ಸಂಬಂಧಿಸಿದಂತೆ ಬೇರೂರಿರುವ ಸಂಕುಚಿತ ಮನೋಭಾವವನ್ನು ಸಹಜವೆಂದು ಪರಿಭಾವಿಸಿ, ಅದನ್ನು ಮಕ್ಕಳಿಗೆ ಕೂಡ ದಾಟಿಸುವ ಪರಿಪಾಠ ನಮ್ಮಲ್ಲಿದೆ. ಒಳಉಡುಪುಗಳನ್ನು ಸೂಕ್ತವಾಗಿ ನಿರ್ವಹಿಸುವ ಕುರಿತು ಪೋಷಕರಿಂದ ತಮಗೆ ದೊರೆಯುವ ಸಲಹೆಗಳನ್ನು ಪಾಲಿಸಲು ಹೆಣಗುವ ಕೆಲ ಮಕ್ಕಳು, ತಾವು ಧರಿಸಿರುವ ಬಟ್ಟೆಗಳನ್ನು ಸರಿಪಡಿಸಿಕೊಳ್ಳಲು ತಿಣುಕಾಡುತ್ತಾರೆ. ದೈಹಿಕ ಕಸರತ್ತಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಂದರ್ಭ ಎದುರಾದಾಗಲಂತೂ ಸಾಕಷ್ಟು ಅನನುಕೂಲ ಅನುಭವಿಸುತ್ತಾರೆ.

ಧರಿಸುವ ದಿರಿಸುಗಳ ಕುರಿತು ನಮ್ಮಲ್ಲಿ ಬೇರೂರಿರುವ ಸಂಕುಚಿತತೆಗೆ ಮೌಲ್ಯದ ಹಣೆಪಟ್ಟಿ ಅಂಟಿಸಿ ಮುಂದುವರಿಸಿಕೊಂಡು ಹೋಗುವ ಬದಲಿಗೆ, ಉಡುಪುಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಹೊಂದುವಂತೆ ಮಾಡುವುದು ಆದ್ಯತೆ ಆಗಬೇಕಲ್ಲವೇ? ಉಡುಪಿನಲ್ಲಿ ಸಭ್ಯ ಯಾವುದು, ಯಾವುದೆಲ್ಲ ಅಸಭ್ಯ ಎಂದು ನಿರೂಪಿಸಲು ಹೆಚ್ಚು ಮುತುವರ್ಜಿ ತೋರುವ ನಮ್ಮ ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯಗಳು, ಪೂರ್ವಗ್ರಹಗಳನ್ನು ತೊಡೆದುಹಾಕುವ ಬದಲಿಗೆ ಮತ್ತಷ್ಟು ಆಳವಾಗಿ ಬೇರೂರಲು ನೆರವಾಗುತ್ತ ಬಂದಿವೆ. ವಸ್ತ್ರಸಂಹಿತೆಯ ಹೆಸರಿನಲ್ಲಿ ಇಂತಹದ್ದನ್ನು ಹೀಗೆ ಮಾತ್ರ ಧರಿಸಬೇಕು ಎಂದು ನಿರ್ದೇಶಿಸುವುದು ಆದ್ಯತೆಯಾಗುವಷ್ಟು ಸುಲಭವಾಗಿ, ಪೂರ್ವಗ್ರಹಗಳನ್ನು ಕಳಚುವುದು ಆದ್ಯತೆಯಾಗಲಾರದು ಎಂಬುದು ದುರಂತ.

ಮುಖ್ಯಚಿತ್ರ: ಹೆಣ್ಣುಮಕ್ಕಳ ಒಳ ಉಡುಪುಗಳ ಬಗೆಗಿನ ಪುರುಷರ ಪೂರ್ವಗ್ರಹಗಳ ಬಗ್ಗೆ ಮಾತನಾಡುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ದೃಶ್ಯ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಚ್ ಕೆ ಶರತ್
ಎಚ್ ಕೆ ಶರತ್
ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಷ್ಟ್ರು. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಣಿಯದ ಆಸಕ್ತಿ. ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೊಂದು ಇಷ್ಟದ ಕಸುಬು.

1 COMMENT

  1. ತಾರತಮ್ಯವಿಲ್ಲದೆ ಎಲ್ಲಾ ವರ್ಗದವರು ಅನುಸರಿಸುತ್ತಿರುವ ಸಮಾನ ಆಚರಣೆ ಇದು ಅನಿಸುತ್ತದೆ. ಸಂಕುಚಿತ ಮನೋಭಾವದಿಂದ ಬಿಟ್ಟು ಮುಕ್ತವಾಗಿ ಅನುಸರಿಸುವ ಜಾಗೃತಿ ಮೂಡಿಸುವ ಲೇಖನ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X