ಗ್ರೌಂಡ್ ರಿಪೋರ್ಟ್: ರಾಗಿಗುಡ್ಡದಲ್ಲಿ ಸೌಹಾರ್ದತೆ ಇದ್ದರೂ ಜನ ಮಾತಾಡಲು ಹೆದರುವುದೇಕೆ?

Date:

Advertisements

ಶಿವಮೊಗ್ಗದ ಶಾಂತಿನಗರ (ರಾಗಿಗುಡ್ಡ) ನಿಜಕ್ಕೂ ವಿಶಿಷ್ಟ ಪ್ರದೇಶ. ಇಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳೆರಡೂ ವರ್ಷಪೂರ್ತಿ ಪ್ರೀತಿ, ಬಾಂಧವ್ಯದಿಂದ ಇದ್ದರೂ ಹಬ್ಬಹರಿದಿನಗಳ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ವರದಿಯಾಗುತ್ತಿವೆ. ರಾಜಕೀಯ ಪ್ರೇರಿತ ಶಕ್ತಿಗಳು ಎರಡು ಸಮುದಾಯಗಳ ನಡುವಿನ ನೆಮ್ಮದಿಯನ್ನು ಹಾಳು ಮಾಡುವ ಬೆಳವಣಿಗೆಗಳು ಆಗುತ್ತಿರುವುದಕ್ಕೆ ಇಲ್ಲಿನ ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂಗಳಲ್ಲಿನ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಮತ್ತು ಬಡ ಮುಸ್ಲಿಮರು, ಕ್ರಿಶ್ಚಿಯನ್ನರು ರಾಗಿಗುಡ್ಡದಲ್ಲಿ ಪ್ರೀತಿ, ಸೌಹಾರ್ದತೆಯಿಂದ ಮೊದಲಿನಿಂದಲೂ ನೆಲೆಸಿದ್ದಾರೆ. ಅಕ್ಕಪಕ್ಕದಲ್ಲಿಯೇ ಹಿಂದೂ- ಮುಸ್ಲಿಂ ಸಮುದಾಯಗಳ ಮನೆಗಳಿದ್ದು ಅನೋನ್ಯವಾಗಿ ಬಾಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಿಗೆ ಒಬ್ಬರಿಗೊಬ್ಬರು ಅವಲಂಬಿಸಿದ್ದಾರೆ.

ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೆಲವು ಮತೀಯ ಶಕ್ತಿಗಳು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಿರುವುದು ಬೆಳಕಿಗೆ ಬಂದಿದೆ. ಆ ನಂತರ ಉಭಯ ಸಮುದಾಯಗಳಲ್ಲೂ ಅಪನಂಬಿಕೆ ಬಿತ್ತಲಾಗಿದೆ.

Advertisements

’ಈದಿನ.ಕಾಂ’ ತಂಡವು ರಾಗಿಗುಡ್ಡದ ಗಲ್ಲಿಗಲ್ಲಿಗೆ ಭೇಟಿ ನೀಡಿ ಅಲ್ಲಿನ ಹಿಂದೂ ಮುಸ್ಲಿಂ ಸಮುದಾಯವನ್ನು ಮಾತನಾಡಿಸಲು ಪ್ರಯತ್ನಿಸಿದೆ. ಎರಡು ಸಮುದಾಯಗಳ ಜನರೂ ಪ್ರತಿಕ್ರಿಯಿಸಿದ್ದು ನಮಗೆ ನೆಮ್ಮದಿ ಬೇಕು, ನಾವು ಮೊದಲಿನಿಂದಲೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಜನರ ನೆಮ್ಮದಿ ಹಾಳುಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ಸೌಹಾರ್ದತೆಯ ಬಗ್ಗೆ ಮಾತನಾಡಲು ಅನೇಕ ಹಿಂದೂಗಳು ಹಿಂದೇಟು ಹಾಕುವುದು ಕಂಡುಬಂದಿತು. ಹೆಸರು ಹೇಳಲಿಚ್ಛಿಸದ ಹಿಂದೂ ಸಮುದಾಯದ ವ್ಯಾಪಾರಿಗಳಿಬ್ಬರು ಮಾತನಾಡಿ, “ನಾವು ಸೌಹಾರ್ದತೆಯಿಂದ ಇದ್ದೇವೆ ಎಂಬುದು ಸತ್ಯ. ಆದರೆ ಇದನ್ನು ಹೇಳಿದರೆ ಕಷ್ಟವಾಗುತ್ತದೆ. ನಾವು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಇಬ್ಬರನ್ನೂ ಅವಲಂಬಿಸಿ ಅಂಗಡಿಯನ್ನು ನಡೆಸುತ್ತಿದ್ದೇವೆ. ನಮಗೆ ಇಬ್ಬರೂ ಬೇಕು. ನಾವು ಏನೇ ಹೇಳಿದರೂ ಕೆಲವು ಹಿಂದೂ ಸಂಘಟನೆಗಳವರು ಬಂದು ನಮ್ಮನ್ನು ದ್ವೇಷಿಸುವ ಸಾಧ್ಯತೆ ಇದೆ. ಹೀಗಾಗಿ ಏನನ್ನೂ ಹೇಳಿಕೊಳ್ಳಲು ಆಗುತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ’ಈ ದಿನ’ ಎಕ್ಸ್‌ ಕ್ಲೂಸಿವ್‌: ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ?

ಇದರ ನಡುವೆ ಅನೇಕರು ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ್ದು ರಾಗಿಗುಡ್ಡದಲ್ಲಿನ ವಸ್ತುಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಶಿವಾಜಿ ಪ್ರತಿಕ್ರಿಯಿಸಿ, “ಕಳೆದ 25 ವರ್ಷಗಳಿಂದ ರಾಗಿಗುಡ್ಡದಲ್ಲೇ ವಾಸವಿದ್ದೇನೆ. ಪಕ್ಕದ ಏರಿಯಾದಲ್ಲಿ ಅಂದು ಕಲ್ಲು ತೂರಾಟವಾಯಿತು. ನಮ್ಮ ಬೀದಿಯಲ್ಲಿ ನಾವೆಲ್ಲ ಚೆನ್ನಾಗಿ ಇದ್ದೇವೆ. ಯಾರೋ ಮಾಡಿದ ತಪ್ಪಿದೆ ಇಲ್ಲಿನ ಜನರಿಗೆಲ್ಲ ತೊಂದರೆಯಾಗುತ್ತಿದೆ. ಕೆಲಸಕ್ಕೆ ಹೋಗಲು ಆಗ್ತಾ ಇಲ್ಲ. ಕಳೆದ ವರ್ಷ ಮೊದಲ ಕ್ರಾಸ್‌ನಲ್ಲಿ ಚಪ್ಪಲಿ ತೂರಾಟ ನಡೆದಿತ್ತು. ಇಲ್ಲಿನ ಹಿರಿಯರು ಸಮಾಧಾನ ಮಾಡಿದ್ದರು. ನಾವು ಅಣ್ಣತಮ್ಮಂದಿರಂತೆ ಇದ್ದೇವೆ. ಯಾರೋ ಹೊರಗಡೆಯವರು ಬಂದು ಮಾಡಿರುವಂತಿದೆ. ನಮಗೂ ತೊಂದರೆಯಾಗಿದೆ, ಅವರಿಗೂ ತೊಂದರೆಯಾಗಿದೆ. ನಮಗೆ ನ್ಯಾಯ ಸಿಗಬೇಕೆಂದು ಕೇಳಿಕೊಳ್ತೀನಿ. ಹೊರಗಡೆಗೆ ಹೋಗಿ ಕೆಲಸ ಮಾಡಲು ಬಿಟ್ಟರೆ ಸಾಕು ಎಂಬಂತಾಗಿದೆ. ಭಾನುವಾರ ನಡೆದ ಘಟನೆಯನ್ನು ಬಿಟ್ಟರೆ ಇನ್ಯಾವುದೇ ಸಮಸ್ಯೆ ಆಗಿಲ್ಲ. ಕೆಲವು ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಇಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡಲಾಗಿತ್ತು. ಫೈರ್‌ ಡಿಪಾರ್ಟ್‌ಮೆಂಟ್‌ ನವರು ಸುಮ್ಮನೆ ಬಂದು ವಾಪಸ್ ಹೋದರು” ಎಂದು ತಿಳಿಸಿದರು.

shivaji
ರಾಗಿಗುಡ್ಡದ ನಿವಾಸಿ ಶಿವಾಜಿ

ಇಲ್ಲಿನ ನಿವಾಸಿ ನಸೀಮಾ ಕಣ್ಣೀರು ಹಾಕುತ್ತಾ ಮಾತನಾಡಿ, “ಅಂದು ಕಲ್ಲು ತೂರಾಟ ಆದ ಬಳಿಕ ಅನೇಕರನ್ನು ಬಂಧಿಸಲಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಾವಿಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ತಪ್ಪು ಮಾಡಿದ್ದು ಯಾರೋ ಆದ್ರು ಅವರನ್ನು ಮಾತ್ರ ಹಿಡಿದುಕೊಂಡು ಉಳಿದರನ್ನು ಬಿಡುಗಡೆ ಮಾಡಬೇಕು. ಹಬ್ಬ ಮಾಡೋದು ಖುಷಿಗಲ್ಲವಾ? ಅದನ್ನು ಬಿಟ್ಟು ಯಾರಾದರೂ ಗಲಾಟೆ ಮಾಡಲು ಹೋಗ್ತಾರಾ? ನಾವು ಒಂದಾಗಿಯೇ ಇದ್ದೇವೆ. ಇಲ್ಲಿ ನೋಡಿ ಅದು ಮುಸ್ಲಿಂ ಮನೆ, ಪಕ್ಕದಲ್ಲಿ ಹಿಂದೂ ಮನೆ ಇದೆ. ಇಡೀ ರಾಗಿಗುಡ್ಡವೇ ಇರುವುದು ಹೀಗೆ. ನಾವೆಲ್ಲ ಒಟ್ಟಾಗಿಯೇ ಇದ್ದೇವೆ. ನಮಗೆ ಏನಾದರೂ ಬೇಕಾದರೆ ಅವರ ಮನೆಗೆ ಹೋಗಿ ಈಸ್ಕೊಳ್ಳುತ್ತೇವೆ, ಅವರಿಗೆ ಏನಾದರೂ ಬೇಕಾದರೆ ನಮ್ಮ ಮನೆಯಲ್ಲಿ ಈಸ್ಕೊಳ್ಳುತ್ತಾರೆ. ಆ ರೀತಿ ಇದ್ದೋರು ಅಕ್ಕಪಕ್ಕದವರನ್ನೆಲ್ಲ ನಿಷ್ಠುರ ಮಾಡಿಕೊಂಡು ಇರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

naseema
ರಾಗಿಗುಡ್ಡದ ನಿವಾಸಿ ನಸೀಮಾ

ಕಲ್ಲು ತೂರಾಟದಲ್ಲಿ ಇಬ್ಬರು ಮೊಮ್ಮಕ್ಕಳು ಗಾಯಗೊಂಡಿದ್ದಾರೆಂದು ಅಳಲು ತೋಡಿಕೊಂಡಿರುವ ಮುದುಕಿ ಚಿಕ್ಕಮ್ಮ ,”ನಾವು ಇದೇ ಮೊದಲು ಇಂತಹ ಗಲಾಟೆ ನೋಡಿದ್ದು. ಹಿಂದೂ ಮುಸ್ಲಿಂ ಎಲ್ಲಾ ಇಲ್ಲಿ ಚೆನ್ನಾಗಿದ್ದೆವು. ಘಟನೆಯಾದ ಬಳಿಕ ಭಯ ಶುರುವಾಗಿದೆ. ಊಟ ಸೇರಲ್ಲ, ನಿದ್ದೆ ಬರ್ತಾ ಇಲ್ಲ” ಎಂದು ಆತಂಕ ತೋಡಿಕೊಂಡರು.

chikkamma
ರಾಗಿಗುಡ್ಡದ ನಿವಾಸಿ ಚಿಕ್ಕಮ್ಮ

ಪುಷ್ಪಮ್ಮ ಎಂಬವರು ಪ್ರತಿಕ್ರಿಯಿಸಿ, “ನಮಗೆ ಇಲ್ಲಿರುವವರು ಯಾರೂ ತೊಂದರೆ ಕೊಟ್ಟಿಲ್ಲ. ನಾವು ಗಣಪತಿ ಹಬ್ಬ ಮಾಡಿದಾಗ ಅವರು ಆರಾಮವಾಗಿ ನಿಂತುಕೊಂಡು ನೋಡಿದರು. ಅವರು ಮೆರವಣಿಗೆ ಮಾಡಿದಾಗ ನಾವು ನಿಂತುಕೊಂಡು ನೋಡಿದೆವು. ಈ ಬೀದಿಯಲ್ಲಿ ಅಂಥದ್ದೇನೂ ಆಗಿಲ್ಲ. ಹೊರಗಡೆಯಿಂದ ಬಂದವರೋ ಪಕ್ಕದ ಬೀದಿಯವರೋ ಈ ಬೀದಿಯ ಒಬ್ಬ ಹುಡುಗನಿಗೆ ಹೊಡೆದಿದ್ದಾರೆ. ನಮ್ಮ ಮನೆ ಸುತ್ತ ಮುಸ್ಲಿಮ್ ಮನೆಗಳಿವೆ. ಅವರೊಂದಿಗೆ ಚೆನ್ನಾಗಿ ಮಾತಕತೆ ಇದೆ” ಎಂದು ತಿಳಿಸಿದರು.

pushppamma
ರಾಗಿಗುಡ್ಡದ ನಿವಾಸಿ ಪುಷ್ಪಮ್ಮ

ಇದು ರಾಗಿಗುಡ್ಡದ ನಿಜಸ್ಥಿತಿ. ಜನರು ಪ್ರೀತಿ, ವಿಶ್ವಾಸದಿಂದ ಬದುಕುವಾಗ ಕೆಲವು ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಎರಡೂ ಸಮುದಾಯಗಳೂ ಪರಿತಪಿಸುವಂತಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದು ಶಾಂತಿನೆಲೆಸಲು ಒಂದೆಡೆ ಕಾರಣವಾಗಿದ್ದರೂ ಮತ್ತೊಂದೆಡೆ ನಿತ್ಯದ ಬದುಕಿಗೆ ತೊಡಕಾಗಿರುವುದು ಸತ್ಯ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X